ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತಣ್ಣಿಗಾಗಿ '40 ಜಯ' ತಂದುಕೊಡಿ ಸಾಕು

By Srinath
|
Google Oneindia Kannada News

ಚೆನ್ನೈ, ಫೆ.16: ಕೇಂದ್ರ ಸರಕಾರವನ್ನು ತನ್ನ ಆಣತಿಗೆ ತಕ್ಕಂತೆ ಕುಣಿಸುತ್ತಾ ಕಾವೇರಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆಯನ್ನು ಕರ್ನಾಟಕಕ್ಕೆ ಮರಣಶಾಸನವಾಗಿಸಲು ಪಣತೊಟ್ಟಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅದನ್ನೇ ನೆಪವಾಗಿಸಿಕೊಂಡು 40 ಸಂಸದ್ ಸ್ಥಾನಗಳನ್ನು ತನಗೆ ದಕ್ಕಿಸಿಕೊಡಲೇಬೇಕು ಎಂದು ತಮ್ಮ ಪಕ್ಷದ ಕಟ್ಟಾಳುಗಳಿಗೆ ಕಟ್ಟಾಜ್ಞೆ ಜಾರಿ ಮಾಡಿದ್ದಾರೆ.

ಇತ್ತೀಚೆಗೆ 66 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ಕರ್ನಾಟಕದಿಂದ ಪಡೆಯಲು ತಾನು ಸಾಕಷ್ಟು ಕಷ್ಟಪಟ್ಟಿರುವುದಾಗಿ ಹೇಳಿಕೊಂಡಿರುವ 'ತಮಿಳ್ ಸೆಲ್ವಿ' ಜಯಲಲಿತಾ, ಕೇಂದ್ರದ ಮೇಲೆ ಒತ್ತಡ ಹೇರುವಂತಾಗಬೇಕಿದ್ದರೆ, ಮುಂದಿನ ಲೋಸಸಭೆ ಚುನಾವಣೆಯಲ್ಲಿ ಅಷ್ಟೂ ಸ್ಥಾನಗಳಲ್ಲಿ (ಅಂದರೆ ಈಗಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು- ತಮಿಳುನಾಡಿನಿಂದ 39 ಮತ್ತು ಪಕ್ಕದ ಪಾಂಡಿಚೆರಿಯಿಂದ 1 ಸೀಟು) ತಮ್ಮ ಎಐಎಡಿಎಂಕೆಗೆ 'ಜಯ' ತಂದುಕೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

cauvery-ordinance-get-me-40-ls-seats-jayalalithaa

ಸಂದರ್ಭ: ಶುಕ್ರವಾರ ನಡೆದ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯ ಅದ್ದೂರಿ ಸಮಾವೇಶ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ. ತಮ್ಮ 65ನೇ ಹುಟ್ಟುಹಬ್ಬಕ್ಕೆ ಮುನ್ನ ತಮಿಳ್ ಸೆಲ್ವಿ ಜಯಾ ಈ ಕಾರ್ಯಕ್ರಮ ಆಯೋಜಿಸಿದ್ದರು. ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ 1948ರ ಫೆಬ್ರವರಿ 24ರಂದು ಜಯಾ ಜನನ.

'ನೋಡಿ, ಕರ್ನಾಟಕ ಒಂದು ಹನಿ ನೀರನ್ನೂ ಬಿಡಲು ಸಿದ್ಧವಿರಲಿಲ್ಲ. ಕೇಂದ್ರವಂತೂ ಕಣ್ಮುಚ್ಚಿ ಕುಳಿತಿತ್ತು. ಬಳಿಕ ನಾವು ನಮ್ಮ ಬವಣೆಗಳೊಂದಿಗೆ ಸುಪ್ರೀಂ ಕೋರ್ಟಿನ ಮೊರೆ ಹೊಕ್ಕೆವು. ನೀರು ಬಿಡುವುದಿಲ್ಲವೆಂದು ಪಟ್ಟು ಹಿಡಿದು ಕೂತಿದ್ದ ಕರ್ನಾಟಕದಿಂದ 66 ಟಿಎಂಸಿ ಅಡಿ ನೀರು ತರಿಸಿಕೊಳ್ಳುವಲ್ಲಿ ಯಶಸ್ವಿಯಾದೆವು' ಎಂದಿದ್ದಾರೆ.

ಇದು ಇಷ್ಟಕ್ಕೇ ಮುಗಿದಿಲ್ಲ. ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪನ್ನು ಗೆಜೆಟಿಯರ್‌ನಲ್ಲಿ ಪ್ರಕಟಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮೀನ ಮೇಷ ಎಣಿಸುತ್ತಿದೆ. ಕಾಂಗ್ರೆಸ್ ಮೇಲೆ ಒತ್ತಡ ಹೇರಿ ನಮ್ಮ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಗರಿಷ್ಠ ಸೀಟುಗಳೊಂದಿಗೆ ನಾವು ಹೋರಾಡಬೇಕಾಗುತ್ತದೆ.

ಅದಕ್ಕೇ ಹೇಳಿದ್ದು, 40 ಸೀಟು ತನ್ನಿ' ಎಂದು ಜಯಾ ಫರ್ಮಾನು ಹೊರಡಿಸಿದ್ದಾರೆ. ಇದನ್ನು ಶ್ರದ್ಧೆಯಿಂದ ಕೇಳಿಸಿಕೊಂಡ ಕಾರ್ಯಕರ್ತರು ಮೇಡಂ ಜಯಾಗೆ ಜಯ ತಂದುಕೊಡುವುದು ಗ್ಯಾರಂಟಿ ಎಂದು ಅವರ ಮುಂದೆ ಫುಲ್ ಡೈವ್ ಹೊಡೆದು (ಒಮ್ಮೆ ಮೇಲಿನ ಚಿತ್ರ ನೋಡಿ) ಹೇಳಿದ್ದಾರೆ.

ಅಂತಾರಾಜ್ಯ ಜಲ ವಿವಾದ ವಿಷಯದಲ್ಲಿ ಬಿಜೆಪಿ- ಕಾಂಗ್ರೆಸ್ ಎಂಬ ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕವನ್ನೇ ಬೆಂಬಲಿಸುತ್ತಿವೆ (ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಕರ್ನಾಟಕದ ಮಂದಿಗೆ ಹನಿ ಹನಿಯೂ ಗೊತ್ತು) ಎಂದಿರುವ ಜಯಲಲಿತಾ, 'ನಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಮೊದಲು ನಮ್ಮ ಪಕ್ಷಕ್ಕೆ ಜಯವ ತಂದಿಡಿ' ಎಂದಿದ್ದಾರೆ.

ಹಿಂದಿನ ಡಿಎಂಕೆ ಸರಕಾರವನ್ನೂ ತರಾಟೆಗೆ ತೆಗೆದುಕೊಂಡ ಜಯಾ, ಸ್ವಾರ್ಥ ಲಾಲಸೆಯಲ್ಲಿ ಡಿಎಂಕೆಯು ಅಂತಿಮ ಅಧಿಸೂಚನೆ ಪ್ರಕಟಿಸುವ ಬಗ್ಗೆ ಪ್ರಯತ್ನಗಳನ್ನು ಮಾಡಲೇ ಇಲ್ಲ. 2011ರಲ್ಲಿ ಮುಖ್ಯಮಂತ್ರಿಯಾದ ಬಳಿಕ ನಾನು ಈ ಬಗ್ಗೆ ಹೆಜ್ಜೆ ಮುಂದಿಟ್ಟೆ, ಸುಪ್ರೀಂ ಕೋರ್ಟಿನ ಮೊರೆ ಹೋದೆ.

ಹೀಗಾಗಿ ಮುಂದಿನ ವಾರದಲ್ಲಿ (ಫೆ. 20ರೊಳಗೆ) ಅಂತಿಮ ಅಧಿಸೂಚನೆ ಪ್ರಕಟಿಸುವಂತೆ ಅದು ಕೇಂದ್ರಕ್ಕೆ ಸೂಚಿಸುವಂತಾಯಿತು ಎಂದು ಜಯಲಲಿತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

English summary
Cauvery Ordinance row- Get me 40 Lok Sabha Seats- Jayalalithaa to AIDMK workers. Tamil Nadu CM Jayalalithaa said her government had overcome ‘various hurdles’ to secure 66 tmcft of Cauvery water as she asked partymen to help secure all 40 seats in the next Lok Sabha polls to ensure the state has a greater say at national level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X