ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿದಂತೆ ನಡೆದ ನ್ಯಾಯಮೂರ್ತಿ ನಿವೃತ್ತಿ

By Mahesh
|
Google Oneindia Kannada News

Judge DV Shylendra Kumar Retires
ಬೆಂಗಳೂರು, ಸೆ.4: ಆಡಳಿತದಲ್ಲಿ ಪಾರದರ್ಶಕತೆ ಎಂದು ಭಾಷಣ ಬಿಗಿದು ಭ್ರಷ್ಟಾಚಾರದಲ್ಲಿ ತೊಡಗಿರುವವರ ಬಗ್ಗೆ ಬಹಿರಂಗವಾಗಿ ಕಿಡಿಕಾರಿದ್ದ, ನುಡಿದಂತೆ ನಡೆದ ನ್ಯಾಯಮೂರ್ತಿ ಡಿ. ವಿ ಶೈಲೇಂದ್ರ ಕುಮಾರ್ ಅವರು ಬುಧವಾರ ನಿವೃತ್ತಿ ಹೊಂದಿದ್ದಾರೆ.

ಜಡ್ಜ್ ಗಳು ಆಸ್ತಿ ವಿವರ ಬಹಿರಂಗ ಪಡಿಸಬೇಕು ಎಂದು ಹೇಳಿದ್ದಲ್ಲದೆ, ಮೊದಲು ತಮ್ಮ ಹಾಗೂ ತಮ್ಮ ಕುಟುಂಬದವರ ಆಸ್ತಿ ವಿವರ ಬಹಿರಂಗಪಡಿಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ್ದು ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಅವರು ಎಂಬುದನ್ನು ಮರೆಯುವಂತಿಲ್ಲ.

ನ್ಯಾಯಮೂರ್ತಿಗಳೂ ಸಹ ಜನಪ್ರತಿನಿಧಿಗಳಂತೆ ವೈಯಕ್ತಿಕ ಆಸ್ತಿ ವಿವರ ಸಲ್ಲಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಲ್ಲದೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವಲ್ಲಿ ಶೈಲೇಂದ್ರ ಕುಮಾರ್ ಯಶಸ್ವಿಯಾಗಿದ್ದರು.

2009ರಲ್ಲಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ತಮಿಳುನಾಡಿನ ಪಿ.ಡಿ.ದಿನಕರನ್ ವಿರುದ್ಧ ಆಕ್ರಮ ಆಸ್ತಿ ಆರೋಪಗಳು ಕೇಳಿಬಂದವು. ತಮಿಳುನಾಡಿನಲ್ಲಿ ವಕೀಲರು ಹಾಗೂ ಜನರು ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನಿಗೆ ನುಗ್ಗಿ, ಆ ಭೂಮಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ದಾಂಧಲೆ ನಡೆಸಿದ್ದರು.

ಮೊದಲು ಆಸ್ತಿ ವಿವರ ಹೈಕೋರ್ಟ್ ವೆಬ್ ಸೈಟ್ ನಲ್ಲಿ ಪ್ರಕಟಿಸಲು ರಿಜಿಸ್ಟ್ರಾರ್ ಜನರಲ್ ಅನುಮತಿ ಕೋರಿದರು. ಅದಕ್ಕೆ ಅಂದಿನ ಸಿಜೆಯಿಂದ ಅನುಮತಿ ಸಿಗದಿದ್ದಾಗ, ತಾವೇ ಒಂದು ವೈಯಕ್ತಿಕ ವೆಬ್ ಸೈಟ್ ಮಾಡಿಸಿ ಅದರಲ್ಲೇ ಎಲ್ಲ ಆಸ್ತಿ ವಿವರ ಪ್ರಕಟಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು. ಅಷ್ಟೇ ಅಲ್ಲ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸಿಜೆ ಅಧಿಕಾರ ವ್ಯಾಪ್ತಿ, ನ್ಯಾಯಮೂರ್ತಿಗಳ ನಡವಳಿಕೆ ಹೇಗಿರಬೇಕು ಎಂಬ ಬಗ್ಗೆ ಲೇಖನವನ್ನೂ ಸಹ ಬರೆದರು. ಲೇಖನ ಓದಿ.

ನ್ಯಾಯಮೂರ್ತಿ ಬಗ್ಗೆ: ಡೆಂಕಣಕೋಟೆ ವೀರೇಂದ್ರ ಕುಮಾರ್, ಶೈಲೇಂದ್ರ ಕುಮಾರ್ 1951ರಲ್ಲಿ ಜನನ. ನೆರೆಯ ತಮಿಳುನಾಡಿನ ಡೆಂಕಣಕೋಟೆಯ ವಾಸಿ. ತಂದೆ ಉದ್ಯಮಿ ಹಾಗೂ ಶಾಸಕರೂ ಆಗಿದ್ದರು. ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ. ನಂತರ ಚೆನ್ನೈನಲ್ಲಿ ಕಾನೂನು ಪದವಿ ಗಳಿಸಿ 1976ರ ಜೂ 30ರಂದು ವಕೀಲಿಕೆ ಆರಂಭಿಸಿದರು.

ಮದ್ರಾಸ್ ಹೈಕೋರ್ಟ್‌ನ ಖ್ಯಾತ ಕಾನೂನು ಪಂಡಿತರಾಗಿದ್ದ ಎಸ್.ಪರಾಶರನ್ ಅವರ ಬಳಿ ಜೂನಿಯರ್ ಆಗಿ ವೃತ್ತಿ ಆರಂಭಿಸಿ ನಂತರ ಕರ್ನಾಟಕಕ್ಕೆ ಬಂದು ಇಲ್ಲಿ ನ್ಯಾ. ರಾಜಶೇಖರ ಮೂರ್ತಿ ಅವರಡಿ ವಕೀಲಿಕೆ ಮಾಡುತ್ತಿದ್ದರು. ಶ್ರದ್ಧೆ, ಪರಿಶ್ರಮದಿಂದ ಕೆಲವೇ ವರ್ಷಗಳಲ್ಲಿ ಸ್ವತಂತ್ರವಾಗಿ ವಕೀಲಿಕೆ ಆರಂಭಿಸಿದ ಅವರು ಕೇಂದ್ರ ಸರಕಾರಿ ಪರ ವಕೀಲರೂ ಆಗಿದ್ದರು.

ಸಾಂವಿಧಾನಿಕ, ಸಿವಿಲ್, ಕ್ರಿಮಿನಲ್ ವಿಷಯಗಳಲ್ಲಿ ನೈಪುಣ್ಯತೆ ಗಳಿಸಿದ್ದ ಅವರ ಅಚ್ಚುಮೆಚ್ಚಿನ ವಿಷಯ ತೆರಿಗೆ ವ್ಯಾಜ್ಯಗಳು. ಅವರು ಎರಡು ವರ್ಷ ಎಸ್ ಜೆಆರ್ ಸಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿಯೂ ತಮ್ಮ ಕಾನೂನು ಜ್ಞಾನವನ್ನು ವಿದ್ಯಾರ್ಥಿಗಳಿಗೂ ಹಂಚಿಸಿದ್ದರು.

24 ವರ್ಷಗಳ ಅವರ ಸೇವೆ ಪರಿಗಣಿಸಿ ಡಿ 11, 2000ದಂದು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ನಂತರ 2002 ಏ.18ರಂದು ಅವರ ಸೇವೆ ಕಾಯಂ ಆಗಿ 13 ವರ್ಷ ನ್ಯಾಯಾಧೀಶರಾಗಿ ಸೇವೆಸಲ್ಲಿಸಿ 'ಖಡಕ್' ಜಡ್ಜ್ ಎನಿಸಿಕೊಂಡರು.

ನ್ಯಾಯಮೂರ್ತಿಗಳು ಆಸ್ತಿ ವಿವರ ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ನಡೆಯಿತು. ಸಿಜೆಐ ಆಗಿದ್ದ ಕೆ.ಜಿ.ಬಾಲಕೃಷ್ಣನ್ ಸೇರಿದಂತೆ ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದರು. ಕರ್ನಾಟಕದಲ್ಲೂ ಸಹ ನ್ಯಾಯಮೂರ್ತಿಗಳು ಅದನ್ನೇ ಅನುಕರಿಸಿದರು.

ಪ್ರಮುಖ ಆದೇಶಗಳು: 2007ರಲ್ಲಿ ಗಣಿಗಾರಿಕೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠದಲ್ಲೇ ಕುಳಿತು ದಾಖಲೆ ನೋಡಿ ಆದೇಶ ನೀಡುವ ಬದಲು, ತಾವೇ ಸ್ವತಃ ಬಳ್ಳಾರಿಯ ಕುಮಾರಸ್ವಾಮಿ ವಲಯಕ್ಕೆ ಭೇಟಿ ನೀಡಿ ಹೊಸ ಇತಿಹಾಸ ಬರೆದರು. ಗಣಿಗಾರಿಕೆ ರಾಷ್ಟ್ರೀಕರಣ ಮಾಡಬೇಕು ಎಂದು ಆಗ್ರಹಿಸಿದರು. ಪರಿಸರ ರಕ್ಷಣೆಯಲ್ಲಿ ಲಾಭದ ಉದ್ದೇಶ ಇರಬಾರದು ಎಂದು ಸರಕಾರಕ್ಕೆ ಆದೇಶವನ್ನೂ ನೀಡಿದ್ದರು.

ಮಹಿಳೆಯರು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ದುಡಿಯುವ ಅವಕಾಶ ನೀಡಬೇಕೆ ಅಥವ ಬೇಡವೆ ಎಂಬ ಪ್ರಶ್ನೆ ಎದ್ದಾಗ, 'ಕಾನೂನಿನ ಮುಂದೆ ಎಲ್ಲರೂ ಸಮಾನರು. ಸಂವಿಧಾನದ ಕಲಂ 14ಪ್ರಕಾರ ಪುರುಷರು, ಮಹಿಳೆಯರು ಇಬ್ಬರೂ ಒಂದೇ, ಪುರುಷರಂತೆ ಅವರೂ ಸಹ ದುಡಿಯಲಿ ಬಿಡಿ' ಎಂದು ಮಹತ್ವದ ಆದೇಶ ನೀಡಿದ್ದರು.

ಮನರಂಜನಾ ತೆರಿಗೆ ವಿಧಿಸಲು ಅವಕಾಶ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಚಾರ, ಸಹಕಾರ ಕಾಯಿದೆ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ತೀರ್ಪುಗಳನ್ನು ನೀಡಿದ್ದಾರೆ. ಅವರ ಬಹುತೇಕ ತೀರ್ಪುಗಳನ್ನು ಸುಪ್ರೀಂಕೋರ್ಟ್ ಕೂಡ ಸಮ್ಮತಿಸಿದೆ.

English summary
Judge DV Shylendra Kumar retires today (Sept.4) A Justicewho has written an open letter to public about worsening situation about corruption in judiciary and specifically about continutation of CJ of Karnataka high court P D Dinakaran in administration
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X