ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದರಾಜನಗರ ರಾಜ ಸೋಮಣ್ಣ ಬಿಜೆಪಿಗೇ ಅಂಕಿತ

By Srinath
|
Google Oneindia Kannada News

somanna-decides-to-stay-in-bjp-contest-govindaraj-nagar
ಬೆಂಗಳೂರು, ಮಾ. 30: ಗುರುವಾರ ರಾತ್ರಿ ಜನಾರ್ಧನ ಹೋಟೆಲಿನಲ್ಲಿ ಕುಮಾರಣ್ಣನ ಜತೆ ಸೈಲೆಂಟಾಗಿ ಮಸಾಲೆ ದೋಸೆ ತಿಂದುಬಂದಿದ್ದ ಸೋಮಣ್ಣ 'ದೋಸೆ ತುಂಬಾ ಸೀದು ಹೋಗಿದೆ' ಎಂದು ಸಬೂಬು ಹೇಳಿ, ಕುಮಾರಣ್ಣ ಜತೆ ಇನ್ನು ದೋಸೆ ತಿನ್ನೋಕೂ ಹೋಗೊಲ್ಲ. ಕಾಪಿ ಕುಡಿಯೋಕೂ ಹೋಗೊಲ್ಲ ಎಂದು ಪ್ರತಿಜ್ಞೆ ಮಾಡಿದಂತಿದೆ.

ಇದೇ ವೇಳೆ, ಹನೂರಿನ ತಾಯಿ ಪರಿಮಳಾ ಅವರು ದೂರವಾಣಿಯಲ್ಲಿ ಹರಿಸಿದ ಕಣ್ಣಿರ ಕೋಡಿಗೆ ಕರಗಿ ನೀರಾದ ಸೋಮಣ್ಣ 'ಇಲ್ಲಮ್ಮಾ, ಖಂಡಿತಾ ನಾಗಪ್ಪನಂತಹ ಸಜ್ಜನನಿಗೆ ಅನ್ಯಾಯ ಮಾಡೋಲ್ಲ. ಖುದ್ದು ಯಡಿಯೂರಪ್ಪನೇ ನನ್ನ ಮನೆ ಬಾಗಿಲಿಗೆ ಬಂದು 'ಹನೂರಿನಿಂದ ಸ್ಪರ್ಧಿಸು' ಎಂದು ರಾಜಾಜ್ಞೆ ಮಾಡಿದರೂ ನಾನು ಮಾತ್ರ ಖಂಡಿತಾ ನಿಮಗೆ ಅನ್ಯಾಯವಾಗುವಂತೆ ಹನೂರಿನಿಂದ ಸ್ಪರ್ಧಿಸೋಲ್ಲ' ಎಂದು ಅಭಯ ನೀಡಿರುವ ಬೆನ್ನಿಗೇ...

ನನ್ನ ಜಾಯಮಾನಕ್ಕೆ ಜೆಡಿಎಸ್ಸೂ ಆಗಿಬರೋಲ್ಲ, ನನ್ನ ಜಾತಕಕ್ಕೆ ಕೆಜೆಪಿನೂ ಆಗಿಬರೋಲ್ಲ. ಹಾಗಾಗಿ ಜ್ಯೋತಿಷಿಗಳು ಹೇಳಿದಂತೆ (ಪ್ರಹ್ಲಾದ) ಜೋಷಿ ಮನೆಯಲ್ಲೇ ಠಿಕಾಣಿ ಮುಂದುವರಿಸುವೆ ಎಂದು ಘಂಟಾಘೋಷವಾಗಿ ಘೋಷಿಸಿದ್ದಾರೆ ವಿಜಯನಗರದ ವೀರಪುತ್ರ ಸೋಮಣ್ಣ.

ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಹಾಕಿದ್ದ ಕಾಳಿಗೆ ಮತ್ತೊಬ್ಬ ಸಚಿವ ಉಮೇಶ್ ಕತ್ತಿ ಬಲಿಯಾಗಿದ್ದ ಮಾದರಿಯಲ್ಲೇ, ಸ್ವಕ್ಷೇತ್ರದಲ್ಲಿ ಶುಕ್ರವಾರ ಬೆಳಗಿನ ವಾಯುವಿಹಾರದಲ್ಲಿ ಜೋಲಿ ತಪ್ಪಿ ತಪ್ಪು (ರಾಜಕೀಯ) ಹೆಜ್ಜೆ ಹಾಕುತ್ತಿದ್ದ ಸೋಮಣ್ಣ ಅವರು ಅದೇ ಸಿಎಂ ಜಗದೀಶ್ ಶೆಟ್ಟರ್ ಅವರ (ಮೊಬೈಲ್) ಕಾಲಿಗೆ ಬಲಿಯಾಗಿದ್ದಾರೆ ಎಂದು ಬಿಜೆಪಿ ಪಕ್ಷದ ಆಂತರಿಕ ಮೂಲಗಳು ಪಿಸುಗುಟ್ಟಿವೆ.

ಸದ್ಯ ಗೋವಿಂದರಾಜನಗರ ಸಿಕ್ಕಿತಲ್ಲಾ!:
ಇದೇ ಕಾಲಕ್ಕೆ ತಮ್ಮ ವಿಜಯನಗರ ಸಾಮ್ರಾಜ್ಯವನ್ನು ಪ್ರಿಯಾಕೃಷ್ಣ ಎಂಬ ಪ್ರಿನ್ಸ್ ತನ್ನ ಕಬ್ಜಾಗೆ ತೆಗೆದುಕೊಂಡುಬಿಟ್ಟಿರುವುದರಿಂದ ಅಲ್ಲೇ ಪಕ್ಕದಲ್ಲೇ ಇರುವ ಗೋವಿಂದರಾಜನಗರದಲ್ಲಿ ಸೆಟಲ್ ಆಗುವುದಾಗಿಯೂ, ಹಿಂದಿನ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಾಗಿಯೂ ವೀರಪುತ್ರ ಸೋಮಣ್ಣ ಪ್ರಮಾಣಪೂರ್ವಕವಾಗಿ ಹೇಳಿಬಿಟ್ಟಿದ್ದಾರೆ.

ಅಲ್ಲಿಗೆ ವಿ ಸೋಮಣ್ಣ ಎಂಬ ವಸತಿ ಸಚಿವರು ಬಿಜೆಪಿಯಲ್ಲೇ ಮುಂದವರಿಯುವುದು ನಿಕ್ಕಿಯಾಗಿದ್ದು, ಈ ಬಗ್ಗೆ ಯಡಿಯೂರಪ್ಪ ಆಗಲಿ ಅಥವಾ ಮತ್ಯಾರೇ ಆಗಲಿ ತಮ್ಮ ಬಗ್ಗೆ ಅನ್ಯಥಾ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವುದು ಬೇಡ ಎಂದು ಸೋಮಣ್ಣ ಮಾರುತ್ತರ ಬರೆದು ಕಳಿಸಿದ್ದಾರೆ.

ಜತೆಗೆ, ಸೋಮವಾರ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮಿ ಅವರ 106ನೆಯ ಜನ್ಮದಿನದಂದು ತುಮಕೂರಿನಲ್ಲಿ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಸೀದಾ ಗೋವಿಂದ ರಾಜನಗರಕ್ಕೆ ವಾಪಸಾಗಿ ಮನೆ ಮನೆಗೂ ಮತಯಾಚನೆಗೆ ತೆರಳುವೆ ಎಂದೂ 'ಗೋವಿಂದರಾಜ ನಗರದ ರಾಜ' ಸೋಮಣ್ಣ ಅವರು ಅಧಿಕೃತವಾಗಿ ಪ್ರಕಟಿದ್ದಾರೆ.

English summary
Karnataka Assembly Election- BJP Minister V Somanna decides to stay in BJP - Contest from Govindaraj Nagar. After dillydollying between JDS and KJP Somanna sticks to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X