ಬಾದಾಮಿ ತಹಶೀಲ್ದಾರ ಸುಹಾಸ್ ಇಂಗಳೆ ಮೇಲೆ ಹಲ್ಲೆ: ಇಬ್ಬರ ಬಂಧನ
ಬಾಗಲಕೋಟೆ, ಸೆಪ್ಟೆಂಬರ್ 9: ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಸಿದ್ದ ಲಾರಿ ತೆರವುಗೊಳಿಸುವಂತೆ ಹೇಳಿದ ತಹಶೀಲ್ದಾರ ಮೇಲೆ ಲಾರಿ ಚಾಲಕ ಹಾಗೂ ಆತನ ಸಹೋದರ ಸೇರಿ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದಿದೆ.
ಬಾದಾಮಿ ತಹಶೀಲ್ದಾರ ಸುಹಾಸ್ ಇಂಗಳೆ ಹಲ್ಲೆಗೊಳಗಾಗಿದ್ದು, ಹಲ್ಲೆಯಿಂದ ಇಂಗಳೆ ಅವರ ಕಣ್ಣಿನ ಕೆಳಭಾಗಕ್ಕೆ ಗಾಯವಾಗಿ, ಊದಿಕೊಂಡಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ನಾಗಪ್ಪ ಜಾನಮಟ್ಟಿ ಹಾಗೂ ಸಹೋದರ ಶಿವಾನಂದ ಜಾನಮಟ್ಟಿ ಎಂಬುವವರನ್ನು ಕೆರೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
""ಬಾದಾಮಿ ತಾಲ್ಲೂಕಿನ ವಿವಿಧ ಕಡೆ ಭೆಟಿ ನೀಡಿದ್ದ ಕೇಂದ್ರ ಪ್ರವಾಹ ಅಧ್ಯಯನ ತಂಡವನ್ನು ಮುಧೋಳ ತಾಲ್ಲೂಕಿಗೆ ಬಿಟ್ಟು ವಾಪಸ್ ಬರುವಾಗ ಘಟನೆ ನಡೆದಿದೆ. ಪಾನಮತ್ತರಾಗಿದ್ದ ಲಾರಿ ಚಾಲಕ ಹಾಗೂ ಆತನ ಸಹೋದರ ನೀರಬೂದಿಹಾಳ ಗ್ರಾಮದಲ್ಲಿ ನಡು ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದರು.''
""ಅವರು ಬೇರೆಯವರೊಂದಿಗೆ ಜಗಳವಾಡುತ್ತಿದ್ದರು, ಈ ವೇಳೆ ನನ್ನ ಜೊತೆ ಇದ್ದ ಗ್ರಾಮ ಲೆಕ್ಕಾಧಿಕಾರಿ ಮಧ್ಯಪ್ರವೇಶಿಸಿ, ವಾಹನ ಹೋಗಲು ದಾರಿ ಬಿಟ್ಟು ಲಾರಿ ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆ ಇಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಅಂಗಿ ಎಳೆದಾಡಿದರು.''
""ಬಿಡಿಸಲು ಹೋದ ನನ್ನ ಮೇಲೂ ಕೈ ಮಾಡಿದ್ದಾರೆ. ಅವರು ಹಲ್ಲೆ ಮಾಡುತ್ತಾರೆ ಎಂಬ ಯೋಚನೆ ಇರಲಿಲ್ಲ. ಅದೊಂದು ದಿಢೀರ್ ಆಗಿ ನಡೆದ ಘಟನೆ'' ಎಂದು ತಹಶೀಲ್ದಾರ ಸುಹಾಸ್ ಇಂಗಳೆ ಅವರು ತಿಳಿಸಿದ್ದಾರೆ. ಇಂದು ಕೆರೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.