ಗುಜರಾತ್ ನ ಸೂರತ್, ಭರೂಚ್ ನಲ್ಲಿ 4.2 ತೀವ್ರತೆಯ ಭೂಕಂಪ
ಗುಜರಾತ್, ನವೆಂಬರ್ 07: ಗುಜರಾತ್ ನ ಸೂರತ್ ಮತ್ತು ಭರೂಚ್ ಎಂಬಲ್ಲಿ ಶನಿವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ದಾಖಲಾಗಿದೆ.
ಶನಿವಾರ ಮಧ್ಯಾಹ್ನ ಭೂಕಂಪವಾಗಿರುವುದಾಗಿ ತಿಳಿದುಬಂದಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ಮಧ್ಯಾಹ್ನ 3.39ರ ಸಮಯದಲ್ಲಿ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಆಸ್ತಿ, ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಭರೂಚ್ ವಿಪತ್ತು ನಿರ್ವಹಣಾ ಇಲಾಖೆ ಪ್ರಾಥಮಿಕ ವರದಿ ನೀಡಿದೆ.
ಮಧ್ಯಾಹ್ನ 3.39ರ ಸಮಯದಲ್ಲಿ 5.9 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಸೂರತ್ ನ ಈಶಾನ್ಯಕ್ಕೆ 53 ಕಿ.ಮೀ ಅಂತರ ಹಾಗೂ ಭರೂಚ್ ನ ಆಗ್ನೇಯಕ್ಕೆ 36 ಕಿ.ಮೀ ಅಂತರದಲ್ಲಿ ಕಂಪನ ಕೇಂದ್ರ ದಾಖಲಾಗಿದೆ. ಸೂರತ್ ನಗರ, ಭರೂಚ್, ಬರ್ಡೋಲಿ ಎಂಬಲ್ಲಿ ಭೂಮಿ ನಡುಗಿದ್ದು, ಜನರು ಮನೆಯಿಂದ ಹೊರ ಓಡಿಬಂದಿದ್ದಾರೆ. ಭೂಕಂಪದಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದರು.
ಸೂರತ್ ನ ನಾನ್ಪುರ, ಚೌಕ್ ಬಜಾರ್, ಕತರ್ಗಾಮ್ ಎಂಬಲ್ಲಿ ಸುಮಾರು ಮೂರು ಸೆಕೆಂಡ್ ಗಳ ಕಾಲ ಭೂಮಿ ತೀವ್ರವಾಗಿ ನಡುಗಿದ ಅನುಭವವಾಗಿದೆ.