ರೈನಾ ಸಂಬಂಧಿ ಕೊಲೆ ಕೇಸ್ ಕ್ಲೋಸ್ಡ್: ಪಂಜಾಬ್ ಸಿಎಂ
ಅಮೃತ್ ಸರ್, ಸೆ. 16: ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್ ಸುರೇಶ್ ರೈನಾ ಅವರ ಸಂಬಂಧಿ ಕೊಲೆ ಪ್ರಕರಣ ಮುಕ್ತಾಯವಾಗಿದೆ. ಈ ಕೇಸಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತನಿಖಾ ತಂಡವು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಸರ್ಕಾರಿ ಗುತ್ತಿಗೆದಾರ ಅಶೋಕ್ ಕುಮಾರ್ ಕೊಲೆ ಹಾಗೂ ಕುಟುಂಬಸ್ಥರ ಹಲ್ಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಅಂತಾರಾಜ್ಯದ ದರೋಡೆ ಗ್ಯಾಂಗ್ನವರು ಇನ್ನೂ 11 ಮಂದಿ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ.
ಆಗಸ್ಟ್ 19 ರ ರಾತ್ರಿ ಜಿಲ್ಲಾ ಪಠಾಣ್ಕೋಟ್ನ ಪಿ.ಎಸ್.ಶಾಪುರ್ಕಂಡಿಯ ವಿಲೇಜ್ ಥರ್ಯಾಲ್ನಲ್ಲಿ ನಡೆದ ಪ್ರಕರಣದ ಬಂಧನದ ವಿವರಗಳನ್ನು ಪಂಜಾಬ್ ಸರ್ಕಾರ ನೀಡಿದೆ. ಕ್ರಿಕೆಟರ್ ಸುರೇಶ್ ರೈನಾ ಅವರು ಪಠಾಣ್ ಕೋಟ್ ನಲ್ಲಿ ಇರುವ ಸಂದರ್ಭದಲ್ಲೇ ಪಂಜಾಬ್ ಸರ್ಕಾರ ಸುದ್ದಿಗೋಷ್ಠಿ ನಡೆಸಿ ತನಿಖೆ ಪ್ರಗತಿ ವರದಿ ನೀಡಿದೆ.
ಪೊಲೀಸರ ತಂಡ ಪ್ರಕರಣವನ್ನು ಬೇಧಿಸಿ 3 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸುರೇಶ್ ರೈನಾ ಪಂಜಾಬ್ ಪೊಲೀಸ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. "ನಿಮ್ಮ ಪರಿಶ್ರಮ ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ. ನಮ್ಮ ಕುಟುಂಬಕ್ಕೆ ಆದ ನಷ್ಟವನ್ನು ಭರಿಸಲು ಸಾಧ್ಯವಾಗದಿದ್ದರೂ ಮುಂದಿನ ಅಪರಾಧಗಳನ್ನು ತಡೆಯಲಿ ಇದರಿಂದ ಸಾಧ್ಯವಾಗುತ್ತದೆ. ಧನ್ಯವಾದಗಳು" ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ

ಡಿಜಿಪಿ ಗುಪ್ತಾ ಹೇಳಿದ್ದೇನು?
ವಿಶೇಷ ತನಿಖಾ ತಂಡಕ್ಕೆ ಕಳೆದ ವಾರ ಒಂದು ಟಿಪ್ ಸಿಕ್ಕಿತ್ತು. ಸುಳಿವು ಬೆನ್ನತ್ತಿ ಹೋದಾಗ ಸಾವನ್ ಅಲಿಯಾಸ್ ಮ್ಯಾಚಿಂಗ್, ಮುಹೊಬ್ಬಾತ್ ಹಾಗೂ ಶಾರುಖ್ ಖಾನ್ ಎಂಬ ಮೂವರನ್ನು ಬಂಧಿಸಲಾಗಿದೆ. ಎಲ್ಲರೂ ರಾಜಸ್ಥಾನ ಮೂಲದವರು, ಪಠಾಣ್ ಕೋಟ್ ರೈಲ್ವೆ ನಿಲ್ದಾಣ ಬಳಿ ಸ್ಲಂಗಳಲ್ಲಿ ನೆಲೆಸಿದ್ದರು. ಬಂಧಿತರಿಂದ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಮರದ ದೊಣ್ಣೆ, ಎರಡು ಚಿನ್ನದ ಉಂಗುರ, 1530 ನಗದು ವಶಪಡಿಸಿಕೊಳ್ಳಲಾಗಿದೆ.

ಏನಿದು ಘಟನೆ?
ಐಪಿಎಲ್ ಕ್ರಿಕೆಟರ್ ಸುರೇಶ್ ರೈನಾ ಅವರ ಅಂಕಲ್ 58 ವರ್ಷ ವಯಸ್ಸಿನ ಅಶೋಕ್ ಕುಮಾರ್ ಅವರು ಸರ್ಕಾರಿ ಗುತ್ತಿಗೆದಾರರಾಗಿದ್ದು, ಹಲ್ಲೆಕೋರರ ಹೊಡೆತದಿಂದ ತಲೆಗೆ ತೀವ್ರ ಪೆಟ್ಟು ತಿಂದು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಪುತ್ರ ಕೌಶಲ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸೋಮವಾರದಂದು ಮೃತಪಟ್ಟರು. ಅಶೋಕ್ ಕುಮಾರ್ ಪತ್ನಿ ಆಶಾರಾಣಿ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ.

ಕಾಳೆ ಕಚ್ಚೇವಾಲೆ ಗ್ಯಾಂಗಿನ ಕಳ್ಳರ ಕೃತ್ಯ
ಇದು ಕಾಳೆ ಕಚ್ಚೇವಾಲೆ ಗ್ಯಾಂಗಿನ ಕಳ್ಳರ ಕೃತ್ಯ, ಆಗಸ್ಟ್ 19 -20ರ ನಡುವೆ ರಾತ್ರಿ ವೇಳೆ ಪಠಾಣ್ ಕೋಟ್ ಸಮೀಪದ ತಾರಿಯಲ್ ಗ್ರಾಮದಲ್ಲಿ ನಡೆದ ದುರ್ಘಟನೆಯಾಗಿದೆ. ಮನೆಯ ಮಹಡಿ ಮೇಲೆ ಎಲ್ಲರೂ ಮಲಗಿದ್ದಾಗ, ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ತನಿಖೆ ನಡೆಸುತ್ತಿರುವ ವಿಶೇಷ ತಂಡದಲ್ಲಿ ಎಸ್ ಪಿಎಸ್ ಪಾರ್ಮಾರ್, ಐಜಿಪಿ ಗಡಿ ಭಾಗ, ಪಠಾಣ್ ಕೋಟ್ ಎಸ್ ಎಸ್ ಪಿ ಗುಲ್ನೀತ್ ಸಿಂಗ್ ಖುರಾನ, ಪಠಾಣ್ ಕೋಟ್ ಎಸ್ ಪಿ ಪ್ರಭ್ಜೋತ್ ಸಿಂಗ್ ವಿರ್ಕ್, ಡಿಎಸ್ಪಿ ರವೀಂದರ್ ಸಿಂಗ್ ಇದ್ದಾರೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಈಶ್ವರ್ ಸಿಂಗ್ ಅವರು ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಡಿಜಿಪಿ ದಿನಕರ್ ಹೇಳಿದರು.

ಅಂತಾರಾಜ್ಯ ಗ್ಯಾಂಗ್ ನಿಂದ ಹಲ್ಲೆ
ಪಂಜಾಬ್ -ಹಿಮಾಚಲ ಗಡಿಭಾಗದಲ್ಲಿ ಹೆಚ್ಚು ಸಕ್ರಿಯವಾಗಿರುವ ಕಾಳೆ ಕಚ್ಚೇವಾಲೆ ಗ್ಯಾಂಗ್ ಕೃತ್ಯ ಎಂಬ ಶಂಕೆ ಇದೆ. ಈ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದಾರೆ. ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಈ ಗ್ಯಾಂಗ್ ಸಾಮಾನ್ಯವಾಗಿ ಒಂದು ಬಾರಿಗೆ ನಾಲ್ಕೈದು ಮನೆಯ ಮೇಲೆ ದರೋಡೆ ನಡೆಸುತ್ತದೆ. ಈ ಬಗ್ಗೆ ತನಿಖೆ ಜಾರಿಯಲ್ಲಿದ್ದು ,ಇನ್ನೂ ಇದೇ ಗ್ಯಾಂಗಿನದ್ದೇ ಕೈವಾಡ ಎಂಬುದು ಸ್ಪಷ್ಟವಾಗಿಲ್ಲ, ಹಲ್ಲೆ ದರೋಡೆ ಅಷ್ಟೇ ಅವರ ಉದ್ದೇಶವಾಗಿತ್ತು ಎಂದು ತಿಳಿದು ಬಂದಿದೆ ಆದರೆ, ಕೊಲೆಗೆ ಯತ್ನಿಸಿದ್ದರ ಬಗ್ಗೆ ತಿಳಿದಿಲ್ಲ ಎಂದು ಪೊಲೀಸರು ಹೇಳಿದರು.