ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ಸಿಡಿಲ ಮರಿ

By Prasad
|
Google Oneindia Kannada News

Eleven year old voices against child marriage
ಎಮನ್, ಜು. 23 : ತಾಲಿಬಾನ್ ವಿರುದ್ಧ ಪಾಕಿಸ್ತಾನದ ಮಲಾಲಾ ದನಿಯೆತ್ತಿದ ನಂತರ ಮತ್ತೊಂದು ಪುಟಾಣಿ ಸಿಡಿಲ ಮರಿ ದಟ್ಟದರಿದ್ರ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದೆ. ಬಾಲ್ಯವಿವಾಹವನ್ನು ಧಿಕ್ಕರಿಸಿ ಓಡಿ ಹೋಗಿ, ತನ್ನ ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಆ ಬಾಲೆ ಆಡಿರುವ ಮಾತುಗಳ ವಿಡಿಯೋ ಯುಟ್ಯೂಬ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ಯೆಮಿನಿಯ ನಾಡಾ ಅಲ್-ಅಹದಲ್ ಎಂಬ ಆ ಬಾಲಕಿಯ ವಯಸ್ಸು ಕೇವಲ 11. ಮದುವೆಯ ಪ್ರಸ್ತಾಪ ಬಂದಾಗ ಆಕೆಗೆ 10 ವರ್ಷ 3 ತಿಂಗಳು ಮಾತ್ರ. ತನ್ನ ಸ್ವಂತ ತಂದೆ-ತಾಯಿಯರೇ ತನ್ನ ಮದುವೆಗೆ ಮುಂದಾದಾಗ, ಚುನರಿಯ ಒಳಗೆ ಹರಕೆಯ ಕುರಿಯಂತೆ ತಲೆಬಾಗದೆ, ಮನೆಬಿಟ್ಟು ಓಡಿ ಬಂದಿದ್ದಾಳೆ. ಮುಗ್ಧ ಮಕ್ಕಳ ಬದುಕು ಇನ್ನು ಮುಂದೆ ಹಾಳಾಗಬಾರದು ಎಂದು ಧೈರ್ಯವಾಗಿ ದನಿ ಎತ್ತಿದ್ದಾಳೆ.

"ಬಾಲ್ಯವಿವಾಹವಾಗುವುದಕ್ಕಿಂತ ನಾನು ಸಾಯಲು ಬಯಸುತ್ತೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದರೆ ಬದುಕೂ ಇರುತ್ತಿರಲಿಲ್ಲ, ಶಿಕ್ಷಣವೂ ಇರುತ್ತಿರಲಿಲ್ಲ. ಅವರಿಗೆ (ತಂದೆ-ತಾಯಿಯರಿಗೆ) ಸ್ವಲ್ಪವೂ ಮರುಕ ಇಲ್ಲವೆ? ನನ್ನ ಸಮಸ್ಯೆ ನಾನೇ ಬಗೆಹರಿಸಿಕೊಂಡೆ, ಉಳಿದ ಅಮಾಯಕ ಮಕ್ಕಳು ಏನು ಮಾಡಬೇಕು? ಮಕ್ಕಳು ಮಾಡಿರುವ ತಪ್ಪಾದರೂ ಏನು? ಅವರಿಗೇಕೆ ಹೀಗೆ ಮದುವೆ ಮಾಡುತ್ತೀರಿ?" ಎಂದು ಆಕೆ ವಿಡಿಯೋದಲ್ಲಿ ಕೇಳಿದ್ದಾಳೆ.

"ತಂದೆ ತಾಯಿ ನನ್ನ ಕನಸುಗಳನ್ನು ಹೊಸಕಿಹಾಕಿದ್ದಾರೆ. ಸಾಕು, ಇನ್ನು ಪೋಷಕರ ಜೊತೆ ಇರಲು ಬಯಸುವುದಿಲ್ಲ. ಅಂಕಲ್ ಜೊತೆ ಇರುತ್ತೇನೆ. ನನ್ನನ್ನು ತಂದೆ ತಾಯಿ ಕೊಲ್ಲ ಬಯಸಿದರು. ಇದು ಕ್ರಿಮಿನಲ್ ಅಲ್ಲದೆ ಮತ್ತೇನೂ ಅಲ್ಲ" ಎಂದಿದ್ದಾಳೆ.

ತನ್ನ ಕುಟುಂಬದಲ್ಲಿಯೇ ಬಲವಂತದ ಬಾಲ್ಯವಿವಾಹದಿಂದ ನಡೆದ ದುರ್ಘಟನೆಯನ್ನು ನೆನಪಿಸಿಕೊಂಡಿದ್ದಾಳೆ. ತನ್ನ ಸೋದರತ್ತೆ ಹದಿನೈದು ವರ್ಷದವಳಿದ್ದಾಗ ಆಕೆಗೆ ಬಲವಂತವಾಗಿ ಮದುವೆ ಮಾಡಿಸಲಾಯಿತು. ಆಕೆ, ಒಂದು ವರ್ಷದ ನಂತರ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇನ್ನೂ ಹಲವೆಡೆ ಮಕ್ಕಳು ಮದುವೆಯಾಗಲು ಸಿದ್ಧರಾಗದೆ ಸಮುದ್ರಕ್ಕೆ ಹಾರಿ ಪ್ರಾಣ ಬಿಡುತ್ತಿದ್ದಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ನಾಡಾ 3 ವರ್ಷದವಳಿದ್ದಾಗ ಆಕೆಯನ್ನು ಚಿಕ್ಕಪ್ಪನ ಬಳಿ ಬಿಡಲಾಗಿತ್ತು. ಆಕೆಯ ಜೀವನ ಸಂತೋಷದಿಂದಲೇ ಸಾಗಿತ್ತು. ಆದರೆ, ಆಕೆ ಹತ್ತು ವರ್ಷದವಳಾದಾಗ ಪೋಷಕರು ಬಂದು ಮದುವೆ ಪ್ರಸ್ತಾಪ ಮಾಡಿದ್ದಾರೆ. ಚಿಕ್ಕಪ್ಪ ಇದನ್ನು ತಪ್ಪಿಸಲು ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದಾರೆ. ಮದುವೆಯಾಗುವ ಗಂಡನ್ನು ಸಂಪರ್ಕಿಸಿ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. ಗಂಡು ಕೂಡ ಚಿಕ್ಕಪ್ಪನ ವಾದವನ್ನು ಒಪ್ಪಿ ಹಿಂದೆ ಸರಿದಿದ್ದ.

ಆದರೆ, ಪಿಶಾಚಿಯಂಥ ಪೋಷಕರು ಬಿಡಬೇಕಲ್ಲ. ಮೂರನೇ ಬಾರಿ ಮದುವೆ ಪ್ರಸ್ತಾಪ ಬಂದಾಗ, ಮನೆಬಿಟ್ಟು ಓಡಿ ಹೋದ ನಾಡಾ ನೇರವಾಗಿ ಆಂತರಿಕ ರಕ್ಷಣಾ ಸಚಿವಾಲಯದ ಕದ ಬಡಿದಿದ್ದಾಳೆ. ಈ ಘಟನೆ ಮುಸ್ಲಿಂ ರಾಷ್ಟ್ರಗಳಲ್ಲಿ ಇರುವ ಮದುವೆ ವ್ಯವಸ್ಥೆಯನ್ನು ಬೆತ್ತಲೆ ಮಾಡಿದೆ. ಮತ್ತು ಮದುವೆಯಾಗಬಯಸದ ಮಕ್ಕಳಿಗೆ ಹೊಸ ಆಸೆಯನ್ನು ಚಿಗುರಿಸಿದೆ.

"ನನ್ನಲ್ಲೂ ಕನಸುಗಳಿವೆ. ಅವನ್ನು ನನಸು ಮಾಡುವ ಪ್ರಯತ್ನ ಮಾಡುತ್ತೇನೆ. ಶಾಲೆಗೆ ಹೋಗಬೇಕು, ಸ್ಟಾರ್ ಆಗಬೇಕು ಮತ್ತು ಮಕ್ಕಳಿಗೆ ಸಹಾಯ ಮಾಡಬೇಕು. ಮದುವೆಯ ಬಗ್ಗೆ ನಾನೀಗ ಚಿಂತನೆಯನ್ನೇ ಮಾಡುತ್ತಿಲ್ಲ. ನನಗದು ಬೇಕಾಗೂ ಇಲ್ಲ. 'ನಮಗೆ ಕನಸು ಕಾಣಲು ಬಿಡಿ, ಮದುವೆ ಮಾಡಿ ನಮ್ಮನ್ನು ಕೊಲ್ಲಬೇಡಿ' ಎಂದು ತಂದೆತಾಯಿಯರಿಗೆ ಹೇಳಬಯಸುತ್ತೇನೆ" ಎಂದು ಆಕೆ ಮನವಿ ಮಾಡಿದ್ದಾಳೆ. [ಆ ವಿಡಿಯೋ ಇಲ್ಲಿದೆ ನೋಡಿರಿ]

English summary
A 11-year-old Yemini girl Nada Al-Ahdal has burst against her own child marriage and filed complained against parents. She has said she would rather die than marry at young age. A video with her voice is going viral on Youtube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X