ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವೇದಿಕೆಯಲ್ಲಿ ಬಿಎಸ್ವೈ, ಅನಂತ್ : ಬಟ್ ನೋ ಟಾಕ್

|
Google Oneindia Kannada News

ಬೆಂಗಳೂರು, ಜು 18: ರಾಜಕೀಯ ರಂಗದಲ್ಲಿ ಹಾವು ಮುಂಗುಸಿಯಂತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದ ಅನಂತ್ ಕುಮಾರ್ ಒಂದೇ ವೇದಿಕೆ ಹಂಚಿಕೊಳ್ಳುವ ಧಾರ್ಮಿಕ ಕಾರ್ಯಕ್ರಮವೊಂದರ ಸಂದರ್ಭ. ಆದರೆ ಒಬ್ಬರಿಗೊಬ್ಬರು 'ನಮಸ್ಕಾರ' ಎಂದು ಹೇಳಿಕೊಂಡಿದ್ದನ್ನು ಬಿಟ್ಟರೆ ಇಬ್ಬರೂ ನಾನೊಂದು ತೀರಾ.. ನೀನೊಂದು ತೀರಾ..

ನಗರದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಬುಧವಾರ (ಜು 17) ಸಂಜೆ ನಡೆದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ನೂತನ ಉತ್ತರಾಧಿಕಾರಿಗಳ ಬೆಂಗಳೂರು ಪುರಪ್ರವೇಶ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ದಂಡೇ ಭಾಗವಹಿಸಿತ್ತು.

ಯಡಿಯೂರಪ್ಪ ಬಲ ಭಾಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಅಶೋಕ್, ಅನಂತ್ ಕುಮಾರ್, ಡಿ ಬಿ ಚಂದ್ರೇಗೌಡ, ರಾಮಚಂದ್ರೇ ಗೌಡ, ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು. ಆದರೆ ಯಡಿಯೂರಪ್ಪ ವೇದಿಕೆಯ ಬಲಭಾಗದತ್ತ ಕಣ್ಣೋಟ ಬೀರಲೇ ಇಲ್ಲ.

Yeddyurappa and Ananth Kumar in religious programme

ವೇದಿಕೆಯಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂದು ಹೆಚ್ಚು ಹೊತ್ತು ಸ್ಮರಣಿಕೆ ಓದುವವುದರಲ್ಲೇ ನಿರತರಾಗಿದ್ದ ಬಿಎಸ್ವೈ, ಪಕ್ಕದಲ್ಲಿ ಆಸೀನರಾಗಿದ್ದ ಮಂತ್ರಾಲಯ ಮಠದ ನೂತನ ಉತ್ತರಾಧಿಕಾರಿಗಳ ಜೊತೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾತನಾಡುತ್ತಿದ್ದನ್ನು ಬಿಟ್ಟರೆ ಹೆಚ್ಚುಕಮ್ಮಿ ಮೌನವೃತದಲ್ಲಿ ಇದ್ದಂತಿತ್ತು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯಡಿಯೂರಪ್ಪ, ಮಂತ್ರಾಲಯ ಪ್ರವಾಹಕ್ಕೆ ಈಡಾಗಿದ್ದಾಗ ಸರಕಾರದಿಂದ 9 ಕೋಟಿ ರೂಪಾಯಿ ಅನುದಾನ ನೀಡಿದ್ದೆ. ಒಂದೇ ವರ್ಷದಲ್ಲಿ ಮಂತ್ರಾಲಯ ಮತ್ತೆ ಯಥಾಸ್ಥಿತಿಗೆ ಬಂದಿದ್ದನ್ನು ಕಂಡರೆ ಇದು ರಾಯರ ಶ್ರೀರಕ್ಷೆಯಿಂದ ಮಾತ್ರ ಸಾಧ್ಯ.

ನಾನು ರಾಯರ ಪರಮ ಭಕ್ತ. ಅದಕ್ಕಾಗಿಯೇ ನನ್ನ ಮಕ್ಕಳಿಗೆ ರಾಘವೇಂದ್ರ, ವಿಜಯೇಂದ್ರ ಎಂದು ಹೆಸರಿಟ್ಟಿದ್ದೇನೆ. ಜಗತ್ತಿನಲ್ಲಿ ನಮ್ಮ ಹಿಂದೂ ಧರ್ಮ ಗಟ್ಟಿಯಾಗಿ ನಿಲ್ಲಬೇಕಾದರೆ ಪೀಠಾಧಿಪತಿಗಳ ಸಹಕಾರ ಅತ್ಯವಶ್ಯಕ. ಮಂತ್ರಾಲಯ ಮಠದಿಂದ ಮತ್ತು ಪೇಜಾವರ ಶ್ರೀಗಳಿಂದ ಇಂತಹ ಪುಣ್ಯದ ಕೆಲಸ ನಡೆಯುತ್ತಿದೆ. ಅದಕ್ಕಾಗಿ ನಾನು ಆಬಾರಿಯಾಗಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಮಂತ್ರಾಲಯ ಮಠದ ನೂತನ ಪೀಠಾಧಿಪತಿಯಾಗಿ ನಿಯುಕ್ತಿಗೊಂಡಿರುವ ಶ್ರೀಸುಬುದೇಂದ್ರ ತೀರ್ಥರ ಪುರಪ್ರವೇಶ ಕಾರ್ಯಕ್ರಮಕ್ಕೂ ಮುನ್ನ ಬಸವನಗುಡಿಯ ದೊಡ್ಡ ಗಣೇಶ ದೇವಾಲಯದಿಂದ ಕತ್ರಿಗುಪ್ಪೆಯ ವಿದ್ಯಾಪೀಠದವರೆಗೆ ವರ್ಣರಂಜಿತ ಶೋಭಾಯಾತ್ರೆ ನಡೆಯಿತು.

ಪುರಪ್ರವೇಶ ಕಾರ್ಯಕ್ರಮದಲ್ಲಿ ಸಂಸದ ಪಿ ಸಿ ಮೋಹನ್, ಶಾಸಕರಾದ ವಿಜಯ್ ಕುಮಾರ್, ರವಿ ಸುಬ್ರಮಣ್ಯ, ಡಾ ಅಶ್ವಥ್ ನಾರಾಯಣ್, ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಮತ್ತು ಮಂತ್ರಾಲಯ ಮಠದ ಹಿರಿಯ ಶ್ರೀಗಳಾದ ಸುಯುತೀಂದ್ರತೀರ್ಥರು ಆಶೀರ್ವಚನ ನೀಡಿದರು.

(ಚಿತ್ರದಲ್ಲಿ: ಮಂತ್ರಾಲಯದ ನೂತನ ಪೀಠಾಧಿಪತಿಗಳು)

English summary
Former CM and KJP President B S Yeddyurappa and MP Ananth Kumar together in religious programme in Bangalore. Both the leaders shared the stage in "Pura Pravesha" programme of newly appointed seer for Mantralaya Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X