ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವ ಜಯಂತಿ ದಿನ ಸಿಎಂ ಆಗಿ ಸಿದ್ದರಾಮಯ್ಯ

By Mahesh
|
Google Oneindia Kannada News

ಬೆಂಗಳೂರು, ಮೇ.12: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರು ಸೋಮವಾರ (ಮೇ.12) ಬೆಳಗ್ಗೆ 11 ಗಂಟೆ ನಂತರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.

ಇದರ ಜೊತೆಗೆ ಬೆಂಗಳೂರು ನಗರದಲ್ಲಿ ವಿಶೇಷವಾಗಿ ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಬಿಗಿಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಾಲ್ಕು ಸಾವಿರ ಪೊಲೀಸರು ಹಾಗೂ 30 ಕೆಎಎಸ್ ಆರ್ ಪಿ ತುಕಡಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಎಲ್ಲೆಡೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಸೇರಬಹುದು ಎಂದು ಅಂದಾಜಿದೆ. ಕಂಠೀರವ ಕ್ರೀಡಾಂಗಣವನ್ನು ಕಳೆದ ರಾತ್ರಿಯಿಂದಲೇ ಸಿಬ್ಬಂದಿ ಸ್ವಚ್ಚ ಮಾಡುತ್ತಿದ್ದು, ಈಗ ಕ್ರೀಡಾಂಗಣ ನವ ವಧುವಿನಂತೆ ಮಿರಿ ಮಿರಿ ಮಿಂಚುತ್ತಿದೆ. ಮೈದಾನದ ಸುತ್ತ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಭಾವಚಿತ್ರಗಳು, ಬಂಟಿಂಗ್ಸ್, ಫ್ಲಕ್ಸ್, ಬ್ಯಾನರ್ ಗಳು ತುಂಬಿದೆ.

Siddaramaiah to take oath as Karnataka CM on Basava Jayanthi

ಡಿಸಿಎಂ ಹುದ್ದೆ ಸೃಷ್ಟಿ: ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಸಂತಸದಿಂದ ಒಪ್ಪಿಗೆ ಸೂಚಿಸಿದ್ದಾರೆ. ಇತ್ತೀಚೆಗೆ ಬಂದಿರುವ ಗಾಳಿಸುದ್ದಿ ಪ್ರಕಾರ ಎರಡು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಗೆ ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆಯಂತೆ.

ಲಿಂಗಾಯತ ಸಮುದಾಯ ಹಾಗೂ ದಲಿತರನ್ನು ಓಲೈಸಲು ಈ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆದರೆ, ಈ ಸುದ್ದಿ ಇನ್ನೂ ಕೆಪಿಸಿಸಿ ಕಚೇರಿ ಸುತ್ತಾ ಮುತ್ತಾ ಹರಡಿದ್ದು, ಲಕೋಟೆ ಒಳಗೆ ಸೇರಿಲ್ಲ. ಅಲ್ಲದೆ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಸಾಧ್ಯವೇ ಇಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಾಖಂಡಿತವಾಗಿ ಹೇಳಿದ್ದಾರೆ ಹಾಗಾಗಿ ಇಬ್ಬರು ಡಿಸಿಎಂ ಯಾರಾಗಬಹುದು ಎಂಬ ಊಹೆ ಓದುಗರಿಗೆ ಬಿಟ್ಟಿದ್ದೇವೆ.

ಮೇ.5 ರಂದು ನಡೆದ ಚುನಾವಣೆಯ ಫಲಿತಾಂಶ ಮೇ 8 ರಂದು ಹೊರಬಿದ್ದಿತ್ತು. ಜನಾದೇಶದ ಪ್ರಕಾರ 223 ಸೀಟುಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 121 ಸೀಟುಗಳ ಬಹುಮತ ಲಭಿಸಿತ್ತು. ಸುಮಾರು 9 ವರ್ಷಗಳ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯುತ್ತಿರುವ ಸಂಭ್ರಮದಲ್ಲಿದೆ.

ವಾಹನ ನಿಲುಗಡೆ ನಿಷೇಧಿತ ಸ್ಥಳ: ಕೆಬಿ ರಸ್ತೆ, ಹಡ್ಸನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತ, ಕ್ವೀನ್ಸ್ ವೃತ್ತದ ರಸ್ತೆಯ ಎರಡು ಕಡೆ, ನೃಪತುಂಬ ರಸ್ತೆ, ಮಲ್ಯ ಆಸ್ಪತ್ರೆ ಮುಂಭಾಗದ ರಸ್ತೆಯಿಂದ ಆರ್ ಆರ್ ಎಂ ವೃತ್ತದವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ನಿಲುಗಡೆ ವ್ಯವಸ್ಥೆ: ಕಾರ್ ಪಾಸ್ ಹೊಂದಿರುವ ಅತಿ ಗಣ್ಯ ವ್ಯಕ್ತಿಗಳ ವಾಹನಗಳು ಕ್ರೀಡಾಂಗಣದ ಒಳಾಂಗಣ ಆವರಣದಲ್ಲಿ , ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆಗೆ ಸಂತ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಿರಿಯ ಅಧಿಕಾರಿಗಳ ವಾಹನಗಳು ಗೇಟ್ ನಂ.4ರಲ್ಲಿ ಪ್ರವೇಶಿಸಿ ಯುಬಿಸಿಟಿ ಪಾರ್ಕಿಂಗ್ ಲಾಟ್‌ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು ಪೊಲೀಸ್ ಇಲಾಖೆಯ ಎಲ್ಲ ರೀತಿಯ ವಾಹನಗಳಿಗೆ ಬೀರೇಶ್ವರ ದೇವಾಲಯದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಬನ್ನಪ್ಪ ಪಾರ್ಕ್, ಕಬ್ಬನ್ ಪಾರ್ಕಿನ ಒಳಭಾಗ, ಕಿಂಗ್ಸ್ ರಸ್ತೆ, ಬಾಲಭವನ ರಸ್ತೆ, ರೆಸಿಡೆನ್ಸಿರಸ್ತೆ, ಹಡ್ಸನ್ ವೃತ್ತದಿಂದ ಸೆಂಟ್ರಲ್ ಲೈಬ್ರರಿವರೆಗೆ ರಸ್ತೆಯ ಒಂದು ಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಸ್ಸುಗಳು ಹಾಗೂ ಇತರೆ ಸಾರಿಗೆ ವಾಹನಗಳ ನಿಲುಗಡೆಗೆ ಫ್ರೀಡಂಪಾರ್ಕ್ ಹಾಗೂ ಕೆಜಿ ರಸ್ತೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿಷೇಧ: ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು ಕೈ ಚೀಲಗಳು, ಕ್ಯಾಮೆರಾ, ತಿಂಡಿ ತಿನಿಸು, ನೀರು, ತಂಪು ಪಾನೀಯ ಬಾಟಲಿಗಳು, ಮನರಂಜನಾ ಪರಿಕರಗಳನ್ನು ಕ್ರೀಡಾಂಗಣದೊಳಗೆ ಒಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಎಲ್ಲಾ ಸಾರ್ವಜನಿಕರನ್ನು ಸಹ ಭದ್ರತಾ ತಪಾಸಣೆಗೊಳಪಟ್ಟ ನಂತರವೇ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದರಿಂದ ಬೆಳಗ್ಗೆ 9 ಗಂಟೆಗೆ ಕ್ರೀಡಾಂಗಣಕ್ಕೆ ಆಗಮಿಸಬೇಕೆಂದು ಕೋರಲಾಗಿದೆ. ಬೆಳಗ್ಗೆ 11.30ಕ್ಕೆ ಪ್ರಮಾಣ ವಚನ ಸ್ವೀಕಾರ ಇರುವುದರಿಂದ 10.30 ರ ನಂತರ ಬರುವ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದಿಲ್ಲ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಸಲೀಂ ತಿಳಿಸಿದ್ದಾರೆ.

English summary
Congress Legislature Party (CLP) leader, designated CM Siddaramaiah to take oath as 28th Chief Minister of Karnataka on Basava Jayanathi Day. The 64 year old leader Siddaramaiah will be sworn in at 11.40 am at the Kanteerva stadium on Monday(May.13)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X