ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲೆಗಳಿಗೆ ನೀರು ಹರಿಸಲು ಸಚಿವ ಅಂಬರೀಶ್ ಆದೇಶ!

|
Google Oneindia Kannada News

ಮೈಸೂರು, ಜು.6 : ರಾಜ್ಯದಲ್ಲಿ ಆರಿದ್ರಾ ಮಳೆಯ ಆರ್ಭಟ ಕಡಿಮೆಯಾಗಿದೆ. ಮಳೆ ನಿಂತರೂ ನದಿಗಳ ನೀರಿನ ಮಟ್ಟ ಕಡಿಮೆ ಆಗಿಲ್ಲ. ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲೂ ಶುಕ್ರವಾರ ಮಳೆಯ ಅಬ್ಬರ ಕಡಿಮೆ ಆಗಿದೆ. ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಸಚಿವ ಅಂಬರೀಶ್ ಆದೇಶಿಸಿದ್ದಾರೆ.

ಮಳೆ ಕಡಿಮೆ ಆದರೂ, ಕಾವೇರಿ ಪಾತ್ರದ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಶುಕ್ರವಾರ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯನ್ನು ನೋಡಲು ಹೋದ ಇಬ್ಬರು ಆಕಸ್ಮಿಕವಾಗಿ ನದಿಗೆ ಜಾರಿ ಬಿದ್ದು, ಕೊಚ್ಚಿಕೊಂಡು ಹೋಗಿದ್ದಾರೆ.

ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸೇತುವೆಯಿಂದ ಕಾವೇರಿ ನದಿ ನೋಡುತ್ತಿದ್ದ, ಪಿರಿಯಾಪಟ್ಟಣ ತಾಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದ ದೇವರಾಜು (40) ನದಿಗೆ ಬಿದ್ದಿದ್ದಾರೆ. ಮತ್ತೊಂದು ದುರಂತದಲ್ಲಿ, ಕೊಡಗಿನ ನಾಪೋಕ್ಲು ಸಮೀಪ ಮಂಡೇಡ ಭೀಮಯ್ಯ (55) ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ನಾಲೆಗಳಿಗೆ ನೀರು : ಶುಕ್ರವಾರ ರಾತ್ರಿಯಿಂದಲೇ ಕಾವೇರಿ ನದಿ ಅವಲಂಬಿತ ನಾಲೆಗಳಿಗೆ ಹಾಗೂ ಜು.9ರ ಮಧ್ಯರಾತ್ರಿಯಿಂದ ವಿಶ್ವೇಶ್ವರಯ್ಯ, ವರುಣಾ, ಆರ್ ಬಿಎಲ್‌ಎಲ್ ನಾಲೆಗಳಿಗೆ ನೀರು ಹರಿಸಲು ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆಸ ಸಭೆಯಲ್ಲಿ, ಕಾವೇರಿ ನದಿ ಪಾತ್ರದ ವಿವಿಧ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನಾಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಯಿತು.

ಕೊಡಗಿನಲ್ಲಿಯೂ ಕಾವೇರಿ ನದಿಯ ಪ್ರವಾಹ ಇಳಿಮುಖವಾಗುತ್ತಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಇಳಿದಿದೆ. ಭರ್ತಿಯಾಗಿರುವ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಶುಕ್ರವಾರ ಬಾಗಿನ ಅರ್ಪಿಸಿದರು. (ಕೊಡಗಿನಲ್ಲಿ ಜನ ನರ್ತನ ಚಿತ್ರಗಳಲ್ಲಿ)

dam

ಮುಳುಗಡೆ ಭೀತಿಯಲ್ಲಿ ಜನರು : ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಂಜನಗೂಡು ತೀರ ಪ್ರದೇಶದ ಜನರು ಮುಳುಗಡೆ ಭೀತಿ ಎದುರಿಸುತ್ತಿದ್ದಾರೆ. ನದಿ ದಡದಲ್ಲಿರುವ ಪರುಶುರಾಮ,ಆಂಜನೇಯ ಸ್ವಾಮಿ ದೇವಸ್ಥಾನಗಳು ಮುಳುಗಡೆಯಾಗಿವೆ.

ಕರಾವಳಿಯೂ ಮಳೆ ಕಡಿಮೆ : ಕರಾವಳಿ ಪ್ರದೇಶದಲ್ಲಿಯೂ ಮಳೆ ಕಡಿಮೆ ಆಗಿದೆ. ಮೂರು ನದಿಗಳಿಂದ ತುಂಬಿ ಹರಿಯುತ್ತಿದ್ದ ಪ್ರವಾಹ ಶುಕ್ರವಾರ ಇಳಿಮುಖವಾಗಿದೆ. ನೇತ್ರಾವತಿ, ಕುಮಾರಧಾರಾ ನದಿಗಳ ಅಬ್ಬರ ಕಡಿಮೆ ಆಗಿದೆ.

ಜಲಾಶಯಗಳ ಸ್ಥಿತಗತಿ : ರಾಜ್ಯದಲ್ಲಿ ಮಳೆಯ ಆರ್ಭಟ ಕಡಿಮೆ ಆಗಿದ್ದರೂ, ಜಲಾಶಯಗಳಿಗೆ ಒಳ ಹೊರವಿನ ಪ್ರಮಾಣ ಕಡಿಮೆ ಆಗಿಲ್ಲ. ಶುಕ್ರವಾರ ಕೆಆರ್ಎಸ್ ಜಲಾಶಯದ ಒಳಹರಿವು 44,972 ಕ್ಯೂಸೆಕ್‌ಗಿಂತ ಹೆಚ್ಚಿತ್ತು.

ಕಾವೇರಿ ನದಿ ಮೂಲಕ 48,616 ಕ್ಯೂಸೆಕ್, ಲಕ್ಷ್ಮಣ ತೀರ್ಥ ನದಿಯಿಂದ 4,547 ಕ್ಯೂಸೆಕ್, ಹೇಮಾವತಿ ನದಿಯಿಂದ 300 ಕ್ಯೂಸೆಕ್ ಸೇರಿ ಒಟ್ಟು 53,563 ಕ್ಯೂಸೆಕ್ ನೀರು ಕನ್ನಂಬಾಡಿ ಜಲಾಶಯದತ್ತ ಹರಿದು ಬರುತ್ತಿದೆ.

ಆದ್ದರಿಂದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗಳನ್ನು ತಲುಪಿದೆ. ಶುಕ್ರವಾರ ಮಧ್ಯರಾತ್ರಿ ವೇಳೆಗೆ 101.08 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಆದ್ದರಿಂದ ನಾಲೆಗಳಿಗೆ ನೀರು ಹರಿಸಲು ಪ್ರಾರಂಭಿಸಲಾಗಿದೆ.

ಜಲಾಶಯಗಳ ನೀರಿನ ಮಟ್ಟ

ಜಲಾಶಯ ಇಂದಿನ ಮಟ್ಟ ಗರಿಷ್ಟ ಮಟ್ಟ
ಕೆಆರ್ಎಸ್ 101.08 ಅಡಿ 124.80 ಅಡಿ
ಆಲಮಟ್ಟಿ 513.85 ಮೀ 519.60 ಮೀ
ಭದ್ರಾ 148.10 ಅಡಿ 186 ಅಡಿ
ತುಂಗಭದ್ರಾ 1,606.49 ಅಡಿ 1,633 ಅಡಿ
ಹೇಮಾವತಿ 2,895.41 ಅಡಿ 2,922 ಅಡಿ
ಹಾರಂಗಿ 2,855 ಅಡಿ 2,859 ಅಡಿ
ಕಬಿನಿ 2,282 ಅಡಿ 2,284 ಅಡಿ

English summary
Water will be released into Virija, Rajaparameshwari, Ramaswamy, Chikkadevaraya and others canals at the Krishnarajasagar Dam (KRS) from Friday, July 5 midnight, said District in charge Minister Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X