ಬಾಗಲಕೋಟೆ; ಮಹಿಳೆಯರಿಗೆ ಉಡದ ಜನನಾಂಗ ಮಾರುತ್ತಿದ್ದ ಸ್ವಾಮೀಜಿ ಅಂದರ್
ಬಾಗಲಕೋಟೆ, ಸೆಪ್ಟೆಂಬರ್ 11: ಮಕ್ಕಳಾಗಲಿಲ್ಲ ಎಂದು ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರಿಗೆ ಪರಿಹಾರ ನೀಡುವೆನೆಂದು ಉಡದ ಜನನಾಂಗವನ್ನು ಮಾರುತ್ತಿದ್ದ ಸ್ವಘೋಷಿತ ಸ್ವಾಮೀಜಿಯನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.
46 ವರ್ಷದ ಈ ಸ್ವಾಮೀಜಿಯೊಂದಿಗೆ ಮತ್ತೂ ಮೂವರನ್ನು ಬಂಧಿಸಲಾಗಿದೆ. ಗ್ರಾಹಕರ ಸೋಗಿನಲ್ಲಿ ಹೋದ ಅರಣ್ಯಾಧಿಕಾರಿಗಳು ಇವರೆಲ್ಲರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ಬಂಧಿತರಿಂದ ಒಟ್ಟು 79 ಉಡದ ಅಂಗವನ್ನು ವಶಪಡಿಸಿಕೊಂಡಿದ್ದಾರೆ.
ಉಡ ತಿಂದ್ರೆ ಲೈಂಗಿಕ ಶಕ್ತಿ ಹೆಚ್ಚುತ್ತೆ ಎಂದು ಪ್ರಚಾರ, ಮಾರಾಟ: ಅಸಲಿಯತ್ತೇನು?
ಸಣ್ಣ ಈರಪ್ಪ ಜಮ್ಮಣ್ಣ, ಬಸಪ್ಪ ಸಿದ್ದಗಿರಿ ಬೀಳಗಿ, ಈರಪ್ಪ ಬಂಡೆಪ್ಪ ಜಿರಲಿ ಮತ್ತು ಪವನ್ ಈರಪ್ಪ ಜಿರಳಿ ಎಂಬುವರನ್ನು ಬಂಧಿಸಲಾಗಿದೆ. ಸಣ್ಣ ಈರಪ್ಪ ತಾನು ಸ್ವಾಮೀಜಿ ಎಂದು ಹೇಳಿಕೊಂಡು ದೇವಸ್ಥಾನದ ಬಳಿ ಕುಳಿತುಕೊಳ್ಳುತ್ತಿದ್ದ. ಮಕ್ಕಳಿಲ್ಲ ಎಂದು ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರಿಗೆ, ತನ್ನ ಜೊತೆಯಿದ್ದ ಈರಪ್ಪ ಮತ್ತು ಆತನ ಮಗನಿಂದ ಉಡದ ಜನನಾಂಗವನ್ನು ಖರೀದಿಸುವಂತೆ ಸಲಹೆ ನೀಡಿ ಪೂಜೆ ಮಾಡಿ ನೀಡುತ್ತಿದ್ದ.
ಉಡದ ಅಂಗವನ್ನು ಆಂಧ್ರಪ್ರದೇಶದಿಂದ, ಬುಡಕಟ್ಟು ಜನಗಳ ಮುಖಾಂತರ ತರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಈ ಮಾಹಿತಿ ಮೇರೆಗೆ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ರೆಡ್ ಹ್ಯಾಂಡ್ ಎಲ್ಲರನ್ನೂ ಹಿಡಿದಿದ್ದಾರೆ.