ಜಗನ್ ಕುಟುಂಬದಿಂದ ಶೀಘ್ರವೇ ಹೊಸ ರಾಜಕೀಯ ಪಕ್ಷದ ಉದಯ?
ಅಮರಾವತಿ, ಫೆಬ್ರವರಿ 8: ತೆಲಂಗಾಣ ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಎದ್ದಿದ್ದ ಗುಸುಗುಸು ತಣ್ಣಗಾಗಿದೆ. ಮುಂದಿನ 10 ವರ್ಷಕ್ಕೆ ನಾನೇ ಸಿಎಂ ಎಂದು ಕೆಸಿ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಇತ್ತ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಬದಲಾವಣೆ, ಹೊಸ ಪಕ್ಷದ ಉದಯವಾಗುವ ಬಗ್ಗೆ ಗಾಳಿಸುದ್ದಿ ಜೋರಾಗಿ ಹಬ್ಬಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರಿ ವೈಎಸ್ ಶರ್ಮಿಳಾ ಅವರು ಹೊಸ ಪಕ್ಷ ಘೋಷಿಸುತ್ತಾರೆ ಎಂಬ ಸುದ್ದಿ ಕೆಲ ಕಾಲದಿಂದ ಜೋರಾಗಿ ಕೇಳಿ ಬಂದಿದೆ. ಈ ಬಗ್ಗೆ ವೈಎಸ್ ಶರ್ಮಿಳಾ ಕ್ಯಾಂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ, ಜೊತೆಗೆ ಸುದ್ದಿಯನ್ನು ಅಲ್ಲಗೆಳೆದಿಲ್ಲ. ಹೀಗಾಗಿ, ಕುತೂಹಲ ಇನ್ನೂ ಉಳಿದಿದೆ.
ಏನಿದು ಹೊಸ ಪಕ್ಷದ ಕಥೆ?
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್ ಶರ್ಮಿಳಾ ಅವರು ಮಾರ್ಚ್ ತಿಂಗಳಲ್ಲಿ ಹೊಸ ಪಕ್ಷ ಘೋಷಿಸುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿವೆ. ಆದರೆ, ಶರ್ಮಿಳಾ ಹೊಸ ಪಕ್ಷವನ್ನು ಆಂಧ್ರದಲ್ಲಿ ಸ್ಥಾಪಿಸುತ್ತಿಲ್ಲ, ಬದಲಿಗೆ ತೆಲಂಗಾಣದಲ್ಲಿ ಸ್ಥಾಪಿಸಲಿದ್ದಾರೆ ಎಂಬುದು ಕುತೂಹಲ ಇನ್ನಷ್ಟು ಹೆಚ್ಚಿಸಿದೆ.
ಹೊಸ ಪಕ್ಷದ ಹೆಸರೇನು?
ಮೂಲಗಳ ಪ್ರಕಾರ ಶರ್ಮಿಳಾ ಅವರ ಪಕ್ಷದ ನೋಂದಣಿ ಈಗಾಗಲೇ ಆಗಿದೆ. ಚುನಾವಣಾ ಆಯೋಗದ ಅನುಮತಿ ಸಿಕ್ಕ ಬಳಿಕ ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಲಾಗುತ್ತದೆ. ವೈಎಸ್ ಆರ್ ತೆಲಂಗಾಣ ಪಕ್ಷ(YSRTP) ಎಂಬ ಹೆಸರಿಡಲಾಗಿದೆ ಎಂಬ ಮಾಹಿತಿಯಿದೆ. ಇನ್ನೊಂದು ಮೂಲಗಳ ಪ್ರಕಾರ ತೆಲಂಗಾಣ ವೈಎಸ್ಸಾರ್ ಕಾಂಗ್ರೆಸ್(TYSRC) ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೊಸ ಪಕ್ಷ ಸ್ಥಾಪಿಸುವ ಉದ್ದೇಶವಾದರೂ ಏನು? ಶರ್ಮಿಳಾ ಅವರು ವೈಎಸ್ಸಾರ್ ಕಾಂಗ್ರೆಸ್ ಪಕ್ಷವನ್ನೇ ತೆಲಂಗಾಣದಲ್ಲಿ ಬೆಳೆಸಬಹುದಲ್ಲ ಎಂಬ ಚರ್ಚೆ ಸದ್ಯಕ್ಕೆ ನಡೆದಿದೆ.