ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಚ್ಚಿ ಹೊಡೆಯುತ್ತಿರುವ ಮಳೆಗೆ ತೇಲಾಡುತ್ತಿದೆ ಕೊಡಗು

By ಕುಮಾರ್, ಮಡಿಕೇರಿ
|
Google Oneindia Kannada News

ಮಡಿಕೇರಿ, ಜೂ. 27 : ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಸಂಪಾಜೆ, ತಲಕಾವೇರಿ, ಭಾಗಮಂಡಲ, ಹುದಿಕೇರಿ, ಶ್ರೀಮಂಗಲ, ಅಮ್ಮತ್ತಿ, ಶಾಂತಳ್ಳಿ, ಶನಿವಾರಸಂತೆ ಮತ್ತಿತರ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಿಲ್ಲೆಯ ನದಿ, ತೊರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಹಾಗೆಯೇ ಪೊನ್ನಂಪೇಟೆ, ಬಾಳಲೆ, ಕೊಡ್ಲಿಪೇಟೆ, ಸೋಮವಾರಪೇಟೆ, ವಿರಾಜಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಬಿಟ್ಟು ಬಿಟ್ಟು ರಭಸವಾಗಿ ಮಳೆಯಾಗುತ್ತಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಪುಣ್ಯಕ್ಷೇತ್ರ ಭಾಗಮಂಡಲದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ, ಸುಜ್ಯೋತಿ, ಕನ್ನಿಕಾ ನದಿಗಳ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ನಾಪೋಕ್ಲು-ಭಾಗಮಂಡಲ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

ಭೀಕರ ಮಳೆಗೆ ಮನೆ ಬಿರುಕು

ಭೀಕರ ಮಳೆಗೆ ಮನೆ ಬಿರುಕು

ಕರಡಿಗೋಡು ಭಾಗದಲ್ಲಿ ಕಾವೇರಿ ನದಿ ಹುಕ್ಕಿ ಹರಿಯುತ್ತಿದ್ದು ನದಿ ದಡ ಕುಸಿತದಿಂದ 10ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿವೆ. ಹಲವು ಮನೆಗಳು ಜಲಾವೃತಗೊಂಡು ಸುಮಾರು 10ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಕೊಚ್ಚಿ ಹೋಗುವ ಸ್ಥಿತಿಯಲ್ಲಿ ಮನೆಗಳು

ಕೊಚ್ಚಿ ಹೋಗುವ ಸ್ಥಿತಿಯಲ್ಲಿ ಮನೆಗಳು

ಕಾವೇರಿ ನದಿ ದಡದ ಎರಡೂ ಬದಿಯಲ್ಲಿ ಬಿದಿರು ಒಣಗಿ ನಿಂತಿರುವ ಹಿನ್ನೆಲೆಯಲ್ಲಿ ಬುಡಸಮೇತ ನದಿಯಲ್ಲಿ ತೇಲಿ ಹೋಗುತ್ತಿದ್ದು, ಭಾರಿ ಬರೆ ಕುಸಿತ ಉಂಟಾಗುತ್ತಿದೆ. ಈ ಭಾಗದ ಯಮುನ, ಇಕ್ಬಾಲ್, ಸುಮಿತ್ರ, ಕೃಷ್ಣ, ಮೇರಿ, ಪೂವಮ್ಮ, ಸೇರಿದಂತೆ 10ಕ್ಕೂ ಹೆಚ್ಚು ಕುಟುಂಬಗಳ ಮನೆಗಳ ಹಿಂಬದಿ ತಡೆಗೋಡೆ ಕುಸಿದುಬಿದ್ದಿದ್ದು, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿವೆ.

ನುರಿತ ಮುಳುಗು ತಜ್ಞರ ನಿಯೋಜನೆ

ನುರಿತ ಮುಳುಗು ತಜ್ಞರ ನಿಯೋಜನೆ

ಭಾಗಮಂಡಲ-ಮಡಿಕೇರಿ ಸಂಪರ್ಕಕ್ಕೆ ಈಗಾಗಲೇ ದೋಣಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ನುರಿತ ಮುಳುಗು ತಜ್ಞರ ತಂಡವನ್ನು ನಿಯೋಜಿಸಲಾಗಿದ್ದು, ಇದಕ್ಕಾಗಿ 10 ಜನ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾಗಮಂಡಲದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಎರಡು ರ‍್ಯಾಫ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಮನೆ ಹಾನಿ, ಅಪಾರ ನಷ್ಟ

ಜಿಲ್ಲೆಯಲ್ಲಿ ಮನೆ ಹಾನಿ, ಅಪಾರ ನಷ್ಟ

ಜಿಲ್ಲೆಯಲ್ಲಿ ಜೂನ್ ಒಂದರಿಂದ ಇಲ್ಲಿಯ ತನಕ ಪ್ರವಾಹದಿಂದ ಒಬ್ಬರು ಮೃತಪಟ್ಟಿದ್ದು, ಎರಡು ಜಾನುವಾರುಗಳು ಸಾವನ್ನಪ್ಪಿವೆ. ಹಾಗೆಯೇ ಒಂದು ಮನೆ ಸಂಪೂರ್ಣ ಹಾನಿಯಾಗಿದ್ದು, 36 ವಾಸದ ಮನೆಗಳು ಭಾಗಶಃ ಹಾನಿಗೀಡಾಗಿವೆ. ಇದರಿಂದ ಭಾಗಶಃ ವಾಸದ ಮನೆಗಳ ನಾಶದಿಂದ ಒಟ್ಟು 9.54 ಲಕ್ಷ ರೂ. ನಷ್ಟವಾಗಿದೆ. ಪೂರ್ಣ ವಾಸದ ಮನೆ ಹಾನಿಯಿಂದ ಒಂದು ಲಕ್ಷ ರೂ. ನಷ್ಟವಾಗಿದೆ. ಜಾನುವಾರು ಸಾವಿಯಿಂದ 32 ಸಾವಿರ ರೂನಷ್ಟು ನಷ್ಟ ಉಂಟಾಗಿದೆ.

ಗಂಜಿ ಕೇಂದ್ರ ತೆರೆಯಲು ಸಿದ್ಧತೆ

ಗಂಜಿ ಕೇಂದ್ರ ತೆರೆಯಲು ಸಿದ್ಧತೆ

ಮಡಿಕೇರಿ ತಾಲ್ಲೂಕು ನಾಪೋಕ್ಲು ಹೋಬಳಿಯ ಚೇರಿಯಪರಂಬು ಬಾಣೆಮೊಟ್ಟೆ ಸಮುದಾಯ ಭವನದಲ್ಲಿ ಮುಂದೆ ನೀರಿನ ಹರಿವು ಹೆಚ್ಚಾದಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕರ ಓಡಾಟಕ್ಕೆ ಬೋಟ್ ವ್ಯವಸ್ಥೆ

ಸಾರ್ವಜನಿಕರ ಓಡಾಟಕ್ಕೆ ಬೋಟ್ ವ್ಯವಸ್ಥೆ

ಭಾಗಮಂಡಲ ತ್ರಿವೇಣಿ ಸಂಗಮ ಮತ್ತು ಭಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ರಸ್ತೆಯ ಮೇಲೆ ನೀರು 2 ಅಡಿಗಳಷ್ಟು ಹರಿಯುತ್ತಿದ್ದು, ಮುಂಜಾಗೃತ ಕ್ರಮವಾಗಿ ಸಾರ್ವಜನಿಕರಿಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಾಟಕ್ಕೆ ಬೋಟ್ ವ್ಯವಸ್ಥೆ ಕಲ್ಪಿಸಿದ್ದು, 10 ಜನ ಗೃಹ ರಕ್ಷಕರನ್ನು ಸರದಿಯ ಮೇಲೆ ಕಾರ್ಯನಿರ್ವಹಿಸಲು ಕ್ರಮವಹಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ

ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ

ವಿರಾಜಪೇಟೆ ತಾಲ್ಲೂಕಿನ ವ್ಯಾಪ್ತಿಯ ಬೇತ್ರಿ ಕರಡಿಗೋಡು ಕಿರೇಹೊಳೆ, ಪೂಜಿಕಲ್ಲು ಇವುಗಳಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದ್ದು, ಹೊಳೆ ದಡದಲ್ಲಿ ವಾಸಿಸುತ್ತಿರುವ ಸಾರ್ವಜನಿಕರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳಿಸಲು ಕ್ರಮವಹಿಸಲಾಗಿದೆ.

ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ

ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಸಿಬ್ಬಂದಿಗಳು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ತಕ್ಷಣ ಪರಿಹರಿಸುವಂತಾಗಲು ಸೆಸ್ಕ್ ಲೈನ್‌ಮೆನ್‌ಗಳು, ಗ್ರಾ.ಪಂ. ಮತ್ತು ಕಂದಾಯ ಇಲಾಖೆಗಳ ತಳಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

English summary
It is raining more than normal in Madikeri district in this monsoon. The heavy rain has caused widespread damage to the properties across the district. Many rivers, streams are flowing over danger mark, prompting administration to evacuate people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X