ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ ವಿಮಾನ ನಿಲ್ದಾಣಕ್ಕೆ ಹಲಕುರ್ಕಿ ಜಮೀನುಗಳ ಮೇಲೆ ಕಣ್ಣು: ರೈತರ ಆಕ್ರೋಶ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆ.25: ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಸ್ಥಾಪನೆಗೆಂದು ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದ ರೈತರಿಂದ 1,500 ಹೆಕ್ಟೇರ್‌ ಜಮೀನನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ಅಲ್ಲಿನ ರೈತರು ಕೆರಳಿ ಕೆಂಡವಾಗಿದ್ದು, ಯಾವುದೇ ಕಾರಣಕ್ಕೂ ಜಮೀನು ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಫಲವತ್ತಾದ ಜಮೀನಿನಲ್ಲಿ ರೈತರು ಸಮೃದ್ಧವಾಗಿ ಸಜ್ಜೆ ಬೆಳೆದಿದ್ದಾರೆ. ಇದೀಗ ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಸ್ಥಾಪನೆಗೆಂದು ಹಲಕುರ್ಕಿ ಗ್ರಾಮದ ರೈತರಿಂದ ಜಮೀನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಆದ್ದರಿಂದ ಇಲ್ಲಿನ ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಗೇಣುದ್ದ ಇರುವ ಜಮೀನು ನಂಬಿಯೇ ಈ ಗ್ರಾಮದ ಜನರು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿರುವ ಯಾರು ಕೂಡ ನೂರಾರು ಎಕರೆ ಜಮೀನನ್ನು ಹೊಂದಿಲ್ಲ. ಇಂತಹ ರೈತರಿಗೆ ಇದೀಗ ಜಮೀನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಕೆಐಎಡಿಬಿಯಿಂದ ಈ ರೈತರ ಜಮೀನುಗಳನ್ನು ಕಬಳಿಸಲು ಸರ್ಕಾರ ಮುಂದಾಗಿದ್ದು, ಹಲಕುರ್ಕಿ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿರುವ ಗ್ರಾಮಸ್ಥರು ಕೇವಲ ಗುಂಟೆ, ಹೆಕ್ಟೇರ್‌ ಲೆಕ್ಕದಲ್ಲಿ ಜಮೀನು ಹೊಂದಿದ್ದು, ಅದರಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

 ಹಲಕುರ್ಕಿ ಗ್ರಾಮದ ಜನರ ಅಳಲು

ಹಲಕುರ್ಕಿ ಗ್ರಾಮದ ಜನರ ಅಳಲು

ಇರುವ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇರುವ ಕಡಿಮೆ ಭೂಮಿಯನ್ನೇ ಸರ್ಕಾರ ಸ್ವಾಧೀನಪಡಿಸಿಕೊಂಡರೆ ನಾವು ಎಲ್ಲಿಗೆ ಹೋಗುವುದು? ನಮಗೆ ಉದ್ಯೋಗವೇ ಇಲ್ಲದಂತಾಗುತ್ತೆ. ಈಗಾಗಲೇ ಕಸಳಕೊಪ್ಪ ಕೆರೆಯಿಂದ ಹಲಕುರ್ಕಿ ಗ್ರಾಮಕ್ಕೆ ನೀರು ಹರಿಸುವ ಯೋಜನೆ ಚಾಲ್ತಿಯಲ್ಲಿದೆ‌. ಕೃಷಿಗೆ ಯೋಗ್ಯವಾಗಿರುವ ಭೂಮಿಗೆ ನೀರಾವರಿ ಯೋಜನೆ ಜಾರಿ ಮಾಡಿ. ಆಗ ಸಾಕಷ್ಟು ಕುಟುಂಬಗಳು‌ ನಿಮ್ಮ ಹೆಸರು ಹೇಳಿಕೊಂಡು ಜೀವನ ಮಾಡುತ್ತವೆ ಎಂದು ಕ್ಷೇತ್ರದ ಶಾಸಕ ಹಾಗೂ ಬೃಹತ್ ಕೈಗಾರಿಕೊದ್ಯಮ ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಜನರು ಮನವಿ ಮಾಡಿದರು.

 ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ

ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ

ಹಲಕುರ್ಕಿ ಗ್ರಾಮದ 1,500 ಹೆಕ್ಟೇರ್‌, ಹಂಗರಗಿ ಗ್ರಾಮದ 150 ಹೆಕ್ಟೇರ್‌, ಬೇಡರ ಬೂದಿಹಾಳ ಗ್ರಾಮದ 150 ಹೆಕ್ಟೇರ್‌ ಸೇರಿದಂರೆ ಒಟ್ಟು 1,800 ಹೆಕ್ಟೇರ್‌ ಜಮೀನನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಕೆಐಎಡಿಬಿ ಮೂಲಕ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಈ ವಿಚಾರ ಇಲ್ಲಿನ ರೈತರನ್ನು ಕೆರಳುವಂತೆ ಮಾಡಿದೆ‌‌. ಈವರೆಗೂ ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ಗ್ರಾಮ ಸಭೆಯನ್ನೂ ನಡೆಸಿಲ್ಲ. ಇರುವ ಕಡಿಮೆ ಫಲವತ್ತಾದ ಜಮೀನು ಕಳೆದುಕೊಂಡು ನಾವೇನು ಮಾಡುವುದು? ಇದಕ್ಕೆ ಪರ್ಯಾಯವಾಗಿ ಕಂದಾಯ ಜಮೀನನ್ನು ಬೇಕಾದರೆ ವಿಮಾನ ನಿಲ್ದಾಣಕ್ಕೆ ಬಳಸಿಕೊಳ್ಳಲಿ ಎಂದು ಹಲಕುರ್ಕಿ ಗ್ರಾಮದ ರೈತರ ವಾದ ಆಗಿದೆ.

 ಭೂಸ್ವಾಧೀನ ಬಗ್ಗೆಎಸಿ ಶ್ವೇತಾ ಹೇಳಿದ್ದೇನು?

ಭೂಸ್ವಾಧೀನ ಬಗ್ಗೆಎಸಿ ಶ್ವೇತಾ ಹೇಳಿದ್ದೇನು?

ಇತ್ತ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಇಚ್ಚಿಸಿರುವ ಜಮೀನಿನ ಕುರಿತು ನಮಗೆ ಸೂಕ್ತ ಮಾಹಿತಿ ಇಲ್ಲ. ಅದು ಕೇವಲ ಪ್ರಪೋಸಲ್ ಹಂತದಲ್ಲಿದೆ. ಒಂದು ವೇಳೆ ನೋಟಿಸ್ ಕೊಟ್ಟರೆ ಆ ಗ್ರಾಮಸ್ಥರ ಜೊತೆಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಅವರಿಗೆ ಮೌಖಿಕವಾಗಿ ಹಾಗೂ ಪತ್ರ ಮೂಲಕ ತಕರಾರು ಕೊಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸದ್ಯಕ್ಕೆ ಭೂಸ್ವಾಧೀನ ಪಕ್ರಿಯೆ ನಮ್ಮ ಅಡಿ ಬರಲ್ಲ, ಕೆಐಎಡಿಬಿಗೆ ಬರುತ್ತದೆ. ಗೆಜೆಟ್ ಆದರೆ ಸರ್ವೇ ಆಗಿರುವ ಜಮೀನುಗಳಿಗೆ ನೋಟಿಸ್ ನೀಡಿ, ರೈತರ ಅಹವಾಲು ಸ್ವೀಕರಿಸಿ ಮುಂದುವರೆಯುತ್ತೇವೆ ಎಂದು ಎ.ಸಿ. ಶ್ವೇತಾ ಬೀಡಿಕರ್ ಹೇಳಿದರು.

 ಜಮೀನು ಕಳೆದುಕೊಳ್ಳುವ ಭಯದಲ್ಲಿ ರೈತರು

ಜಮೀನು ಕಳೆದುಕೊಳ್ಳುವ ಭಯದಲ್ಲಿ ರೈತರು

ಒಟ್ಟಿನಲ್ಲಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಸ್ಥಾಪನೆಗೆಂದು ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದ ರೈತರಿಂದ ಜಮೀನನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕೆ ರೈತರು ಪ್ರತಿಕ್ರಯಿಸಿ ಫಲವತ್ತಾದ ಜಮೀನು ಕಳೆದುಕೊಳ್ಳುವುದಕ್ಕೆ ನಾವು ತಯಾರಿಲ್ಲ. ಸದ್ಯ ಕೈಗಾರಿಕೋದ್ಯಮ, ವಿಮಾನ ನಿಲ್ದಾಣಕ್ಕಾಗಿ ಸರ್ಕಾರ ಭೂಮಿ ಗುರುತಿಸಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಭೂಸ್ವಾಧೀನದ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

English summary
Government has decided to acquired land from farmers of Halakurki village for establishment in airport and industry, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X