ಹೈದರಾಬಾದ್: ಅಪ್ರಾಪ್ತೆಯ ಮದುವೆಯಾದ ಸೂಡಾನ್ ಟೆಕ್ಕಿ
ಅವನೋ 44 ವರ್ಷದ ಸಾಫ್ಟ್ ವೇರ್ ಇಂಜಿನಿಯರ್, ಸೂಡಾನ್ ದೇಶದವ. ಹೈದರಾಬಾದಿನ ಮೊಘಲ್ ಪುರಕ್ಕೆ ಬಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಟೆಕ್ಕಿಯ ನಾಮಧೇಯ ಒಸಾಮಾ ಇಬ್ರಾಹಿಂ. ಸೂಡಾನಿನ ಖರ್ತೋಮ್ ನಲ್ಲಿ ಪೆಟ್ರೋಲಿಯಂ ಕಂಪನಿಯಲ್ಲಿ ಪ್ರಾಜೆಕ್ಟ್ ಇಂಜಿನಿಯರ್.
ಹೈದರಾಬಾದಿನಲ್ಲಿ ಹುಡುಗಿಯರು ಸಿಗುತ್ತಾರೆ ಬಾ ಎಂದು ಗೆಳೆಯನೊಬ್ಬ ಪುಸಲಾಯಿಸಿದ್ದ. ಹಾಗಾಗಿ ಇಲ್ಲಿಗೆ ಬಂದೆ ಎಂದು ಒಸಾಮಾ ಹೇಳಿಕೊಂಡಿದ್ದಾನೆ. ಮತ್ತೊಂದು ಸಂಗತಿಯೆಂದರೆ ಒಸಾಮಾನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸೂಡಾನಿನಲ್ಲಿ ಸುಖವಾಗಿದ್ದಾರೆ.
ಫೆಬ್ರವರಿ 21ರಂದು ಈ ಮದುವೆಯಾಗಿದೆ. ಅದೂ ಹೇಗೆ ಅಂತೀರಾ? ನಾಲ್ವರು ಹುಡುಗಿಯರನ್ನು ಸದರಿ ಸೂಡಾನ್ ಟೆಕ್ಕಿಯ ಮುಂದೆ ಪೆರೇಡ್ ಮಾಡಲಾಯಿತಂತೆ. ಒಬ್ಬ ಹುಡುಗಿಯ ಮೇಲೆ ಟೆಕ್ಕಿಯ ಮನಸ್ಸು ನೆಟ್ಟಿದೆ. ತಡವೇನು, ಅಲ್ಲಿಯೇ ಇದ್ದ ಖಾಜಿ ನಿಖಾ ನೆರವೇರಿಸಿಯೇ ಬಿಟ್ಟಿದ್ದಾನೆ. ಆ ಬಾಲಕಿಯ ಗಮನಕ್ಕೂ ಬರುವ ಮೊದಲೇ 'ಕಬೂಲ್' ಆಗಿಬಿಟ್ಟಿದೆ.
ವಧೂಪಚಾರವಾಗಿ ಬಾಲಕಿಯ ತಂದೆ-ತಾಯಿಗೆ 1 ಲಕ್ಷ ರೂಪಾಯಿ ಸಂದಾಯ ಮಾಡಲಾಗಿದೆ. ವಧುವಿನ ಜತೆ ಸೂಡಾನಿಗೆ ತೆರಳುವಾಗ ಮತ್ತೆ 1 ಲಕ್ಷ ರೂ. ಕೊಡುತ್ತೇನೆ ಎಂದೂ ವರ ಭರವಸೆ ನೀಡಿದ್ದಾನೆ.
ಸದರಿ ಬಾಲಕಿ ಅದು ಹೇಗೋ ಸೂಡಾನಿನ ಟೆಕ್ಕಿ ಹಿಡಿತದಿಂದ ತಪ್ಪಿಸಿಕೊಂಡು ಸೀದಾ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ತನಗೆ ಒದಗಿ ಬಂದ ದುರವಸ್ಥೆಯನ್ನು ಹೇಳಿಕೊಂಡಿದ್ದಾಳೆ. ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದು, ಟೆಕ್ಕಿ ಸೂಡಾನಿಗೆ ಪರಾರಿಯಾಗುವ ಮುನ್ನ ಶುಭ ಶುಕ್ರವಾರ ಠಾಣೆಯ ದರ್ಶನ ಮಾಡಿಸಿದ್ದಾರೆ.
ಬಾಲಕಿಯ ತಂದೆ ಯೂಸುಫ್ ಪಟೇಲ್, ಅವಳ ಚಿಕ್ಕಮ್ಮ ಮುಮ್ತಾಜ್ ಬೇಗಂ ಮತ್ತು ಇತರೆ ಇಬ್ಬರು ಬ್ರೋಕರ್ ಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಈಗ ನರಕದಂತಹ ತನ್ನ ಮನೆಗೆ ವಾಪಸು ಹೋಗಲು ಸುತರಾಂ ಒಪ್ಪುತ್ತಿಲ್ಲ.