ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಪ್ರಕಾರ ಭ್ರಷ್ಟವಿರೋಧಿ ಪಕ್ಷ ಯಾವುದು?

By Prasad
|
Google Oneindia Kannada News

ಈ ಬಾರಿ ಯಾವ ಪಕ್ಷ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದೆ? ಯಾರು ಮುಖ್ಯಮಂತ್ರಿ ಪಟ್ಟದ ಮೇಲೆ ವಿರಾಜಮಾನರಾಗಲಿದ್ದಾರೆ? ಮತದಾರರು ಎಂಥ ಪಕ್ಷಕ್ಕೆ ಮತಹಾಕಲಿದ್ದಾರೆ? ಮತದಾರರು ಅಪ್ಪ ನೆಟ್ಟ ಆಲದಮರಕ್ಕೇ ಜೋತುಬೀಳಲಿದ್ದಾರಾ ಅಥವಾ ಇಂದಿನ ಪೀಳಿಗೆಯ ಬುದ್ಧಿವಂತ ಮತದಾರರು ಹೊಸ ಟ್ರೆಂಡನ್ನು ಹುಟ್ಟುಹಾಕಲಿದ್ದಾರಾ?

ಈ ಪ್ರಶ್ನೆಗಳಿಗೆ ಆ ಭಗವಂತ ಕೂಡ ಸರಿಯಾಗಿ ಉತ್ತರ ನೀಡಲಾರ. ಸದ್ಯಕ್ಕಂತೂ ನೂರೆಂಟು ಆಮಿಷಗಳನ್ನು ಒಡ್ಡಿಕೊಂಡು, ಗರಿಗರಿ ಬಿಳಿಯುಡುಪು ಧರಿಸಿಕೊಂಡು ರಾಜಕಾರಣಿಗಳು ಮನೆಬಾಗಿಲನ್ನು ತಟ್ಟಲಿದ್ದಾರೆ, ಮತದಾರರ ಮುಂದೆ ಜೋಳಿಗೆಯೊಡ್ಡಲಿದ್ದಾರೆ.

ರಾಜಕಾರಣಿಗಳು ನೀಡುವ ನಾನಾಬಗೆಯ ಆಮಿಷಗಳಿಗೆ ಬಲಿಯಾಗುವ ಪ್ರಜ್ಞಾಹೀನ ಮತದಾರರು ಎಲ್ಲೆಡೆ ಇದ್ದಾರಾದರೂ, ರಾಜ್ಯವನ್ನು ಸಮರ್ಥವಾಗಿ ಮುನ್ನೆಡುವಂಥ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಜ್ಞಾವಂತ ಮತದಾರರೂ ಸಾಕಷ್ಟಿದ್ದಾರೆ. ಯಾರು ಭ್ರಷ್ಟ, ಯಾರು ತಕ್ಕ ವ್ಯಕ್ತಿ ಎಂದು ಅಳೆದುತೂಗುವಷ್ಟು ತಿಳಿವಳಿಕೆಯನ್ನು ಪ್ರಜೆಗಳು ಬೆಳೆಸಿಕೊಂಡಿದ್ದಾರೆ.

ನಮ್ಮ ಮತದಾರರು ಯಾವ ದಿಕ್ಕಿನಲ್ಲಿ ಯೋಚಿಸುತ್ತಿದ್ದಾರೆ ಎಂದು ತಿಳಿಯುವ ಕುತೂಲಹದಿಂದ ಎರಡು ಬಗೆಯ ಪ್ರಶ್ನೆಗಳನ್ನು ನಮ್ಮ ವೆಬ್ ತಾಣದಲ್ಲಿ ಕೇಳಲಾಗಿತ್ತು.

Which party is anti-corruption

ಒಂದು, ಚುನಾವಣೆ ದಿನಾಂಕ ಪ್ರಕಟ. ನಿಮ್ಮ ಮತ ಯಾರಿಗೆ? ಅದಕ್ಕಿದ್ದ ಆಯ್ಕೆಗಳು : 1) ಗೆಲ್ಲು ಪಕ್ಷಕ್ಕೆ, 2) ಭ್ರಷ್ಟವಿರೋಧಿ ಪಕ್ಷಕ್ಕೆ, ಮತ್ತು 3) ಈಗ್ಲೆ ಹೇಳಲ್ಲ.

ಎರಡು, ನಿಮ್ಮ ಪ್ರಕಾರ ಭ್ರಷ್ಟವಿರೋಧಿ ಪಕ್ಷ ಯಾವುದು? ಅದಕ್ಕಿದ್ದ ಆಯ್ಕೆಗಳು : 1) ಬಿಜೆಪಿ, 2) ಕಾಂಗ್ರೆಸ್, 3) ಜೆಡಿಎಸ್, 4) ಕೆಜೆಪಿ ಮತ್ತು 5) ಲೋಕಸತ್ತಾ.

ಮೊದಲು ಕೇಳಿದ ಪ್ರಶ್ನೆಗೆ ಸಹಜವಾಗಿ ಭ್ರಷ್ಟವಿರೋಧಿ ಪಕ್ಷಕ್ಕೆ ಆಯ್ಕೆಗೆ ಹೆಚ್ಚು ಮತ ನೀಡಿ ತಾವು ಎಂಥ ಮತದಾರರು, ತಮ್ಮ ಚಿಂತನೆ ಎಂತಹುದು ಎಂಬುದನ್ನು ಮತದಾರರು ತೋರಿಸಿಕೊಟ್ಟಿದ್ದಾರೆ. ಭ್ರಷ್ಟಾಚಾರದಿಂದ ರೋಸಿಹೋಗಿರುವ ಜನರು ಭ್ರಷ್ಟವಿರೋಧಿ ಪಕ್ಷದತ್ತ ತಮ್ಮ ಒಲವನ್ನು ತೋರಿಸಿದ್ದಾರೆ. ಭ್ರಷ್ಟವಿರೋಧಿ ಪಕ್ಷಕ್ಕೆ ಶೇ.49ರಷ್ಟು ಮತ ಬಿದ್ದಿದ್ದರೆ, ಈಗ್ಲೆ ಹೇಳಲ್ಲ ಎಂಬ ಆಯ್ಕೆಗೆ ಶೇ.27ರಷ್ಟು ಮತ್ತು ಗೆಲ್ಲುವ ಪಕ್ಷಕ್ಕೆ ಸಿಕ್ಕಿದ್ದ ಕೇವಲ ಶೇ.23ರಷ್ಟು ಮತಗಳು.

ಭಪ್ಪರೆ ಜನರೆ ಎಂದು ಅಂದುಕೊಂಡ ನಾವು, ಹಾಗಾದರೆ ನೆಟ್ಟಿಗರ ಅಭಿಪ್ರಾಯದಲ್ಲಿ ಭ್ರಷ್ಟವಿರೋಧಿ ಪಕ್ಷ ಯಾವುದು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಎರಡನೇ ಪ್ರಶ್ನೆ : ನಿಮ್ಮ ಪ್ರಕಾರ ಭ್ರಷ್ಟವಿರೋಧಿ ಪಕ್ಷ ಯಾವುದು? ಎಂದು ಕೇಳಿದ್ದೆವು. ಇದಕ್ಕೆ ಬಂದ ಪ್ರತಿಕ್ರಿಯೆ ಮೊದಲ ಪ್ರಶ್ನೆಗಿಂತ ಕುತೂಹಲಕರವಾಗಿದೆ.

ಎರಡನೇ ಪ್ರಶ್ನೆಗೆ ಕೇವಲ 1 ದಿನದಲ್ಲಿ (ಮಧ್ಯಾಹ್ನ 1 ಗಂಟೆ ಹೊತ್ತಿಗೆ) 3,934 ಮತಗಳು ಬಿದ್ದಿದ್ದು, ಭಾರತೀಯ ಜನತಾ ಪಕ್ಷಕ್ಕೆ ಅತ್ಯಧಿಕ ಅಂದರೆ ಶೇ.26ರಷ್ಟು ಮತಗಳು ಬಿದ್ದಿವೆ. ಎರಡನೇ ಸ್ಥಾನದಲ್ಲಿ, ರಾಜ್ಯದಲ್ಲಿ ಗಟ್ಟಿಯಾಗಿ ತಳವೂರುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಭಾರೀ ಹೋರಾಟ ನಡೆಸಿರುವ ಲೋಕಸತ್ತಾ ಪಕ್ಷಕ್ಕೆ ಶೇ.22.3ರಷ್ಟು ಮತಗಳು ಬಿದ್ದಿವೆ. ಲೋಕಸತ್ತಾ ಪಕ್ಷ ಹೊಸದಾದರೂ ಉತ್ತಮ ಬೆಂಬಲ ಗಳಿಸುತ್ತಿರುವುದು ಇದರಿಂದ ಸಾಬೀತಾಗಿದೆ. ಮೂರನೇ ಸ್ಥಾನದಲ್ಲಿ ಕೆಜೆಪಿ (ಶೇ.17.8), ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್ (ಶೇ.17) ಮತ್ತು ಕಡೆಯ ಸ್ಥಾನದಲ್ಲಿ ಜೆಡಿಎಸ್ (ಶೇ.16.9)ರಷ್ಟು ಮತ ಗಳಿಸಿವೆ.

ಅಚ್ಚರಿಯ ಸಂಗತಿಯೆಂದರೆ, ಹೆಚ್ಚೂಕಡಿಮೆ ಎಲ್ಲ ಪಕ್ಷಗಳು ಸರಿಸಮವಾಗಿ ಮತಗಳನ್ನು ಗಳಿಸಿವೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಕೆಲ ನಾಯಕರು ಪಕ್ಷ ತೊರೆದಿದ್ದರಿಂದಲೇ ಬಿಜೆಪಿ ಭ್ರಷ್ಟವಿರೋಧಿ ಪಕ್ಷವೆಂಬ ತೀರ್ಮಾನಕ್ಕೆ ಬಂದರಾ ಓದುಗರು? ಒಟ್ಟಿನಲ್ಲಿ ಮೇ 5ರ ಚುನಾವಣೆಗೆ ಭಾರೀ ಸಿದ್ಧತೆ ಶುರುವಾಗಿದೆ. ಟಿಕೆಟ್ ಹಂಚಿಕೆ, ಭರಪೂರ ಭರವಸೆಗಳ ಪ್ರಣಾಳಿಕೆಯ ತಯಾರಿ, ಪ್ರಚಾರ ಕಾರ್ಯ ಶುರುವಾಗಿದೆ. ಮೇ 8ರಂದು ಎಲ್ಲ ಪ್ರಶ್ನೆಗಳಿಗೆ ಮತದಾರನೆಂಬ ದೊರೆ ಸೂಕ್ತ ಉತ್ತರ ನೀಡಲಿದ್ದಾನೆ. ಮತದಾರ ಯಾವುದೇ ಆಮಿಷಗಳಿಗೆ ಬಲಿಯಾಗದಿರಲಿ, ಭ್ರಷ್ಟವಿರೋಧಿಗೇ ಮತ ಹಾಕಲಿ ಎಂಬುದು ನಮ್ಮ ಕಳಕಳಿ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Who according to you is clean candidate? Which political party is considered as anti-corruption? Who are you going to vote? To the corrupt or winning party? An online election survey was conducted to know the pulse of the voters. Here is the result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X