ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮೇಲೆ ಸಂಕೇಶ್ವರ್ ಎಸೆದ ಅವ್ಯವಹಾರದ ಬಾಂಬ್

By Prasad
|
Google Oneindia Kannada News

Illegal money transaction between BJP leaders : Sankeshwar alleges
ಬೆಂಗಳೂರು, ಏ. 25 : ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ಉಪ ಮುಖ್ಯಮಂತ್ರಿ ಆರ್ ಅಶೋಕ್ ನಡುವೆ ಹಣದ ಅಕ್ರಮ ಚೀಟಿ ವ್ಯವಹಾರ ನಡೆದಿತ್ತು ಎಂದು ಭಾರೀ ಬಾಂಬ್ ಸಿಡಿಸಿರುವ ಕೆಜೆಪಿ ನಾಯಕ, ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ್ ಅವರು ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಯಡಿಯೂರಪ್ಪನವರಿಂದ ಹಣ ಕೇಳಿದ್ದರು ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಕುಮಾರ್ ಅವರು ಆರೋಪ ಮಾಡಿದ ಕೆಲ ದಿನಗಳಲ್ಲಿಯೇ ಕೆಜೆಪಿಯನ್ನು ಸೇರಿರುವ ಉದ್ಯಮಿ ವಿಜಯ ಸಂಕೇಶ್ವರ್ ಅವರು ಬಿಜೆಪಿಯಲ್ಲಿ ನಡೆದ ಹಣದ ಅವ್ಯವಹಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.

ಆ ಚೀಟಿಯಲ್ಲಿ, "ಅಶೋಕ್ ಅವರಿಗೆ, ಈಗಾಗಲೆ ತಮ್ಮ ಬಳಿ ಚರ್ಚಿಸಿದಂತೆ ಇವರಿಗೆ, ಅಧ್ಯಕ್ಷರು ಬಿಜೆಪಿ ಕರ್ನಾಟಕ, 5 ಕೋಟಿ ರು. ಉಳಿಕೆ ಹಣ ನೀಡುವುದು" ಎಂದು ಬರೆಯಲಾಗಿದ್ದು, ಕೆಳಗಡೆ ಸಹಿ ಇರುವುದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರದೇ ಎಂದು ಸಂಕೇಶ್ವರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದು ಕೇವಲ ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಅವ್ಯವಹಾರಗಳು ಬಿಜೆಪಿ ನಾಯಕರ ನಡುವೆ ಡಿವಿಎಸ್ ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆ. ಈ ಅವ್ಯವಹಾರಕ್ಕೆ ಯಾವುದೇ ದಾಖಲೆಗಳಿಲ್ಲ. ಒಂದು ಸುಳಿವು ಮಾತ್ರ ನೀಡಿದ್ದೇನೆ, ಉಳಿದವನ್ನೆಲ್ಲ ಕಂಡುಹಿಡಿಯಬೇಕಾದವರು ನೀವು ಎಂದು ಪತ್ರಕರ್ತರ ಮೇಲೆಯೇ ಜವಾಬ್ದಾರಿಯನ್ನು ಹೊರಿಸಿದ್ದಾರೆ.

ಈ ರೀತಿ ಆರೋಪವನ್ನು ಸಂಕೇಶ್ವರ್ ಅವರು ಮಾಡಿದ್ದಾರಾದರೂ, ಆ ಹಣ ಯಾರಿಗೆ ಸೇರಿದ್ದು, ಯಾವ ರೀತಿ ಯಾರಿಗೆ ನೀಡಲಾಗಿದೆ, ಹಣ ಎಲ್ಲಿಂದ ಬಂದಿದ್ದು, ಹಣವನ್ನು ಯಾಕೆ ನೀಡಿದ್ದು ಎಂಬ ಪ್ರಶ್ನೆಗಳಿಗೆ ಯಾವುದೇ ನಿಖರವಾದ ಉತ್ತರ ನೀಡಿಲ್ಲ. ಈ ಎಲ್ಲ ವಿವರಗಳನ್ನು ಸದಾನಂದ ಗೌಡ, ಅಶೋಕ್ ಮತ್ತು ಆಗ ರಾಜ್ಯಾಧ್ಯಕ್ಷರಾಗಿದ್ದ ಈಶ್ವರಪ್ಪನವರಿಗೆ ಕೇಳಿ ಎಂದು ನುಣುಚಿಕೊಳ್ಳುತ್ತಿದ್ದಾರೆ.

ಚುನಾವಣೆ ದಿನಾಂಕ (ಮೇ 5) ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಕೆಜೆಪಿ ನಾಯಕರು ಬಿಜೆಪಿ ನಾಯಕರ ಮೇಲೆ ಹಣದ ಅವ್ಯವಹಾರದ ನಡುವೆ ಆರೋಪಗಳನ್ನು ಹೊರಿಸುತ್ತಿದ್ದಾರೆ. ಧನಂಜಯ್ ಕುಮಾರ್ ಅವರು ಅಡ್ವಾಣಿ ವಿರುದ್ಧ ಮಾಡಿದ್ದ ಆರೋಪಕ್ಕೆ ಯಡಿಯೂರಪ್ಪನವರು ಕ್ಷಮೆ ಕೂಡ ಕೋರಿದ್ದರು. ಅಚ್ಚರಿಯೆಂಬಂತೆ, ಬಿಜೆಪಿ ನಾಯಕರು ಈ ಎಲ್ಲ ಆರೋಪಗಳಿಗೆ ಮೌನ ಉತ್ತರ ನೀಡುತ್ತಿದ್ದಾರೆ.

ಡಿವಿಎಸ್ ಪ್ರತಿಕ್ರಿಯೆ : ಸಂಕೇಶ್ವರ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿರುವ ಡಿವಿ ಸದಾನಂದ ಗೌಡ ಅವರು, ಬಿಜೆಪಿ ನಾಯಕರಿಂದ ಯಾವುದೇ ಹಣದ ದುರುಪಯೋಗ ಆಗಿಲ್ಲ. ಇದಕ್ಕೆ ಸಂಕೇಶ್ವರ್ ಅವರೇ ಸ್ಪಷ್ಟೀಕರಣ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ಮಾಜಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

English summary
KJP leader and industrialist Vijay Sankeshwar has alleged that there was illegal money transaction between DV Sadananda Gowda and R Ashok when DVS was CM of Karnataka. Sankeshwar has released a chit which mentions about this transaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X