ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಸೌಧದಲ್ಲಿ ಭಾನುವಾರ 'ಪಂಪ ಭಾರತ' ನಾಟಕ

By Prasad
|
Google Oneindia Kannada News

ಬೆಂಗಳೂರು, ಆ. 19 : 'ಅವಿರತ' ಸಂಸ್ಥೆ ಅರ್ಪಿಸುತ್ತಿರುವ, ಸಮುದಾಯ ತಂಡ ರಂಗಕ್ಕೆ ತರುತ್ತಿರುವ 'ಪಂಪ ಭಾರತ' ಕನ್ನಡ ನಾಟಕ, ಆಗಸ್ಟ್ 25ರಂದು ಭಾನುವಾರ, ಮಧ್ಯಾಹ್ನ 3.30ಕ್ಕೆ ಹನುಮಂತನಗರದಲ್ಲಿರುವ ಕೆ.ಎಚ್. ಕಲಾಸೌಧದಲ್ಲಿ ಪ್ರದರ್ಶಿತವಾಗುತ್ತದೆ.

ಮತಾಂಧತೆಯಂತಹ ಸಾಮಾಜಿಕ ಜಾಡ್ಯಕ್ಕೆ ಬಲಿಪಶುವಾದ ಮಹಾಭಾರತದ ಕರ್ಣ, ಪಂಪರೊಡನೆ ಇಂದಿನ ಸಮಾಜದ ಸಾಮ್ಯತೆಯನ್ನು ಪ್ರೇಕ್ಷಕರಿಗೆ ತೆರೆದಿಡುವುದೇ ನಾಟಕದ ಮೂಲವಸ್ತು. ನಾಟಕವನ್ನು ಡಾ. ಕೆ.ವೈ. ನಾರಾಯಣಸ್ವಾಮಿ ರಚಿಸಿದ್ದು, ಪ್ರಮೋದ್ ಶಿಗ್ಗಾಂವ್ ಅವರು ನಿರ್ದೇಶಿಸಿದ್ದಾರೆ.

ನಾಟಕದ ಬಗ್ಗೆ : ಪಂಪ ಭಾರತ ನಾಟಕ ವಿಕ್ರಮಾರ್ಜುನ ವಿಜಯ ಮಹಾಕಾವ್ಯದೊಂದಿಗೆ ನಡೆಸಿದ ಒಂದು ಅನುಸಂಧಾನ ಪ್ರಯತ್ನ. ಚರಿತ್ರೆ-ಪುರಾಣಗಳ ನಡುವಿನ ಸಂಬಂಧದ ಸ್ವರೂಪ ಮತ್ತು ಅರ್ಥೈಸುವಿಕೆಯೇ ನಮ್ಮ ದೇಶದ ಬಹು ದೊಡ್ಡ ಸಾಂಸ್ಕೃತಿಕ ಸಮಸ್ಯೆ. ಪಂಪ ಸಾವಿರ ವರ್ಷಗಳ ಹಿಂದೆ ಈ ಸವಾಲನ್ನು ಎದುರಿಸಿದ ಪ್ರಕ್ರಿಯೆಯ ಫಲವೇ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ.

Pamba Bharata : Kannada play at KH Kalasoudha, Bangalore

ಪಂಪ ಭಾರತ : ಪಂಪ, ರನ್ನ, ಕುಮಾರವ್ಯಾಸ, ವ್ಯಾಸರ ಮಹಾಕಾವ್ಯಗಳ ಕೆಲ ಘಟನೆಗಳ ಜೊತೆಗೆ ನಮ್ಮ ಕನ್ನಡದ ಮೌಖಿಕ ಪರಂಪರೆ ಕಟ್ಟಿಕೊಂಡಿರುವ ಜಾನಪದ ಮಹಾಭಾರತ ಕಥನಗಳನ್ನು ಮುಖಾಮುಖಿಯಾಗಿಸಿದರ ಫಲವಾಗಿ ರೂಪುಗೊಂಡ ನಾಟಕವಾಗಿದೆ. .ಪಂಪನ ಕಾವ್ಯದಲ್ಲಿ ಸಿದ್ಧ ಅರ್ಥ ಸಹಯೋಗಗಳನ್ನು ಉಲ್ಲಂಘಿಸುವುದರ ಮೂಲಕ ಅರ್ಥವನ್ನು ನಿರಂತರವಾಗಿ ಬದಲಾಗುವ ಪ್ರಕ್ರಿಯೆಯಾಗಿಸಿರುವುದೇ ಕ್ರಮ-ವಿಕ್ರಮವಾದ ಉದಾಹರಣೆ. ಆ ಒಳದಾರಿಯನ್ನು ಪಂಪ ಭಾರತ ನಾಟಕದಲ್ಲಿ ಸ್ಥಾಯಿಯಾಗಿಟ್ಟುಕೊಂಡು ವರ್ತಮಾನ-ಚರಿತ್ರೆ-ಸಮಾಜಗಳ ಸಂಬಂಧಗಳನ್ನು ವಿವರಿಸುವ ನಾಟಕವಾಗಿದೆ.

ನೆನೆಯದಿರಣ್ಣ ಭಾರತದೊಳಿಂ ಪೆರರಾಮುಂ ನೆನೆವೊಡೆಒಂದೆಚಿತ್ತದಿಂಕರ್ಣನಂ ನೆನೆಯ ಎಂದು ಪಂಪ ಮನದುಂಬಿ ಹಾಡಿದ್ದಾನೆ. ಇಡೀ ಮಹಾಭಾರತದಲ್ಲಿ ಪಂಪನ ಹೃದಯ ಗೆದ್ದಿದ್ದವನು ಕರ್ಣ ಮಾತ್ರ. ಪಂಪನಿಗೆ ಆಶ್ರಯ ನೀಡಿದ ಸಾಮಂತ ರಾಜ ಅರಿಕೇಸರಿ ಮತ್ತು ಪಂಪನ ನಡುವಿನ ಗಾಢವಾದ ಸ್ನೇಹದಿಂದಾಗಿ ಪಂಪ ಮಹಾಭಾರತದ ಕಥೆ ಬರೆಯ ಹೊರಟಾಗ ಅರಿಕೇಸರಿ ಮಹಾರಾಜರಿಗೆ ಕರ್ಣನನ್ನು ಸಮೀಕರಿಸಿ ಬರೆಯಬೇಕೆಂದು ಬಯಸಿದ್ದ. ಆದರೆ ಕರ್ಣ ಕೇವಲ ಸಾಮಂತನಾಗಿದ್ದರಿಂದ, ಸಾಮ್ರಾಟನಾಗುವ ಹಂಬಲವಿದ್ದ ಅರಿಕೇಸರಿ ಮಹಾರಾಜರಿಗೆ ಇದು ಸಮ್ಮತವಾಗಿರಲಿಲ್ಲ.

ಅರಿಕೇಸರಿಯ ಮಹತ್ವಾಕಾಂಕ್ಷೆಗೆ ಮಣಿದು ಪಂಪ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಮಹಾಭಾರತ ಕಾವ್ಯ ರಚಿಸಿದ್ದರೂ, ಅರಿಕೇಸರಿಯ ಮತ್ತು ಅರ್ಜುನನ ಸಮೀಕರಣವನ್ನು ಮನಃಪೂರ್ವಕವಾಗಿ ಒಪ್ಪದ ಪಂಪನು, ಅರಿಕೇಸರಿಯ ಆಸ್ಥಾನವನ್ನು ತ್ಯಜಿಸಿ ಅಗ್ರಹಾರಕ್ಕೆ ಮರಳುತ್ತಾನೆ. ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ, ತಂದೆಯ ಜೈನ ಧರ್ಮಕ್ಕೆ ಮತಾಂತರದಿಂದಾಗಿ ಪಂಪನ ವರ್ತಮಾನ ಅಗ್ರಹಾರದ ಬ್ರಾಹ್ಮಣರನ್ನು ಕಾಡುತ್ತಿದ್ದು ಅವನ ಭೂತ ಜೈನರನ್ನು. ಈ ಭೂತ ವರ್ತಮಾನಗಳ ನಡುವಿನ ಸಂಘರ್ಷ, ಗಲಭೆಯಾಗಿ ಪಂಪ ಹತನಾಗುತ್ತಾನೆ.

ತನ್ನ ಯೌವನ ಕಾಲದಲ್ಲಿ ಮಹಾಕಾವ್ಯಗಳನ್ನು ರಚಿಸಿದ ಪಂಪ ಇಳಿ ವಯಸ್ಸಿನಲ್ಲೇನಾದ ಎಂಬ ಕುತೂಹಲದಿಂದ ಸಂಶೋಧನೆ ಮಾಡಲು ಬರುವ ಸಂಶೋಧಕರಿಗೆ, ಮತಾಂಧತೆಯ ಭೂತ ಮತ್ತು ವರ್ತಮಾನಗಳ ಸತ್ಯಗಳು ಬಿಡಿಸಿಕೊಳ್ಳುತ್ತವೆ. ಇಂದು ನಿನ್ನೆಯದಲ್ಲದ, ಮಹಾಭಾರತದ ಕಾಲದಿಂದಲೂ ಬೇರು ಬಿಟ್ಟಿರುವ ಮತಾಂಧತೆಯಂತಹ ಒಂದು ಸಾಮಾಜಿಕ ಜಾಡ್ಯದ ಬಲಿಪಶುವಾದ ಕರ್ಣ, ಪಂಪರೊಡನೆ ಇಂದಿನ ಸಮಾಜದ ಸಾಮ್ಯತೆಯನ್ನು ಪ್ರೇಕ್ಷಕರಿಗೆ ತೆರೆದಿಡುವ ನಾಟಕ ಪಂಪ ಭಾರತ.

ನಾಟಕ : ಪಂಪ ಭಾರತ
ರಚನೆ : ಡಾ. ಕೆ.ವೈ. ನಾರಾಯಣ ಸ್ವಾಮಿ
ನಿರ್ದೇಶನ : ಪ್ರಮೋದ್ ಶಿಗ್ಗಾಂವ್
ದಿನಾಂಕ, ಸಮಯ : ಆ.25, ಭಾನುವಾರ, ಮಧ್ಯಾಹ್ನ 3.30
ಟಿಕೆಟ್ ದರ : 150 ರು.
ಹೆಚ್ಚಿನ ವಿವರಗಳಿಗೆ : 98800 86300
ಈಮೇಲ್ : [email protected]

English summary
Aviratha, Kannada social organization is presenting 'Pampa Bharata' enacted by Samudaya team at K.H. Kalasoudha, Hanumantha nagar, Bangalore on 25th August, Sunday at 3.30 afternoon. Ticket price is Rs. 150.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X