ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಶೆಟ್ಟಿಹಳ್ಳಿ ಎಟಿಎಂ ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ?

By Srinath
|
Google Oneindia Kannada News

mobile-traces-bangalore-canara-bank-atm-theft
ಬೆಂಗಳೂರು, ಜೂನ್ 13: ನಾಗಶೆಟ್ಟಿಹಳ್ಳಿ ಬಸ್ ಸ್ಟಾಮಡ್ ಬಳಿಯಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಚಾಣಾಕ್ಷತನದಿಂದ 18 ಲಕ್ಷ ರೂ. ನಗದು ದೋಚಿದ್ದ ತ್ರಿಮೂರ್ತಿಗಳು ಮೂರೇ ದಿನಗಳಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

ಕಳ್ಳತನ ಪ್ರಕರಣವನ್ನು ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ಬೇಧಿಸಿರುವ ಸಂಜಯನಗರ ಠಾಣೆ ಪೊಲೀಸರು, ಹಾಸನ ಜಿಲ್ಲೆಯ ರಘು, ಮಹೇಶ ಹಾಗೂ ಸುನೀಲನನ್ನು ಬಂಧಿಸಿದ್ದು, ಎಟಿಎಂನಿಂದ ಕಳವು ಮಾಡಿದ್ದ 18 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಹಾಗೂ ಗ್ಯಾಸ್‌ ಕಟ್ಟರ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿ ಪೊಲೀಸರು ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ಕಳ್ಳರನ್ನು ಹಿಡಿದಿದ್ದಾರೆ ಎಂದು ಏಕೆ ಹೇಳಲಾಗುತ್ತಿದೆ ಅಂದರೆ ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಪೊಲೀಸರ ಕೆಲಸ ನಿಜಕ್ಕೂ ಸಲೀಸಾಗಿ ಬಿಟ್ಟಿದೆ. ಆದರೆ ಅಪರಾಧಿಗಳು ಇದನ್ನು ಇನ್ನೂ ಅರಿತುಕೊಂಡಿಲ್ಲ. ಹಾಗಾಗಿಯೇ ಪೊಲೀಸರಿಗೆ ಸುಲಭದ ತುತ್ತಾಗುತ್ತಿದ್ದಾರೆ.

ಇಲ್ಲಿ ಡಿಜಿಟಲ್ ಸಾಧನಗಳು ಪೊಲೀಸರ ಕೈಹಿಡಿಯುತ್ತಿವೆ. ಅಪರಾಧಗಳು ನಡೆದಾಗ ಮೊದಲು ಪೊಲೀಸರು ಜಾಲಾಡುವುದೇ ಸಿಸಿಟಿವಿ, ಮೊಬೈಲ್ ಟವರುಗಳನ್ನು. ಅನೇಕ ಬಾರಿ ಅಪರಾಧಿಗಳನ್ನು ಈ ಸಾಧನಗಳೇ ಗುರುತಿಸಿಬಿಡುತ್ತವೆ. ಅದಾಗದಿದ್ದರೆ ಮಹತ್ವದ ಸುಳಿವನ್ನಾದರೂ ನೀಡುತ್ತವೆ. ಪೊಲೀಸರ ಕೆಲಸ ಅಲ್ಲಿಗೆ ಅರ್ಧ ಸಲೀಸು.

ಈ ಪ್ರಕರಣದಲ್ಲೂ ಅಷ್ಟೇ place of crime ಅನ್ನು ಸೂಕ್ಷ್ಮವಾಗಿ ಗಮನಿಸಿ ಪೊಲೀಸರು ಮೊಬೈಕ್ ಟವರ್ ಹತ್ತಿದ್ದಾರೆ. ಅಲ್ಲಿ ತಡಕಾಡಿದಾಗ ಆರೋಪಿಯ ಪೈಕಿ ಒಬ್ಬನ ಮೊಬೈಲ್ ಆ ಸಂದರ್ಭದಲ್ಲಿ ಅಲ್ಲಿಂದ ಮೊಳಗಿರುವುದನ್ನು ಮೊಬೈಲ್ ಸೇವಾ ಕಂಪನಿಯವರು ಪೊಲೀಸರ ಕಿವಿಗೆ ಹಾಕಿದ್ದಾರೆ.

ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಸೀದಾ ಅವರು ಪ್ರಕರಣದ ಸೂತ್ರಧಾರ ಹಾಸನ ಜಿಲ್ಲೆ ಬೇಲೂರು ತಾಲೂಕು ನಿಡುಮನಹಳ್ಳಿ ಗ್ರಾಮದ ರಘುವಿನ ಭುಜದ ಮೇಲೆ ಕೈಯಿಟ್ಟಿದ್ದಾರೆ.

ಚೆಕ್‌ ಮೇಟ್‌ ಆದ ಸೆಕ್ಯೂರಿಟಿ ನೌಕರ:
ಅವನೋ ಎರಡು ವರ್ಷಗಳಿಂದ ಕೆಎಂಎಫ್ ಸಂಸ್ಥೆಯನಲ್ಲಿ ಉದ್ಯೋಗಿಯಾಗಿದ್ದಾನೆ. ಅಲ್ಲಿ ಕೆಲಸ ಮುಗಿದ ಬಳಿಕ ಪಾರ್ಟ್ ಟೈಂನಲ್ಲಿ ಚೆಕ್‌ ಮೇಟ್‌ ಸೆಕ್ಯೂರಿಟಿ ಏಜೆನ್ಸಿಯಲ್ಲಿಯೂ ದುಡಿಯುತ್ತಾನೆ. ಈ ಸೆಕ್ಯೂರಿಟಿ ಏಜೆನ್ಸಿ, ನಗರದ ವ್ಯಾಪ್ತಿ ಕೆನರಾ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ಕಾರ್ಯದ ಗುತ್ತಿಗೆ ಪಡೆದಿದೆ.

ಹಾಗಾಗಿ ರಘುವಿಗೂ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ಮಾರ್ಗಗಳ ಕುರಿತು ಅರಿವಿತ್ತು. ಹೀಗೆ ಕೆಲ ದಿನಗಳ ಹಿಂದೆ ನಾಗಶೆಟ್ಟಿಹಳ್ಳಿ ಮುಖ್ಯರಸ್ತೆಯ ಎಟಿಎಂಗೆ ಹಣ ಹಾಕಲು ಬಂದಾಗ ಆತ ಕೂಲಂಕೂಷವಾಗಿ ಅಲ್ಲಿನ ವಾತಾವರಣವನ್ನು ಗಮನಿಸಿದ್ದಾನೆ. ಬಳಿಕ ಈ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಪೂರಕವಾದ ಅವಕಾಶಗಳಿವೆ ಎಂದು ಅಂದಾಜಿಸಿದ ರಘು, ಕೂಡಲೇ ತನ್ನ ಸ್ನೇಹಿತರಾದ ಹಾಸನದ ಮಹೇಶ ಹಾಗೂ ಅರಕಲಗೂಡು ತಾಲೂಕಿನ ರಾಮನಾಥಪುರದ ಸುನೀಲ್‌ನನ್ನು ಸಂಪರ್ಕಿಸಿದ್ದಾನೆ. ಈ ಇಬ್ಬರು ಕೂಡ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು.

ತದನಂತರ ಈ ಮೂವರು ಎಟಿಎಂನಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾರೆ. ಅದರಂತೆ ಮೊದಲು ಎಟಿಎಂ ಕೇಂದ್ರದ ಅಳವಡಿಸಲಾಗಿದ್ದ ಸಿಸಿಟಿವಿಗಳ ಸಂಪರ್ಕವನ್ನು ರಘು ಸ್ಥಗಿತಗೊಳಿಸಿದ್ದಾನೆ. ಮೂರು ದಿನಗಳ ಬಳಿಕ ಸುನೀಲ, ಮಹೇಶನೊಂದಿಗೆ ಬಂದು ಕಳ್ಳತನವೆಸಗಿ ಪರಾರಿಯಾಗಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಜ್ಯೋತಿಪ್ರಕಾಶ್‌ ಮಿರ್ಜಿ ಸುದ್ದಿಗಾರರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಎಸ್ಎನ್ ಸಿದ್ದರಾಮಪ್ಪ ಮಾರ್ಗದರ್ಶನದಲ್ಲಿ ಎಸಿಪಿ ಆರ್‌ ನಾಗರಾಜು ನೇತೃತ್ವದಲ್ಲಿ ಇನ್ಸ್‌ ಪೆಕ್ಟರುಗಳಾದ ಗೋಪಾಲ ಹಾಗೂ ಗೋಪಾಲ ಕೃಷ್ಣೇಗೌಡ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

English summary
Mobile phone traces Bangalore Canara Bank ATM theft case. Checkmate Security employee Hasan Raghu and 2 others arrested in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X