ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ವೇಜ್ ಮುಷರ್ರಫ್ ಮೇಲೆ ಪಾದರಕ್ಷೆ ಎಸೆತ

By Prasad
|
Google Oneindia Kannada News

Shoe hurled at Parvez Musharraf
ಕರಾಚಿ, ಮಾ. 29 : ಪ್ರಾಣವನ್ನು ಒತ್ತೆಯಿಟ್ಟಾದರೂ ಸರಿ ಪಾಕಿಸ್ತಾನವನ್ನು ಕಾಪಾಡಲು ಪಾಕಿಸ್ತಾನಕ್ಕೆ ಬಂದಿದ್ದೇನೆ ಎಂದು ಘೋಷಣೆ ಮಾಡಿದ್ದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಪಾದರಕ್ಷೆ ಎಸೆದ ಘಟನೆ ಶುಕ್ರವಾರ ಕರಾಚಿಯಲ್ಲಿ ನಡೆದಿದೆ.

ಅವರ ವಿರುದ್ಧ ಹೂಡಲಾಗಿರುವ ಕೇಸುಗಳ ವಿಚಾರಣೆಗೆಂದು ಸಿಂಧ್ ಹೈಕೋರ್ಟಿಗೆ ಹಾಜರಾಗಿ ಮರಳುತ್ತಿದ್ದಾಗ 69 ವರ್ಷದ ಮುಷರ್ರಫ್ ಮೇಲೆ ಅಪರಿಚಿತ ವ್ಯಕ್ತಿ ಶೂ ಎಸೆದಿದ್ದಾನೆ. ಮುಷರ್ರಫ್ ಅವರು ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮದವರಿಂದ ಸುತ್ತುವರಿದಿದ್ದರಿಂದ ಪಾದರಕ್ಷೆ ಅವರಿಗೆ ಬೀಳದೆ ಕೆಲವು ಅಡಿ ದೂರದಲ್ಲಿ ಬಿದ್ದಿದೆ.

ನಾಲ್ಕು ವರ್ಷಗಳ ಕಾಲ ದೇಶದಿಂದ ಹೊರಗಿದ್ದ ಮುಷರ್ರಫ್ ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಮರಳಿದ್ದರು. ಅವರ ವಿರುದ್ಧ ಹೂಡಲಾಗಿರುವ ಪ್ರಕರಣಗಳಲ್ಲಿ 15 ದಿನಗಳ ಜಾಮೀನಿ ವಿಸ್ತರಣೆ ಪಡೆದು ಹೊರಬರುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಸಂದರ್ಭದಲ್ಲಿ ಕೆಲ ವಕೀಲರು ಮುಷರ್ರಫ್ ಮೇಲೆ ಧಿಕ್ಕಾರ ಕೂಗಲು ಆರಂಭಿಸಿದ್ದಾರೆ. ಆಗ ಮುಷರ್ರಫ್ ಬೆಂಬಲಿಗರು ಮತ್ತು ವಕೀಲರ ನಡುವೆ ಬಿಸಿಬಿಸಿ ವಾಗ್ಯುದ್ಧ ನಡೆದಿದೆ. ಭದ್ರತಾ ಸಿಬ್ಬಂದಿ ಮುಷರ್ರಫ್‌ರನ್ನು ಸುತ್ತುವರಿದು ಕೋರ್ಟಿಂದ ಹೊರಗೆ ಸುರಕ್ಷಿತವಾಗಿ ಕರೆದುಕೊಂಡು ಹೋದರು.

ಪರ್ವೇಜ್ ಮುಷರ್ರಫ್ ಮೇಲೆ ಚಪ್ಪಲಿ ಎಸೆತವಾಗಿದ್ದು ಇದು ಮೊದಲೇನಲ್ಲ. 2011ರಲ್ಲಿ ಬ್ರಿಟನ್ನಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯಲು ಯತ್ನಿಸಿದ್ದ.

ಪಾದರಕ್ಷೆ ಎಸೆತ ಕಂಡ ಗಣ್ಯಾತಿಗಣ್ಯರ ಪಾಲಿಗೆ ಮುಷರ್ರಫ್ ಕೂಡ ಸೇರ್ಪಡೆಯಾದಂತಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಕಾಂಗ್ರೆಸ್ ಧುರೀಣ ಪಿ ಚಿದಂಬರಂ, ಪ್ರಧಾನಿ ಮನಮೋಹನ ಸಿಂಗ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಸತಿ ಸಚಿವ ವಿ ಸೋಮಣ್ಣ, ಉದ್ಯಮಿ ನವೀನ್ ಜಿಂದಾಲ್, ಕಾಮನ್ವೆಲ್ತ್ ಹಗರಣದ ಆರೋಪಿ ಸುರೇಶ್ ಕಲ್ಮಾಡಿ, ಅರವಿಂದ್ ಕೇಜ್ಲಿವಾಲ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮೇಲೂ ಚಪ್ಪಲಿ ಎಸೆಯಲಾಗಿದೆ.

ತಮಾಷೆಯ ಸಂಗತಿಯೆಂದರೆ, 2009 ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಪ್ಪಲಿ ಎಸೆತ ಕಂಡ ಎಲ್ಲ ರಾಜಕಾರಣಿಗಳು ವಿಜೇತರಾಗಿದ್ದರು. ಇಂಥವರ ಮೇಲೆಲ್ಲ ಎಸೆಯಲಾಗಿರುವ ಚಪ್ಪಲಿಗಳನ್ನೆಲ್ಲ ಸಂಗ್ರಹಿಸಿ ಒಂದು ಮ್ಯೂಸಿಯಂ ಮಾಡಿದರೆ ಹೇಗೆ ಎಂಬ ತಮಾಷೆಯ ಮಾತು ಕೂಡ ಆ ಸಂದರ್ಭದಲ್ಲಿ ಕೇಳಿಬಂದಿತ್ತು. ಹಾಗಿದ್ರೆ, ಮುಂದಿನ ಚುನಾವಣೆಯಲ್ಲಿ ಪರ್ವೇಜ್ ಮುಷರ್ರಫ್ ಕೂಡ ವಿಜೇತರಾಗ್ತಾರಾ?

English summary
An unidentified person has hurled shoe at former President of Pakistan Pervez Musharraf, who returned to Pakistan from Britain after 4 years of exile. Shoe was hurled at him when he was coming out of Sindh High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X