ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ, ಧರ್ಮಸ್ಥಳ ಬಗ್ಗೆ ಪ್ರಶ್ನಿಸಲ್ಲ ಏಕೆ? :ಪೇಜಾವರಶ್ರೀ

By Mahesh
|
Google Oneindia Kannada News

No pankti bheda at Krishna temple, says Pejawar seer
ಉಡುಪಿ, ಜೂ.12: ಪೇಜಾವರಶ್ರೀಗಳು ಉಡುಪಿ ಶ್ರೀಕೃಷ್ಣ ದೇಗುಲ ಹಾಗೂ ಅಷ್ಟಮಠ ಆಚರಣೆ ಬಗ್ಗೆ ಎದ್ದಿರುವ ವಿವಾದಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನಮ್ಮ ಮಠವೇ ಏಕೆ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮಗಳು ಯಾವಾಗಲೂ ಉಡುಪಿಯ ಅಷ್ಟಮಠಗಳನ್ನು ಸುತ್ತುತ್ತಿರುತ್ತವೆ ಏಕೆ? ಅಷ್ಟಮಠಗಳ ಆಚರಣೆ ಬಗ್ಗೆ ಆಸಕ್ತಿ ವಹಿಸಿರುವ ಮಾಧ್ಯಮಗಳು ಶೃಂಗೇರಿ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇಗುಲಗಳಲ್ಲಿ ಅನುಸರಿಸುವ ಪದ್ಧತಿಗಳ ಬಗ್ಗೆ ಪ್ರಶ್ನಿಸುವುದಿಲ್ಲ ಏಕೆ? ಎಂದು ಪೇಜಾವರ ಶ್ರೀಗಳು ಪ್ರತಿ ಪ್ರಶ್ನೆ ಹಾಕಿದ್ದಾರೆ.

ಉಡುಪಿ ದೇಗುಲದ ಅನ್ನ ಸಂತರ್ಪಣೆ, ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಹೊಣೆ ಹೊತ್ತಿರುವ ಅಷ್ಟಮಠಗಳಲ್ಲಿ ಜಾತಿಬೇಧ ನಡೆದಿದೆ ಎಂದು ಹಲವಾರು ಜನ ಆಕ್ಷೇಪಿಸಿದ್ದರು.

ದೇಗುಲದಲ್ಲಿ ಶ್ರೀಕೃಷ್ಣನ ಪ್ರಸಾದರ ರೂಪದಲ್ಲಿ ನೀಡುವ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಪಂಕ್ತಿ ಬೇಧ ಮಾಡಲಾಗುತ್ತದೆ ಎಂದು ಆರೋಪಿಸಲಾಗಿತ್ತು.

ಪಂಕ್ತಿಬೇಧ ಇಲ್ಲ: ಇದಕ್ಕೆ ಉತ್ತರಿಸಿದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು, ನಮ್ಮಲ್ಲಿ ಪಂಕ್ತಿ ಬೇಧ ಇಲ್ಲ (ಬ್ರಾಹ್ಮಣರು ಹಾಗೂ ಅನ್ಯ ಜಾತಿ/ಧರ್ಮೀಯರನ್ನು ಪ್ರತ್ಯೇಕ ಊಟದ ಸಾಲುಗಳನ್ನು ಅನುಸರಿಸುವುದು) ಶ್ರೀಕೃಷ್ಣ ದೇಗುಲ/ಮಠದಲ್ಲಿ ಈ ರೀತಿ ಯಾವುದೇ ಬೇಧ ಭಾವ ಅನುಸರಿಸುತ್ತಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಸಹ ಪಂಕ್ತಿ ಭೋಜನ ವ್ಯವಸ್ಥೆ ಈಗಲೂ ನಡೆಯುತ್ತಿದೆ ಎಂದರು.

ಉಡುಪಿಯ ಎಂಟು ಮಠಗಳ ಊಟೋಪಚಾರ ವ್ಯವಸ್ಥೆ, ಪರ್ಯಾಯ ಮಠಾಧೀಶರ ನಡೆ ನುಡಿ, ಕೃಷ್ಣ ದೇಗುಲದ ಸುತ್ತ ಹುಟ್ಟಿಕೊಂಡಿರುವ ವಿವಾದ ಇದರ ಬಗ್ಗೆಯೇ ಮಾಧ್ಯಮಗಳು ಆಸಕ್ತಿ ವಹಿಸಿರುವುದಕ್ಕೆ ಪೇಜಾವರಶ್ರೀಗಳು ಅಸಂತೋಷ ವ್ಯಕ್ತಪಡಿಸಿದರು.

ಮತ್ತೊಂದು ವಿವಾದ: 2004ರಲ್ಲಿ ಪರ್ಯಾಯ ಪೀಠದ ಅಧಿಕಾರ ಹೊಂದಿದ್ದ ಅದಮಾರು ಮಠವು ಶ್ರೀಕೃಷ್ಣ ದೇಗುಲದ ದಕ್ಷಿಣ ಭಾಗದಲ್ಲಿದ್ದ ಮಂಟಪವನ್ನು ಸರಿಪಡಿಸುವ ಉದ್ದೇಶದಿಂದ ಗೋಪುರವೊಂದನ್ನು ಸ್ಥಾಪಿಸಿತು. ಇದನ್ನು ಮಾಧ್ಯಮಗಳು 'ಕನಕ ಗೋಪುರ' ಎಂದು ಜನಪ್ರಿಯಗೊಳಿಸಿದವು. ಈ ಹಿಂದೆ ಇದ್ದ ಗೋಪುರ ಐತಿಹಾಸಿಕವಾಗಿತ್ತು. ಅದನ್ನು ಉದ್ದೇಶಪೂರ್ವಕವಾಗಿ ಕೆಡವಲಾಗಿದೆ ಎಂದು ಕೂಗೆಬ್ಬಿಸಲಾಯಿತು.

16ನೇ ಶತಮಾನದ ಕನಕದಾಸರ ನೆನಪಿನ ಸ್ಮಾರಕವಾಗಿತ್ತು. ಕನಕ ದಾಸರ ಕಾಲದಲ್ಲೇ ಗೋಪುರ ನಿರ್ಮಾಣವಾಗಿತ್ತು ಎಂದು ಹೇಳಿಕೆಗಳನ್ನು ತೇಲಿ ಬಿಡಲಾಯಿತು. ಆದರೆ, ಆ ಮಂಟಪ ಗೋಪುರ ನಿರ್ಮಾಣವಾಗಿದ್ದು 1910ರ ಆಸುಪಾಸಿನಲ್ಲಿ ಕೃಷ್ಣಪುರ ಮಠವು ಪರ್ಯಾಯ ಪೀಠ ಅಧಿಕಾರ ಅವಧಿಯಲ್ಲಿದ್ದಾಗ ಎಂಬುದಕ್ಕೆ ಸೂಕ್ತ ದಾಖಲೆಗಳಿವೆ ಎಂದು ಪೇಜಾವರ ಶ್ರೀಗಳು ಹೇಳಿದರು.

ಶ್ರೀಕೃಷ್ಣ ಮಠದ ಆದಾಯ, ಖರ್ಚು ವೆಚ್ಚದ ಬಗ್ಗೆ ಎದ್ದಿರುವ ಅಪಸ್ವರಕ್ಕೆ ತಕ್ಕ ಉತ್ತರ ನೀಡಿದ ಶ್ರೀಗಳು, ಮಠದ ಪರಮ ಭಕ್ತರಾಗಿದ್ದ ದಿವಂಗತ ವಿಎಸ್ ಆಚಾರ್ಯ ಅವರೇ ಮಠದ ಆರ್ಥಿಕ ವ್ಯವಹಾರಗಳ ಆಡಿಟ್ ಮಾಡಿಸಲು ಸೂಚಿಸಿದ್ದರು. ಆಗ ಕೆಲವು ಮಠಗಳಿಂದ ವಿರೋಧ ವ್ಯಕ್ತವಾಗಿತ್ತು ನಿಜ ಎಂದು ಪೇಜಾವಶ್ರೀಗಳು ಹೇಳಿದರು.

ಸೆಕ್ಯುಲರ್ ಸರ್ಕಾರವಾದರೆ ಮಠ, ದೇಗುಲಗಳ ವ್ಯವಹಾರದಲ್ಲಿ ತಲೆ ಹಾಕುವುದು ಏಕೆ? ಸ್ವಾಮೀಜಿಗಳು, ಮಠಗಳ ಮೇಲೆ ನಿಗಾ ವಹಿಸಬೇಕಾದರೆ ಎಲ್ಲಾ ಮಠಗಳ ಮೇಲೆ ಗಮನ ಹರಿಸಲಿ, ಅಷ್ಟಮಠವೇ ಏಕೆ? ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ.

English summary
Vishwesha Tirtha Swamiji of Pejawar Math said ‘pankti bheda’ (separate seating arrangements for Brahmins and non-Brahmins for meals) was not being followed in Sri Krishna Math/Temple. Why nobody questioned the practices followed in places like Sringeri, Dharmasthala, and Kukke Subrahmanya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X