ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲಿನಲ್ಲಿ ಕೊಚ್ಚಿಹೋದ ಬಸವನಗುಡಿಯ ವಿಪ್ರೊ ಟೆಕ್ಕಿ

By Srinath
|
Google Oneindia Kannada News

banaglore-wipro-techie-jaiprakash-dead-baltic-sea-sweden
ಬೆಂಗಳೂರು, ಜುಲೈ 20: ವಾರಾಂತ್ಯದ ವಿಹಾರ ಬೆಂಗಳೂರು ಮೂಲದ ವಿಪ್ರೊ ಟೆಕ್ಕಿ ಜೈಪ್ರಕಾಶ್ ಅವರನ್ನು ಬಲಿ ತೆಗೆದುಕೊಂಡಿದೆ. ಸ್ವೀಡನಿನ ಬಾಲ್ಟಿಕ್ ಸಮುದ್ರತೀರದಲ್ಲಿ ಪತ್ನಿ ಮತ್ತು ಮಗಳ ಜತೆ ವಿಹಾರದಲ್ಲಿದ್ದ ಸಾಫ್ಟ್‌ ವೇರ್ ಇಂಜಿನಿಯರ್ ಜೈಪ್ರಕಾಶ್ ನರಸಿಂಹಯ್ಯ ಅಲೆಯ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇದನ್ನು ಕಣ್ಣಾರೆ ಕಂಡ ಇವರ ಪತ್ನಿ ಶಾಕ್‌ ನಿಂದ ಒಂದು ವಾರ ಪ್ರಜ್ಞೆ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎರಡು ವರ್ಷದ ಹಿಂದೆ ಲಂಡನ್‌ಗೆ
ಬಸವನಗುಡಿಯ ಹಳೆ ವೆಟರ್ನರಿ ಆಸ್ಪತ್ರೆ ಸಮೀಪ ವಾಸವಿರುವ ನರಸಿಂಹಯ್ಯ ಹಾಗೂ ಸಂಧ್ಯಾ ದಂಪತಿಯ ಹಿರಿಯ ಮಗ ಜೈಪ್ರಕಾಶ್, ಬೆಂಗಳೂರಿನಲ್ಲೇ ಸ್ನಾತಕೋತ್ತರ ಪದವಿ ಪಡೆದು ಎಚ್‌ಎಎಲ್‌ ನಲ್ಲಿ ನೌಕರಿ ಸೇರಿದ್ದರು. ಸಾಫ್ಟ್ ವೇರ್ ಕಡೆಗೆ ಆಕರ್ಷಿತರಾಗಿದ್ದ ಜೈಶಂಕರ್‌ಗೆ 2007 ರಲ್ಲಿ ಸಿಸ್ಟಂ ಮ್ಯಾನೇಜರ್ ಆಗಿ ವಿಪ್ರೋದಲ್ಲಿ ಉದ್ಯೋಗ ದೊರೆಯಿತು. ಇದೇ ಸಂದರ್ಭದಲ್ಲಿ ಅವರಿಗೆ ಅನುಪಮಾ ಜತೆ ಮದುವೆಯಾಗಿತ್ತು. ಉದ್ಯೋಗದಲ್ಲಿ ಬಡ್ತಿ ದೊರೆತು ಎರಡು ವರ್ಷದ ಹಿಂದೆ ಲಂಡನ್‌ಗೆ ತೆರಳಿದ್ದರು.

ಜು. 6ರಂದು ಏನಾಯಿತೆಂದರೆ
41 ವರ್ಷದ ಜೈಪ್ರಕಾಶ್ ಲಂಡನಿನ ವಿಪ್ರೊ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು. ಜು. 6ರಂದು ಪತ್ನಿ ಅನುಪಮಾ ಮತ್ತು ನಾಲ್ಕು ವರ್ಷದ ಪುತ್ರಿ ಸೃಷ್ಟಿ ಜತೆ ಸ್ವೀಡನ್‌ಗೆ ತೆರಳಿದ್ದರು. ಇಲ್ಲಿಯ Grisslinge ನಿರ್ಜನ ಕಡಲಕಿನಾರೆಯಲ್ಲಿ ಆಟ ಆಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ದೈತ್ಯ ಅಲೆಯೊಂದು ಅಪ್ಪಳಿಸಿದೆ.

ಕ್ಷಣಾರ್ಧದಲ್ಲಿ ಜೈಪ್ರಕಾಶ್, ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಅನುಪಮಾ ಸಹಾಯಕ್ಕಾಗಿ ಬೊಬ್ಬೆ ಹಾಕಿದರೂ, ಸುತ್ತಮುತ್ತ ಯಾರೂ ಇರಲಿಲ್ಲ. ಶಾಕ್‌ನಿಂದ ಅನುಪಮಾ ಪಜ್ಞೆ ತಪ್ಪಿದರು. ಈ ಎಲ್ಲ ಘಟನೆಗಳಿಗೆ ಮೂಕ ಸಾಕ್ಷಿಯಾಗಿದ್ದ ಸೃಷ್ಟಿ ಅಮ್ಮನ ಪಕ್ಕದಲ್ಲೇ ಅಳುತ್ತಾ ಕುಳಿತಿದ್ದಳು.

ಸ್ಟಾಕ್ ಹೋಮ್ ಆಸ್ಪತ್ರೆಗೆ ದಾಖಲು
ಕೆಲ ಹೊತ್ತಿನ ಬಳಿಕ ತಾಯಿ ಮತ್ತು ಮಗುವನ್ನು ಗಮನಿಸಿದ ಸ್ಥಳೀಯರು, ಕೂಡಲೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅನುಪಮಾ ಅವರನ್ನು ಸ್ಟಾಕ್ ಹೋಮ್ ಆಸ್ಪತ್ರೆಗೆ ದಾಖಲು ಮಾಡಿದರೂ, ಅವರಿಗೆ ಪ್ರಜ್ಞೆ ಬಂದಿರಲಿಲ್ಲ. ಸೃಷ್ಟಿಗೆ ಭಾಷೆ ತಿಳಿಯದ ಕಾರಣ ಮತ್ತು ಜೈಪ್ರಕಾಶ್ ಅವರ ಮೃತದೇಹ ಸಹ ಪತ್ತೆಯಾಗದ ಕಾರಣ ಜೈಪ್ರಕಾಶ್ ಕೊಚ್ಚಿಹೋದ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ.

ಈ ಸಂದರ್ಭದಲ್ಲಿ ಸೃಷ್ಟಿಯನ್ನು ಸ್ಥಳೀಯ ಡೇಕೇರ್ ಸೆಂಟರ್‌ನಲ್ಲಿ ಇರಿಸಲಾಗಿತ್ತು. ಇತ್ತ, ಜೈಪ್ರಕಾಶ್ ಕಚೇರಿಗೆ ಗೈರುಹಾಜರಾಗಿದ್ದರಿಂದ ಅಲ್ಲಿನ ವಿಪ್ರೊ ಸಂಸ್ಥೆ ಸಹೋದ್ಯೋಗಿಗಳು ಬೆಂಗಳೂರಿನಲ್ಲಿರುವ ಜೈಪ್ರಕಾಶ್ ಸಹೋದರರೊಬ್ಬರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.

ಆರು ದಿನಗಳ ನಂತರ
ಸಮುದ್ರ ಪಾಲಾಗಿದ್ದ ಜೈಪ್ರಕಾಶ್ ಶವ ಆರು ದಿನಗಳ ನಂತರ ದಡಕ್ಕೆ ತೇಲಿಬಂದಿದೆ. ಇದನ್ನು ಕಂಡ ಪೊಲೀಸರು, ಅಪರಿಚಿತ ಭಾರತೀಯನ ಶವ ಸಿಕ್ಕಿದೆ ಎಂದು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜತೆಗೆ ಸುತ್ತಲಿನ ದೇಶದ ಸಾಫ್ಟ್‌ವೇರ್ ಕಂಪನಿಗಳಿಗೂ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದ್ದಾರೆ. ಇದನ್ನು ಗಮನಿಸಿದ ಲಂಡನಿನ ವಿಪ್ರೊ ಅಧಿಕಾರಿಗಳು ಜೈಪ್ರಕಾಶ್ ಅವರನ್ನು ಗುರುತು ಹಿಡಿದು ಸ್ವೀಡನ್ ಆಡಳಿತಕ್ಕೆ ಮಾಹಿತಿ ನೀಡಿದ್ದಲ್ಲದೇ, ಬೆಂಗಳೂರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಜೈಪ್ರಕಾಶ್ ಅವರ ತಮ್ಮ ರವಿಕಿರಣ್ ಸ್ವೀಡನ್‌ಗೆ ತೆರಳಿ, ಸೋದರನ ಶವವನ್ನು ಗುರುತು ಹಿಡಿದರು. ಜತೆಗೆ, ಅಲ್ಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನುಪಮಾ ಅವರನ್ನೂ ಪೊಲೀಸರ ಸಹಾಯದಿಂದ ಪತ್ತೆ ಮಾಡಿದ್ದಾರೆ. ಆ ವೇಳೆಗೆ ಅನುಪಮಾಗೂ ಪ್ರಜ್ಞೆ ಮರುಕಳಿಸಿ ದುರಂತದ ಬಗ್ಗೆ ವಿವರ ನೀಡಿದ್ದಾರೆ. ಬಳಿಕ ಡೇಕೇರ್‌ನಲ್ಲಿದ್ದ ಸೃಷ್ಟಿಯನ್ನು ಪೊಲೀಸರು ಪೋಷಕರ ವಶಕ್ಕೆ ಒಪ್ಪಿಸಿದರು. ಎಲ್ಲರೂ ಒಟ್ಟಾಗಿ ಜೈಶಂಕರ್ ಅವರ ಶವವನ್ನು ಲಂಡನ್‌ಗೆ ತಂದರು.

ಜು. 17ರಂದು ಅಂತ್ಯಕ್ರಿಯೆ
ಲಂಡನ್ ನಿಯಮದ ಪ್ರಕಾರ ಶವ ಸಂಸ್ಕಾರಕ್ಕೂ ದಿನ ನಿಗದಿ ಮಾಡಲಾಗುತ್ತದೆ. ಆದರೆ. ಅವರು ನೀಡಿದ ದಿನಾಂಕ ಮಂಗಳವಾರ ಬಂದ ಕಾರಣ ಕುಟುಂಬ ಅಂತ್ಯಸಂಸ್ಕಾರ ಮಾಡುವುದಕ್ಕೆ ಒಪ್ಪದೇ ಮರುದಿನ ಅಂದರೆ ಜು. 17 ರಂದು ಅಂತ್ಯಕ್ರಿಯೆ ವಿಧಾನ ಪೂರೈಸಿದೆ. ವಿಪರ್ಯಾಸವೆಂದರೆ ಶವ ಸಂಸ್ಕಾರಕ್ಕೆ ಜಾಗವನ್ನೂ ಸಹ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.

ಅದರಂತೆ ರವಿಕಿರಣ್ ಅವರು ಎಲ್ಲ ನಿಯಮಗಳನ್ನು ಪಾಲಿಸಿ ಶವ ಸಂಸ್ಕಾರ ನೆರವೇರಿಸಿ, ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನಲ್ಲಿರುವ ಪೋಷಕರಿಗೆ ಕರೆ ಮಾಡಿ ಜೈಪ್ರಕಾಶ್ ಮೃತಪಟ್ಟಿರುವ ಕುರಿತು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ಪೋಷಕರು, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ದಿಗ್ಭ್ರಾಂತರಾಗಿದ್ದಾರೆ. ಜೈಪ್ರಕಾಶ್ ಅವರ ಬಸವನಗುಡಿಯ ಮನೆಯಲ್ಲಿ ಶೋಕ ಮಡುಗಟ್ಟಿದೆ.

English summary
Banaglore Basavangudi Wipro techie Jaiprakash dead in Baltic Sea Sweden. Jayaprakash Narasimhaiah, 41, from Basavanagudi was with systems management in Wipro Technologies. His wife, Anupama, and daughter Shristi lived with him. The techie drowned in the Baltic Sea during a weekend outing with his family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X