ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿದ್ದರಾಮಯ್ಯ ಚೊಚ್ಚಲ ಬಜೆಟ್ ನಿರೀಕ್ಷೆಗಳೇನು?

By Mahesh
|
Google Oneindia Kannada News

ಬೆಂಗಳೂರು, ಜು.11: ಸುಮಾರು 9 ವರ್ಷಗಳ ನಂತರ ಅಧಿಕಾರ ಪೀಠವೇರಿರುವ ಕಾಂಗ್ರೆಸ್ ಸರ್ಕಾರ ಅಭೂತಪೂರ್ವ ಬಜೆಟ್ ಮಂಡಿಸುವ ಹುಮ್ಮಸ್ಸಿನಲ್ಲಿದೆ. ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಶುಕ್ರವಾರ(ಜು.12) ಮಧ್ಯಾಹ್ನ ಬಜೆಟ್ ಮಂಡನೆ ಮಾಡಲಿದ್ದಾರೆ.

ಜಗದೀಶ್ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರ ಬಜೆಟ್ ಗೂ ಮುನ್ನವೇ ರಾಜ್ಯ ಬಜೆಟ್ ಮಂಡಿಸಿ ನಾಲ್ಕು ತಿಂಗಳ ಲೇಖಾನುದಾನ ಪಡೆದಿತ್ತು. ಹೀಗಾಗಿ ರಾಜ್ಯದ ಜನತೆ ಐದು ತಿಂಗಳಿನಲ್ಲಿ ಎರಡನೇ ಬಾರಿಗೆ ಬಜೆಟ್ ಅಧಿವೇಶನ ಕಾಣಲಿದ್ದಾರೆ.

ಬಿಜೆಪಿ ಸರ್ಕಾರ ಬಜೆಟ್ ಮಂಡಿಸುವಾಗ ಪ್ರಕಟಿಸಿದ ಯೋಜನೆಗಳನ್ನು ಜಾರಿಗೊಳಿಸಿದರೂ ಅದು ಕಾಂಗ್ರೆಸ್ ಪಕ್ಷದ ಸಾಧನೆ ಎಂದೇ ಬಿಂಬಿತವಾಗುತ್ತದೆ. ಆದ್ದರಿಂದ ಪ್ರತ್ಯೇಕ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಹಿಂದಿನ ಬಜೆಟ್ [ ಬಜೆಟ್ 2013-14 ಮುಖ್ಯಾಂಶಗಳು] ನ ಜನಪರ ಕಾರ್ಯಕ್ರಮಗಳನ್ನೆ ಮುಂದುವರೆಸಿಕೊಂಡು ಹೋಗಲಿ ಎಂದು ಜಗದೀಶ್ ಶೆಟ್ಟರ್ ಕೂಗಿ ಹೇಳಿದ್ದು ಕಾಂಗ್ರೆಸ್ ನಾಯಕರ ಕಿವಿಗೆ ಬಿದ್ದಿಲ್ಲ.

ಬಿಜೆಪಿ ಹಲವು ಯೋಜನೆಗಳಿಗೆ ಕತ್ತರಿ ಬೀಳುವ ಸೂಚನೆಯಂತೂ ಸಿಕ್ಕಿದೆ. ಜೊತೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಅನುಷ್ಠಾನಗೊಳಿಸುವ ಯೋಜನೆಗಳು ಜಾರಿಯಾಗುತ್ತಿವೆ. ಆದರೆ, ಕೈಗಾರಿಕೆ, ಲೈಂಗಿಕ ಅಲ್ಪಸಂಖ್ಯಾತರು, ಕೃಷಿಕರು ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದಾರೆ. ಬನ್ನಿ ಸಿದ್ದರಾಮಯ್ಯ ಬಜೆಟ್ ನತ್ತ ಮುನ್ನೋಟ ಬೀರೋಣ...

ಮಠಗಳ ದೇಣಿಗೆಗೆ ಕೊಕ್ಕೆ

ಮಠಗಳ ದೇಣಿಗೆಗೆ ಕೊಕ್ಕೆ

ಬಿಜೆಪಿ ಸರ್ಕಾರ ನಾಲ್ಕೂವರೆ ವರ್ಷಗಳಿಂದ ಮಠಗಳಿಗೆ, ಜಾತಿ ಅಧಾರಿತ ಸಂಸ್ಥೆಗಳಿಗೆ ನೀಡಿರುವ 'ದೇವರ ದುಡ್ಡು' ಕನಿಷ್ಠವೆಂದರೂ 500 ಕೋಟಿ ರು ದಾಟುತ್ತದೆ. ಇದರಲ್ಲಿ ಬಿಎಸ್ ಯಡಿಯೂರಪ್ಪ ಅವರೇ 300 ಕೋಟಿ ರು ನೀಡಿದ್ದು ವಿಶೇಷ.

ಆದರೆ, ಸಿದ್ದರಾಮಯ್ಯ ಅವರು ಯಾವ ಮಠವೂ ತಾನಾಗಿ ಬೇಡಿಕೆ ಸಲ್ಲಿಸದ ಹೊರತು ಜನರ ದುಡ್ಡು ದಾನ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಮಠಗಳಿಗೆ ನೀಡುವ ಹಣ ಉಳಿಯಲಿದೆ.

ಸಕಾಲ ಮುಂದುವರಿಕೆ

ಸಕಾಲ ಮುಂದುವರಿಕೆ

ಬಿಜೆಪಿ ಸರ್ಕಾರ ತಂದಿರುವ ಸಕಾಲ ಉತ್ತಮ ಯೋಜನೆಯಾಗಿದೆ.ಬೆಂಗಳೂರಿನಲ್ಲಿ ಸುಮಾರು 30 ಸಾವಿರ ಎಕರೆ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಈಗಾಗಲೇ 20 ಸಾವಿರ ಎಕರೆ ವಶಪಡಿಸಿಕೊಳ್ಳಲಾಗಿದೆ.

ಉಳಿದ 10 ಸಾವಿರ ಎಕರೆಯನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ನೀಡಿದ ಹೇಳಿಕೆ ನೋಡಿದರೆ ಸಕಾಲಕ್ಕೆ ಶುಭ ಕಾಲ ಬಂದಿದೆ ಎನ್ನಬಹುದು.

ಉಳಿದಂತೆ ಭಾಗ್ಯಲಕ್ಷ್ಮಿ,ವಿದ್ಯಾರ್ಥಿಗಳಿಗೆ ಸೈಕಲ್, ಹಾಲು ಹಣ್ಣು ವಿತರಣೆ ಮುಂತಾದ ಹಳೆ ಯೋಜನೆಗಳಲ್ಲಿ ಕೆಲವು ಮುಂದುವರೆಸುವ ಸಾಧ್ಯತೆಯಿದೆ.

ಯಾವುದಕ್ಕೆ ಆದ್ಯತೆ

ಯಾವುದಕ್ಕೆ ಆದ್ಯತೆ

* ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಜನರನ್ನು ವಂಚಿಸುವುದಿಲ್ಲ. ಕೃಷಿ, ನೀರಾವರಿ, ಇಂಧನ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ, ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.
* ರೈತರಿಗೆ ನ್ಯಾಯಯುತ ಬೆಲೆ, ಬಿತ್ತನೆ ಬೀಜ, ಉತ್ತಮ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ
* ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ, ಎರಡನೇ ಹಂತದ ನಗರಗಳಿಗೆ ಮಾಹಿತಿ, ತಂತ್ರಜ್ಞಾನ ಕೇಂದ್ರ ಸ್ಥಾಪನೆ ನಮ್ಮ ಗುರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವ್ಯಾಟ್ ತಗ್ಗಿಸಿ

ವ್ಯಾಟ್ ತಗ್ಗಿಸಿ

ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವ್ಯಾಟ್ ತೆರಿಗೆ ಅಧಿಕವಾಗಿದೆ. ಶೇ 5.5 ರಿಂದ 5ಕ್ಕೆ ಹಾಗೂ 14.5ರಿಂದ 14ಕ್ಕೆ ಇಳಿಸುವಂತೆ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಆರ್ ಶಿವಕುಮಾರ್ ಕೋರಿದ್ದಾರೆ.

* ಇಂಧನ ಮೇಲಿನ ಸೆಸ್ ಇಳಿಕೆ ಮಾಡಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್, ಡೀಸೆಲ್ ದರ ಅಧಿಕ.
* ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೋರಿಕೆ. ರಾಜ್ಯದ ಬೊಕ್ಕಸಕ್ಕೆ ಶೇ 70ರಷ್ಟು ಆದಾಯ ಬೆಂಗಳೂರು ಕೈಗಾರಿಕೆ ನೀಡುತ್ತಿದೆ.
* ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಕೋಲಾರ, ತುಮಕೂರಿನಲ್ಲಿ ಪ್ರತ್ಯೇಕ ಕೈಗಾರಿಕಾ ಕಾರಿಡಾರ್ ಕೇಂದ್ರಕ್ಕೆ ಆಗ್ರಹ
* ಬಿಡದಿಯಲ್ಲಿ ಪವರ್ ಹಾಗೂ ಯಲಹಂಕದಲ್ಲಿ ಡೀಸೆಲ್ ಪವರ್ ಯೋಜನೆ ಸ್ಥಾಪನೆಗೆ ಮನವಿ

ರೈತ ಸಂಘದ ಮನವಿ

ರೈತ ಸಂಘದ ಮನವಿ

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಸಾಲ ಮನ್ನಾಕ್ಕಾಗಿ ಆಗ್ರಹಿಸಿದ್ದಾರೆ. ಸರ್ವೋದಯ ಪಕ್ಷದ ಬೆಂಬಲಿತ ಶಾಸಕ ಕೆಎಸ್ ಪುಟ್ಟಣ್ಣಯ್ಯ ಅವರು ಶಾಸಕರಾಗಿರುವುದರಿಂದ ನಿರೀಕ್ಷೆಗಳು ಹೆಚ್ಚಿದೆ.

'ಹಳೆ ಸರ್ಕಾರಗಳ ಭರವಸೆಗಳು ಈಡೇರಿಸಿದರೆ ಸಾಕಾಗಿದೆ. ಹೊಸದಾಗಿ ಏನು ಭರವಸೆ, ನಿರೀಕ್ಷೆಗಳಿಲ್ಲ. ಒಟ್ಟಾರೆ ಗ್ರಾಮೀಣ ಭಾಗಕ್ಕೂ ನಗರಕ್ಕೂ ಸಂಪರ್ಕ, ಸಾರಿಗೆ ಹೆಚ್ಚಬೇಕು' ಎಂದಿದ್ದಾರೆ.
ಬಿಬಿಎಂಪಿ ಭವಿಷ್ಯ

ಬಿಬಿಎಂಪಿ ಭವಿಷ್ಯ

ಟೆಂಡರ್ ಹಗರಣಗಳಲ್ಲಿ ಸಿಲುಕಿರುವ ಬಿಬಿಎಂಪಿ ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ.

ಮೇಯರ್ ಚುನಾವಣೆ ಗೊಂದಲ ಒಂದು ಕಡೆಯಾದರೆ, ಸರ್ಕಾರ ನೀಡುವ ಅನುದಾನದಲ್ಲಿ ಭಾರಿ ಕಡಿತ ನಿರೀಕ್ಷಿಸಬಹುದು. ಗುರುವಾರದ ಸಭೆಯಲ್ಲೂ ಏನು ನಿರ್ಧಾರವಾಗಿಲ್ಲ.ಬೆಂಗಳೂರನ್ನು ಭೂತವಾಗಿ ಕಾಡಿದ ಕಸದ ಸಮಸ್ಯೆಗೆ ಬಿಜೆಪಿ ಸರ್ಕಾರದ ಅಸಡ್ಡೆಯೇ ಕಾರಣ ಎಂದು ಕಾಂಗ್ರೆಸ್ ನಂಬಿದೆ. ಘನ ತ್ಯಾಜ್ಯ ಟೆಂಡರ್ ಗುತ್ತಿಗೆಗೆ ನೀಡಿದ 115 ಕೋಟಿ ರು ಗೂ ಕುತ್ತು ಬೀಳಬಹುದು. ಬಿಬಿಎಂಪಿ ಸೂಪರ್ ಸೀಡ್ ಬಗ್ಗೆ ಕೂಡಾ ಯೋಚನೆ ನಡೆದಿದೆ.
ಲೈಂಗಿಕ ಅಲ್ಪಸಂಖ್ಯಾತರು

ಲೈಂಗಿಕ ಅಲ್ಪಸಂಖ್ಯಾತರು

ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ 'ಸಂಗಮ' ಕಾರ್ಯಕರ್ತ ಎ. ಪದ್ಮಶಾಲಿ ಮಾತನಾಡಿ,

'ಲೈಂಗಿಕ ಅಲ್ಪಸಂಖ್ಯಾತರು ಅಥವಾ LGBT ಸಮುದಾಯದ ಕಲ್ಯಾಣಕ್ಕಾಗಿ ಪ್ರತ್ಯೇಕ ಬೋರ್ಡ್ ನೇಮಿಸುವ ಅಗತ್ಯವಿದೆ. ಈ ಹಿಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 75 ಲಕ್ಷ ಘೋಷಿಸಿದ್ದರು. ಆದರೆ, ನಯಾ ಪೈಸಾ ಕೂಡಾ ಯಾರಿಗೂ ಸಿಕ್ಕಿಲ್ಲ. ಶಾಶ್ವತ ಪರಿಹಾರ ಅಗತ್ಯವಿದೆ' ಎಂದಿದ್ದಾರೆ.ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನಗಣತಿ, ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ಅರಿವು ಮೂಡಬೇಕಿದೆ. ನಮಗೆ ರಕ್ಷಣೆ ಇಲ್ಲದ್ದಂತಾಗಿದೆ. ನಮ್ಮ ಸಮುದಾಯಕ್ಕೆ ಸಿದ್ದರಾಮಯ್ಯ ಅವರು 20 ಕೋಟಿ ರು ಮೀಸಲಿಟ್ಟರೆ ಒಳ್ಳೆಯದು ಎಂದಿದ್ದಾರೆ.

English summary
Chief Minister Siddaramaiah is set to present his maiden budget on Friday(July 12) as chief minister and the most expectant are the industries and trade bodies. Congress electoral promises were more in the social sector but Industries and trade expect more sops from Congress Government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X