ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿ ಸತ್ತರೂ 3 ತಿಂಗಳು ಶವಸಂಸ್ಕಾರ ಮಾಡದ ಮಗ

By Prasad
|
Google Oneindia Kannada News

Son keeps dead body of mother for 3 months
ಚಾಮರಾಜನಗರ, ಜೂ. 7 : ದೇವರನ್ನು ಕಾಣಲು ಸಾಧ್ಯವಿಲ್ಲದ ಕಾರಣ ದೇವರು ತಾಯಿಯನ್ನು ಸೃಷ್ಟಿಸಿದ್ದಾನೆ ಎಂಬ ಮಾತಿದೆ. ಮುತ್ತು ಕೊಟ್ಟವಳು ಬಂದ ಮೇಲೆ ತುತ್ತು ತಿನ್ನಿಸಿದವಳನ್ನು ಮರೆಯುವವರು ಹಲವರಾದರೆ, ಅಮ್ಮನನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುವವರೂ ಇರುತ್ತಾರೆ. ಆದರೆ, ತಾಯಿ ಸತ್ತಮೇಲೂ ಕೂಡ ಶವಸಂಸ್ಕಾರ ಮಾಡದೆ ಪೂಜಿಸುತ್ತ ಕುಳಿತರೆ ಹೇಗೆ?

ಇಂಥದೊಂದು ವಿಚಿತ್ರ, ವಿಸ್ಮಯಕಾರಿ ಘಟನೆ ನಡೆದಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪಳನಿಮೇಡು ಎಂಬ ಗ್ರಾಮದಲ್ಲಿ. ಮುನಿಸ್ವಾಮಿ (60) ಎಂಬ ಬ್ರಹ್ಮಚಾರಿಯೊಬ್ಬ ತನ್ನ ತಾಯಿ ಲಕ್ಷ್ಮೀ (90) ತೀರಿಕೊಂಡು ಮೂರು ತಿಂಗಳಾಗಿದ್ದರೂ ಶವಸಂಸ್ಕಾರ ಮಾಡದೆ ದಿನವೂ ಪೂಜಿಸುತ್ತಿದ್ದ ಮತ್ತು ಆರಾಧಿಸುತ್ತಿದ್ದ. ತನ್ನ ತಾಯಿ ಇನ್ನೂ ಸತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ.

ಆತ ಮಾನಸಿಕವಾಗಿ ಅಸ್ವಸ್ಥನಾಗಿರಲಿಲ್ಲ, ಆದರೆ, ಆತನ ತಾಯಿ ಪ್ರೇಮವೇ ಅಂತಹುದು. ತಾನಿದ್ದ ಮನೆಯ ಪಕ್ಕದಲ್ಲಿ ಗುಡಿಸಲೊಂದನ್ನು ನಿರ್ಮಿಸಿ, ಅಲ್ಲಿ ತಾಯಿಯ ಶವವನ್ನು ತೂಗುಯ್ಯಾಲೆಯಲ್ಲಿ ಇಟ್ಟು ತೂಗುತ್ತಿದ್ದ. ಪ್ರತಿದಿನವೂ ಪಾದಪೂಜೆ ಮಾಡುತ್ತಿದ್ದ. ಅಯ್ಯಪ್ಪ ಸ್ವಾಮಿಯ ಭಕ್ತನಾಗಿರುವ ಆತ ಒಂದು ಕ್ಷಣವೂ ತಾಯಿಯ ಶವವನ್ನು ಬಿಟ್ಟು ಕದಲುತ್ತಿರಲಿಲ್ಲ.

ಫ್ಲಾಷ್ ಬ್ಯಾಕ್ : ಮುನಿಸ್ವಾಮಿ ಲಕ್ಷ್ಮೀ ಎಂಬ ಮಹಿಳೆಯ 9 ಮಕ್ಕಳಲ್ಲಿ 6ನೇಯವರು. ಬಾಲ್ಯದಿಂದಲೂ ತಾಯಿಯೆಂದರೆ ಅಪಾರವಾದ ಮಮಕಾರ. ಉಳಿದ ಮಕ್ಕಳು ಬೆಳೆದ ಮೇಲೆ ಬೇರೆಡೆ ವಾಸವಿದ್ದರೆ ಈತ ತಾಯಿಯ ಜೊತೆಗೇ ಇದ್ದ. ತಾನು 14ನೇ ವಯಸ್ಸಿನಲ್ಲಿ ಇದ್ದಾಗಲೇ ದೇವರ ಪೂಜೆಯ ಜೊತೆಗೆ ಅಮ್ಮನನ್ನು ಕೂಡ ದೇವರಂತೆ ಕಾಣುತ್ತಿದ್ದ ಮತ್ತು ಆರಾಧಿಸುತ್ತಿದ್ದ. ಮದುವೆಯಾದರೆ ತಾಯಿ ಪ್ರೇಮ ಕಡಿಮೆಯಾಗುತ್ತದೆಂದು ಲಗ್ನ ಕೂಡ ಆಗಿರಲಿಲ್ಲ. ಆತನ ತಾಯಿ ಪ್ರೇಮ ಅಷ್ಟು ಉತ್ಕಟವಾಗಿತ್ತು.

ಮಾನವನಾಗಿ ಹುಟ್ಟಿದ ಮೇಲೆ ಒಂದಿಲ್ಲೊಂದು ದಿನ ದಕ್ಷಿಣ ದಿಕ್ಕಿನೆಡೆಗೆ ಪಯಣ ಬೆಳೆಸಲೇಬೇಕಲ್ಲ. ಮುನಿಸ್ವಾಮಿಯ ತಾಯಿ ಮೂರು ತಿಂಗಳ ಹಿಂದೆ ತೀರಿಕೊಂಡುಬಿಟ್ಟರು. ಆದರೆ, ಆತ ಎಲ್ಲರಂತೆ ಶವಸಂಸ್ಕಾರ ಮಾಡಲೇ ಇಲ್ಲ. ಶವವನ್ನು ಗಾಜಿನ ಪೆಟ್ಟಿಗೆಯಲ್ಲಿ ಮರಳಿನ ಮೇಲೆ ಇಟ್ಟು ತೂಗುಯ್ಯಾಲೆಯಲ್ಲಿ ನೆಲಕ್ಕೆ ತಾಗದಂತೆ ಇಟ್ಟಿದ್ದ. ತಾಯಿಯ ದೇಹ ಮಣ್ಣಲ್ಲಿ ಮಣ್ಣಾಗಬಾರದು ಎಂಬುದು ಆತನ ಆಶಯವಾಗಿತ್ತು.

ಇದರ ಹಿಂದೆಯೂ ಒಂದು ಕಥೆಯಿದೆ. ಹಿಂದೆ ಗೋವಾಗೆ ಹೋಗಿದ್ದಾಗ ಚರ್ಚಿನಲ್ಲಿ ಶವವನ್ನು ಪಿರಮಿಡ್ ಮಾದರಿಯ ಗಾಜಿನಪೆಟ್ಟಿಗೆಯಲ್ಲಿ ಕೆಡದಂತೆ ಇಟ್ಟಿದ್ದನ್ನು ನೋಡಿದ್ದಾನೆ. ತನ್ನ ತಾಯಿಯನ್ನು ಕೂಡ ಹಾಗೆಯೇ ಕೆಡದಂತೆ ಇಡಬೇಕೆಂದು ಬಯಸಿದ್ದಾನೆ. ಅದಕ್ಕಾಗಿ ತಕ್ಕ ವ್ಯವಸ್ಥೆಯನ್ನು ಕೂಡ ಮಾಡಿದ್ದ. ಶವಪೆಟ್ಟಿಗೆಯ ಮೇಲೆ ತಕ್ಕಷ್ಟು ಬೆಳಕು ಬೀಳುವ ವ್ಯವಸ್ಥೆಯನ್ನೂ ಮಾಡಿದ್ದ.

ಜನರ ಆಕ್ಷೇಪ : ಆತ ಎಷ್ಟೇ ಪ್ರಯತ್ನ ಮಾಡಿದ್ದರೂ ವೈಜ್ಞಾನಿಕ ರೀತಿಯಲ್ಲಿ ಮಾಡಿರದಿದ್ದರಿಂದ ಶವ ತಡೆಯಬೇಕಲ್ಲ. ಕೊಳೆತು ನಾರಲು ಪ್ರಾರಂಭಿಸಿತು. ಅಕ್ಕಪಕ್ಕದ ಗ್ರಾಮಸ್ಥರೆಲ್ಲ ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿದರು. ತಾಯಿಯ ಶವಸಂಸ್ಕಾರ ಮಾಡಿರದಿದ್ದರಿಂದಲೇ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ ಎಂದು ಮುನಿಸ್ವಾಮಿ ಮೇಲೆ ಗೂಬೆಕೂರಿಸಲು ಆರಂಭಿಸಿದರು.

ಇದರಿಂದ ಕೊನೆಗೂ ಮುನಿಸ್ವಾಮಿ ಮಣಿಯಲೇಬೇಕಾಯಿತು. ಅಮ್ಮನ ಶವವನ್ನು ಇಟ್ಟ ಸ್ಥಳದಲ್ಲಿಯೇ ಸಮಾಧಿಯನ್ನು ನಿರ್ಮಿಸಿದ್ದಾನೆ. ಆದರೆ, ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಧಿಯನ್ನು ಒಡೆದು ಹಾಕಿದ್ದಾರೆ.

English summary
In an unusual incident, a person keeps dead body of his mother for more than 3 months without doing final rites in Kollegal taluk in Chamarajnagar district. He would worship his mother everyday just like God. But villagers objected when it started decomposing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X