ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವರಯೋಗಿ ಪಿ.ಬಿ.ಶ್ರೀನಿವಾಸ್ ವಿಧಿವಶ

|
Google Oneindia Kannada News

 P B Srinivas
ಚೆನ್ನೈ, ಏ.14: ಕನ್ನಡ ಚಿತ್ರರಂಗದ ಹಿರಿಯ ಹಿನ್ನಲೆ ಗಾಯಕ ಪಿ.ಬಿ.ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಚೆನ್ನೈನ ತಮ್ಮ ನಿವಾಸದಲ್ಲಿ ಸ್ವರಯೋಗಿ ಶ್ರೀನಿವಾಸ್ ಭಾನುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಎಂಟು ಭಾಷೆಗಳಲ್ಲಿ ಗಾನಸುಧೆ ಹರಿಸಿದ್ದ, ಗಾಯಕನ ಬದುಕಿನ ಗಾನ ನಿಂತು ಹೋಗಿದೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಿ.ಬಿ.ಶ್ರೀನಿವಾಸ್ (83) ಚೆನ್ನೈನ ನಿವಾಸದಲ್ಲಿ ಭಾನುವಾರ ವಿಧಿವಶರಾದರು. ಆಂಧ್ರದ ಕಾಕಿನಾಡದಲ್ಲಿ 1930ರಲ್ಲಿ ಅವರು ಜನಿಸಿದ್ದರು. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸೇರಿಂದಂತೆ ಸುಮಾರು 9 ಭಾಷೆಗಳಲ್ಲಿ 3 ಸಾವಿರಕ್ಕೂ ಅಧಿಕ ಹಾಡುಗಳಿಗೆ ತಮ್ಮ ಅದ್ಭುತ ಕಂಠದಾನ ಮಾಡಿದ್ದರು ಪಿ.ಬಿ.ಶ್ರೀನಿವಾಸ್.

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕಳೆದವಾರವಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಚೆನ್ನೈನ ಸಿಐಟಿ ನಗರದಲ್ಲಿರುವ ಸ್ವಗೃಹಕ್ಕೆ ಕರೆತರಲಾಗಿತ್ತು. ಇಂದು ಮಧ್ಯಾಹ್ನ 1 ಗಂಟೆಗೆ ಚೆನ್ನೈನ ಮನೆಯಲ್ಲಿ ಸ್ನಾನ ಮುಗಿಸಿ, ಹೊರ ಬಂದ ಶ್ರೀನಿವಾಸ್ ಅವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದರು. ನಂತರ ಅವರನ್ನು ಪರೀಕ್ಷಿಸಿದಾಗ ಅವರ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಿವಾಸ್ ಅವರ ಪುತ್ರ ನಂದ ಕಿಶೋರ್ ತಂದೆ ಅವರ ಪಾರ್ಥೀವ ಶರೀರವನ್ನು ಇಂದು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ. ನಾಳೆ ಚೆನ್ನೈನಲ್ಲಿಯೇ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಿ.ಬಿ.ಶ್ರೀನಿವಾಸ್ ಅವರ ಪೂರ್ಣ ಹೆಸರು ಪ್ರತಿವಾದಿ ಭಯಂಕರ ಶ್ರೀನಿವಾಸ್. ಇದು ಅವರ ಮನೆತನದ ಹೆಸರಾಗಿತ್ತು. ಪಿ.ಬಿ.ಶ್ರೀನಿವಾಸ್ ಎಂದರೆ ಡಾ.ರಾಜ್ ಕುಮಾರ್ ಅವರ ಧ್ವನಿ ಎಂದೇ ಖ್ಯಾತಿ ಗಳಿಸಿದ್ದರು. ಗಂಧದ ಗುಡಿ ಚಿತ್ರದ ನಾವಾಡುವ ನುಡಿಯೇ ಕನ್ನಡನುಡಿ, ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಬಂಗಾರದ ಮನುಷ್ಯ ಚಿತ್ರದ ನಗು ನಗುತ ನಲಿ ನಲಿ ಮುಂತಾದ ಗೀತೆಗಳು ಕನ್ನಡದ ಮಟ್ಟಿಗೆ ಇಂದಿಗೂ ಪ್ರಸ್ತುತವಾಗಿರಲು ಶ್ರೀನಿವಾಸ್ ಅವರ ಮಧುರ ಕಂಠವೇ ಕಾರಣ.

ಕನ್ನಡದ ಜಾತಕಫಲ ಚಿತ್ರದ ಗೀತೆಯನ್ನು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪಾದರ್ಪಣೆ ಮಾಡಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಪಿ.ಬಿ.ಶ್ರೀನಿವಾಸ್ ಸದಾ ಪೇಟ ಧರಿಸಿರುತ್ತಿದ್ದರು. ಅವರ ಜೇಬಿನಲ್ಲಿ ಹತ್ತಕ್ಕಿಂತ ಹೆಚ್ಚು ಪೆನ್ನುಗಳನ್ನು ಇಟ್ಟುಕೊಂಡಿರುತ್ತಿದ್ದರು. ವೇದಿಕೆಯ ಸಮಾರಂಭದಲ್ಲಿ ಹಾಡನ್ನು ರಚಿಸಿ, ಹಾಡುವಷ್ಟು ಪ್ರತಿಭಾವಂತರಾಗಿದ್ದರು.

ಕನ್ನಡದ ವರನಟ ಡಾ.ರಾಜ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಡಾ.ರಾಜಕುಮಾರ್ ಸ್ವತ: ಹಾಡಲು ಪ್ರಾರಂಭಿಸುವವರೆಗೆ , ಅವರ ಎಲ್ಲಾ ಚಿತ್ರಗಳಿಗೂ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದರು. ರಾಜ್ ಕುಮಾರ್ ಅವರಿಗೆ ಹಿನ್ನೆಲೆ ಗಾಯಕರಾಗಿ ಇನ್ನೂರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಪಿ.ಬಿ.ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ.

ಗಣ್ಯರ ಕಂಬನಿ : ಹಿನ್ನಲೆ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಿರ್ಮಾಪಕ, ನಟ, ದ್ವಾರಕೀಶ್, ಹಿರಿಯ ನಟ ಶಿವರಾಂ, ಶ್ರೀನಾಥ್, ಹಿರಿಯ ನಟಿ ಲೀಲಾವತಿ ಮುಂತಾವರು ಕಂಬನಿ ಮಿಡಿದಿದ್ದು, ಪಿಬಿಎಸ್ ಅವರು ಆತ್ಮಕ್ಕೆ ಶಾಂತಿ ಕೋರಿದ್ದಾರೆ.

English summary
Veteran South Indian play back singer P B Srinivas no more. He was 82. PBS breathed his last in his Chennai home. He has sung over 3000 songs including 200 songs in Kannada for Dr. Raj kumar alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X