ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಯಾತ್ರಿಕರಿಗೆ ಲಾಡ್ ಸಾಂತ್ವನ

By Mahesh
|
Google Oneindia Kannada News

ಬೆಂಗಳೂರು, ಜೂ.27: ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಸಿಲುಕಿಕೊಂಡಿರುವ ಬದರೀನಾಥ, ಜೋಶಿಮಠ ಮುಂತಾದ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಲೇ ಇದೆ. ಆದರೂ, ಮಳೆಯನ್ನೂ ಲೆಕ್ಕಿಸದೆ ನೆರವಿಗೆ ಧಾವಿಸಿರುವ ಯೋಧರ ಜೊತೆ ಜೊತೆಗೆ ರಾಜ್ಯದ ಮೂಲಸೌಲಭ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಕನ್ನಡಿಗರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

200ಕ್ಕೂ ಹೆಚ್ಚು ಕನ್ನಡಿಗರನ್ನು ಭೇಟಿ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಮತ್ತೆ ರಾಜ್ಯಕ್ಕೆ ಕರೆತರುವ ಭರವಸೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಳೆದ ಕೆಲವು ದಿನಗಳಿಂದ ಉತ್ತರಾಖಂಡದಲ್ಲಿರುವ ಲಾಡ್ ಅತಂತ್ರ ಸ್ಥಿತಿಯಲ್ಲಿದ್ದ ರಾಜ್ಯದ ಪ್ರವಾಸಿಗರನ್ನು ಖುದ್ದಾಗಿ ಭೇಟಿ ಮಾಡಿ ಅವರ ಆರೋಗ್ಯ ಮತ್ತು ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸುರಿವ ಮಳೆಯ ನಡುವೆ ಊಟ, ತಿಂಡಿ ಇಲ್ಲದೆ, ಇರಲು ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿದ್ದ ರಾಜ್ಯದ ಪ್ರವಾಸಿಗರ ಬಗ್ಗೆ ಡೆಹ್ರಾಡೂನ್ ನಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ ಪಡೆದುಕೊಂಡು, ಅವರಿದ್ದ ಸ್ಥಳಕ್ಕೆ ಹೆಲಿಕಾಪ್ಟರ್ ನ ಸಹಾಯದಿಂದ ಲಾಡ್ ತೆರಳಿದ್ದರು.

Hope for 200 stranded pilgrims from Karnataka Government

ಬದರಿನಾಥ, ಗೌರಿಕುಂಡ್ ಹಾಗೂ ರಾಮಬಡ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 150ಕ್ಕೂ ಅಧಿಕ ಕರ್ನಾಟಕದ ಪ್ರವಾಸಿಗರನ್ನು ಭೇಟಿ ಮಾಡಿದ ಸಚಿವರು, ಮಾನಸಿಕವಾಗಿ ಕುಗ್ಗಿಹೋಗಿರುವ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.

ಅಲ್ಲದೆ, ಇವರೆಲ್ಲರ ಪಟ್ಟಿಯನ್ನು ಸಿದ್ದಪಡಿಸಿಕೊಂಡಿರುವ ಸಚಿವರು, ರಾಜ್ಯದ ಇನ್ನಿತರ ಯಾತ್ರಾರ್ಥಿಗಳನ್ನು ಸಹ ಭೇಟಿ ಮಾಡುವುದಾಗಿ ಭರವಸೆ ನೀಡಿದರು.

ಹವಾಮಾನ ಅಡ್ಡಿ: ಕಳೆದ ಎರಡು ದಿನಗಳಿಂದ ಮತ್ತೆ ಸುರಿಯುತ್ತಿರುವ ಮಳೆಯಿಂದಾಗಿ ಪರಿಹಾರ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಇಲ್ಲಿ ತುಂಬಾ ಮಂಜು ಮುಸುಕಿದ್ದು, ವೈಮಾನಿಕ ಹಾರಾಟಕ್ಕೆ ಸೂಕ್ತವಾಗಿಲ್ಲದಿರುವುದು ಪ್ರವಾಸಿಗರನ್ನು ವಾಪಸ್ ಕರೆದುಕೊಂಡು ಹೋಗಲು ಅಡ್ಡಿಯುಂಟಾಗಿದೆ. ಒಂದೆರಡು ದಿನಗಳಲ್ಲಿ ಹವಾಮಾನದಲ್ಲಿ ಸುಧಾರಣೆಯಾಗುವ ಸೂಚನೆಗಳಿದ್ದು, ರಾಜ್ಯದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವುದಾಗಿ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.

ರಾಜ್ಯದ ಯಾತ್ರಿಕರಿಗೆ ತಾತ್ಕಾಲಿಕವಾಗಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆರೋಗ್ಯ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ. ಇಲ್ಲಿರುವ ಪ್ರವಾಸಿಗರು ಮಾನಸಿಕವಾಗಿ ಕುಗ್ಗಿದ್ದರೂ, ಅವರ ಆರೋಗ್ಯವು ಸ್ಥಿರವಾಗಿದೆ. ರಾತ್ರಿ ಹೆಚ್ಚು ಚಳಿಯಿಂದ ಕೂಡಿರುವ ಇಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳಲು ರಾಜ್ಯದ ಪ್ರವಾಸಿಗರು ಕಷ್ಟ ಪಡುತ್ತಿದ್ದಾರೆ.

ತಾತ್ಕಾಲಿಕವಾಗಿ ನೆಲೆ ಕಳೆದುಕೊಂಡಿರುವ ರಾಜ್ಯದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಬಗ್ಗೆ ಕರ್ನಾಟಕದಲ್ಲಿರುವ ಬಂಧು-ಬಳಗದವರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲರನ್ನೂ ಒಟ್ಟಾಗಿ ರಾಜ್ಯಕ್ಕೆ ಕರೆತರುವುದಾಗಿ ಸಚಿವರು ಹೇಳಿದ್ದಾರೆ.

English summary
There is hope yet for 200 pilgrims from the State, now stranded in Badrinath for over 10 days, being airlifted to Joshimath and taken to Dehradun from there by road. Senior citizens and children would be given priority in the airlift and the army authorities have issued tokens to them said Minister Santosh Lad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X