ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಳೆಯ ಬಿಕೆಶಿ ಗೆಲುವಿಗಾಗಿ ತುಡಿಯುತ್ತಿರುವ ಟೈಗರ್ ಬಿಬಿ

By Srinath
|
Google Oneindia Kannada News

ಬೆಂಗಳೂರು, ಮೇ 3: ಅದು ಕರ್ನಾಟಕ ರಾಜಧಾನಿಯ ಪುರಾತನ ಬಡಾವಣೆ. ಇಲ್ಲಿನ ರಾಜಕೀಯ ಗುಪ್ತಗಾಮಿನಿ. ಮೊದಮೊದಲು ಕಾಂಗ್ರೆಸ್ಸಿಗೆ ಮಣೆಹಾಕುತ್ತಿದ್ದ ಮಂದಿ ಕಾಲಾಂತರದಲ್ಲಿ ಬಿಜೆಪಿಯತ್ತ ವಾಲಿದ್ದು ಸುಳ್ಳಲ್ಲ. ಹಾಗಂತ ಅದು ಬಿಜೆಪಿಯ ಸಾಧನೆಯಲ್ಲ. ಬದಲಿಗೆ ಕಾಂಗ್ರೆಸ್ಸಿನ ಒಳಜಗಳ, ನಿರಾಸಕ್ತಿ ಕ್ಷೇತ್ರದಲ್ಲಿ ಮನೆಮಾಡಿದ್ದರಿಂದ. ಹಾಗಾದರೆ ಯಾವುದಪ್ಪಾ ಆ ಕ್ಷೇತ್ರ ಅಂದಾಗ ಮಲ್ಲೇಶ್ವರ ಎಂಬ ಜನಮೆಚ್ಚಿದ ಬಡಾವಣೆ ಗೋಚರವಾಗುತ್ತದೆ.

ಇಂತಿಪ್ಪ ಮಲ್ಲೇಶ್ವರ ಕ್ಷೇತ್ರಕ್ಕೆ ಈಗ ಪೊಲೀಸ್ ಖದರ್ ಬಂದಿದೆ. ಅದು ಕಾಂಗ್ರೆಸ್ಸಿನ ಬಿಕೆ ಶಿವರಾಂ ಅವರ ಮೂಲಕ. ಶಿವರಾಂ ನಿವೃತ್ತ ಪೊಲೀಸ್ ಅಧಿಕಾರಿ. ಅಷ್ಟು ಹೇಳಿ ಸುಮ್ಮನಾಗುವಂತಿಲ್ಲ. ಏಕೆಂದರೆ ಪೊಲೀಸ್ ಶಿವರಾಂ ಅವರ ಸಾಧನೆಗಳು ಹಾಗಿವೆ. ಹಾಗಾಗಿ ಈಗ ಶಿವರಾಂ ಅವರ ಕೈಹಿಡಿಬೇಕಿರುವುದು ಕೈ ಪಕ್ಷಕ್ಕಿಂತ ಶಿವರಾಂ ಅವರ ಆ ಪೊಲೀಸ್ ಸೇವಾ ಕೈಂಕರ್ಯವೇ.

ex cop BK Shivaram tries his luck in Malleshwaram

ಜತೆಗೆ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸೋದರ ಬಿಕೆ ಹರಿಪ್ರಸಾದ್ ಎಂಬ ಮಾತಿದೆಯಾದರೂ ಬಿಕೆ ಹರಿ, ಶಿವರಾಂ ಚುನಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಟಿಕೆಟ್ ಕೊಡಿಸಿದರೆ ಸಾಕು ಉಳಿದಿದ್ದೆಲ್ಲ ನಾನೇ ನೋಡಿಕೊಳ್ಳುವೆ ಎಂಬ ಧೋರಣೆ/ಆತ್ಮವಿಶ್ವಾಸ ಶಿವರಾಂ ಅವರಲ್ಲಿಯೂ ಇದೆ.

ಶಿವರಾಂಗೆ ಈ ಆತ್ಮವಿಶ್ವಾಸ ಎಲ್ಲಿಂದ ಬಂತು ಅಂದರೆ ಅಧಿಕಾರದಲ್ಲಿದ್ದಾಗ ಅವರು ಗಳಿಸಿರುವ ಜನಪ್ರಿಯತೆ. ಅಸಂಖ್ಯಾತ ಸಹೋದ್ಯೋಗಿಗಳಿಂದ ಹಿಡಿದು ಜನಸಾಮಾನ್ಯರು ಶಿವರಾಂಗಾಗಿ ಇಂದಿಗೂ ತುಡಿಯುತ್ತಾರೆ. ಅವರಿಗಾಗಿ ದುಡಿಯುವ ಮನಸುಗಳೂ ಇವೆ.

ಅವರಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಿರುವುದು ಟೈಗರ್ ಖ್ಯಾತಿಯ ಬಿಬಿ ಅಶೋಕ್ ಕುಮಾರ್ ಎಂಬ ಮತ್ತೊಬ್ಬ ಖಡಕ್ ಪೊಲೀಸಪ್ಪ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಬಿ ಅಶೋಕ್ ಅವರು ಗೆಳೆಯನ ಗೆಲುವು ಬಯಸಿ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಹಿರಿಯ ನಟಿ ಜಯಮಾಲಾ, ಸಿಲ್ಲಿ-ಲಲ್ಲಿ ವೈದ್ಯ ರವಿಶಂಕರ್ ಸೇರಿದಂತೆ ಅನೇಕ ನಟ-ನಟಿಯರು ಮತ್ತು ಡಿಕೆಶಿ, ಉಗ್ರಪ್ಪ, ಡಾ. ಪರಮೇಶ್ವರ್ ಅವರಂಥ ನಾಯಕರು ಶಿವರಾಂ ಅವರ ಬೆನ್ನಿಗೆ ನಿಂತಿದ್ದಾರೆ. ಅಳಿಮಯ್ಯ ವಿಜಯ್ ರಾಘವೇಂದ್ರ ಬಿಗ್ ಬಾಸ್ ಮನೆಯಲ್ಲಿ ಬೀಡುಬಿಟ್ಟಿರುವುದರಿಂದ ಪೊಲೀಸ್ ಮಾಮನ ಸೇವೆಗೆ ನಿಲ್ಲಲಾಗಿಲ್ಲ.

ಬಾಂಬು ಸ್ಫೋಟಕ್ಕೆ ಬಿಕೆಶಿ ತಣ್ಣಿರು!

ಪ್ರಶಾಂತ ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟವಾಗಿರುವುದು ಬಿಜೆಪಿಗೆ ವರವಾಗುವುದೇ ನಿಜವಾದರೆ ಹಾಲಿ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ ಅವರ ಗೆಲುವು ನಿರಾಯಾಸ ಎನ್ನಬಹುದು. ಆದರೆ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯ ಎದುರೇ ಬಾಂಬು ಸ್ಫೋಟಗೊಂಡಿದ್ದಕ್ಕೆ ತಣ್ಣೀರೆರಚಲು ಪೊಲೀಸ್ ಶಿವರಾಂ ಸರ್ವಸಜ್ಜಾಗಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದವರೇ ಆದ, ಈ ಹಿಂದೆ ಕ್ಷೇತ್ರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಎಂಆರ್ ಸೀತಾರಾಂ ಅವರ ಒಲವು ಸಂಪಾದಿಸುವಲ್ಲಿ ಶಿವರಾಂ ವಿಫಲರಾಗಿದ್ದಾರೆ ಎನ್ನಲಾಗಿದೆ. 2008ರ ಚುನಾವಣೆಯಲ್ಲಿ ತಮ್ಮ ಸೋಲಿಗೆ ಶಿವರಾಂ ಕಾರಣ ಎನ್ನುವ ಅಸಮಾಧಾನ ಸೀತಾರಾಂ ಅವರಲ್ಲಿದೆ ಎಂದು ಕಾರ್ಯಕರ್ತರು ಇಂದಿಗೂ ದೂರುತ್ತಾರೆ.

ಈ ತೊಡಕುಗಳ ನಡುವೆಯೂ ಪೊಲೀಸ್ ಅಧಿಕಾರಿಯಾಗಿ ಗಳಿಸಿದ್ದ ಹೆಸರನ್ನು ಶಿವರಾಂ ಅವರು ಪಣಕ್ಕೆ ಇಟ್ಟಿದ್ದಾರೆ. ಒಟ್ಟಿನಲ್ಲಿ, 16 ಮಂದಿ ಅಭ್ಯರ್ಥಿಗಳಿರುವ ಅಖಾಡದಲ್ಲಿ ಡಾಕ್ಟರ್ ವರ್ಸಸ್ ಪೊಲೀಸ್ ಫೈಟ್ ಜೋರಾಗಿಯೇ ಇದೆ. ಉತ್ತರಕ್ಕಾಗಿ ಮೇ 8ರವರೆಗೂ ಉಸಿರು ಬಿಗಿಹಿಡಿದು ಕಾಯಬೇಕಿದೆ.

English summary
Karnataka Assembly elections- Cong Candidate, ex Police BK Shivaram tries his luck in Malleshwaram- Bangalore. BJP sitting MLA Dr. CN Ashwath Narayan fights hard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X