ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಿತಾ ಬಿಎಸ್ಆರ್ ಕಾಂಗ್ರೆಸ್ ತೊರೆಯುತ್ತಿರುವುದೇತಕ್ಕೆ?

By Prasad
|
Google Oneindia Kannada News

Why Rakshita decided to quit BSR Congress
ಬೆಂಗಳೂರು, ಏ. 12 : ಭಾರೀ ಮಹತ್ವಾಕಾಂಕ್ಷೆಯೊಂದಿಗೆ ಶ್ರೀರಾಮುಲು ಅವರ ಬಡವ ಶ್ರಮಿಕ ರೈತ (ಬಿಎಸ್ಆರ್) ಕಾಂಗ್ರೆಸ್ ಪಕ್ಷ ಸೇರಿದ್ದ ಖ್ಯಾತ ಚಿತ್ರನಟಿ ರಕ್ಷಿತಾ ಪ್ರೇಮ್ ಅವರು ಪಕ್ಷ ತೊರೆಯುವುದು ಮಾತ್ರವಲ್ಲ ರಾಜಕೀಯ ಸನ್ಯಾಸ ತೆಗೆದುಕೊಳ್ಳಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ, ಈಗ ಅಸಲಿ ಸಂಗತಿ ಬಹಿರಂಗವಾಗಿದೆ.

ಬಿಎಸ್ಆರ್ ಕಾಂಗ್ರೆಸ್ ಟಿಕೆಟ್‌ನಿಂದ ಚಾಮರಾಜನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ ರಕ್ಷಿತಾ, ಸಂಪೂರ್ಣ ದಿಕ್ಕನ್ನೇ ಬದಲಾಯಿಸಿದ್ದು ಭಾರತೀಯ ಜನತಾ ಪಕ್ಷದ ಟಿಕೆಟ್‌ನಿಂದ, ಕಳೆದ ಬಾರಿ ಶೋಭಾ ಕರಂದ್ಲಾಜೆ ಸ್ಪರ್ಧಿಸಿ ಗೆದ್ದಿದ್ದ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಬಿಎಸ್ಆರ್ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿಯಾಗಿದ್ದ ರಕ್ಷಿತಾ ಅವರು ಪಕ್ಷದಿಂದ ಹೊರಬೀಳುವುದು ಹೆಚ್ಚೂಕಡಿಮೆ ಖಚಿತವಾಗಿರುವುದರಿಂದ, ಕೆಲ ದಿನಗಳ ಹಿಂದೆ ಪೂಜಾಗಾಂಧಿ ಮತ್ತು ಬಿಗ್ ಬಾಸ್‌ನಿಂದ ಓಡಿಸಲ್ಪಟ್ಟಿರುವ ಜಯಲಕ್ಷ್ಮೀ ಅವರನ್ನು ಸೇರಿಸಿಕೊಂಡಿರುವ ಬಿಎಸ್ಆರ್ ಕಾಂಗ್ರೆಸ್ ಒಂದು ಮಟ್ಟಿನ 'ತೂಕ' ಕಳೆದುಕೊಳ್ಳುವುದಂತೂ ಖಚಿತ.

ಜನಪ್ರಿಯ ನಟಿಯಾಗಿದ್ದ ರಕ್ಷಿತಾರನ್ನು ಸೆಳೆಯಲು ಅನ್ಯ ಪಕ್ಷಗಳು ಯತ್ನಿಸುತ್ತಿದ್ದುದು ಇದು ಮೊದಲೇನಲ್ಲ. ಕೆಲ ತಿಂಗಳುಗಳಿಂದ ಈ ಪ್ರಕ್ರಿಯೆ ಜಾರಿಯಲ್ಲಿತ್ತು. ಈಗ ರಕ್ಷಿತಾ ಅವರು ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿರುವುದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

ಬಿಎಸ್ಆರ್ ಕಾಂಗ್ರೆಸ್ ತೊರೆಯಲು ಪ್ರಮುಖ ಕಾರಣವೆಂದರೆ, ಚಾಮರಾಜನಗರದಿಂದ ಸ್ಪರ್ಧಿಸಬೇಕಿದ್ದರೆ 'ಫಂಡ್' ಒದಗಿಸಬೇಕು ಎಂದು ರಕ್ಷಿತಾ ಇಟ್ಟಿದ್ದ ಬೇಡಿಕೆಯನ್ನು ಪಕ್ಷದ ಹಿರಿಯ ನಾಯಕರು ನಿರಾಕರಿಸಿದ್ದರು. ಬೇಕಿದ್ದರೆ ಉಳಿದ ಪ್ರದೇಶಗಳಲ್ಲಿ ನಡೆಸುವ ಪ್ರಚಾರಕ್ಕೆ ಹಣ ಒದಗಿಸುವ ವಾಗ್ದಾನ ನೀಡಲಾಗಿತ್ತು. ರಕ್ಷಿತಾ ಮುನಿಸಿಕೊಳ್ಳಲು ಇಷ್ಟು ಸಾಕಾಗಿತ್ತು.

ಇದೇ ಸಂದರ್ಭದಲ್ಲಿ ರಕ್ಷಿತಾ ಜೊತೆ ಬಿಜೆಪಿಯ ಅಶೋಕ್ ಅವರ ಮಾತುಕತೆಗಳು ನಡೆದಿವೆ. ಯಶವಂತಪುರದಲ್ಲಿ ಸ್ಪರ್ಧಿಸುವುದಾದರೆ ಪ್ರಚಾರದ ಸಂಪೂರ್ಣ ಖರ್ಚುವೆಚ್ಚವನ್ನು ಬಿಜೆಪಿ ನಾಯಕರೇ ಭರಿಸುವುದಾಗಿ ಮಾತು ಕೊಟ್ಟಿದ್ದರಿಂದ ರಕ್ಷಿತಾ ಪಕ್ಷಾಂತರ ಮಾಡಲು ನಿರ್ಧರಿಸಿದ್ದಾರೆ. ವೈದ್ಯರು ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ!

ಶೋಭಾ ಕರಂದ್ಲಾಜೆಯವರ ಪಕ್ಷಾಂತರದಿಂದ ತೆರವಾಗಿದ್ದ ಯಶವಂತಪುರ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂಬ ಜಿಜ್ಞಾಸೆಯಲ್ಲಿ ಬಿಜೆಪಿ ತೊಡಗಿತ್ತು. ಅದಕ್ಕೆ ಉತ್ತರ ರಕ್ಷಿತಾ ರೂಪದಲ್ಲಿ ಸಿಕ್ಕಂತಾಗಿದೆ. ಯಶವಂತಪುರದಲ್ಲಿ ಗೌಡರ ದರ್ಬಾರು ಜೋರಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ, ಕಳೆದ ಬಾರಿ ಕೇವಲ 1 ಸಾವಿರ ಮತಗಳಿಂದ ಸೋತಿದ್ದ ಸೋಮಶೇಖರ ಗೌಡ ಸ್ಪರ್ಧಿಸುತ್ತಿದ್ದರೆ, ಬಿಎಸ್ಆರ್ ಕಾಂಗ್ರೆಸ್‌ನಿಂದ ಲೋಕೇಶ್ ಗೌಡ ಮತ್ತು ಜವರಾಯ ಗೌಡ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ.

ಬಿಜೆಪಿಯ ಆಫರನ್ನು ರಕ್ಷಿತಾ ಖಂಡಿತ ತಿರಸ್ಕರಿಸುವುದಿಲ್ಲ ಎಂಬುದು ರಾಜಕೀಯ ಪಂಡಿತರು ಹೇಳುತ್ತಿರುವ ಖಚಿತ ಮಾತು. ಅಷ್ಟಕ್ಕೂ ರಕ್ಷಿತಾ ಬಿಎಸ್ಆರ್ ಕಾಂಗ್ರೆಸ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ರಾಯಚೂರಿನಿಂದ ಸ್ಪರ್ಧಿಸುತ್ತಿರುವ ಪೂಜಾಗಾಂಧಿ ಅವರು ಬಳ್ಳಾರಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದಾಗ ರಕ್ಷಿತಾ ಅಸುರಕ್ಷಿತರಂತೆ ಕಂಡುಬಂದಿದ್ದರು, ಅವರು ಬಳ್ಳಾರಿ ಬಿಸಿಲಿಗೆ ಬಾಡಿಹೋದವರಂತೆ ಕಾಣುತ್ತಿದ್ದರು.

English summary
Kannada movie actress Rakshita Prem is almost certain to quit BSR Congress and join BJP. It is learnt that Rakshita had asked for fund to contest from Chamaraja Nagar constituency. But, which was denied. Rakshita may contest from Yeshwanthpur from BJP ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X