ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಬಿಟ್ಟು ಸೈಕಲ್ ತುಳಿಯುತ್ತಿರುವ ಬಿದರಿ: ಒಂದು ಝಲಕ್

By Srinath
|
Google Oneindia Kannada News

ಬೆಂಗಳೂರು, ಅಗಸ್ಟ್ 12: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಸಾಕಷ್ಟು ಅಳೆದೂ ಸುರಿದೂ ಇತ್ತೀಚೆಗಷ್ಟೇ ಕಾಂಗ್ರೆಸ್ ಕೈಹಿಡಿದಿದ್ದ ಶಂಕರ್ ಮಹಾದೇವ ಬಿದರಿ ಅವರು ಕಾಂಗ್ರೆಸ್ ಕೈ ಬಿಟ್ಟು ಇಂದೇ ಸಮಾಜವಾದಿ ಪಕ್ಷ ಸೇರ್ಪಡೆಯಾಗಲು ಇದೀಗತಾನೆ ಲಖ್ನೋ ವಿಮಾನವೇರಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಜತೆಗಿನ ಅವರ 5 ತಿಂಗಳ ಸಖ್ಯ ಕೊನೆಗೊಂಡಿದೆ.

Karnataka Ex DGP Shankar Mahadev Bidari all set to join Samajwadi Party

ಇದೇ ವೇಳೆ ಸಮಾಜವಾದಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಸಿಪಿ ಯೋಗೀಶ್ವರ್ ಅವರು ಕಾಂಗ್ರೆಸ್ ಸೇರುತ್ತಾರೆಂಬ ಊಹಾಪೋಹಕ್ಕೆ ತೆರೆ ಎಳೆದಿದ್ದು, ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ್ ಬಿದರಿ ಅವರನ್ನು ಖುದ್ದು ತಾವೇ ಲಖ್ನೋಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಅವರೂ ಸಹ ಇವರಿಬ್ಬರಿಗೂ ಸಾಥ್ ನೀಡಿದ್ದಾರೆ.

'ಪುಟಗೋಸಿ ಮಂತ್ರಿಯಾಗಲು ನಾನು ಕಾಂಗ್ರೆಸ್ ಸೇರಿಲ್ಲ. ರಾಜ್ಯ ಕಾಂಗ್ರೆಸ್ ತನಗೆ ತೃಣಕ್ಕೆ ಸಮಾನ. ನನ್ನದೇನಿದ್ದರೂ ದೆಹಲಿಮಟ್ಟದ ರಾಜಕೀಯ' ಎಂದು ಬೀಗುತ್ತಿದ್ದ ಶಂಕರ್ ಬಿದರಿ ಅವರಿಗೆ ಕಾಂಗ್ರೆಸ್ ಯಾವುದೇ ಸ್ಥಾನಮಾನ ನೀಡದೆ ಬೆಂಚ್ ಕಾಯಿಸುತ್ತಿತ್ತು. ಇದರಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದ ಶಂಕರ್ ಬಿದರಿ ಅಂತಿಮವಾಗಿ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ್ದಾರೆ.

'ನಾನು ಕಾಂಗ್ರೆಸ್‌ ಪಕ್ಷದಿಂದ ಯಾವುದೇ ಅಧಿಕಾರ ಕೇಳಿರಲಿಲ್ಲ. ಕಾಂಗ್ರೆಸ್‌ ಮುಖಂಡರು ನನ್ನ ಮನೆಗೇ ಬಂದು ಪಕ್ಷಕ್ಕೆ ಕರೆದುಕೊಂಡರು. ಯಾರು ಹೇಳದಿದ್ದರೂ ಐದು ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದೇನೆ. ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ, ಇಷ್ಟು ದಿನಗಳಾದರೂ ನನಗೆ ಯಾವುದೇ ಜವಾಬ್ದಾರಿ ನೀಡದೆ ದೂರವಿಡಲಾಗಿತ್ತು' ಎಂದು ಬಿದರಿ ನೊಂದು ನುಡಿದಿದ್ದಾರೆ.

ಪ್ರಬಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಬಿದರಿ ಅವರನ್ನು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಕೆಜೆಪಿ, ಬಿಎಸ್ಸಾರ್‌ ಕಾಂಗ್ರೆಸ್‌ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದವು.

ಲೋಕಸಭಾ ಚುನಾವಣೆಗಾದರೂ ಒಂದು ನೆಲೆಗಾಣಲು ಬಯಸಿರುವ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ್ ಬಿದರಿ ಅವರು ಸಮಾಜವಾದಿ ಪಕ್ಷದ 'ಸೈಕಲ್‌' ತುಳಿಯಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿದರಿ ಅವರು ಸೋಮವಾರ ಸಮಾಜವಾದಿ ಪಕ್ಷದ (ಎಸ್‌ಪಿ) ವರಿಷ್ಠ ನಾಯಕರಾದ ಮುಲಾಯಂ ಸಿಂಗ್‌ ಯಾದವ್‌, ಅಖಿಲೇಶ್‌ ಯಾದವ್‌ ಜತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ತಿಂಗಳ 15 ರಂದು ಚನ್ನಪಟ್ಟಣದಲ್ಲಿ ನಡೆಯುವ ಸಮಾವೇಶದಲ್ಲಿ ಬಿದರಿ ಸೇರ್ಪಡೆಯಾಗಲಿದ್ದಾರೆ ಎಂದೂ ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಪಕ್ಷದಲ್ಲಿ ಬಿದರಿ ತೃಪ್ತಿಯಿಂದ ಇಲ್ಲ ಎಂಬ ವಾಸನೆಯನ್ನು ಗ್ರಹಿಸಿದ ಯೋಗೇಶ್ವರ್‌ ಕಳೆದ ತಿಂಗಳಿಂದಲೇ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿದ್ದರು. ಜುಲೈ ಅಂತ್ಯದಲ್ಲಿ ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಮತ್ತು ಅಖಿಲೇಶ್‌ ಅವರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಬಿದರಿ ಕರೆತರುವ ಕುರಿತು ವೇದಿಕೆ ಸಿದ್ಧಗೊಂಡಿತು.

English summary
Karnataka Ex DGP Shankar Mahadev Bidari all set to join Samajwadi Party. To pursue the issue accompanied by CP Yogeshwar and Gulihatti Shekhar. Bidari left for Lucknow a short while ago from Bangalore Airport according TV reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X