ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಬ್ಯುಲೆನ್ಸ್‌ಗೆ ಹಣ ನೀಡಲಾಗದೆ ಮಗನ ಶವವನ್ನು ಬೈಕ್‌ನಲ್ಲಿ ಹೊತ್ತು ಸಾಗಿದ ತಂದೆ

|
Google Oneindia Kannada News

ತಿರುಪತಿ, ಏಪ್ರಿಲ್ 26 : ಮಗನ ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲು ಸಾಧ್ಯವಾಗದೇ ಅಸಹಾಯಕ ತಂದೆಯೊಬ್ಬ ತನ್ನ ಹತ್ತು ವರ್ಷದ ಮಗನನ್ನು ಹೊತ್ತುಕೊಂಡು ಬೈಕ್‌ನಲ್ಲೇ ಸುಮಾರು 90 ಕಿ.ಮೀ ಸಾಗಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ತಿರುಪತಿಯಲ್ಲಿರುವ ಆರ್‌ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಜೇಸವಾ ಎಂಬ ಬಾಲಕ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದ. ಈ ವೇಳೆ ಬಾಲಕನ ತಂದೆ ಮಗನ ಮೃತದೇಹವನ್ನು ಸುಮಾರು 90.ಕಿಮೀ ದೂರದ ಊರಾದ ಚಿತ್ವೇಲ್‌ಗೆ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್‌ ಚಾಲಕನ ಬಳಿ ಕೇಳಿದ್ದಾರೆ. ಆದರೆ, ಆಂಬ್ಯುಲೆನ್ಸ್‌ ಚಾಲಕ ಮೃತದೇಹ ಸಾಗಿಸಲು 20,000 ರೂಪಾಯಿಗಳ ಬೇಡಿಕೆ ಇಟ್ಟಿದ್ದಾನೆ. ಇದರಿಂದ ದಿಕ್ಕು ತೋಚದಂತಾದ ತಂದೆ ತನ್ನ ಮಗನ ಶವವನ್ನು ಅಪ್ಪಿಕೊಂಡು ಬೈಕ್‌ನಲ್ಲೇ 90. ಕಿ.ಮೀ ಹೊತ್ತು ಸಾಗಿದ್ದಾರೆ.

ದೊಡ್ಡ ಮೊತ್ತವನ್ನು ಕೊಡಲಾಗದ ತಂದೆ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸಂಬಂಧಿಕರು ಮತ್ತೊಂದು ಆಂಬ್ಯುಲೆನ್ಸ್‌ ಮೂಲಕ ಉಚಿತವಾಗಿ ಮೃತದೇಹವನ್ನು ಸಾಗಿಸಲು ವ್ಯವಸ್ಥೆ ಮಾಡಿದ್ದರು. ಆದರೆ, ಆಸ್ಪತ್ರೆಯ ಆಂಬ್ಯುಲೆನ್ಸ್‌ ಚಾಲಕ ಮತ್ತೊಂದು ವಾಹನದಲ್ಲಿ ಹೋಗಲು ಬಿಡದೇ ತನ್ನ ಆಂಬ್ಯುಲೆನ್ಸ್‌ನಲ್ಲೇ ಬರಬೇಕೆಂದು ಪಟ್ಟು ಹಿಡಿದಿದ್ದ ಎಂಬ ಆರೋಪಗಳು ಕೇಳಿ ಬಂದಿದೆ.

Andhra man forced to carry dead son on bike after ambulances overcharge

ಚಾಲಕನ ಅಮಾನವೀಯ ನಡೆಯಿಂದ ಬೇಸತ್ತ ತಂದೆ ಮಗನ ಮೃತದೇಹವನ್ನು ಬೈಕ್‌ನಲ್ಲಿ ಹೊತ್ತು ಸಾಗಿದ್ದಾರೆ. ತಿರುಪತಿ ದಾಟಿದ ಬಳಿಕ ಕುಟುಂಬಸ್ಥರು ಕಳಿಸಿದ್ದ ಮತ್ತೊಂದು ಆಂಬ್ಯುಲೆನ್ಸ್‌ ಮೂಲಕ ಮನೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ವರದಿ ಮಾಡಲಾಗಿದೆ.

ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂಥ ಘಟನೆಗಳು ಈ ಆಸ್ಪತ್ರೆಯಲ್ಲಿ ಆಗಾಗ ನಡೆಯುತ್ತಿರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯು ಆಂಬ್ಯುಲೆನ್ಸ್ ಕಾರ್ಯಾಚಾರಣೆಯನ್ನು ನಿಲ್ಲಿಸಿ, ಗೌಪ್ಯವಾಗಿ ಖಾಸಗಿ ಆಂಬ್ಯುಂಲೆನ್ಸ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಜನರ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ಆಸ್ಪತ್ರೆಯ ಅಧೀಕ್ಷಕಿ ಡಾ. ಟಿ ಭಾರತಿ, ''ಈ ಘಟನೆ ಕುರಿತು ತನಿಖೆ ನಡೆಸುತ್ತೇವೆ. ಆಂಬ್ಯುಲೆನ್ಸ್‌ ಚಾಲಕನ ವಿರುದ್ದ ಕ್ರಮ ಕೈಗೊಳ್ಳುತ್ತೇವೆ,'' ಎಂದಿದ್ದಾರೆ.

Andhra man forced to carry dead son on bike after ambulances overcharge

''ಆಸ್ಪತ್ರೆಯ ಆವರಣದಲ್ಲಿರುವ ಖಾಸಗಿ ವಾಹನಗಳು ನಿಗದಿತ ದರವನ್ನ ಪಡೆಯಬೇಕೆಂದು ಸೂಚಿಸಿದ್ದೇವೆ. ಆದರೂ ಸಹ ರೋಗಿಗಳ ಬಳಿ ಸುಲಿಗೆ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ. ಇನ್ನು ಮುಂದೆ ಆಸ್ಪತ್ರೆ ಆವರಣಕ್ಕೆ ಯಾವುದೇ ಖಾಸಗಿ ವಾಹನಗಳು ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗುತ್ತದೆ,'' ಎಂದು ಡಾ.ಭಾರತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಘಟನೆಯನ್ನು ವಿರೋಧಿಸಿ ಟಿಡಿಪಿ ಮತ್ತು ಬಿಜೆಪಿ ಪಕ್ಷಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿವೆ. ಟಿಡಿಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕೂಡ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು "ಬಡ ತಂದೆಗೆ ಬೇರೆ ದಾರಿ ಇಲ್ಲದೆ ಮಗುವನ್ನು ಬೈಕ್‌ನಲ್ಲಿ 90 ಕಿ.ಮೀ ದೂರ ಹೊತ್ತು ಸಾಗಿದ್ದಾರೆ. ಈ ಹೃದಯವಿದ್ರಾವಕ ಘಟನೆಯು ರಾಜ್ಯದಲ್ಲಿನ ಆರೋಗ್ಯ ರಕ್ಷಣಾ ಸೌಕರ್ಯಗಳಿಗೆ ಹಿಡಿದಿರುವ ಕನ್ನಡಿಯಾಗಿದೆ. ವೈ.ಎಸ್‌ ಜಗನ್ ಮೋಹನ್‌ ರೆಡ್ಡಿ ಆಡಳಿತದಲ್ಲಿ ಆಂಧ್ರಪ್ರದೇಶವು ನಲಗುತ್ತಿದೆ,'' ಎಂದು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಘಟನೆಯ ವಿಡಿಯೋ ನೋಡಿದ ನೆಟ್ಟಿಗರು ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮವಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿಯೂ ಇಂತಹ ಹಣ ಸುಲಿಗೆ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
A man in Tirupati had to carry his son’s body out of a government hospital on a two-wheeler in Andhra Pradesh after the child passed away, because of high prices demanded by private ambulances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X