ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48 ಗಂಟೆಗಳ ಬಂದ್ 4 ಗಂಟೆಯಲ್ಲೇ ಫ್ಲಾಪ್

By Mahesh
|
Google Oneindia Kannada News

48-hour Bharat Bandh on Feb 20, 21 a flop show in Bangalore
ಬೆಂಗಳೂರು, ಫೆ.20: ಹತ್ತು ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನ ಬಂದ್(ಭಾರತ್ ಬಂದ್?) ಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 48 ಗಂಟೆಗಳ ಬಂದ್ ಕೇವಲ 4 ಗಂಟೆಗಳಲ್ಲೇ ಫ್ಲಾಪ್ ಆಗಿದೆ. 'ಏನ್ರಿ ಬಂದ್ ಥರಾನೇ ಇಲ್ಲ ದಿನ ಇವತ್ತು' ಎಂದು ಗೊಣಗಿಕೊಂಡು ಕಚೇರಿಗಳಿಗೆ ಉದ್ಯೋಗಿಗಳು ಕಾಲಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಫೆ.20,21 ರ ಬಂದ್ ಕರೆಗೆ ಕರ್ನಾಟಕ ಸರ್ಕಾರ ಸಿದ್ಧವಾಗಿದೆ ಎಂದು ಗೃಹ ಸಚಿವ ಆರ್ ಅಶೋಕ್ ಮಂಗಳವಾರ ಘೋಷಿಸಿದ್ದರು. ಬೆಂಗಳೂರಿನಲ್ಲಿ ಪಕ್ಕದ ರಾಜ್ಯಗಳಲ್ಲೇ ನಡೆಯುವಂತೆ ಕಾರ್ಮಿಕ ಸಂಘಟನೆಗಳ ಬೃಹತ್ ಮೆರವಣಿಗೆ, ಪ್ರತಿಭಟನೆ ನಿರೀಕ್ಷೆ ಇರದಿದ್ದರೂ ಸಾರಿಗೆ ಸಂಚಾರದ ಬಗ್ಗೆ ಅನುಮಾನ ಇದ್ದೇ ಇತ್ತು.

ಆದರೆ, ಬೆಳಗ್ಗೆ ಎಂದಿನಂತೆ ಪ್ರಮುಖ ಬಸ್ ನಿಲ್ದಾಣಗಳಿಂದ ಬಿಎಂಟಿಸಿ ಬಸ್ ಸಂಚಾರ ಸುಗಮವಾಗಿ ಸಾಗಿದೆ. ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಎಂಟಿಸಿ ಬಸ್ ಕನಿಷ್ಠಪಕ್ಷ ಒಂದು ದಿನದ ಮಟ್ಟಿಗೆ ಸಂಪೂರ್ಣ ಬಂದ್ ಆಗುವ ನಿರೀಕ್ಷೆಯಿತ್ತು. ಅದರೆ, ಬಸ್ ಗಳ ಸಂಖ್ಯೆ ವಿರಳವಾದರೂ ಸಂಚಾರಕ್ಕೆ ಅಡ್ಡಿಯುಂಟಾಗಿಲ್ಲ.

ಎರಡು ದಿನ ಆಟೋರಿಕ್ಷಾ ಸಂಚಾರ ಇರುವುದಿಲ್ಲ ಎಂದು ಕೊಂಡರೆ ಕೆಲವೆಡೆ ಆಟೋ ಚಾಲಕರು ಕೂಡಾ 'ಹೊಟ್ಟೆಪಾಡು ಏನು ಮಾಡೋಕೆ ಆಗೋಲ್ಲ ಸಾರ್.. ಕೆಲವು ಗಂಟೆ ಪ್ರತಿಭಟನೆ ನಡೆಸಿ ನಂತರ ಸಂಚಾರ ಆರಂಭಿಸುತ್ತೇವೆ' ಎಂದಿದ್ದಾರೆ. ಇನ್ನು ಕೆಲವೆಡೆ ಆಟೋಗಳು ಜನರಿಲ್ಲದೆ ಪರದಾಟ ನಡೆಸಿದ ಉದಾಹರಣೆಗಳು ಸಿಕ್ಕಿದೆ.

ಕಂಪನಿಗಳು ವರ್ಕಿಂಗ್: ಅನೇಕ ಐಟಿ ಕಂಪನಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತನ್ನ ಉದ್ಯೋಗಿಗಳನ್ನು ಕಂಪನಿ ವಾಹನಗಳು ಪಿಕ್ ಮಾಡಿವೆ. ಹಲವರು work from home ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಪ್ರೋ ಸಂಸ್ಥೆ, ಬೆಂಗಳೂರಿನ ಇನ್ಫೋಸಿಸ್, ಎಚ್ ಸಿಎಲ್, ಐಗೇಟ್, ಆರೇಕಲ್, ಆಕ್ಸೆಂಚರ್, ಐಬಿಎಂ ಹಾಗೂ ಇನ್ನಿತರ ಪ್ರಮುಖ ಸಂಸ್ಥೆಗಳು ಕ್ಯಾಬ್ ಒದಗಿಸಿ ಉದ್ಯೋಗಿಗಳಿಗೆ ಮನೆ ತನಕ 'ಪಿಕ್ ಅಪ್ ಡ್ರಾಪ್' ವ್ಯವಸ್ಥೆ ಒದಗಿಸಿದೆ. ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಬೆಳಗ್ಗೆ ವಿಧಾನಸೌಧ ಬೋರ್ಡ್ ಇರುವ ಬಸ್ ಗಳು ಸರಾಗವಾಗಿ ಸಾಗುತ್ತಿದ್ದವು.

ಬಂದ್ ನಡುವೆಯೂ ಸಾರ್ವಜನಿಕರಿಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ಹೋಟೆಲ್ ಮಾಲೀಕರ ಸಂಘ, ವಿತರಕರ ಸಂಘ, ಚಿತ್ರಮಂದಿರಗಳು, ಪೆಟ್ರೋಲ್ ಬಂಕ್, ಗ್ಯಾಸ್ ಸಿಲೀಂಡರ್ ವಿತರಕರು, ಕೇಬಲ್ ಆಪರೇಟರ್ಸ್, ಚಿನ್ನ ಬೆಳ್ಳಿ ಮಾರಾಟಗಾರರ ಸಂಗ, ವಕೀಲರ ಸಂಘಗಳು ಬಂದ್ ಬೆಂಬಲಿಸುತ್ತಿಲ್ಲ. ಜೊತೆಗೆ ಹಲವೆಡೆ ಸಾರ್ವಜನಿಕ ಸಾರಿಗೆ ಕೂಡಾ ಸರಾಗವಾಗಿ ಸಾಗಿದೆ. ಹಾಗಾಗಿ ದೈನಂದಿನ ವ್ಯವಹಾರಕ್ಕೆ ಅಡ್ಡಿ ಉಂಟಾಗಿಲ್ಲ.

ಬಿಗಿ ಭದ್ರತೆ: ಆಯಕಟ್ಟಿನ ಜಾಗಗಳಲ್ಲಿ ಶಸ್ತ್ರಧಾರಿ ಪೊಲೀಸರ ಪಡೆಗೆ ಸಜ್ಜಾಗಿ ನಿಂತಿದ್ದು, ಬೆಂಗಳೂರಿನಲ್ಲಿ ಟ್ರಾಫಿಕ್ ಕೊಂಚ ಕಮ್ಮಿಯಾಗಿದೆ. ಪ್ರತಿಭಟನೆಯ ಬಿಸಿ ಇನ್ನೂ ಏರಿಲ್ಲ ಎಂದು ನಮ್ಮ ವರದಿಗಾರರು ಹೇಳಿದ್ದಾರೆ. ಮೈಸೂರು, ಹಾಸನ ಸೇರಿದಂತೆ ರಾಜ್ಯದ ಕೆಲವೆಡೆ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಅಂಗಗಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ ಘಟನೆ ನಡೆದಿದೆ.

ಖಾಸಗೀಕರಣ, ಹೊರಗುತ್ತಿಗೆ, ಕಾರ್ಮಿಕರ ಕಾನೂನು ಉಲ್ಲಂಘನೆ, ಬೆಲೆ ಏರಿಕೆ ಸೇರಿದಂತೆ ಹತ್ತು ಹಲವು ಅಂಶಗಳನ್ನು ಮುಂದಿಟ್ಟುಕೊಂಡು ಭಾರತ್ ಬಂದ್ ನಡೆಸಲು ಭಾರತೀಯ ಮಜ್ದೂರ್ ಸಂಘ(BMS), ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಹಾಗೂ AITUC, CITU, INTUC ಸೇರಿದಂತೆ ಸುಮಾರು 11 ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

English summary
The 48-hour Bharat Bandh seems to have failed to spoil the normal daily works of the Bangaloreans as the nation-wide strike received a lukewarm response in this Garden City on Wednesday, Feb 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X