ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖರ್ಗೆಗೆ ತಪ್ಪಿದ ಪಟ್ಟ, ಗುಲಬರ್ಗದಲ್ಲಿ ಪ್ರತಿಭಟನೆ

By Prasad
|
Google Oneindia Kannada News

Protesters torch bus missed by Kharge
ಗುಲಬರ್ಗ, ಮೇ. 11 : ಇಪ್ಪತ್ತೆಂಟನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲೇ ಕಾಂಗ್ರೆಸ್ಸಿನಲ್ಲಿ ಅಸಮಾಧಾನದ ಹೊಗೆಯೆದ್ದಿದೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ಖರ್ಗೆ ಅವರಿಗೆ ಮುಖ್ಯಮಂತ್ರಿ ಪದವಿ ತಪ್ಪಿದ್ದರಿಂದ ಕ್ರೋಧಿತರಾಗಿರುವ ಅವರ ಬೆಂಬಲಿಗರು ಖರ್ಗೆ ಅವರ ತವರು ಜಿಲ್ಲೆಯಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಖರ್ಗೆ ಅವರ ಬೆಂಬಲಿಗರು ಬೀದಿಗಿಳಿದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರ ಚಿತ್ರವಿದ್ದ ಬ್ಯಾನರನ್ನು ಸುಟ್ಟಿದ್ದಲ್ಲದೆ, ಅದನ್ನು ಕಾಲಿನಿಂದ ತುಳಿದು ದೆಹಲಿಯ ನಾಯಕರನ್ನು ವಾಚಾಮಗೋಚರವಾಗಿ ಬೈಯುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಕೆಲ ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ. ಪ್ರತಿಭಟನಾಕಾರರನ್ನು ನಿಗ್ರಹಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಅವರು ಯಾವುದೇ ಪ್ರತಿರೋಧವಿಲ್ಲದೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಖರ್ಗೆಯವರು ಹೇಳಿಕೆ ನೀಡಿದ್ದರೂ, ಅವರ ಬೆಂಬಲಿಗರು ಒಪ್ಪಲು ತಯಾರಿಲ್ಲ. ಜಿಲ್ಲೆಯಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಮೈಸೂರಿನಲ್ಲಿಯೂ ಕೆಲವೆಡೆ ಪ್ರತಿಭಟನೆ ನಡೆದಿದೆ.

ಕಾಂಗ್ರೆಸ್ ಗೆದ್ದಿರುವ 121 ಶಾಸಕರಲ್ಲಿ 17 ಶಾಸಕರು ದಲಿತರಾಗಿದ್ದು, ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ಒದಗಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಸೋಮವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬೆಳಿಗ್ಗೆ 11.50ಕ್ಕೆ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೇ ಈ ಭಿನ್ನಮತವನ್ನು ದಮನ ಮಾಡುವತ್ತ ಸಿದ್ದರಾಮಯ್ಯ ಲಕ್ಷ್ಯವಹಿಸಬೇಕಾಗಿದೆ.

ಖರ್ಗೆ ಖಡಕ್ ನುಡಿ : ಬೆಂಗಳೂರಿನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆಯವರು, ಈ ರಚಿಸುತ್ತಿರುವ ಸರಕಾರ ಕಾಂಗ್ರೆಸ್ ಸರಕಾರವಾಗಿರುತ್ತದೆಯೇ ಹೊರತು, ಸಿದ್ದರಾಮಯ್ಯ ಸರಕಾರವಾಗಿರುವುದಿಲ್ಲ ಎಂದು ಖಡಕ್ ನುಡಿಯಾಡಿದ್ದಾರೆ. ಸರಕಾರದ ಮುಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿಯೂ ಕಾಂಗ್ರೆಸ್ ನಾಯಕರ ಮೇಲಿದೆ ಎಂದು ಖರ್ಗೆ ಹೇಳಿದ್ದಾರೆ.

English summary
Supporters of Mallikarjun Kharge, who missed opportunity to become Chief Minister, have resorted to protests in Gulbarga and damaged public properties. Protesters showed anger against Sonia Gandhi and Rahul for not making Kharge the CM of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X