ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಕುಟುಂಬ ನಂಬಬೇಡಿ- ಬರ್ತಡೇ ಬಾಯ್ ಸಿದ್ದು

By Srinath
|
Google Oneindia Kannada News

ಚನ್ನಪಟ್ಟಣ, ಆಗಸ್ಟ್ 12: ಉಸುರುವಳ್ಳಿಯ ಹಾಗೆ ಕ್ಷಣಕ್ಷಣಕ್ಕೂ ಬಣ್ಣ ಬದಲಾಯಿಸುವ ಹಾಗೂ ಮೊಸಳೆಕಣ್ಣೀರು ಹಾಕುವ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ಯಾರು ಕೂಡ ನಂಬಲೇಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಇಂದು ಸೋಮವಾರ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದ ಅವರು ರಾಜ್ಯವೇ ನನ್ನ ಆಸ್ತಿ ಎಂದು ಭಾವಿಸಿರುವ ಇವರ ಕುಟುಂಬವನ್ನು ರಾಜಕೀಯದಿಂದ ದೂರ ಕಳುಹಿಸುವ ಮೂಲಕ ಮತದಾರರು ತಕ್ಕ ಪಾಠವನ್ನು ಕಲಿಸಬೇಕು ಎಂದರು.

Bangalore Rural Lok Sabha bypoll CM Siddaramaiah canvass for Congress candidate DK Suresh, CM Siddaramaiah asks voters not to believe HD Deve Gowda family

ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಸಭೆಯಲ್ಲಿ ಅಧಿಕಾರ ಪಡೆಯುವ ದಿಶೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಸಭೆಗೆ ಆಯ್ಕೆಯಾಗಿ ಅಲ್ಲಿ ಅಧಿಕಾರದಿಂದ ವಂಚಿತರಾದ ಮೇಲೆ ಕಳೆದ ಚುನಾವಣೆಯಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಕನಸನ್ನು ಹೊತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರ ಫಲ ಮತ್ತೆ ಉಪ ಚುನಾವಣೆಯನ್ನು ಎದುರಾಗಿದೆ. ಇದಕ್ಕೆ ಅವರೆ ನೇರ ಹೊಣೆಗಾರರು ಎಂದು ಕಿಡಿಕಾರಿದರು.

ಸ್ವೇಚ್ಛಾಚಾರದ ರಾಜಕಾರಣ ಮಾಡುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ. ಪ್ರಜಾಪ್ರಭುತ್ವದಲ್ಲಿ ಪ್ರಭುಗಳೇ ದೊರೆಗಳು. ಆದರೆ ಅವರ ಜತೆ ಚೆಲ್ಲಾಟವಾಡುವ ಮೂಲಕ ಮತದಾರರ ಭಾವನೆಗಳನ್ನು ಕೆದಕಿ ಪದೇಪದೇ ಚುನಾವಣೆ ಹೇರಿ ಸರಕಾರದ ಬೊಕ್ಕಸಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಕೊಮುವಾದಿ ಪಕ್ಷ ಎಂದು ಬಿಜೆಪಿಯನ್ನು ಜರಿಯುವ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ರಾತ್ರೋರಾತ್ರಿ ಅವರ ಜತೆ ಒಳ ಒಪ್ಪಂದ ಮಾಡಿಕೊಂಡು ತಾವು ಅಧಿಕಾರಕ್ಕಾಗಿ ಯಾರ ಜತೆಗೂ ಕೈಜೊಡಿಸುತ್ತೆವೆ ಎಂದು ನಿರೂಪಿಸಿದ್ದಾರೆ. ಈ ಬಾರಿ ಕೂಡ ಒಪ್ಪಂದ ಮಾಡಿಕೊಂಡು ಮಂಡ್ಯ ಮತ್ತು ಬೆಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರವನ್ನು ವಾಪಸ್ಸು ತೆಗೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

ವರದೇಗೌಡರನ್ನು ಮುಗಿಸಿದರು
ದೇವೇಗೌಡರ ಕುಟುಂಬ ಇದುವರೆಗೂ ಯಾವ ನಾಯಕರನ್ನೂ ಬೆಳೆಸಿಲ್ಲ. ಎಂ ವರದೇಗೌಡ ಸೇರಿದಂತೆ ಅನೇಕ ನಾಯಕರನ್ನು ಮುಗಿಸಿದ ಕೀರ್ತಿ ಅವರ ಕುಟುಂಬಕ್ಕೆ ಸಲ್ಲುತ್ತದೆ. ಹಾಗೂ ಜಾತ್ಯತೀತ ಪಕ್ಷ ಎಂದು ಹೇಳುವ ಇವರು ಜಾತಿ ಲೆಕ್ಕಚಾರದಲ್ಲಿ ಮತಯಾಚನೆ ಮಾಡುತ್ತಾರೆ. ಅಲ್ಪಸಂಖ್ಯಾತರ ಸಮಾವೇಶದಲ್ಲಿ ಬಿಜೆಪಿ ಜತೆ ಕೈಜೊಡಿಸಿ ತಪ್ಪು ಮಾಡಿದ್ದೇವೆ ಎಂದು ಹೇಳುವ ಇವರು ಮತ್ತೆ ಕೋಮುವಾದಿ ಪಕ್ಷದ ಜತೆ ಸಖ್ಯ ಬೆಳೆಸುವ ಇವರಿಗೆ ಕಾಂಗೆಸ್ ಪಕ್ಷದ ಬಗ್ಗೆ ಮಾತನಾಡುವ ಮತ್ತು ಮತದಾರರ ಮುಂದೆ ಮತ ಕೇಳಲು ಯಾವ ನೈತಿಕತೆಯಿಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರಕಾರ ಅಸ್ತಿತ್ವಕ್ಕೆ ಬಂದ ಅರ್ಧ ತಾಸಿನಲ್ಲೆ ಪ್ರಮುಖ ನಿರ್ಧಾರ ತಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಬಡವರ ಸರಕಾರ ಎಂದು ನಿರೂಪಿಸಿದೆ. ಹಾಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷದ ಅಭ್ಯರ್ಥಿಯಾದ ಡಿ.ಕೆ. ಸುರೇಶ್ ಅವರನ್ನು ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದರು.

ಅವರದೇ ಅಭಿವೃದ್ಧಿಗೆ ಚುನಾವಣೆ
ಅಪ್ಪ ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ, ಮಗ ಮುಖ್ಯ ಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಡಿಸಿ ಈಗ ಸೊಸೆ ಅನಿತಾ ಕುಮಾರಸ್ವಾಮಿಯವರನ್ನು ಸಂಸದರನ್ನಾಗಿ ಮಾಡಿ ಇನ್ನಷ್ಟು ಅಭಿವೃದ್ಧಿ ಹೊಂದಲು ಹೊರಟಿದ್ದಾರೆ. ಅನಿತಾ ಕುಮಾರಸ್ವಾಮಿ ಲೋಕಸಭೆಯಲ್ಲಿ ಕುಳಿತು ಯಾವ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಗೃಹ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ದೇವೇಗೌಡರ ಕುಟುಂಬಕ್ಕೆ ಅಧಿಕಾರ ಬೇಕೆ ಹೊರತು ಜನಪರ ಸೇವೆ ಬೇಕಾಗಿಲ್ಲ. ನಿಜವಾಗಿಯೂ ಅವರಿಗೆ ಜನರ ಬಗ್ಗೆ ಕಾಳಜಿಯಿಲ್ಲ. ಹಾಗಾಗಿ ಅವರದು ವಲಸೆ ರಾಜಕಾರಣ ಎಂದು ಕಟಕಿಯಾಡಿದರು.

ರಾಜ್ಯದ ಅಭಿವೃದ್ಧಿಗೆ ಹೊಸ ತಿರುವು ತರಬೇಕಾದ ಕರ್ತವ್ಯ ಮತದಾರರಾದ ನಿಮ್ಮ ಮೇಲಿದೆ. ಅಭಿವೃದ್ಧಿ ಬಗ್ಗೆ ಬೊಗಳೆ ಮಾತನಾಡುವವರನ್ನು ತಿರಸ್ಕರಿಸಿ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಹೇಳಿದರು.

ಶಾಸಕ ಡಿಕೆ ಶಿವಕುಮಾರ್ ಮಾತನಾಡಿ 'ಲೋಕಸಭೆ ಚುನಾವಣೆಗೆ ತಮ್ಮ ಸಹೋದರ ಡಿ.ಕೆ. ಸುರೇಶ್‌ಗೆ ಟಿಕೆಟ್ ನೀಡಿ ಎಂದು ಅರ್ಜಿ ಹಾಕಿರಲಿಲ್ಲ ಪಕ್ಷದ ಹೈಕಮಾಂಡ್ ನಾಯಕತ್ವವನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದೆ. ನಾನು ಎಂದಿಗೂ ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ. ನೇರ ರಾಜಕಾರಣ ಮಾಡುತ್ತೇನೆ' ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಈ ಕ್ಷೇತ್ರದ ಜನತೆಗೂ ನನಗೂ ಇರುವ ಸಂಬಂಧ ಭಗವಂತನಿಗೂ ಭಕ್ತನಿಗೂ ಇರುವ ಸಂಭಂದ. ನನ್ನ ರಾಜಕೀಯ ಬೆಳವಣಿಗೆಗೆ ನೀವೆ ಕಾರಣಕರ್ತರು ಹಾಗೂ ರಾಜಕೀಯ ಶಕ್ತಿ ಕೊಟ್ಟವರು ನೀವೇ. ನಿಮ್ಮ ಅಭಿವೃದ್ಧಿಯೇ ನನ್ನ ಮೂಲಧ್ಯೇಯ. ಹಾಗಾಗಿ ನಿಮ್ಮ ಏಳಿಗೆಗೆ ಸದಾ ಚಿಂತಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ತಿರಸ್ಕರಿಸಿ ಎಂದು ಹೇಳಿದರು.

English summary
Bangalore Rural Lok Sabha bypoll CM Siddaramaiah canvass for Congress candidate DK Suresh in Channapattana. CM Siddaramaiah asks voters not to believe HD Deve Gowda family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X