• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಗೆಯಲ್ಲಿ ಮಿಂದು ಪುನೀತರಾದ ಸೆಲೆಬ್ರಿಟಿಗಳು

By Prasad
|

ಹನ್ನೆರಡು ವರ್ಷದ ನಂತರ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಇಡೀ ಜಗತ್ತಿನ ಕೇಂದ್ರಬಿಂದುವಾಗಿದೆ. ಜ.27ರಿಂದ ಮಾಘ ಅಮವಾಸ್ಯೆಯಂದು ಪ್ರಾರಂಭವಾಗಿರುವ ಈ ಕುಂಭ ಮೇಳ 55 ದಿನಗಳ ಕಾಲ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ 55 ದಿನಗಳ ಕಾಲ ನಡೆಯಲಿದೆ.

ಹಿಂದೂ ಧಾರ್ಮಿಕರ ಅತೀ ದೊಡ್ಡ ಉತ್ಸಗಳಲ್ಲಿ ಒಂದು ಎಂಬ ಖ್ಯಾತಿ ಗಳಿಸಿರುವ ಈ ಸಮ್ಮೇಳನದಲ್ಲಿ 100 ಕೋಟಿ ವಿಶ್ವದ ಭಕ್ತರು ಭಾಗವಹಿಸಲಿದ್ದಾರೆ ಎಂಬ ಅಂದಾಜಿದೆ. ಒಂದು ಬೆಂಕಿ ಅನಾಹುತ ಮತ್ತು ಅಲಹಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಭೀಕರ ಕಾಲ್ತುಳಿತ ಹೊರತುಪಡಿಸಿದರೆ ಕುಂಭ ಮೇಳ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ.

ಭಾರತದ ಎಲ್ಲ ಪ್ರದೇಶಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ವಿದೇಶಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಪಡೆದು ಪುನೀತರಾಗಲು ಹರಿದುಬರುತ್ತಿದ್ದಾರೆ. ಸರಕಾರ ಮತ್ತು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವವರು, ಧಾರ್ಮಿಕ ಮುಖಂಡರು, ಜನಸಾಮಾನ್ಯರಿಗೆ ಸುಲಭವಾಗಿ ಸಿಗದ ಸಿನೆಮಾ ತಾರೆಯರು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪುನೀತ ಭಾವನೆ ಹೊಂದಿ ವಾಪಸ್ ಹೋಗುತ್ತಿದ್ದಾರೆ.

ಈ ಸಮ್ಮೇಳನದ ಮಹತ್ವವೇ ಅಂತಹುದು. ಉಚ್ಚ ನೀಚ, ಮೇಲು ಕೀಳು, ಶ್ರೀಮಂತ ಬಡವ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ತನ್ನ ಬಳಿಗೆ ಕರೆಯಿಸಿಕೊಳ್ಳುತ್ತಿದೆ. ಇಲ್ಲಿನ ನಾನಾ ಸಾಧುಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರೆ, ನಾನಾ ಮಠದ ಸ್ವಾಮೀಜಿಗಳು ಕೂಡ ಇಲ್ಲಿ ಮಿಂದೆದ್ದಿದ್ದಾರೆ. ಕೆಲವರು ಯಾರಿಗೂ ತಿಳಿಯದಂತೆ ಬಂದು ಹೋಗಿದ್ದರೆ, ಕೆಲವರು ಅನಗತ್ಯ ವಿವಾದ ಸೃಷ್ಟಿಸಿ ಮತ್ತೆ ವಿವಾದ ಹುಟ್ಟುಹಾಕಿದ್ದಾರೆ.

ಮಹಾ ಕುಂಭ ಮೇಳಕ್ಕೆ ತಮ್ಮ ಇಷ್ಟಾರ್ಥ ಸಿದ್ಧಿಸಲೆಂದು ಕೋಟ್ಯಾನುಕೋಟಿ ಮಂದಿ ಬಂದು ಹೋಗುತ್ತಿದ್ದಾರೆ. ಅವರಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಅವರ್ಯಾರು?

ಗಂಗೆಗೆ ಅರ್ಘ್ಯ ಬಿಟ್ಟ ವಿವೇಕ್ ಓಬೇರಾಯ್

ಗಂಗೆಗೆ ಅರ್ಘ್ಯ ಬಿಟ್ಟ ವಿವೇಕ್ ಓಬೇರಾಯ್

ಖ್ಯಾತ ಬಾಲಿವುಡ್ ನಟ, ಇತ್ತೀಚೆಗೆ ತಾನೆ ಅಪ್ಪನಾಗಿರುವ ವಿವೇಕ್ ಓಬೇರಾಯ್ ಅವರು ಮಾಘ ಪೂರ್ಣಿಮೆಯಂದು ಕುಂಭಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು.

ಗಂಗೆಯಲಿ ಮುಳುಗೆದ್ದ ಲೋಕಸಭಾಧ್ಯಕ್ಷೆ

ಗಂಗೆಯಲಿ ಮುಳುಗೆದ್ದ ಲೋಕಸಭಾಧ್ಯಕ್ಷೆ

ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಧೋಧೋ ಎಂದು ಸುರಿಯುವ ಮಳೆಯಲ್ಲಿ, ಗಡಗಡ ನಡುಗಿಸುವ ಚಳಿಯಲ್ಲಿ ಸೋಮವಾರ ಕುಂಭಮೇಳದಲ್ಲಿ ಪಾಲ್ಗೊಂಡು ಗಂಗೆಯಲ್ಲಿ ಮಿಂದೆದ್ದರು.

ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ

ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ

ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ ಫೌಂಡೇಷನ್‌ನ ಶ್ರೀ ರವಿಶಂಕರ್ ಗುರೂಜಿ ಅವರು ಮಂಗಳವಾರ ಅಲಹಾಬಾದ್‌ಗೆ ಭೇಟಿ ನೀಡಿ ಭಕ್ತಾದಿಗಳಿಗೆ ಹಿತವಚನವನ್ನು ನೀಡಿದರು.

ಬಿಡದಿ ಧ್ಯಾನಾಶ್ರಮದ ನಿತ್ಯಾನಂದ

ಬಿಡದಿ ಧ್ಯಾನಾಶ್ರಮದ ನಿತ್ಯಾನಂದ

ಗಂಗಾ ತಟದಲ್ಲಿ ಪೆಂಡಾಲ್ ಹಾಕಿಸಿ, ತಮ್ಮದೇ ಮೂರ್ತಿ ಪ್ರತಿಷ್ಠಾಪಿಸಿ ತಮ್ಮದೇ ಚೇಲಾಗಳಿಂದ ಪೂಜೆ ಸಲ್ಲಿಸಿಕೊಂಡು ಅಲ್ಲಿನ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಡದಿಯಲ್ಲಿರುವ ಧ್ಯಾನಪೀಠಂ ಆಶ್ರಮದ ವಿವಾದಾತ್ಮಕ ನಿತ್ಯಾನಂದ (ಸ್ವಾಮಿ) ಮೌನಿ ಅಮವಾಸ್ಯೆಯಂದು ಕುಂಭ ಮೇಳಕ್ಕೆ ಆಗಮಿಸಿ ಹಾರ ಹಾಕಿಸಿಕೊಂಡು, ಮೆರವಣಿಗೆ ಮಾಡಿಸಿಕೊಂಡು, ತ್ರಿವೇಣಿ ಸಂಗಮದಲ್ಲಿ ಮೂರು ಸಾರಿ ಮುಳುಗೆದ್ದರು. ಅಲ್ಲಿ ಪ್ರತಿದಿನ ಯಾಗ, ಯೋಗ ಮಾಡಲಿದ್ದಾರೆ ನಿತ್ಯಾನಂದ. ಅಂದ ಹಾಗೆ, ನಿತ್ಯಾನಂದರ ಕಥೆಯನ್ನು ಹೋಲುವ ಕನ್ನಡ ಚಿತ್ರವೊಂದು ತೆರೆಗೆ ಅಪ್ಪಳಿಸಲಿದೆ.

ಗಂಗೆಯಲ್ಲಿ ಮಿಂದ ಎಸ್ಎಸ್ ಬಿಟ್ಟಾ

ಗಂಗೆಯಲ್ಲಿ ಮಿಂದ ಎಸ್ಎಸ್ ಬಿಟ್ಟಾ

ಮಾಘ ಪೂರ್ಣಿಮೆಯ ಶುಭಸಂದರ್ಭದಂದು ಅಖಿಲ ಭಾರತ ಭಯೋತ್ಪಾದಕ ವಿರೋಧಿ ಸಂಘಟನೆಯ ಅಧ್ಯಕ್ಷ ಮಣಿಂದರ್ ಜಿತ್ ಸಿಂಗ್ ಬಿಟ್ಟಾ ಅವರು ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿದರು.

ಶ್ರೀ ಜಯೇಂದ್ರ ಸರಸ್ವತಿ

ಶ್ರೀ ಜಯೇಂದ್ರ ಸರಸ್ವತಿ

ಕಂಚಿ ಕಾಮಕೋಟಿಯ ಪೀಠಾಧಿಪತಿಗಳಾದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಸದ್ದಿಲ್ಲದೆ ಕುಂಭಮೇಳಕ್ಕೆ ಆಗಮಿಸಿ, ಮೆರವಣಿಗೆ ಮಾಡಿಸಿಕೊಳ್ಳದೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಗಂಗೆಗೆ ಪೂಜೆ ಸಲ್ಲಿಸಿದರು.

ಬಾಲಿವುಡ್ ನಟಿ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಪ್ರೀತಿ ಜಿಂಟಾ

ಕಿಂಗ್ಸ್ ಎಲೆವನ್ ಪಂಜಾಬ್ ಕ್ರಿಕೆಟ್ ತಂಡದ ಒಡತಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ (ಹುಟ್ಟುಹಬ್ಬ : 31 ಜನವರಿ, 1975) ಕುಂಭ ಮೇಳಕ್ಕೆ ಬಂದು ಸ್ವಾಮಿ ಚಿದಾನಂದ ಸರಸ್ವತಿ ಅವರಿಂದ ಕುಂಭ ಮೇಳದಲ್ಲಿ ಪೂಜೆ ಸಲ್ಲಿಸಿದರು. ಕ್ರಿಮಿನಲ್ ಸೈಕಾಲಜಿಯಲ್ಲಿ ಡಿಗ್ರಿ ಪಡೆದಿರುವ ಪ್ರೀತಿ ಜಿಂಟಾ ಅವರು ಮಣಿ ರತ್ನಂ ಅವರ ದಿಲ್ ಸೆ ಚಿತ್ರದ ಮುಖಾಂತರ ಚಿತ್ರರಂಗಕ್ಕೆ ಅಡಿಯಿಟ್ಟವರು. ಕಲ್ ಹೋ ನಾ ಹೋ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

ಮಾಡೆಲ್ ಕಮ್ ನಟಿ ಪೂನಂ ಪಾಂಡೆ

ಮಾಡೆಲ್ ಕಮ್ ನಟಿ ಪೂನಂ ಪಾಂಡೆ

ಕಿಂಗ್ ಫಿಷರ್ ಕ್ಯಾಲೆಂಡರ್ ಬಿಕಿನಿ ಬೆಡಗಿಯ ಬಗ್ಗೆ ತಿಳಿದಿರದ ಚಿತ್ರಪ್ರೇಮಿಗಳೇ ಇಲ್ಲ. ಸಲ್ಲದ ಕಾರಣಗಳಿಗಾಗಿ ಸುದ್ದಿಯಲ್ಲಿ ಇರಬಯಸುವ ಪೂನಂ ಪಾಂಡೆ (ಹುಟ್ಟುಹಬ್ಬ : 11 ಮಾರ್ಚ್, 1991) ಉಳಿದೆಲ್ಲ ನಟಿಮಣಿಯರಿಗಿಂತ ಮೊದಲೇ ಬಂದು ಗಂಗಾ ಯಮುನಾ ಸಂಗಮದಲ್ಲಿ ಮಿಂದು ಪಾವನರಾದವರು. ಆಕೆ ಕುಂಭಮೇಳಕ್ಕೆ ಬಂದಾಗ ಎಲ್ಲರ ಕಣ್ಣು ಎಲ್ಲ ಬಿಟ್ಟು ಆಕೆಯ ಮೇಲೆ ನೆಟ್ಟಿದ್ದು ಸುಳ್ಳಲ್ಲ. ಸದ್ಯಕ್ಕೆ ನಶಾ ಎಂಬ ಹಿಂದಿ ಚಿತ್ರದಲ್ಲಿ ಪೂನಂ ನಟಿಸುತ್ತಿದ್ದಾರೆ.

ಯೋಗಗುರು ಬಾಬಾ ರಾಮದೇವ್

ಯೋಗಗುರು ಬಾಬಾ ರಾಮದೇವ್

ಯೋಗಕ್ಕೆ, ಭ್ರಷ್ಟಾಚಾರದ ವಿರುದ್ಧದ ಚಳವಳಿಗೆ ಹೆಸರಾಗಿರುವ ಪತಂಜಲಿ ಯೋಗಪೀಠದ ಯೋಗಗುರು ಬಾಬಾ ರಾಮದೇವ್ ಅವರು ಕುಂಭಮೇಳಕ್ಕೆ ಆಗಮಿಸಿ ಕೇವಲ ಮಿಂದೆದ್ದು ಹೋಗಲಿಲ್ಲ. ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಹಲವಾರು ವಿದೇಶಿ ಪ್ರಜೆಗಳೊಂದಿಗೆ 'ಕ್ಲೀನ್ ಗಂಗಾ' ಅಭಿಯಾನದಲ್ಲಿ ಪಾಲ್ಗೊಂಡರು.

ಹಿಂದಿ ಚಿತ್ರನಟ ರಾಜಪಾಲ್ ಯಾದವ್

ಹಿಂದಿ ಚಿತ್ರನಟ ರಾಜಪಾಲ್ ಯಾದವ್

ಹಿಂದಿ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಸ್ಯ ನಟರಲ್ಲಿ (ಕುಳ್ಳಗಿದ್ದರೂ) ಎತ್ತರದ ಹೆಸರು ರಾಜಪಾಲ್ ಯಾದವ್ (ಹುಟ್ಟುಹಬ್ಬ : 16 ಮಾರ್ಚ್, 1971) ಅವರದು. ನ್ಯಾಷನಲ್ ಸ್ಕೂಲ್ ಆಪ್ ಡ್ರಾಮಾದಲ್ಲಿ ತರಬೇತಿ ಪಡೆದಿರುವ ರಾಜಪಾಲ್ ಹಿಂದಿ ಚಿತ್ರಗಳಲ್ಲಿ ನೆಲೆ ಕಾಣಬೇಕೆಂಬ ಆಸೆಯಿಂದ ಮುಂಬೈಗೆ ಬಂದವರು. ಕುಂಭಮೇಳಕ್ಕೆ ಬಂದಾಗ ಅನ್ಯರ ಕ್ಯಾಮೆರಾಗೆ ಸೆರೆಸಿಕ್ಕಬೇಕಾಗಿದ್ದ ರಾಜಪಾಲ್, ತಾವೂ ಕ್ಯಾಮೆರಾ ಹಿಡಿದು ಅವಿಸ್ಮರಣೀಯ ಘಟನೆಗಳನ್ನು ತುಂಬಿಕೊಂಡಿದ್ದಾರೆ.

ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ

ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ

ಉಪೇಂದ್ರ ಜೊತೆ 'ಆಟೋ ಶಂಕರ್' ಮತ್ತು ರಸಿಕ ರವಿಚಂದ್ರನ್ ಜೊತೆ 'ಪ್ರೀತ್ಸೋದ್ ತಪ್ಪಾ' ಚಿತ್ರಗಳಲ್ಲಿ ನಟಿಸಿರುವ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಕುಂಭಮೇಳಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ಬಾಸ್ ಅಬ್ಬಾಸ್

ಬಿಜೆಪಿ ಬಾಸ್ ಅಬ್ಬಾಸ್

ಕುಂಭ ಮೇಳಕ್ಕೆ ಹಿಂದೂಗಳು ಮಾತ್ರವಲ್ಲಿ ಸಹಸ್ರ ಸಂಖ್ಯೆಯಲ್ಲಿ ಅನ್ಯ ಧರ್ಮೀಯರು ಕೂಡ ಆಗಮಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಕುಂಭಮೇಳಕ್ಕೆ ಬಂದು ಪೂಜೆ ಸಲ್ಲಿಸಿದರು ಮತ್ತು ಶಂಕರಾಚಾರ್ಯ ಸ್ವಾಮಿ ವಾಸುದೇವಾನಂದಜಿ ಅವರಿಂದ ಆಶೀರ್ವಚನ ಪಡೆದರು.

ನಿವೃತ್ತ ಸೇನಾಧಿಕಾರಿ ವಿಕೆ ಶರ್ಮಾ

ನಿವೃತ್ತ ಸೇನಾಧಿಕಾರಿ ವಿಕೆ ಶರ್ಮಾ

ಅಣ್ಣಾ ಹಜಾರೆ ಜೊತೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಭಾರತೀಯ ಸೇನೆಯ ದಂಡಾಧಿಕಾರಿ (ನಿವೃತ್ತ) ಜನರಲ್ ವಿಜಯ್ ಕುಮಾರ್ ಸಿಂಗ್ (ವಿಕೆ ಸಿಂಗ್) ಅವರು ಸಪತ್ನೀಕರಾಗಿ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಗಂಗಾ ಪೂಜೆ ಮಾಡಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ಅವರು ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಮೇಲೆ ಮಾಡಿದ ಮೊದಲ ಕೆಲಸವೆಂದರೆ ಕುಂಭಮೇಳಕ್ಕೆ ಆಗಮಿಸಿ ಮುಂದಿನ ಕೆಲಸವೆಲ್ಲ ಸುಸೂತ್ರವಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದು. ಕೊರೆಯುವ ಚಳಿಯಲ್ಲಿ, ಮರಗಟ್ಟಿಸುವ ನೀರಿನಲ್ಲಿ ರಾಜನಾಥ್ ಸಿಂಗ್ ಮೂರು ಬಾರಿ ಮುಳುಗೆದ್ದರು.

ಆರ್‌ಎಸ್ಎಸ್ ಮುಖಂಡ ಮೋಹನ್ ಭಾಗವತ್

ಆರ್‌ಎಸ್ಎಸ್ ಮುಖಂಡ ಮೋಹನ್ ಭಾಗವತ್

ಕುಂಭಮೇಳದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಆರ್‌ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರು ಪಾಲ್ಗೊಂಡಿದ್ದರು.

ಸಂಸದ ಅಮರ್ ಸಿಂಗ್

ಸಂಸದ ಅಮರ್ ಸಿಂಗ್

ಸಮಾಜವಾದಿ ಪಕ್ಷದ ಮಾಜಿ ನಾಯಕ, ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿ ಪಡೆದಿರುವ ಅಮರ ಸಿಂಗ್ ಅವರು ಸೂಟು ಧರಿಸಿ, ಪತ್ನಿಯೊಂದಿಗೆ ಆಗಮಿಸಿ ಸಂಗಮದಲ್ಲಿ ಪೂಜೆ ಸಲ್ಲಿಸಿದರು. ಸಮಾಜವಾದಿ ಪಕ್ಷದಿಂದ ಉಚ್ಚಾಟಿತಗೊಂಡಿರುವ ಅಮರ್ ಸಿಂಗ್ ಅವರ ಹೆಸರು ವೋಟ್ ಫಾರ್ ನೋಟ್ ಹಗರಣದಲ್ಲಿ ಕೇಳಿಬಂದಿತ್ತು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Celebrities in Maha Kumbh Mela : Crores of people across the globe have flocked Allahabad to take holy dip in Ganga, Yamuna and mythological Saraswati river sangam on the occasion of Maha Kumbh Mela, which is observed once in 12 years. The list of Celebs, Nithyananda Swamiji to Shilpa Shetty, Kanchi seer to Rajnath Singh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more