ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಶೇಖರ ಕಂಬಾರರಿಂದ ದಸರಾ ಉದ್ಘಾಟನೆ

By Prasad
|
Google Oneindia Kannada News

Chandrashekhara Kambara to inaugurate Dasara festivities
ಬೆಂಗಳೂರು, ಆ. 10 : ಉತ್ತಮವಾದ ಮಳೆಯಿಂದಾಗಿ ಕೃಷ್ಣರಾಜ ಸಾಗರ ಸೇರಿದಂತೆ ರಾಜ್ಯದ ಎಲ್ಲ ಅಣೆಕಟ್ಟೆಗಳು ತುಂಬಿತುಳುಕುತ್ತಿರುವ ಈ ಸಂದರ್ಭದಲ್ಲಿ ಈ ಬಾರಿಯ ದಸರಾ ಉತ್ಸವವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಡಾ. ಚಂದ್ರಶೇಖರ ಕಂಬಾರ ಅವರು ಅಕ್ಟೋಬರ್ 5ರಂದು ಉದ್ಘಾಟಿಸಲಿದ್ದಾರೆ.

ಈ ಸಂಗತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧದಲ್ಲಿ ನಡೆದ 'ಮೈಸೂರು ದಸರಾ ಮಹೋತ್ಸವ-2013'ದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು. ಅಕ್ಟೋಬರ್ 5ರಿಂದ ಅ.14 ವಿಜಯದಶಮಿಯವರೆಗೆ ಉತ್ಸವಗಳು ನಡೆಯಲಿವೆ.

'ಈ ಬಾರಿಯ ನಾಡಹಬ್ಬ ದಸರಾ ಜನಮಾನಸದಲ್ಲಿ ಉಳಿಯುವಂತಹ ದಸರಾ ಆಗಬೇಕು. ಅಧಿಕಾರಿಗಳ ದಸರಾ ಆಗದೆ ಜನಸಾಮಾನ್ಯರ ದಸರಾ ಆಗಬೇಕು. ದಸರೆಯ ಹೆಸರಿನಲ್ಲಿ ಮೈಸೂರು ನಗರದಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಶಾಶ್ವತ ಹಾಗೂ ಪಾರದರ್ಶಕ ಕೆಲಸ ಆಗಲಿ, ಗುಣಮಟ್ಟದ ಕೆಲಸ ಆಗಲಿ ಎನ್ನುವ ಇಂಗಿತವನ್ನು ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದರು.

ಈ ಬಾರಿಯ ದಸರಾ ಉತ್ಸವವನ್ನು ವಿಶೇಷಗೊಳಿಸಲು ಸ್ಥಳೀಯ ಕಲಾವಿದರು, ಸಾಹಿತಿಗಳು, ಉಪನ್ಯಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಒಗ್ಗೂಡಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.

ದಸರಾ ಲಾಂಛನವನ್ನು ಬಿಡುಗಡೆ ಮಾಡಿದ ಸಿದ್ದರಾಮಯ್ಯ ಅವರು, ದೇಶದ ಇತಿಹಾಸ, ಪರಂಪರೆಯನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳಿಗೆ ಆದ್ಯತೆ ನೀಡಿ ದೆಹಲಿಯ ಗಣರಾಜ್ಯೋತ್ಸವ ಮಾದರಿಯಲ್ಲಿ ಎಲ್ಲಾ ರಾಜ್ಯಗಳೂ ಇದರಲ್ಲಿ ಪಾಲ್ಗೊಳ್ಳುವಂತೆ ಪ್ರಚಾರ ನೀಡಬೇಕು. ದಸರೆಯನ್ನು ನೋಡಲು ಬರುವ ವಿದೇಶಿ ಪ್ರವಾಸಿಗರು ಈಚೆಗೆ ಕಡಿಮೆಯಾಗುತ್ತಿದ್ದು ರಾಷ್ಟ್ರ ಹಾಗೂ ಅಂತಾರರಾಷ್ಟ್ರೀಯ ಮಟ್ಟದಲ್ಲಿ ದಸರಾ ಉತ್ಸವಕ್ಕೆ ವ್ಯಾಪಕ ಪ್ರಚಾರ ನೀಡಬೇಕೆಂದು ಹೇಳಿದರು.

ದಸರೆಯ ಸಲುವಾಗಿ ರಸ್ತೆ ದುರಸ್ತಿ ಕಾಮಗಾರಿಗಳು ನಡೆಯುವಾಗ ಗುಣಮಟ್ಟದ ಕೆಲಸಗಳು ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರು ಅರಮನೆಯ ನವೀಕೃತ ಕಟ್ಟಡದ ಶತಮಾನೋತ್ಸವ ಸಂಭ್ರಮವನ್ನು ಈ ವರ್ಷದಲ್ಲಿ ಆಚರಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದ ಮುಖ್ಯಮಂತ್ರಿ ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತಗಳನ್ನು ದಸರೆಯ ಸಿದ್ಧತೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಈ ಬಾರಿಯ ದಸರಾ ಆಚರಣೆಗೆ ಸುಮಾರು 10 ಕೋಟಿಗಳ ಅನುದಾನವನ್ನು ಮುಖ್ಯಮಂತ್ರಿಗಳಲ್ಲಿ ಕೋರಿದರು. ಸಭೆಯಲ್ಲಿ ದಸರಾ ಬಜೆಟ್ ಅನುದಾನ, ಪ್ರಚಾರ, ರಸ್ತೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ, ಉಪಸಮಿತಿಗಳ ರಚನೆ, ಉತ್ಸವಕ್ಕೆ ಗಣ್ಯರ ಆಹ್ವಾನ ಕುರಿತಂತೆ ಎಂಟು ವಿಷಯಗಳನ್ನು ಮುಖ್ಯಮಂತ್ರಿಗಳೊಂದಿಗೆ ಅವರು ಚರ್ಚಿಸಿದರು.

ಈ ಬಾರಿಯ ದಸರಾ ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಸೇನಾ ತುಕಡಿಗಳು ಹಾಗೂ ಆಧುನಿಕ ಯುದ್ಧ ಸಲಕರಣೆಗಳು, ವಾಯುದಳ ಭಾಗವಹಿಸುವಂತೆ ಕೋರಿ ಕೇಂದ್ರಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿಗಳಲ್ಲಿ ನಿವೇದಿಸಿದರು.

ವಾರ್ತಾ ಹಾಗೂ ಮೂಲಸೌಕರ್ಯ ಸಚಿವರಾದ ಸಂತೋಷ್ ಲಾಡ್ ಅವರು ಮಾತನಾಡಿ ದಸರಾ ಕಾರ್ಯಕ್ರಮಕ್ಕೆ ದೇಶ-ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಆನ್ ಲೈನ್ ಪ್ರಚಾರವನ್ನು ವ್ಯಾಪಕವಾಗಿ ಮಾಡಬೇಕು. ಮುಂದಿನ ವರ್ಷದಿಂದ ದಸರಾ ಕಾರ್ಯಕ್ರಮ ಸಿದ್ಧತೆಯನ್ನು ಆರೆಂಟು ತಿಂಗಳ ಮುಂಚೆಯೇ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರು ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ, ಕನ್ನಡ, ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ, ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ, ಮೂಲಸೌಕರ್ಯ ಮತ್ತು ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್, ಕೃಷ್ಣರಾಜ ಶಾಸಕ ಎಂ ಕೆ ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ಮತ್ತು ವಿಜಯ್ ಶಂಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಎಸ್ ವಿ ರಂಗನಾಥ್, ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜು ಅವರು ಸೇರಿದಂತೆ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ

English summary
Jnanpith award winning Kannada poet, dramatist Dr. Chandrashekhara Kambara will be inaugurating Dasara festivities on October 5, 2013. Chief minister Siddaramaiah announced this on Saturday, Aug 10 after participating in a meeting with officials and ministers in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X