ತುಂಗಭದ್ರಾ ಪುಷ್ಕರ ಆನ್ಲೈನ್ ಟಿಕೆಟ್ ಬುಕ್ಕಿಂಗ್, ದೇಗುಲ ವಿವರ
ಕರ್ನೂಲು, ನ. 22: 12 ವರ್ಷಗಳಿಗೊಮ್ಮೆ ದೇಶದ ಪವಿತ್ರ ನದಿಗಳಲ್ಲಿ ನಡೆಸಲಾಗುವ ಪವಿತ್ರ ಸ್ನಾನವೇ ಪುಷ್ಕರ ಸ್ನಾನ. ಈ ಬಾರಿ ಗುರುಗ್ರಹವು ಮಕರ ರಾಶಿ ಪ್ರವೇಶಿಸಿದ್ದು, ತುಂಗ ಭದ್ರಾ ನದಿ ತೀರದ ತೀರ್ಥಕ್ಷೇತ್ರಗಳಲ್ಲಿ ಪುಷ್ಕರ ಸ್ನಾನ ಆಯೋಜಿಸಲಾಗಿದೆ. ಆಂಧ್ರಪ್ರದೇಶದ ಶ್ರೀಕ್ಷೇತ್ರಗಳಲ್ಲದೆ, ಮಂತ್ರಾಲಯ, ಶೃಂಗೇರಿಗಳಲ್ಲೂ ವಿಶೇಷ ಪೂಜೆ, ದೀಪಾರಾಧನೆ, ಪುಷ್ಕರ ಮಹೋತ್ಸವ ಜಾರಿಯಲ್ಲಿದೆ.
ನವೆಂಬರ್ 20ರಿಂದ ತುಂಗಭದ್ರಾ ಪುಷ್ಕರಾಲು ಆರಂಭಗೊಂಡಿದ್ದು, 12 ದಿನಗಳ ತನಕ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. 12 ವರ್ಷಗಳಿಗೊಮ್ಮೆ ಪುಷ್ಕರ ಸ್ನಾನ ನಡೆಯಲಿವೆ.
ತುಂಗಭದ್ರಾ ಪುಷ್ಕರ ಸ್ನಾನಕ್ಕೆ ತೀರ್ಥಕ್ಷೇತ್ರಗಳು ಸಜ್ಜು
ಈಗ ಕೊವಿಡ್ 19 ಮುನ್ನೆಚ್ಚರಿಕೆ ನಡುವೆ ಆಯೋಜನೆ ಮಾಡಲಾಗಿದೆ. ಕರ್ನೂಲ್ ಜಿಲ್ಲೆಯಲ್ಲೇ 23 ಪುಷ್ಕರ ಘಟ್ಟಗಳನ್ನು ಸ್ಥಾಪಿಸಲಾಗಿದೆ. ಮಂತ್ರಾಲಯ, ನಾಗುಲದಿನ್ನೆ, ಗುಂಡ್ರೆವುಲ, ಸುಂಕೆಶುಲಾ, ಪಂಚಲಿಂಗಲ, ನಂದಿಕೊಟ್ಕುರ್, ಸಂಗಮೇಶ್ವರ ಮುಂತಾದೆಡೆ ಪುಷ್ಕರ ಸ್ನಾನಕ್ಕೆ ಸಿದ್ಧತೆಯಾಗಿದೆ.

ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಅಗತ್ಯ
ಕೊವಿಡ್ 19 ಹಿನ್ನೆಲೆಯಲ್ಲಿ ಭಕ್ತಾದಿಗಳು, ಕೊರೊನಾವೈರಸ್ ನೆಗಟಿವ್ ಪ್ರಮಾಣ ಪತ್ರದ ಜೊತೆಗೆ ಇ ಟಿಕೆಟ್ ಪಡೆದಿದ್ದರೆ ಮಾತ್ರ ಸ್ನಾನಘಟ್ಟಕ್ಕೆ ಇಳಿಯಲು ಅನುಮತಿ ನೀಡಲಾಗುತ್ತದೆ. ನದಿ ನೀರಿಗೆ ಇಳಿಯಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಸ್ನಾನಘಟ್ಟಗಳ ಬಳಿ ನದಿ ನೀರಿನ ಷವರ್ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 12 ದಿನಗಳ ಕಾಲ ನಿರಂತರ ಯಾಗ ನಡೆಸಲಾಗುತ್ತದೆ. 443ಕ್ಕೂ ಅಧಿಕ ಋತ್ವಿಕರು ವಿಶೇಷ ಪೂಜೆಗಳನ್ನು ನೆರವೇರಿಸಲಿದ್ದು, ಪೂಜೆಗಳ ದರವನ್ನು ಕಂದಾಯ ಇಲಾಖೆ ನಿಗದಿ ಮಾಡಿದೆ.

ಆನ್ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಅಗತ್ಯ
ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 6 ತನಕ ತುಂಗಭದ್ರಾ ನದಿ ತೀರದಲ್ಲಿ ವಿವಿಧ ಪೂಜೆ, ಪಿಂಡ ಪ್ರಧಾನಕ್ಕೆ ಅನುಮತಿ ನೀಡಲಾಗಿದೆ. ಆದರೆ, ಭಕ್ತಾದಿಗಳು ಆನ್ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು. ತಮ್ಮ ಆಯ್ಕೆಯ ಪುಷ್ಕರ ಘಟ್ಟ ಹಾಗೂ ಯಾವ ರೀತಿ ಪೂಜೆ ಯಾವ ಸಮಯಕ್ಕೆ ಎಂಬುದನ್ನು ವೆಬ್ ತಾಣದಲ್ಲಿ ಬುಕ್ ಮಾಡಿಕೊಂಡು ರಸೀತಿ ಪಡೆಯಬೇಕಾಗುತ್ತದೆ.

ಆಂಧ್ರಪ್ರದೇಶದ ಅಧಿಕೃತ ವೆಬ್ ತಾಣ
ಆಂಧ್ರಪ್ರದೇಶ ಸರ್ಕಾರ ಅಧಿಕೃತ ವೆಬ್ ತಾಣ ಮೂಲಕ ಲಾಗಿನ್ ಆಗಿ ಭಕ್ತಾದಿಗಳು ತಮ್ಮ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು.
ತುಂಗಭದ್ರಾ ಪುಷ್ಕರಾಲು ದೇಗುಲಗಳು
ಶ್ರೀಶೈಲ ಮಲ್ಲಿಕಾರ್ಜುನ ದೇಗುಲ, ಶ್ರೀಶೈಲ
ಸಂಗಮೇಶ್ವರ ದೇಗುಲ, ಕರ್ನೂಲ್
ಶ್ರೀ ಬಸವ ಲಿಂಗೇಶ್ವರ ದೇವಸ್ಥಾನ, ಕೌಥಲಂ, ಕರ್ನೂಲ್
ಅಂಬಾಭವಾನಿ ದೇವಸ್ಥಾನ, ನಾಗಲದಿನ್ನೆ, ಕರ್ನೂಲ್
ಯಗಂಟಿ ಉಮಾಮಹೇಶ್ವರ ದೇಗುಲ, ಕರ್ನೂಲ್
ಶ್ರೀ ನರಸಿಂಹ ವೀರಣ್ಣಸ್ವಾಮಿ ದೇಗುಲ, ಕೌಥಲಂ, ಕರ್ನೂಲ್
ಚನ್ನಕೇಶವಸ್ವಾಮಿ ದೇಗುಲ, ಕೌಥಲಂ, ಕರ್ನೂಲ್
ಅಂಜನೇಯಸ್ವಾಮಿ ದೇಗುಲ,ಕರ್ನೂಲ್
ಪಟಪಟೇಶ್ವರಿ ಅಮ್ಮ ದೇಗುಲ,ಗುರುಜಾಲ, ಕರ್ನೂಲ್

ಕೊವಿಡ್ 19 ನಿಯಮಗಳು
* ಎಲ್ಲಾ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
* 12 ವರ್ಷಕ್ಕಿಂತ ಕೆಳಗಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಅವಕಾಶವಿಲ್ಲ.
* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್ ಮಾಡುವುದು ಕಡ್ಡಾಯ.
* ಕೊವಿಡ್ 19 ನೆಗೆಟಿವಿ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು.
* ಕೇಂದ್ರ ಸರ್ಕಾರದ ಕೊವಿಡ್ 19 ಮಾರ್ಗಸೂಚಿ ಜೊತೆಗೆ ಸ್ಥಳೀಯ ಕಾನೂನುಗಳಿಗೆ ಭಕ್ತಾದಿಗಳು ಬದ್ಧರಾಗಿರಬೇಕು.