ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗನ್‌ಮ್ಯಾನ್ ಅಕ್ರಮ ಆಸ್ತಿಗೆ ಲೋಕಾಯುಕ್ತ ಗುನ್ನ

By Srinath
|
Google Oneindia Kannada News

 Illegal assets- Bangalore rural lokayukta raid CAR constable Srinivas arrested
ಬೆಂಗಳೂರು, ಆಗಸ್ಟ್ 7: ಆತ ಪೊಲೀಸ್ ಇಲಾಖೆಯಲ್ಲಿ ಕನಿಷ್ಠ ಬಿಲ್ಲೆ. ಸೇವಾಹಿರಿತನದ ಮೇಲೆ ಮುಖ್ಯ ಪೇದೆಯೂ ಆಗಿದ್ದಾನೆ. ಆದರೆ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಈ ಪೊಲೀಸ್ ಪೇದೆ ಇಲಾಖೆಯಲ್ಲಿ ಇದ್ದುದಕ್ಕಿಂತ ಅವರಿವರಿಗೆ ಗನ್‌ ಮ್ಯಾನ್ ಆಗಿದ್ದುಕೊಂಡು ಚಲಾವಣೆಯಲ್ಲಿದ್ದ. ಹಾಗಿರುವಾಗಲೇ ತನ್ನ ಸಂಬಳದ ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ.

ಗಮನಾರ್ಹವೆಂದರೆ, ಈತ ಕೆಲ ವರ್ಷಗಳ ಹಿಂದೆ ಕಡುಬಡವರಿಗೆ ಸರಕಾರ ಮಂಜೂರು ಮಾಡುವ ಆಶ್ರಯ ಯೋಜನೆಯ ಫಲಾನುಭವಿಯೂ ಆಗಿದ್ದ. ಈತನ ಪೋಷಕರು ಈ ಹಿಂದೆ ಗಾರೆ ಕೆಲಸ ಮಾಡುತ್ತಿದ್ದರು. ಬಡತನ ಹಿನ್ನೆಲೆಯಲ್ಲಿ, ಪೇದೆ ಶ್ರೀನಿವಾಸನ ತಾಯಿ ಮುನಿಯಮ್ಮಗೆ ಸರಕಾರ ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಿತ್ತು. ಶ್ರೀನಿವಾಸನ ಅತ್ತೆಗೂ ಆಶ್ರಯ ಮನೆ ಮಂಜೂರು ಮಾಡಲಾಗಿತ್ತು.

ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಗನ್‌ ಮ್ಯಾನ್ ಪೇದೆಯ ಅಕ್ರಮ ಆಸ್ತಿಗೆ ಸರೊಯಾಗಿ ಗುನ್ನ ಇಟ್ಟಿದ್ದಾರೆ. ಯಲಹಂಕ ಹೋಬಳಿ ಸಿಂಗನಾಯಕನಹಳ್ಳಿ ನಿವಾಸಿ ಪೇದೆ ಪಿ ಶ್ರೀನಿವಾಸ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಒಟ್ಟು 35 ಲಕ್ಷ ರೂಪಾಯಿಗಿಂತ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಆದರೆ ಗಮನಿಸಿ, ಇದೆಲ್ಲ ಸರಕಾರಿ ಮೌಲ್ಯಮಾಪನ. ಮಾರುಕಟ್ಟೆ ದರದಲ್ಲಿ ಇದರ ಮೌಲ್ಯ ಮತ್ತಷ್ಟು ಹೆಚ್ಚಗಾಲಿದೆ.

1999ರ ಜನವರಿಯಲ್ಲಿ ಪೊಲೀಸ್ ಪೇದೆಯಾಗಿ ಸೇವೆಗೆ ಸೇರಿದ ಶ್ರೀನಿವಾಸ್ ಪ್ರಸ್ತುತ ಮಾಹಿತಿ ಹಕ್ಕು ಕಾರ್ಯಕರ್ತ ರಾಮಾಂಜನಪ್ಪ ಎನ್ನುವವರಿಗೆ ಗನ್‌ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಅದಕ್ಕೂ ಮುನ್ನ ಆನೇಕಲ್ ಮಾಜಿ ಶಾಸಕ ನಾರಾಯಣಸ್ವಾಮಿ ಅವರು ಜೈಲು ಮಂತ್ರಿಯಾಗಿದ್ದಾಗ ಅವರಿಗೆ ಶ್ರೀನಿವಾಸ್ ಅಂಗ ರಕ್ಷಕ.

ದಾಳಿ ವೇಳೆ ಶ್ರೀನಿವಾಸ್ ತಾಯಿಯ ಹೆಸರಿನಲ್ಲಿ ಸಿಂಗನಾಯಕನ ಹಳ್ಳಿಯಲ್ಲಿ 16 ಲಕ್ಷ ರೂ ಬೆಲೆಬಾಳುವ ಜಮೀನು, ಅದೇ ಗ್ರಾಮದಲ್ಲಿ 4.68 ಲಕ್ಷ ರೂ ಮೌಲ್ಯದ ನಿವೇಶನ, 5 ಲಕ್ಷ ರೂ ಮೌಲ್ಯದ ವಾಸದ ನಿವೇಶನ, ಬೇನಾಮಿ ಹೆಸರಲ್ಲಿ ಅಲ್ಟೋ ಕಾರು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ.

ಅಲ್ಲದೇ ಮನೆಯಲ್ಲಿ 1.28 ಲಕ್ಷ ರೂ ನಗದು ದೊರೆತಿದೆ. ಚಿನ್ನಾಭರಣ 1.11 ಲಕ್ಷ ರೂ, ಅರ್ಧ ಕೆಜಿ ಬೆಳ್ಳಿ ವಸ್ತುಗಳು ದಾಳಿ ವೇಳೆ ದೊರೆತಿವೆ. ಸೇವೆಗೆ ಸೇರಿದಂದಿನಿಂದ ಆರೋಪಿತನ ಸಕ್ರಮ ಆದಾಯ ಅಬ್ಬಬ್ಬಾ ಅಂದರೆ 17 ಲಕ್ಷ ರೂ. ಆಗಬಹುದು. ಆದರೆ ಆದಕ್ಕಿಂತ (ಶೇ. 151 ರಷ್ಟು ಹೆಚ್ಚು) 25 ಲಕ್ಷ ರೂ ಹೆಚ್ಚಿನ ಆಸ್ತಿ ಹೊಂದಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Prevention of Corruption Act ಅನುಸಾರ ಪೇದೆ ಶ್ರೀನಿವಾಸನನ್ನು ಬಂಧಿಸಿ, ಕೇಸು ದಾಖಲು ಮಾಡಿಕೊಂಡಿದ್ದೇವೆ ಎಂದು ಲೋಕಾಯುಕ್ತ ಎಸ್ ಪಿ ಡಾ ಅಶ್ವಿನಿ ತಿಳಿಸಿದ್ದಾರೆ

English summary
Illegal assets- Bangalore rural lokayukta raid CAR constable Srinivas house and seized assets worth Rs. 35 lakh from him. According to the Lokayukta, Srinivas had joined service in 1999, earning Rs. 17 lakh through the years as salary. This was his only source of his income, but in 14 years of service, he had purchased a few acres of land and a couple of sites in his and his mother’s name in Yelahanka, all worth over Rs. 35 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X