ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊರೆಸ್ವಾಮಿ ಪತ್ರ ತಲುಪಿಲ್ಲ, ಸಿದ್ದು ಜಾಣ ಉತ್ತರ

By Mahesh
|
Google Oneindia Kannada News

Pressure mounts on Siddaramaiah to keep the Cabinet ‘clean’
ಬೆಂಗಳೂರು, ಮೇ.15: ಭ್ರಷ್ಟಾಚಾರ ಆರೋಪ ಹೊತ್ತಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರು ಬರೆದಿರುವ ಪತ್ರ ನನಗಿನ್ನೂ ತಲುಪಿಲ್ಲ, ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸಚಿವಾಕಾಂಕ್ಷಿಗಳ ಪಟ್ಟಿ ಹೊತ್ತುಕೊಂಡು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್, ಗಣಿ ಉದ್ಯಮಿಗಳಾದ ಅನಿಲ್ ಲಾಡ್, ಸಂತೋಷ್ ಲಾಡ್ ಸೇರಿದಂತೆ ಭ್ರಷ್ಟಾಚಾರ ಆರೋಪ ಹೊತ್ತಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಆಗ್ರಹಪೂರ್ವಕ ಪತ್ರವನ್ನು ಸಿದ್ದರಾಮಯ್ಯ ಅವರಿಗೆ ಕಳಿಸಿದ್ದರು.

ಡಿಕೆಶಿ ಪ್ರತಿಕ್ರಿಯೆ: ನನ್ನ ವಿರುದ್ಧ ಯಾವ ಆರೋಪಗಳೂ ಇಲ್ಲ. ನನ್ನ ವಿರುದ್ಧ ಇದ್ದ ಎಲ್ಲಾ ದೂರುಗಳ ವಿಚಾರಣೆ ನಡೆದು ನಾನು ತಪ್ಪಿತಸ್ಥ ಅಲ್ಲ ಎಂದು ಸಾಬೀತಾಗಿದೆ. ನನ್ನ ರಾಜಕೀಯ ಏಳಿಗೆ ಸಹಿಸದ ವಿರೋಧಿಗಳು ನನ್ನ ವಿರುದ್ಧ ದೂರು ನೀಡಿದ್ದಾರೆ. ದೊರೆಸ್ವಾಮಿ ಅವರು ಪಿಜಿಆರ್ ಸಿಂಧ್ಯಾ ಅವರ ಆಪ್ತರು. ಸಿಂಧ್ಯಾ ಸೋತಿದ್ದಾರೆ. ನಾನು ಗೆದ್ದಿದ್ದೇನೆ. ಜನತೆ ನನ್ನ ಕೈಬಿಟ್ಟಿಲ್ಲ. ಹೀಗಾಗಿ ದೊರೆಸ್ವಾಮಿ ಅವರು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನನ್ನ ಕೈ ಬಿಡುವುದಿಲ್ಲ. ನಾನು ಸ್ವಚ್ಛ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತು ಡಿಕೆ ಶಿವಕುಮಾರ್ ಎಂದಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ಕೆಲವು ಗಣಿ ಕಂಪನಿಗಳ ಗಣಿ ಲೈಸನ್ಸ್ ನವೀಕರಣ ಹಾಗೂ ಹಲವು ಕಂಪನಿಗಳ ಪರವಾನಗಿ ರದ್ದುಗೊಳಿಸಿ ಆದೇಶ ನೀಡಿತ್ತು. ಅದರಲ್ಲಿ ಸಿ ಕೆಟಗರಿಯಲ್ಲಿ ಲಾಡ್ ಸೋದರರಿಗೆ ಸೇರಿದ್ದ ಕಂಪನಿಗಳ ಕಾರ್ಯಕ್ಕೆ ಕಡಿವಾಣ ಹಾಕಲಾಗಿತ್ತು. ಹೀಗಾಗಿ ಲಾಡ್ ಸೋದರರ ವಿರುದ್ಧ ಕೋರ್ಟ್ ತೀರ್ಪು ಇರುವುದರಿಂದ ಅವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಳ್ಳಬೇಡಿ ಎಂದು ದೊರೆಸ್ವಾಮಿ ತಮ್ಮ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಇದೇ ರೀತಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದು ಲೋಕಾಯುಕ್ತ ಕೋರ್ಟ್ ನಿಂದ ಆರೋಪಿಗಳು ಎಂದು ಕರೆಯಲ್ಪಟ್ಟಿರುವ ಕಾಂಗ್ರೆಸ್ ನಾಯಕರ ಸಂಪೂರ್ಣ ಪಟ್ಟಿಯನ್ನು ಲಗತ್ತಿಸಿದ್ದಾರೆ. ಡಿಕೆ ಶಿವಕುಮಾರ್, ಲಾಡ್ ಸೋದರರು, ಎಂ ಕೃಷ್ಣಪ್ಪ, ಪ್ರಿಯಕೃಷ್ಣ, ಬಾಬುರಾವ್ ಚಿಂಚನಸೂರ್, ಆರ್ ವಿ ದೇಶಪಾಂಡೆ, ಕೃಷ್ಣ ಭೈರೇ ಗೌಡ, ಟಿಬಿ ಜಯಚಂದ್ರ ಹಾಗೂ ರಾಮಲಿಂಗಾರೆಡ್ಡಿ ಅವರ ಹೆಸರು ಪ್ರಮುಖವಾಗಿ ಕಂಡು ಬಂದಿದೆ.

ಕರ್ನಾಟಕ ಎಲೆಕ್ಷನ್ ವಾಚ್ ನ ಪರವಾಗಿ ತ್ರಿಲೋಚನ್ ಶಾಸ್ತ್ರಿ ಅವರು ಒಂದು ಪಟ್ಟಿಯನ್ನು ತಯಾರಿಸಿದ್ದು ಕ್ರಿಮಿನಲ್ ಹಿನ್ನೆಲೆಯುಳ್ಳ 17ಕ್ಕೂ ಅಧಿಕ ಶಾಸಕರ ಹೆಸರನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಿದ್ದಾರೆ.

ಚುನಾವಣಾ ಅಕ್ರಮವೂ ಸೇರಿದಂತೆ ವಂಚನೆ, ಲಂಚ, ಸಾರ್ವಜನಿಕ ಹಿತಾಸಕ್ತಿಗೆ ಹಾನಿ ಸೇರಿದಂತೆ ಅನೇಕ ಆರೋಪಗಳನ್ನು ಹೊತ್ತಿರುವ 17 ಶಾಸಕರ ಪಟ್ಟಿಯಲ್ಲಿ ಕಂಡು ಬಂದಿರುವ ಹೆಸರುಗಳು ಇಂತಿದೆ: ವಿಜಯಾನಂದ್ ಕಾಶಪ್ಪನವರ್, ಬಿಎಂ ನಾಗರಾಜ್, ಡಿ ಸುಧಾಕರ್, ವೈವೈ ಪಾಟೀಲ್, ಬಿಎ ಬಸವರಾಜ, ಕಮರುಲ್ ಇಸ್ಲಾಂ, ಅಜಯ್ ಧರಂ ಸಿಂಗ್, ಉಮಾಶ್ರೀ, ಎಸ್ ಪಿ ಆರ್ ಪಾಟೀಲ್, ಎಸ್ ರಫೀಕ್ ಅಹ್ಮದ್, ಎಸ್ ಎಸ್ ಮಲ್ಲಿಕಾರ್ಜುನ, ಡಿ.ಕೆ ಶಿವಕುಮಾರ್, ಆರ್ ಎಂ ಲಮಾನಿ, ಉಮೇಶ್ ಜಿ ಯಾದವ್, ಜಿ ಹಂಪಯ್ಯ, ಜಗದೀಶ್ ಪಾಟೀಲ್ ಹಾಗೂ ಮುನಿರತ್ನಂ ನಾಯ್ಡು.

ಒಟ್ಟಾರೆ ಸಚಿವ ಸಂಪುಟಕ್ಕೆ ಡಿಕೆ ಶಿವಕುಮಾರ್ ಹಾಗೂ ಲಾಡ್ ಸೋದರರ ಸೇರ್ಪಡೆ ಬಗ್ಗೆ ಎಲ್ಲೆಡೆಯಿಂದ ಅಪಸ್ವರ ಕೇಳಿ ಬಂದಿದ್ದು, ಶುಕ್ರವಾರದೊಳಗೆ ಎಲ್ಲವೂ ತೀರ್ಮಾನಗೊಳ್ಳುವ ನಿರೀಕ್ಷೆಯಿದೆ. ಅಂತಿಮ ನಿರ್ಧಾರ ಹೈಕಮಾಂಡನದ್ದು ಎಂದು ರಾಜ್ಯ ನಾಯಕರು ಹೇಳುವ ಡೈಲಾಗ್ ಮತ್ತೆ ಮತ್ತೆ ಕೇಳಿ ಬರಲಿದೆ.

English summary
As the Congress inches closer to finalising the list of MLAs for Cabinet positions, pressure is mounting on the party from various quarters to leave out elected representatives who are facing charges of corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X