ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಸೆ.14ರಂದು ಪ್ರಜಾಪ್ರಭುತ್ವ ಉಳಿಸಿ ಸಮಾವೇಶ

By Prasad
|
Google Oneindia Kannada News

ಬೆಂಗಳೂರು, ಸೆ. 11 : ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಸಮಗ್ರ ಚುನಾವಣಾ ಸುಧಾರಣೆಗಳನ್ನು ತರಬೇಕು ಮತ್ತು ಸಾರ್ವಜನಿಕರು ಸ್ವಚ್ಛ ಮತ್ತು ಮೌಲ್ಯಾಧಾರಿತ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ 'ಪ್ರಜಾಪ್ರಭುತ್ವ ಉಳಿಸಿ' ಆಂದೋಲನವನ್ನು ಲೋಕಸತ್ತಾ ಮತ್ತು ಜನತಾದಳ (ಯು) ಪಕ್ಷಗಳು ಸೆ.14ರಂದು ನಡೆಸಲಿವೆ.

ದಿನಾಂಕ : 14, ಸೆಪ್ಟೆಂಬರ್, 2013, ಶನಿವಾರ ಬೆಳಿಗ್ಗೆ 10:30ಯಿಂದ 1:30
ಸ್ಥಳ : ಶಾಸಕರ ಭವನದ ಸಭಾಂಗಣ

ಈ ಕುರಿತು ಸೆ.11, ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಜನತಾದಳ (ಯು) ರಾಜ್ಯಾಧ್ಯಕ್ಷ ಡಾ. ಎಂ.ಪಿ.ನಾಡಗೌಡ, ಲೋಕಸತ್ತಾ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ರವಿ ಕೃಷ್ಣಾರೆಡ್ಡಿ, ಲೋಕಸತ್ತಾ ಪಕ್ಷದ ರಾಜ್ಯ ಕಾರ್ಯದರ್ಶಿ ದೀಪಕ್ ಸಿ.ಎನ್.ರವರು ಸಮಾವೇಶದ ಬಗ್ಗೆ ವಿವರಗಳನ್ನು ನೀಡಿದರು.

Save democracy campaign by Lok Satta, JDU

ಡಾ. ಎಂ.ಪಿ.ನಾಡಗೌಡರು ಅವರು, "ಎಲ್ಲರಿಗೂ ತಿಳಿದಿರುವಂತೆ ಚುನಾವಣೆ ನಡೆಯುವ ರೀತಿ, ಆ ಸಂದರ್ಭದಲ್ಲಿ ನಡೆಯುವ ಅಕ್ರಮಗಳು, ಅವುಗಳನ್ನು ಪರಿಣಾಮಕಾರಿಯಾಗಿ ತಡೆಯಲಾಗದ ಚುನಾವಣಾ ಆಯೋಗದ ಅಸಹಾಯಕತೆ ಇತ್ಯಾದಿಗಳು ನಮ್ಮ ಸಮಾಜದಲ್ಲಿ ಜಾತಿವಾದಿಗಳು, ಭ್ರಷ್ಟರು, ಅನರ್ಹರು ಮತ್ತು ಯಾವುದೇ ರೀತಿಯ ಜನಪರ ಕಾಳಜಿ ಇಲ್ಲದ ಸ್ವಕೇಂದ್ರಿತ ಸ್ವಾರ್ಥಿ ರಾಜಕಾರಣಿಗಳು ಮಾತ್ರ ಗೆದ್ದು ಬಂದು ಜನಪ್ರತಿನಿಧಿಗಳಾಗುವ ದುರದೃಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ" ಎಂದು ತಿಳಿಸಿದರು.

ಲೋಕಸತ್ತಾ ಪಕ್ಷದ ರವಿ ಕೃಷ್ಣಾರೆಡ್ಡಿಯವರು "ಯಾವುದೇ ಪ್ರಮುಖ ರಾಜಕೀಯ ಪಕ್ಷಗಳನ್ನು ತೆಗೆದುಕೊಂಡರೂ, ಅರ್ಹರು, ಪ್ರಾಮಾಣಿಕರು ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಜಾತಿ ಮತ್ತು ಹಣದ ಆಧಾರದ ಮೇಲೆ ಟಿಕೆಟ್ ನಿರಾಕರಿಸಿ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲಾಗದಂತಹ ವ್ಯವಸ್ಥೆ ಈ ಪಕ್ಷಗಳಲ್ಲಿದೆ. ಆ ಪಕ್ಷಗಳಲ್ಲಿನ ಅಷ್ಟಿಷ್ಟು ಯೋಗ್ಯತೆ ಉಳ್ಳವರು ಮತ್ತು ಜನಪರವಾಗಿರುವವರು ಸಹ ಯಾವುದಾದರು ಒಂದು ರೀತಿಯಲ್ಲಿ ಕಾನೂನು ಉಲ್ಲಂಘಿಸಿ ಮತ್ತು ಚುನಾವಣಾ ಅಕ್ರಮಗಳನ್ನು ಎಸಗಿ ಅನೈತಿಕವಾಗಿಯೇ ಗೆದ್ದು ಬರುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ತೀರಾ ಅಗತ್ಯವಾದ ಚುನಾವಣಾ ಸುಧಾರಣೆಗಳನ್ನು ಜಾರಿಗೊಳಿಸಿ ಅರ್ಹರು, ಸಮರ್ಥರು, ಪ್ರಾಮಾಣಿಕರು, ಮತ್ತು ಜನಪರ ಕಾಳಜಿ ಇರುವ ಜನರಿಗೆ ಚುನಾವಣೆಗೆ ಸ್ಪರ್ಧಿಸಲು ಪೂರಕ ವಾತಾವರಣ ನಿರ್ಮಾಣಗೊಳಿಸಬೇಕಾದ ಅಗತ್ಯ ಇದೆ" ಎಂದು ತಿಳಿಸಿದರು.

"ಶನಿವಾರ ನಗರದಲ್ಲಿ ನಡೆಯಲಿರುವ ಈ ಸಮಾವೇಶದ ಅಧ್ಯಕ್ಷತೆಯನ್ನು ಎಚ್.ಎಸ್.ದೊರೆಸ್ವಾಮಿಯವರು ವಹಿಸುತ್ತಿದ್ದು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಪ್ರೊ. ಚಂದ್ರಶೇಖರ ಪಾಟೀಲ, ಅರಕೆರೆ ಜಯರಾಮ್, ಅಶೋಕ್ ಕುಮಾರ್, ರಘುನಂದನ ಟಿ.ಆರ್., ಕೆ. ಪ್ರಕಾಶ್, ಶಾಂತಲಾ ದಾಮ್ಲೆ, ಮತ್ತು ಡಾ.ಎಂ.ಪಿ.ನಾಡಗೌಡರು ಸಭೆಯಲ್ಲಿ ಮಾತನಾಡಲಿದ್ದು, ಸಾರ್ವಜನಿಕರು ಮತ್ತು ಮೌಲ್ಯಾಧಾರಿತ ಮತ್ತು ಸ್ವಚ್ಛ ರಾಜಕಾರಣದಲ್ಲಿ ನಂಬಿಕೆಯಿರುವ ಇತರೆ ಎಲ್ಲಾ ರಾಜಕಾರಣಿಗಳು ಮತ್ತು ಹೋರಾಟಗಾರರು ಪಾಲ್ಗೊಳ್ಳಬೇಕೆಂದು ಕೋರುತ್ತೇವೆ" ಎಂದು ಲೋಕಸತ್ತಾ ಪಕ್ಷದ ರಾಜ್ಯ ಕಾರ್ಯದರ್ಶಿ ದೀಪಕ್ ಸಿ.ಎನ್.ರವರು ತಿಳಿಸಿದರು.

English summary
Lok Satta and Janata Dal (United) have unitedly organized 'Save Democracy' campaign on September 14, Saturday at Lagislatures' House in Bangalore. H.S. Doreswamy, Shanthala Damle, Chandrashekhar Patil and others are participating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X