ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ಸಹಚರರ ಕ್ಷಮಾದಾನ ಅರ್ಜಿ ವಜಾ

By Prasad
|
Google Oneindia Kannada News

Mercy plea of Veerappan associates rejected
ನವದೆಹಲಿ, ಫೆ. 13 : ಕಾಡುಗಳ್ಳ ವೀರಪ್ಪನ್ ಕುರಿತ ಕನ್ನಡ ಚಲನಚಿತ್ರ 'ಅಟ್ಟಹಾಸ' ಬಿಡುಗಡೆಯಾಗುತ್ತಿರುವ ಹಿಂದಿನ ದಿನ, 1993ರ ಬಾಂಬ್ ಸ್ಫೋಟಿಸಿ 22 ಪೊಲೀಸ್ ಸಿಬ್ಬಂದಿಗಳ ಸಾವಿಗೆ ಕಾರಣರಾಗಿ, ಸುಪ್ರೀಂಕೋರ್ಟ್‌ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್‌ನ ನಾಲ್ವರು ಸಹಚರರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ತಿರಸ್ಕರಿಸಿದ್ದಾರೆ.

"ಆ ನಾಲ್ವರ ಕ್ಷಮಾದಾನ ಅರ್ಜಿ ರಾಷ್ಟ್ರಪತಿಯಿಂದ ತಿರಸ್ಕೃತವಾಗಿರುವ ಬಗ್ಗೆ ಬೆಳಗಾವಿಯ ಹಿಂಡಲಗಾ ಜೈಲಿನ ಅಧಿಕಾರಿಗಳಿಂದ ತಮಿಳುನಾಡಿನಲ್ಲಿರುವ ಆ ನಾಲ್ವರ ಕುಟುಂಬದವರಿಗೆ ಮಾಹಿತಿ ದೊರೆತಿದೆ" ಎಂದು ತಮಿಳುನಾಡಿನ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರೇಷನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಾಲಮುರುಗನ್ ತಿಳಿಸಿದ್ದಾರೆ.

ವೀರಪ್ಪನ್ ಸಹಚರರಾಗಿದ್ದ ಜ್ಞಾನಪ್ರಕಾಶನ್, ಸೈಮನ್, 'ಮೀಸೆ' ಮಾದೈಯನ್ ಮತ್ತು ಪಿಲವೇಂದ್ರನ್ ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಕರ್ನಾಟಕದ ಪಾಲಾರ್ ಬಳಿ 1993ರಲ್ಲಿ ಭೂಮಿಯಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸ್ಫೋಟಿಸಿ 22 ಪೊಲೀಸ್ ಸಿಬ್ಬಂದಿಗಳ ಸಾವಿಗೆ ಕಾರಣರಾಗಿದ್ದರು. ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಸರ್ವೋಚ್ಚ ನ್ಯಾಯಾಲಯ 2004ರಲ್ಲಿ ಆದೇಶ ಹೊರಡಿಸಿತ್ತು.

ಮೈಸೂರಿನ ಟಾಡಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ನಾಲ್ವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾ. ವೈ.ಕೆ. ಸಭರವಾಲ್ ಮತ್ತು ನ್ಯಾ. ಬಿ.ಎನ್. ಅಗರವಾಲ್ ಅವರಿದ್ದ ವಿಭಾಗೀಯ ಪೀಠ 2004ರಲ್ಲಿ ಜೀವಾವಧಿ ಶಿಕ್ಷೆಯನ್ನು ತಿರಸ್ಕರಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅದೇ ವರ್ಷ ಅಕ್ಟೋಬರ್‌ನಲ್ಲಿ ಕುಖ್ಯಾತ ಕಾಡುಗಳ್ಳ ತಮಿಳುನಾಡು ಪೊಲೀಸರ ವಿಶೇಷ ಕಾರ್ಯಪಡೆಯ ಗುಂಡಿಗೆ ಹತನಾಗಿದ್ದ.

ಕೆಲ ದಿನಗಳ ಹಿಂದೆ ಸಂಸತ್ ದಾಳಿಯ ಪ್ರಮುಖ ಆರೋಪಿ ಮೊಹಮ್ಮದ್ ಅಫ್ಜಜ್ ಗುರುವಿನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಫ್ಜಲ್ ಗುರುವನ್ನು ದೆಹಲಿಯ ತೀಹಾರ್ ಜೈಲಿನಲ್ಲಿ ಫೆ.9ರಂದು ಗಲ್ಲಿಗೇರಿಸಲಾಯಿತು. ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕ, ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್‌ನ ಕ್ಷಮಾದಾನ ಅರ್ಜಿಯನ್ನು ಕೂಡ ಪ್ರಣಬ್ ತಿರಸ್ಕರಿಸಿದ್ದರು. ಆತನನ್ನು 2012ರ ನ.9ರಂದು ಪುಣೆಯ ಯರವಾಡಾ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು. (ಪಿಟಿಐ)

English summary
The mercy pleas of sandalwood smuggler Veerapan’s four associates, sentenced to death in a 1993 landmine blast case, have been rejected by President Pranab Mukherjee. All the four are lodged in Belgaum Hindalaga jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X