ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡುಂಢಿ ಹಾಗೂ ಅವಕಾಶವಾದಿ ಸೆಕ್ಯುಲರಿಸಂ

By ರಾಕೇಶ್ ಶೆಟ್ಟಿ
|
Google Oneindia Kannada News

A debate on Dhundi book and Secularism by Rakesh Shetty
"ಡುಂಢಿ"ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು "Immortals of Meluha" ಪುಸ್ತಕವನ್ನು ಉಲ್ಲೇಖಿಸಿ, "ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ, ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ 150-200 ಪ್ರತಿಯಂತಲ್ಲ" ಅಂದರು.

ನಾನಂದೆ "ನಿಮಗೆ, 'ದೇವರ ಪಾಲಿಟಿಕ್ಸ್' ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, 'ಟಿಬೆಟಿಯನ್' ಅನ್ನುವ ಬದಲೋ 'ಬ್ರಾಹ್ಮಣ/ಆರ್ಯ' ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು".
"ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ.

ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ." ಅನ್ನುವ ಮಾತುಗಳನ್ನಿಟ್ಟುಕೊಂಡ "ಡುಂಢಿ" ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.

ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? ("ಶಿವ"ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ...!)

ಅಭಿವ್ಯಕ್ತಿ ಸ್ವಾತಂತ್ರ್ಯ ?: ಈಗ ಡುಂಢಿಯನ್ನು ಬೆಂಬಲಿಸುತ್ತ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾಗುತ್ತಿರುವ ಹಲ್ಲೆಯ ಬಗ್ಗೆ ಕಣ್ಣೀರು ಸುರಿಸುತ್ತ ಬರೆಯುವ ಇದೇ ಸೆಕ್ಯುಲರ್ ಮಂದಿ,ಹೀಗೆ 2-3 ತಿಂಗಳ ಹಿಂದೆ, "ಬಾಲು ಮತ್ತು ಡಂಕಿನ್" ಅವರ "ವಚನ ಚಳುವಳಿ ಮತ್ತು ಜಾತಿ ವ್ಯವಸ್ಥೆಯ" ಕುರಿತ ಚರ್ಚೆಯನ್ನು ಮುಕ್ತಾಯ ಮಾಡಿಸಿದ ಪರಿ ಮರೆತು ಹೋಗಿದ್ದಾರೆಯೇ? ಇವತ್ತು ಸರ್ಕಾರದ ಧೋರಣೆಯನ್ನು ಫ್ಯಾಸಿಸ್ಟ್ ಅನ್ನುವ ಈ ಸೆಕ್ಯುಲರ್ಗಳ ಫ್ಯಾಸಿಸ್ಟ್ ಮುಖವಾಡ ಸಂಶೋಧನಾ ಕೇಂದ್ರವನ್ನು ಮುಚ್ಚಿಸುವಾಗ ಅನಾವರಣವಾಗಿದ್ದು ಸುಳ್ಳೇ?

ತಾವು ಹೇಳಿದ್ದು ಮಾತ್ರ ಇತಿಹಾಸ,ಸಂಸ್ಕೃತಿ, ಉಳಿದವರದ್ದೆಲ್ಲಾ ವಿಕೃತಿ ಎನ್ನುವುದು ಫ್ಯಾಸಿಸ್ಟ್ ವರ್ತನೆಯಾಗಿದೆ ಅನ್ನುವ ಮಾತುಗಳನ್ನು ಒಪ್ಪುವುದಾದರೆ ಒಂದು ಸಂಶೋಧನಾ ಕೇಂದ್ರವನ್ನು ಅದು ತಮ್ಮ "ಪ್ರಣಾಳಿಕೆಯಂತ ಸಂಶೋಧನಾ ವರದಿ" ನೀಡುತ್ತಿಲ್ಲ ಅನ್ನುವ ಕಾರಣಕ್ಕಾಗಿ ಮುಚ್ಚಿಸುವುದು ಫ್ಯಾಸಿಸ್ಟ್ ವರ್ತನೆಯಲ್ಲವೇ?

ಡುಂಢಿಯ ಮೇಲಿನ ವಿರೋಧದ ಬಗ್ಗೆ ಬರೆಯುತ್ತ ಡಾ.ಅನುಪಮ ಅವರು "ಧರ್ಮ, ಪುರಾಣ, ಸರ್ಕಾರ, ವ್ಯವಸ್ಥೆ ಮುಂತಾದ ಎಲ್ಲ ಪಟ್ಟಭದ್ರ ವ್ಯವಸ್ಥೆಗಳ ಚಲನಶೀಲತೆ ಕಡಿಮೆಯಾದ ಕೂಡಲೇ ಅದನ್ನು ಗ್ರಹಿಸಿ ಪ್ರಶ್ನಿಸುವ ಚೈತನ್ಯ ಸೃಜನಶೀಲ ಕಲೆಗಳಿಗಿದೆ. ಎಂದೇ ಯಥಾಸ್ಥಿತಿ ಬಯಸುವ ಎಲ್ಲ ವ್ಯವಸ್ಥೆಗಳು ಲೇಖಕ, ಕಲಾವಿದರನ್ನು ಗುಮಾನಿಯಿಂದ ನೋಡುತ್ತವೆ" ಅನ್ನುತ್ತಾರೆ. ಅವರ ಮಾತು ನನಗೆ ಬಹಳ ಹಿಡಿಸಿತು.ಅವರು 'ಯಥಾಸ್ಥಿತಿ' ಅನ್ನುವುದನ್ನು ನಾನು 'ಹೊಟ್ಟೆಪಾಡು' ಅನ್ನುತ್ತೇನೆ.

ಸಿ.ಎಸ್.ಎಲ್.ಸಿ ಕಥೆ-ವ್ಯಥೆ : ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆಯ ಚಳುವಳಿಯಲ್ಲಿನ ಚರ್ಚೆ ಕಡೆಗೆ ಸಿ.ಎಸ್.ಎಲ್.ಸಿ ಸಂಶೋಧನಾ ಕೇಂದ್ರವನ್ನು ಮುಚ್ಚಿಸುವವರೆಗೂ ಹೋಗಿದ್ದು "ಯಥಾಸ್ಥಿತಿ ಬಯಸುವ ಪಟ್ಟಭದ್ರ ವ್ಯವಸ್ಥೆಗಳಿಂದಲೇ" ಅಲ್ಲವೇ? ಕರ್ನಾಟಕದ ಮಟ್ಟಿಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರುವಾಗ ಈ ಘಟನೆ ಸಂಭವಿಸಿರುವುದು ಪ್ರಗತಿಪರರಿಗೆ ನಿರಾಸೆ ಮೂಡಿಸಿದೆಯಂತೆ.ಅದು ಸಹಜವೇ ಬಿಡಿ.

ಚುನಾವಣೆಯಲ್ಲಿ ಗೆದ್ದಕೂಡಲೇ ಈ ನಾಡಿನ ಚಿಂತಕರು ಅಂತ ಕರೆಸಿಕೊಳ್ಳುವವರನ್ನೆಲ್ಲ ಭೇಟಿಯಾದ ಸಮಾಜವಾದಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗಿರುವುದು ವಿಷಾದಕರವೇ ನಿಜ.ಈಗ ಇಡೀ ಸಾಹಿತ್ಯಿಕ ವಲಯ ಒಂದಾಗಿ ವಿರೋಧಿಸಬೇಕು ಅನ್ನುವವರು, ವಿದ್ಯಾರ್ಥಿಗಳ ಸಂಶೋಧನೆಗೆ ಇದೇ ಸರ್ಕಾರ ಕಲ್ಲು ಹಾಕಲು ಹೊರಟಾಗ ಯಾಕೆ ಮಾತನಾಡಲಿಲ್ಲ? ಆಗ ಸೆಕ್ಯುಲರ್ಗಳ ಬಾಯಿಗಳು ಬಿದ್ದು ಹೋಗಿದ್ದವೇ? ನಮ್ಮ ಸಾಹಿತಿಗಳೆಲ್ಲಿ ಹೋಗಿದ್ದರು? ಅಭಿವ್ಯಕ್ತಿ ಸ್ವಾತಂತ್ರ್ಯ ಸೆಕ್ಯುಲರಿಸಂನ ಕಳ್ಳಸಂತೆಯಲ್ಲಿ ಬಿಕರಿಯಾಗುತಿತ್ತೇ?

ಬೆಲ್ಜಿಯಂನ ಗೆಂಟ್ ವಿವಿ ಮತ್ತು ಕುವೆಂಪು ವಿವಿ ಸಹಭಾಗಿತ್ವದಲ್ಲಿ 2007ರಲ್ಲಿ ಶುರುವಾಗಿ 2012 ಕ್ಕೆ ಮುಗಿದ ಸಂಶೋಧನಾ ಚಟುವಟಿಕೆಗಳನ್ನು ಮುಂದುವರೆಸಲು, ಗೆಂಟ್ ವಿವಿ ಆರ್ಥಿಕ ನೆರವೂ ನೀಡಲು ಸಿದ್ಧವಾಗಿದ್ದರೂ, ಕುವೆಂಪು ವಿವಿ ಸುಮ್ಮನಾಗಿದ್ದು ಯಾವ ಕಾಣದ ಕೈಗಳಿಂದ? ಈ ಕಾಣದ ಕೈಗಳನ್ನೇ ಯಥಾಸ್ಥಿತಿ ಬಯಸುವ ಪಟ್ಟಭದ್ರ ಹಿತಾಸಕ್ತಿಗಳು ಅನ್ನಬಹುದೇ?

ಈ ದೇಶದ ಯಾವುದೇ ವಿವಿಯಲ್ಲಿ ಸಂಶೋಧನಾ ಕೇಂದ್ರದ ಚಟುವಟಿಕೆಯ ಅವಧಿ ವಿಸ್ತರಣೆಗೆ ಇದುವರೆಗೆ ಮಾಡಲಾಗಿರುವ ಸಂಶೋಧನೆಗಳ ವರದಿ ನೀಡಲು ಸಮಿತಿಯೊಂದನ್ನು ರಚಿಸಿದ ಉದಾಹರಣೆಯಿಲ್ಲ.ಹಾಗಿದ್ದರೆ, ಸಿ.ಎಸ್.ಎಲ್.ಸಿ ವಿಷಯದಲ್ಲಿ ಮಾತ್ರ ಹೀಗಾಗಿದ್ದು ಯಾಕೆ? ಅವರು ನಂಬಿಕೆಗಳ ಬುಡವನ್ನು ಅಲ್ಲಾಡಿಸುವಂತ ಪ್ರಶ್ನೆಗಳನ್ನಿಡುತ್ತ ಬಂದರೂ ಅಂತಲೇ ತಾನೇ?

ಡುಂಢಿಯಂತ ಕಾದಂಬರಿಗಳಿಂದ ಹಿಂದೂ ಧರ್ಮಕ್ಕೇನು ಆಗುವುದಿಲ್ಲ ಅನ್ನುವುದು ನನ್ನ ನಂಬಿಕೆ.ಹೀಗಾಗಿ ಡುಂಢಿಯ ಬಗ್ಗೆ ನನಗೇ ಅಂತ ತಕರಾರುಗಳಿಲ್ಲವಾದ್ದರಿಂದ ನಾನಿಲ್ಲಿ ಅದರ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.

ನನ್ನ ತಕರಾರಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುವ ಅವಕಾಶವಾದಿ ಸೆಕ್ಯುಲರಿಸ್ಟರ ಕುರಿತು.ಹಿಂದೂಗಳ ದೇವರ ಮೇಲೆ ಬರೆದಂತೆ, ಪೈಗಂಬರರು,ಕ್ರಿಸ್ತರ ಮೇಲೆ ಬರೆದು ತೋರಿಸಿ ಅನ್ನುವುದು ಅಸಂಬದ್ಧ ಪ್ರಶ್ನೆಗಳಾಗುವುದಿಲ್ಲ,ಅಸಲಿಗೆ ಅಂತ ಪುಸ್ತಕಗಳೇನಾದರೂ ಬಂದರೆ ಆಗ ಇದೇ ಸೋ-ಕಾಲ್ಡ್ ಸೆಕ್ಯುಲರ್ಗಳು ಅಲ್ಲಿಯೂ ಸಂಘಪರಿವಾರವನ್ನು ಎಳೆದು ತಂದು ಚರ್ಚೆಯ ಹಾದಿ ತಪ್ಪಿಸಬಲ್ಲರು.ತಮ್ಮ ಬುಡಕ್ಕೆ ಬಂದಾಗ ಅಲ್ಲಿ ನೋಡಿ ಫ್ಯಾಸಿಸ್ಟ್ ಗಳು ಅನ್ನುತ್ತಾ ತಮ್ಮೊಳಗಿನ ಫ್ಯಾಸಿಸಂ ಅನ್ನು ಮುಚ್ಚಿಕೊಳ್ಳಲು ಹೊರಡುವ ಇವರ ಆಟಗಳು ಉಳಿದವರಿಗೇನು ಅರ್ಥವಾಗದಿರುವಂತದ್ದದ್ದೇ?

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸೆಕ್ಯುಲರ್ಗಳಿಗೊಂದು ಬಹಿರಂಗ ಸವಾಲು. ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನಿಮ್ಮದು ನೈಜ ಕಾಳಜಿಯಾದರೇ "ಸಿ.ಎಸ್.ಎಲ್.ಸಿ"ಯ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲು ಹೊರಟ "ಯಥಾಸ್ಥಿತಿ ಬಯಸುವ ಪಟ್ಟಭದ್ರ ಹಿತಾಸಕ್ತಿಗಳು" ಪ್ರಶ್ನಿಸಿ ನೋಡೋಣ? ಆಗಬಲ್ಲದೇ ನಿಮ್ಮಿಂದ? ಆಗುವುದಿಲ್ಲವೆಂದಾದರೆ, ಸೆಕ್ಯುಲರಿಸ್ಟರದು ಅನುಕೂಲಸಿಂಧು,ಅವಕಾಶವಾದಿ ಸೆಕ್ಯುಲರಿಸಂ ಮತ್ತು ನಾವು ಇನ್ನೊಬ್ಬರಿಗೆ ಆರೋಪಿಸುವ ಫ್ಯಾಸಿಸಂ ಅನ್ನುವುದು ನಮ್ಮ ಸೆಕ್ಯುಲರಿಸಂನ ಮುಖವಾಡದೊಳಗೂ ಇದೆ ಅನ್ನುವುದನ್ನು ಸುಮ್ಮನೇ ಒಪ್ಪಿಕೊಳ್ಳಿ.ಒಪ್ಪಿಕೊಂಡು ಉಳಿದವರಿಗೆ ಪಾಠ ಮಾಡುವುದನ್ನು ನಿಲ್ಲಿಸಿಬಿಡಿ.

English summary
An insight into Yogesh Master's Controversial Dhundi book and Secular opportunism a debate by Citizen Journalist Rakesh Shetty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X