ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿಕ, ನಾಸ್ತಿಕರ ಮಧ್ಯೆ ಖಂಡಿತವಾದಿ ಸಿದ್ದರಾಮಯ್ಯ

By * ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

ನಾನು ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ ದೇವಸ್ಥಾನಕ್ಕೆ ಹೋಗುತ್ತೇನೆ. ಆದರೆ, ಮೂಢ ನಂಬಿಕೆಗಳಿಗೆ ಬೆಲೆ ನೀಡುವುದಿಲ್ಲ. ಜಾತ್ರೆಗಳಲ್ಲಿ ಮನಸೋ ಇಚ್ಛೆ ಕುಣಿದಿದ್ದೇನೆ. ಮೊನ್ನೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದೆ. ಆದರೆ ಅದು ಸಾರ್ವಜನಿಕ ಭಾವನೆಗೆ ನೀಡಿದ ಬೆಲೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ತಮ್ಮ ಬಗ್ಗೆ ಹಲವಾರು ಮಂದಿ ಇಲ್ಲ ಸಲ್ಲದ ಆರೋಪ ಹೊರೆಸುವುದನ್ನು ಕಂಡು ತುಸು ಕೋಪ ಹೆಚ್ಚಿಸಿಕೊಂಡಿದ್ದಾರೆ. ಆದರೆ, ನಿಧಾನವಾಗಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. ಇನ್ನೊಬ್ಬರಿಗೆ ಕೆಟ್ಟದ್ದು ಬಯಸದಿದ್ದರೆ ದೇವರು ನಮಗೆ ಒಳ್ಳೆಯದ್ದನ್ನು ಮಾಡುತ್ತಾನ, ಜನರಿದ್ದರೆ ದೇವರು, ಜನರ ಏಳಿಗೆ ಮುಖ್ಯ ಎಂಬ ನಂಬಿಕೆಯನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಸಂಪ್ರದಾಯ ಮುರಿತ: ಈ ಬಾರಿ ಸಿದ್ದರಾಮಯ್ಯ ಅವರು ಹತ್ತು ಹಲವು ಸಂಪ್ರದಾಯವನ್ನು ಮುರಿದಿದ್ದಾರೆ. ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಿ ನಿಯೋಜಿತರಾದ ಮೇಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಬರುವುದು ರೂಢಿ. ಆದರೆ, ಸಿದ್ದು ಬೆಂಗಳೂರಿನಲ್ಲೇ ನೆಲೆಸಿದ್ದರು.

ಪ್ರಮಾಣ ವಚನ ಸಮಾರಂಭ ಕೂಡಾ ಮೊದಲ ಬಾರಿಗೆ ವಿಧಾನಸೌಧ ಅಥವಾ ರಾಜಭವನ ಬಿಟ್ಟು ಬೇರೆ ಕಡೆ ನಡೆದಿದ್ದು ಕಾಕತಾಳೀಯ. ಮೆಟ್ರೋ ಕಾಮಗಾರಿ ಹಾಗೂ ಅಸಂಖ್ಯ ಅಭಿಮಾನಿಗಳ ನಿರೀಕ್ಷೆ ಇದ್ದಿದ್ದರಿಂದ ಕಂಠೀರವ ಕ್ರೀಡಾಂಗಣಕ್ಕೆ ಸಮಾರಂಭ ಶಿಫ್ಟ್ ಮಾಡಲಾಗಿತ್ತು.

Siddaramaiah rules breaker or Traditional breaker?

ಬಿಜೆಪಿ ಮುಖ್ಯಮಂತ್ರಿಗಳಂತೆ ಯಾವುದೇ ಮಠ ಮಾನ್ಯಗಳಿಗೆ ಭೇಟಿ ನೀಡದೆ ಸಾಹಿತಿಗಳ ಮನೆಗಳತ್ತ ಧಾವಿಸಿ ಹೊಸ ಸಂಪ್ರದಾಯ ಹುಟ್ಟುಹಾಕಿದರು.ಜ್ಞಾನಪೀಠ ವಿಜೇತ ಯು.ಆರ್ ಅನಂತಮೂರ್ತಿ, ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ, ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಮನೆಗೆ ಸೌಜನ್ಯ ಭೇಟಿ ನೀಡಿದರು.
[ಸಿದ್ದರಾಮಯ್ಯ ವ್ಯಕ್ತಿಚಿತ್ರ ಓದಿ]

ಅಲ್ಲದೆ ಪ್ರಮಾಣ ವಚನ ಸಮಾರಂಭಕ್ಕೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಹಂಪನಾಗರಾಜಯ್ಯ, ಕಮಲಹಂಪನಾ, ಲೀಲಾದೇವಿ ಆರ್.ಪ್ರಸಾದ್, ಪ್ರೊ.ಕಾಳೇಗೌಡ ನಾಗವಾರ, ಚಂಪ, ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಂತರ ಮೊದಲ ದಿನವೇ ಮುಖ್ಯಮಂತ್ರಿ ಕಚೇರಿಗೆ ಕಾಲಿಟ್ಟಿದ್ದಲ್ಲದೆ ಮೊದಲ ದಿನವೇ ದೀನ ದಲಿತರ ಪರ ಹಲವು ನಿರ್ಣಯಗಳನ್ನು ತೆಗೆದುಕೊಂಡರು. ಮೊದಲ ಸುದ್ದಿಗೋಷ್ಠಿಯೂ ರಸವತ್ತಾಗಿತ್ತು. ಸಿಎಂ ಸ್ಥಾನದ ಗತ್ತು ಗೈರತ್ತಿಗಿಂತ ಮಾಧ್ಯಮ ಪ್ರತಿನಿಧಿಗಳನ್ನು ಹೆಸರಿಡಿದು ಕರೆಯುತ್ತಾ ಮಿತ್ರರಂತೆ ಮಾತನಾಡಿಸುತ್ತಾ ಉಕ್ತಲೇಖನ ನೀಡುವ ರೀತಿಯಲ್ಲಿ ಸರ್ಕಾರದ ನಿರ್ಧಾರಗಳನ್ನು ಘೋಷಿಸಿದರು.

ಉಡುಪಿ ಶ್ರೀಕೃಷ್ಣ ದೇಗುಲವನ್ನು ಮುಜರಾಯಿ ಇಲಾಖೆಗೆ ಒಪ್ಪಿಸುವುದು, ಗೋಹತ್ಯೆ ನಿಷೇಧ ಕಾಯ್ದೆ ಜಾರಿ,ಲೋಕಾಯುಕ್ತ ನೇಮಕ, ಭ್ರಷ್ಟರ ವಿರುದ್ದ ಕ್ರಮ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ತಕ್ಕ ಉತ್ತರ ನೀಡಿದ ಸಿದ್ದರಾಮಯ್ಯ ಸಾಫ್ಟ್ ಮಾತಿಗೆ ಎಲ್ಲರೂ ತಲೆದೂಗಿದ್ದಾರೆ.

ದೇಗುಲ ಭೇಟಿ ಎಂದಿನಿಂದ?: 2006ರಲ್ಲಿ ಉಪಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸಿದ್ದ ಸಿದ್ದರಾಮಯ್ಯ ಅವರು ಆಗಿನ್ನು ಕಾಂಗ್ರೆಸಿಗೆ ಸೇರಿದ್ದ ಜನತಾ ಪರಿವಾರದ ಬಂಡಾಯ ನಾಯಕರಾಗಿದ್ದರು. ಬಿಜೆಪಿ -ಜೆಡಿಎಸ್ ತೆರೆ ಮೆರೆಯಲ್ಲಿ ಒಪ್ಪಂದ ಮಾಡಿಕೊಂಡು ಸಿದ್ದು ಸೋಲಿಸಲು ತಂತ್ರ ಹೂಡಿದ್ದರು. ಶಿವಬಸಪ್ಪ ಎಂಬ ಅನಾಮಧೇಯ ದೈತ್ಯ ಸಂಹಾರಿ ಪಟ್ಟ ಪಡೆಯುವ ಸಾಧ್ಯತೆಯಲ್ಲಿ ಸ್ವಲ್ಪ ಮಿಸ್ ಆಗಿತ್ತು.

ಸಿದ್ದರಾಮಯ್ಯ ಅವರು 257 ಮತಗಳಿಂದ ಗೆದ್ದು ನಿಟ್ಟುಸಿರು ಬಿಟ್ಟಿದ್ದು ದೈವಕೃಪೆಯಿಂದ ಎಂದು ಅವರ ಆಪ್ತರು ನಂಬಿಸಿಬಿಟ್ಟರು. ಈಗಲೂ ಸಿದ್ದು ದೇಗುಲದ ಚಂದನ, ತಿಲಕ ಇಟ್ಟುಕೊಳ್ಳುತ್ತಾರೆ, ಮಠಗಳಿಗೂ ತೆರಳುತ್ತಾರೆ ಆದರೆ, ಸ್ವಾಮೀಜಿಗಳಿಗೆ ಇತರೆ ಜನಸಮಾನ್ಯರಿಗೆ ನೀಡುವಂತೆ ನಮಸ್ಕಾರ ಅಷ್ಟೇ ಹೊರತು ಪಾದಮುಟ್ಟಿ ನಮಸ್ಕರಿಸಿದ ಉದಾಹರಣೆ ಸಿಕ್ಕಿಲ್ಲ.

ಇನ್ನೂ ಪ್ರಮಾಣ ವಚನ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡುವಲ್ಲಿ ಸಿದ್ದರಾಮಯ್ಯ ಅವರು ಯಾವ ರೀತಿಯಿಂದಲೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ರಾಹು ಕಾಲ ಕಳೆದು ಸೋಮವಾರ 11.45 ರಿಂದ 12.15ರ ಅಭಿಜಿನ್ ಕರ್ಕ ಲಗ್ನದಲ್ಲಿ ಶುಭ ಮುಹೂರ್ತವಿದೆ ಎಂದು ಆಪ್ತರು ಬಲವಂತಪಡಿಸಿಬಿಟ್ಟರಂತೆ.

ಅಕ್ಷಯ ತದಿಗೆ, ಬಸವ ಜಯಂತಿಯಂಥ ಶುಭ ದಿನದಂದು ಎಲ್ಲಾ ಲಗ್ನಗಳು ಶುಭವಾಗಿರುತ್ತೆ ಎಂಬುದು ಸಾಮಾನ್ಯ ಜ್ಞಾನ ಇದ್ದಿದ್ದರೆ ಒಳ್ಳೆ ಮುಹೂರ್ತಕ್ಕೆ ಕಾಯುವ ಕೆಲಸವೇ ಇರುತ್ತಿರಲಿಲ್ಲ.

ಒಟ್ಟಾರೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಬಂದ ಮೇಲೆ ಪೂಜಾರಿಗಳಿಗೆ ಕೊಂಚ ಲಾಸ್ ಆಗಿದೆ. ಮೊದಲ ದಿನ ಸಿಎಂ ಕಚೇರಿ, ಹೋಮ ಹವನ ಎಂದು ಸಿಗುತ್ತಿದ್ದ ಕಾಸು ಸಿಕ್ಕಲ್ಲಿಲ್ಲ. ಮಠ ಮಾನ್ಯಗಳು ಬೇಡಿಕೆ ಇಡದೆ ಸುಮ್ಮನೆ ಹಣ ನೀಡುವುದರಲ್ಲಿ ಅರ್ಥವಿಲ್ಲ ಎಂಬ ನಂಬಿಕೆಯುಳ್ಳ ಸಿದ್ದು, ಮಠಗಳಿಗೆ ಬಿಜೆಪಿ ಕೊಟ್ಟಿರುವ 500 ಪ್ಲಸ್ ಕೋಟಿ ರು ದೀನ ದಲಿತರ ಉದ್ಧಾರಕ್ಕೆ ಬಳಸಬಹುದಿತ್ತು ಎನ್ನುತ್ತಿದ್ದಾರೆ ಎಂದಿದ್ದಾರೆ. ಯಾರೂ ಏನೇ ಒತ್ತಡ, ಪ್ರಭಾವ ಬೀರಿದರೂ ಸಿದ್ದರಾಮಯ್ಯ ಹೊಸ ಸಂಪ್ರದಾಯದ ಹರಿಕಾರನಾಗಲು ಪಣತೊಟ್ಟಿರುವಂತಿದೆ. ಮುಂದೇನಾಗುತ್ತೋ ಕಾದು ನೋಡೋಣ...

English summary
Chief minister Siddaramaiah broke all customs and traditional way getting in to power and resuming to CM office. Siddu said he is neither a Atheist nor Theist and believe in Agnosticism. But Siddaramaiah visited Temples and taken oath only after Rahukalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X