ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಏನು, ಎತ್ತ?

By Srinath
|
Google Oneindia Kannada News

ಬೆಂಗಳೂರು, ಮೇ 14: ರಾಜ್ಯಪಾಲ ಡಾಕ್ಟರ್ ಹಂಸರಾಜ್ ಭಾರದ್ವಾಜ್! ಈ ಹೆಸರು ಕೇಳಿದರೇನೆ ಬಿಜೆಪಿ ಮಂದಿ ಬೆಚ್ಚಿಬೀಳುತ್ತಾರೆ. ಹಾಗಂತ ಎಲ್ಲರೂ ಅಲ್ಲ. ಆದರೆ ಒಂದು ನಿರ್ದಿಷ್ಟ ಕಾಲದಲ್ಲಿ ರಾಜ್ಯಪಾಲ ಭಾರದ್ವಾಜ್ ಮುಖಪುಟಗಳಲ್ಲಿ ರಾರಾಜಿಸುವಷ್ಟು ಸಕ್ರಿಯರಾಗಿದ್ದರು. ಅವರಿಗೂ ಮುನ್ನ ರಾಮೇಶ್ವರ್ ಠಾಕೂರ್ ಅವರು ರಾಜ್ಯಪಾಲರಾಗಿದ್ದರು. ಕರ್ನಾಟಕದ ರಾಜ್ಯಪಾಲರಾಗಿದ್ದುಕೊಂಡೂ ಕೆಲಕಾಲ ಕೇರಳ ರಾಜ್ಯಪಾಲರಾಗಿಯೂ ಆಡಳಿತ ನಡೆಸಿದರು.

ಹಂಸರಾಜ್ ಭಾರದ್ವಾಜ್ ಅವರು ಗಾಂಧಿ ಕುಟುಂಬದ ಅತ್ಯಂತ ನಿಷ್ಠಾವಂತರು. 1982ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಕೇಂದ್ರದಲ್ಲಿ ಅನೇಕ ಖಾತೆಗಳ ಸಚಿವರಾಗಿದ್ದರು.

ಪ್ರಮಾಣ ವಚನ ಸರದಾರ: ಇಂತಿಪ್ಪ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಸಾಧನೆ ಏನಪ್ಪಾ ಅಂದರೆ ಅವರು ಇದುವರೆಗೂ ಕರ್ನಾಟಕದಲ್ಲಿ ಒಟ್ಟು 4 ಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸಾಮಾನ್ಯವಾಗಿ ರಾಜ್ಯಪಾಲರಾದವರು ತಮ್ಮ ಆಡಳಿತಾವಧಿಯಲ್ಲಿ ಒಬ್ಬರು ಅಥವಾ ಇಬ್ಬರು ಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಬಹುದು. ಆದರೆ ಭಾರದ್ವಾಜರು ಸಾಲುಸಾಲಾಗಿ ನಾಲ್ಕು ಮಂದಿಗೆ ಬೋಧಿಸಿದ್ದಾರೆ. ಪಾಪಾ ಇದರಲ್ಲಿ ಅವರದೇನೂ ತಪ್ಪಿಲ್ಲ ಬಿಡಿ!

4 ಸಿಎಂಗಳಿಗೆ ಪ್ರಮಾಣ ಬೋಧಿಸಿದರು

4 ಸಿಎಂಗಳಿಗೆ ಪ್ರಮಾಣ ಬೋಧಿಸಿದರು

ಹಾಗೆ ನೋಡಿದರೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು 'ಪ್ರಮಾಣ ವಚನ ಸರದಾರ' ಅನ್ನಬಹುದು. ಲೋಕಾಯುಕ್ತರು, ಉಪಲೋಕಾಯುಕ್ತರು, ಹೈಕೋರ್ಟ್ ಮುಖ್ಯನ್ಯಾಯಾಧೀಶರುಗಳು ಹೀಗೆ ಸಾಮಾನ್ಯವಾಗಿ ರಾಜ್ಯಪಾಲರಾದವರು ತಮ್ಮ ಅವಧಿಯಲ್ಲಿ ತಲಾ ಒಬ್ಬೊಬ್ಬರಿಗೆ ಪ್ರತಿಜ್ಞಾವಿಧಿ ಬೋಧಿಸಬಹುದು. ಆದರೆ ಭಾರದ್ವಾಜರ ಪುಣ್ಯವಾ ಎಂಬಂತೆ ಎಲ್ಲ ಹುದ್ದೆಗಳಲ್ಲೂ ಒಬ್ಬರಲ್ಲ, ಇಬ್ಬರಲ್ಲ... ಎಂಬಂತೆ ಅನೇಕ ಮಂದಿಗೆ ಪ್ರಮಾಣ ಹೇಳಿಕೊಟ್ಟಿದ್ದಾರೆ.

ಬಿಎಸ್ ಯಡಿಯೂರಪ್ಪಗೆ - 2008ರ ಮೇ 8ರಂದು
ಸದಾನಂದ ಗೌಡಗೆ - 2011 ಆಗಸ್ಟ್ 4
ಜಗದೀಶ್ ಶೆಟ್ಟರಿಗೆ - 2012ರ ಜುಲೈ 12
ಸಿದ್ದರಾಮಯ್ಯಗೆ - 2013 ಮೇ 13

ಗ್ರಾಮೀಣ ವಕೀಲನ ಕಾನೂನು ತಿಳಿವಳಿಕೆ

ಗ್ರಾಮೀಣ ವಕೀಲನ ಕಾನೂನು ತಿಳಿವಳಿಕೆ

ಅರುಣ್ ಶೌರಿ ಮತ್ತು ಭಾರದ್ವಾಜ್ ನಡುವೆ ಒಮ್ಮೆ ಮಾತಿನ ಚಕಮಕಿ ನಡೆದಿತ್ತು. 'ನಿಮ್ಮ ಅಪ್ಪ ನ್ಯಾಯಾಧೀಶರಾಗಿದ್ದ ರೋಹ್ಟಕ್ ಕೋರ್ಟಿನಲ್ಲಿ ನಾನು ಲಾ ಪ್ರಾಕ್ಟೀಸ್ ಮಾಡಿರುವೆ. ಸ್ವಲ್ಪ ಮರ್ಯಾದೆ ಕೊಟ್ಟು ಮಾತನಾಡಿ' ಎಂದು ಭಾರದ್ವಾಜ್ ಅವರು ಅರುಣ್ ಶೌರಿಗೆ ಹೇಳಿದರು. ಅದಕ್ಕೆ ಶೌರಿ ನೀಡಿದ ಮಾರುತ್ತರ ಹೀಗಿತ್ತು: 'ನಿನ್ನಂತಹ ಗ್ರಾಮೀಣ ವಕೀಲನಿಗೆ ಇಷ್ಟು ಮಾತ್ರದ ಕಾನೂನು ತಿಳಿವಳಿಕೆಯಾದರೂ ಇರಬೇಕಿತ್ತು' ಎಂದು ಶೌರಿ ಝಾಡಿಸಿದ್ದರು.

ಜವಾಹರ ಲಾಲ್ ನೆಹರೂ ಅನುಯಾಯಿ

ಜವಾಹರ ಲಾಲ್ ನೆಹರೂ ಅನುಯಾಯಿ

ಹಂಸರಾಜ್ ಭಾರದ್ವಾಜ್ ಅವರ ತಂದೆ ದಿವಂಗತ ಪಂಡಿತ ಜಗನ್ ನಾಥ್ ಪ್ರಸಾದ್ ಅವರು ಪಂಡಿತ್ ಜವಾಹರ ಲಾಲ್ ನೆಹರೂ ಅವರಿಗೆ ಭದ್ರತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1960ರಲ್ಲಿ ಪ್ರಫುಲ್ಲತಾ ಅವರೊಂದಿಗೆ ಹಂಸರಾಜ್ ಭಾರದ್ವಾಜ್ ಅವರ ವಿವಾಹ ನೆರವೇರಿತು. ದಂಪತಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಹಂಸರಾಜ್ ಭಾರದ್ವಾಜರ ಪತ್ನಿ, ಪುತ್ರ ಮತ್ತು ಒಬ್ಬ ಪುತ್ರಿ ನ್ಯಾಯವಾದಿಗಳಾಗಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಸ್ಥಾಪಿಸಿದ ವಿಶೇಷ ನ್ಯಾಯಾಲಯಗಳಲ್ಲಿ ಅಂದಿನ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರ ಪರ ಬಲವಾಗಿ ವಾದ ಮಂಡಿಸಿದ್ದರು.

ಅತ್ಯಂತ ವಿವಾದಿತ ರಾಜ್ಯಪಾಲ

ಅತ್ಯಂತ ವಿವಾದಿತ ರಾಜ್ಯಪಾಲ

ಹಂಸರಾಜ್ ಭಾರದ್ವಾಜ್ ಎಂಬ ಪ್ರಥಮ ಪ್ರಜೆ ಕರ್ನಾಟಕದ 16ನೆಯ ರಾಜ್ಯಪಾಲರಾಗಿ 2009ರ ಜೂನ್ 25ರಂದು ಅಧಿಕಾರ ಸ್ವೀಕರಿಸಿದರು. ಬಿಜೆಪಿ ಆಡಳಿತ ಕಾಲದಲ್ಲಿ ಅದರಲ್ಲೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ತಡೆಹಿಡಿದಿದ್ದರು. ಮೂಸೂರು ವಿವಿ ವೈಸ್ ಛಾನ್ಸಲರ್ ವಿಜಿ ತಳವಾರ್ ಅವರ ವಿರುದ್ಧ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದರು. ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೆ ಅನುಮತಿ ನೀಡಿದ್ದ ಕಾನೂನುಪಂಡಿತ ಭಾರದ್ವಾಜ್ ಅವರ ಆದೇಶವನ್ನು ಮುಂದೆ ಹೈಕೋರ್ಟ್ ವಜಾಗೊಳಿಸಿತು.

ದೀರ್ಘ ಕಾಲದ ಕೇಂದ್ರ ಸಚಿವ

ದೀರ್ಘ ಕಾಲದ ಕೇಂದ್ರ ಸಚಿವ

ಜನನ: ಹರಿಯಾಣಾದ ರೋಹ್ಟಕ್ ಜಿಲ್ಲೆಯ ಗಡಿ ಸಾಂಪ್ಲಾ ಗ್ರಾಮದಲ್ಲಿ 1937 ಮೇ 17. ಭಾರದ್ವಾಜ್ ಮೂಲತಃ ಕಾಂಗ್ರೆಸ್ ಪಕ್ಷದವರು. ಇವರು ಯಾವುದೇ ಅಧಿಕಾರಕ್ಕೆ ಅಂಟಿಕೊಂಡರೂ ಸುದೀರ್ಘ ಕಾಲ ಅಧಿಕಾರ ಚಲಾಯಿಸುವ ಅವಕಾಶ ಇವರದಾಗಿದೆ. ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವರಾಗಿ 9 ವರ್ಷ ಸಂಪುಟ ದರ್ಜೆ ಸಚಿವರಾಗಿ 5 ವರ್ಷ ಅಧಿಕಾರದಲ್ಲಿದ್ದರು. ಅಶೋಕ್ ಕುಮಾರ್ ಸೇನ್ ನಂತರ ದೀರ್ಘ ಕಾಲ ಕೇಂದ್ರ ಸಚಿವರಾಗಿದ್ದವರು ಭಾರದ್ವಾಜ್ ಅವರೊಬ್ಬರೇ.

ಹಂಸರಾಜ್ ಅಲ್ಲ ಧ್ವಂಸರಾಜ್

ಹಂಸರಾಜ್ ಅಲ್ಲ ಧ್ವಂಸರಾಜ್

ಕೆ ಎಸ್ ಈಶ್ವರಪ್ಪ ಅವರು ಯಡಿಯೂರಪ್ಪರನ್ನು ಬೆಂಬಲಿಸಿ, ಹಂಸರಾಜ್ ಅಲ್ಲ ಧ್ವಂಸರಾಜ್ ಎಂದಿದ್ದರು.
ಸಿಎಂ ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದ ಭಾರದ್ವಾಜ್‌ರನ್ನು 'ಧ್ವಂಸರಾಜ್' ಎಂದು ರೇಣುಕಾಚಾರ್ಯ ಸಹ ಟೀಕಿಸಿದ್ದರು.
'ಬಿಜೆಪಿ ಸರಕಾರಕ್ಕೆ ಬಹುಮತವಿದ್ದರೂ, ಯಾವುದೇ ವಿವೇಚನೆಯಿಲ್ಲದೆ ವಿಧಾನಸಭೆಯನ್ನು ಅಮಾನತಿನಲ್ಲಿಡಲು ಶಿಫಾರಸು ಮಾಡಿದ ಸನ್ಮಾನ್ಯ ಹಂಸರಾಜ್ ಭಾರದ್ವಾಜ್ ಅವರು ಒಬ್ಬ ಕರ್ನಾಟಕ ದ್ರೋಹಿ' ಎಂದು ಶಾಸಕ ಸಿಟಿ ರವಿ ಅವರು ಖಂಡಿಸಿದ್ದರು.

English summary
Karnataka Assembly Election 2013 Results, Karnataka Governor Hansraj Bhardwaj profile. Dr. Hans Raj Bhardwaj was born on 17th May 1937 at Village Garhi Sampla of District Rohtak in Haryana. Dr. Bhardwaj assumed charge as Governor of Karnataka on 29th June, 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X