• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಚಾಲನೆ

By ಎಸ್ಕೆ ಶಾಮ ಸುಂದರ
|

ಡಿ ಸಿ ಪಾವಟೆ ನಗರ, ಧಾರವಾಡ, ಜ 25 : ಸಂಭ್ರಮ ಶುರುವಾಗುವ ಮುಂಚೆ ತಲೆದೋರಿದ್ದ ಅಡಚಣೆ, ಅಪಸ್ವರಗಳನ್ನು ಯಶಸ್ವಿಯಾಗಿ ಬದಿಗೆ ಸರಿಸಿದ 'ಧಾರವಾಡ ಸಾಹಿತ್ಯ ಸಂಭ್ರಮ' ಬಳಗದ ಆಯೋಜಕರು ಮತ್ತು ಬೆಂಬಲಿಗರು ತಮ್ಮ ಚೊಚ್ಚಲ ಕನ್ನಡ ಸಾಹಿತ್ಯ ಕಲರವಕ್ಕೆ ಇಂದು ಇಲ್ಲಿ ಸಂಭ್ರಮದ ಚಾಲನೆ ಕೊಟ್ಟರು.

ಸಂಭ್ರಮಕ್ಕೆ ಸರಕಾರದ ಅನುದಾನ ಸಿಕ್ಕಿರುವುದರಿಂದ ಪ್ರತಿನಿಧಿಗಳಿಂದ ಶುಲ್ಕ ಕೀಳಬಾರದು ಎನ್ನುವುದು ಸಾಹಿತ್ಯ ಸಮ್ಮೇಳನದ ವಿರೋಧಿಗಳ ಒಂದು ಕೂಗಾಗಿತ್ತು. ಅಲ್ಲದೆ, ಪಾಲ್ಗೊಳ್ಳ ಬಯಸುವ ಕನ್ನಡ ಸಾಹಿತ್ಯಾಸಕ್ತರು ತಮ್ಮ ಜತೆಗೆ "ಶಸ್ತ್ರಾಸ್ತ್ರ"ಗಳನ್ನು ತರಬಾರದೆಂಬ ಆಯೋಜಕರ ನಿಯಮ ಅವರನ್ನು ಕೆರಳಿಸಿತ್ತು. ಜತೆಗೆ ಕೆಲವು ಲೋಕಲ್ ಪಾಲಿಟಿಕ್ಸುಗಳು ಇದ್ದವು.

ಪ್ರತಿನಿಧಿ ಶುಲ್ಕವನ್ನು 1,500 ರಿಂದ 500ಕ್ಕೆ ಇಳಿಸಲಾಯಿತು. ಅಲ್ಲದೆ ಗೋಷ್ಠಿಗಳಲ್ಲಿ ಮುಕ್ತ ಚರ್ಚೆಗೆ ಅನುವು ಮಾಡಿಕೊಡಲಾಗುವುದೆಂದು ಆಯೋಜಕರು ಭಿನ್ನಮತೀಯರಿಗೆ ಹೇಳಿ ಮನವೊಲಿಸಿದ್ದರು. ಆದರೂ, ಭಿನ್ನಮತೀಯ ಪಾಳಯದ ಸಾಹಿತಿಗಳು ಧಾರವಾಡದ ಕಡೆ ಹೊರಳಲಿಲ್ಲ.

ಸಾಹಿತ್ಯದ ನಾನಾ ಪ್ರಕಾರಗಳಿಗೆ ಸೇರಿದ ಸುಮಾರು 130 ಮಂದಿ ಸಾಹಿತಿಗಳು, 300ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸ್ಥಳೀಯ ಸಾಹಿತ್ಯಾಸಕ್ತರು ಸೇರಿದಂತೆ 600 ಮಂದಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಭವನ ತುಂಬಿ ತುಳುಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ವಿವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗಗಳಲ್ಲದೆ ಪ್ರಜಾವಾಣಿ ಸೇರಿದಂತೆ ಇನ್ನಿತರ ಸ್ಥಳೀಯ ಸಾಹಿತ್ಯ ಗುಂಪುಗಳ ಉತ್ತೇಜನದಿಂದ ಈ ಸಂಭ್ರಮ ಮೈದಾಳಿದೆ.

ಆಮೂರರಿಂದ ಉದ್ಘಾಟನೆ : ಕನ್ನಡಿಗರ ನಡುವೆ ಇರುವ ಏಕೈಕ ಹಿರಿಯ ವಿಮರ್ಶಕ- ಪ್ರಕಾಂಡ ವಿದ್ವಾಂಸ ಡಾ. ಜಿ.ಎಸ್. ಆಮೂರ (87) ಸಮ್ಮೇಳನ ಉದ್ಘಾಟಿಸಿ ಆಶಯ ಭಾಷಣ ಮಾಡಿದರು. ದೀಪ ಬೆಳಗುವ ವೇಳೆ ಗಿರೀಶ್ ಕಾರ್ನಾಡ್, ಎಂಎಂ ಕಲಬುರ್ಗಿ, ವೀಣಾ ಶಾಂತೇಶ್ವರ, ಗಿರಡ್ಡಿ ಗೋವಿಂದರಾಜ, ಚೆನ್ನವೀರ ಕಣವಿ, ರಮಾಕಾಂತ ಜೋಷಿ, ಎಚ್ ಬಿ ವಾಲೀಕಾರ ಮುಂತಾದ ಗಣ್ಯರು ವೇದಿಕೆಯಲ್ಲಿದ್ದರು.

ಈಗ ಕನ್ನಡದಲ್ಲಿ ಯಾವ ಚಳವಳಿಯೂ ಇಲ್ಲ. ನಿರ್ವಾತ ನೀಗುವ ಲಕ್ಷಣಗಳೂ ಇಲ್ಲ. ವಿಸ್ಮೃತಿ ಆವರಿಸಿದೆ. ಬದುಕನ್ನು ಇಡಿಯಾಗಿ ನೋಡುವ ಬರವಣಿಗೆ ಇಲ್ಲ. ಸಾಹಿತಿಗಳು ಎಲ್ಲವನ್ನೂ ಕಂಡೂ ಕಾಣದ ಹಾಗೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇದು ಪಲಾಯನವಾದವೂ ಹೌದು ಎಂದು ಆಮೂರ ಅವರು ತಮ್ಮ ಆಶಯ ಭಾಷಣದಲ್ಲಿ ವಿಷಾದ ವ್ಯಕ್ತಪಡಿಸಿದರು.

ನಮ್ಮ "ಸಂಸ್ಥೆ"ಗಳು ಸತ್ತು ಹೋಗಿವೆ. ಅವು ಯಾವ ಕಾರಣಕ್ಕೆ ಹುಟ್ಟಿಕೊಂಡವೋ ಅದರ ಉದ್ದೇಶವೇ ಮರೆಯಾಗಿದೆ. ಈ ಪಾರ್ಲಿಮೆಂಟರಿ ಡೆಮಾಕ್ರಸಿಯ ವಿಷಚಕ್ರದಿಂದ ಆಚೆಬರುವ ಕುರುಹುಗಳೂ ಗೋಚರಿಸುತ್ತಿಲ್ಲ. ಕನ್ನಡದಲ್ಲಿ ಕ್ರಿಯಾಶೀಲರಿದ್ದಾರೆ, ಸೃಜನಶೀಲರಿದ್ದಾರೆ ನಿಜ. ಆದರೆ ಯಾರಿಗೂ, ಯಾವುದಕ್ಕೂ ಒಂದು ತಾತ್ವಿಕ ನೆಲೆಗಟ್ಟೇ ಇಲ್ಲದಂಥ ಶೋಚನೀಯ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಮಲಗಿದೆ ಎಂದರು ಆಮೂರ್.

ಗಿರಡ್ಡಿ ಪ್ರಾಸ್ತಾವಿಕ ನುಡಿ : ಕನ್ನಡದ ಹೆಸರಿನಲ್ಲಿ ಜಾತ್ರೆಗಳು ನಡೆಯುತ್ತವೆ, ಉತ್ಸವಗಳು ನಡೆಯುತ್ತವೆ, ನಾನಾ ನಮೂನೆಯ ಚಟುವಟಿಕೆಗಳು ನಡೆಯತ್ತವೆ. ಆದರೆ ಕೇವಲ ಸಾಹಿತ್ಯ ಚಿಂತನೆಗೆ ಮೀಸಲಾದ ಗಂಭೀರ ಸಂಭ್ರಮ ಮೇಳೈಸುವುದು ಅಪರೂಪ. ಅದನ್ನು ಸಾಕಾರಗೊಳಿಸುವ ಫಲವೇ ಧಾರವಾಡ ಸಾಹಿತ್ಯ ಸಂಭ್ರಮದ ಉದ್ದಿಶ್ಯವೇ ವಿನಾ, ಇಲ್ಲಿ ಯಾವುದೇ ಕಾರ್ಯಸೂಚಿ ಇಲ್ಲ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಭ್ರಮದ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಸ್ಪಷ್ಟಪಡಿಸಿದರು. ನವ್ಯೋತ್ತರ ಪಂಥವನ್ನು ಹುಟ್ಟಹಾಕುವ ಅಜೆಂಡಾವನ್ನು ಧಾರವಾಡ ಮಿತ್ರರು ಹಾಕಿಕೊಂಡಿದ್ದಾರೆ ಎಂಬ ಆಪಾದನೆಗಳು ಕೇಳಿಬಂದಿದ್ವು.

ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ಈ ಸಾಹಿತ್ಯ ಚಿಂತನ ಕೂಟದಲ್ಲಿ 15 ವಿವಿಧ ಗೋಷ್ಠಿಗಳಿವೆ. ಸಂಜೆ ಹೊತ್ತು ಚಲನಚಿತ್ರ ಪ್ರದರ್ಶನವಿದೆ (ಗಿರೀಶ್ ಕಾಸರವಳ್ಳಿ ಅವರ ಕೂರ್ಮಾವತಾರ), ಶಶಿಧರ ನರೇಂದ್ರ ತಂಡದಿಂದ 'ಬೆಂದ ಕಾಳು ಆನ್ ಟೋಸ್ಟ್' ನಾಟಕ ಪ್ರದರ್ಶನವಿದೆ. ಅಂದ ಹಾಗೆ ಗಿರೀಶ್ ಕಾಸರವಳ್ಳಿ ಬಂದಿದ್ದಾರೆ. ಆರೋಗ್ಯ ಕೆಟ್ಟಿರುವುದರಿಂದ ಡಾ. ಯು.ಆರ್.ಎ ಬರಲು ಸಾಧ್ಯವಾಗದೆ ಶುಭಾಶಯ ಸಂದೇಶ ಕಳಿಸಿದ್ದಾರೆ.

ಸಮ್ಮೇಳನದ ಪ್ರಾಂಗಣದಲ್ಲಿ 10-12 ಪುಸ್ತಕ ಮಳಿಗೆಗಳಿವೆ. ಆಸಕ್ತರು ಬೆನ್ನುಡಿ, ಮುನ್ನುಡಿ, ಲೇಖಕ/ಲೇಖಕಿ ಹೆಸರು ನೋಡಿ ಖರೀದಿಸುತ್ತಿದ್ದಾರೆ. ನೀವು ಏನೇ ಅನ್ನಿ. ಕನ್ನಡಾಭಿಮಾನಿಗಳನ್ನು ಲಕ್ಷಲಕ್ಷ ಸಂಖ್ಯೆಯಲ್ಲಿ ಒಂದೆಡೆ ಸೇರಿಸಬಹುದು. ಹತ್ತು ಲೇಖಕರನ್ನು ಒಟ್ಟಿಗೆ ಕೂಡಿಹಾಕುವುದು ಕಷ್ಟ. ಚಳಿಗಾಲವೂ ಅಲ್ಲ, ಬೇಸಿಗೆಯೂ ಬಂದಿಲ್ಲ ಎನ್ನುವಂಥ ಇಂಥ ಋತುವಿನ ವೇಳೆ 130ಕ್ಕೂ ಹೆಚ್ಚು ಸಾಹಿತಿಗಳು ಒಂದೆಡೆ ಗುಡ್ಡೆ ಹಾಕಿರುವುದು ಈ ಹೊತ್ತಿನ ಬ್ರೇಕಿಂಗ್ ನ್ಯೂಸ್.

ಶನಿವಾರ ಭಾನುವಾರ ಭರಪೂರ ಗೋಷ್ಠಿಗಳಿವೆ. ಗೋಷ್ಠಿಗಳು ಮುಗಿದು ಸಭಾಭವನ ಖಾಲಿಯಾದ ನಂತರ ಮುಂದೇನು ಎನ್ನುವುದು ಪ್ರಶ್ನೆ. ಅದಕ್ಕೆ ಉತ್ತರಿಸುವವರು ಯಾರೂ ಇಲ್ಲ ಎನ್ನುವುದು ಜಿ ಎಸ್ ಆಮೂರರ ನೋವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Critic and profound scholar Dr. G S Amur declares Dharwad Literary convention open. In his key note Amur regretted that Indian writers have become dumb and deaf to the issues, challenges before every one of us. Kannada literature in particular has lost sense of purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more