ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ಸ್ವೀಕೃತವಾದರೆ ಮುಂದೆ ಏನಾಗಲಿದೆ?

By Prasad
|
Google Oneindia Kannada News

What will happen to BJP govt
ಬೆಂಗಳೂರು, ಜ. 23 : ಕರ್ನಾಟಕ ಜನತಾ ಪಕ್ಷವನ್ನು ಬೆಂಬಲಿಸುತ್ತಿರುವ ನಾಲ್ಕು ಸಚಿವರು ಮತ್ತು ಹತ್ತು ಶಾಸಕರು ಸಚಿವ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದರಿಂದ ಜಗದೀಶ್ ಶೆಟ್ಟರ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ಉಳಿಯುತ್ತಾ, ಉರುಳುತ್ತಾ ಎಂಬುದು ರಾಜ್ಯದ ಜನತೆಯ ಪ್ರಶ್ನೆಯಾಗಿದೆ.

ಈ ಬೃಹನ್ನಾಟಕವನ್ನು ಮತ ಹಾಕಿರುವ ರಾಜ್ಯದ ಮತಬಾಂಧವರು ಟಿವಿಯಲ್ಲೋ, ಇಂಟರ್ನೆಟ್ಟಿನಲ್ಲೋ ಗಮನಿಸುತ್ತಿದ್ದಾರೆ. ಇದೇನಪ್ಪ ನಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳು ಇದೇನು ಮಾಡುತ್ತಿದ್ದಾರೆ, ಮುಂದಿನ ಚುನಾವಣೆಯಲ್ಲಿ ಏನು ಮಾಡಬೇಕೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ಈ ನಡುವೆ, ಜಗದೀಶ್ ಶೆಟ್ಟರ್ 'ಲಜ್ಜೆಗೆಟ್ಟ' ಸರಕಾರ ಮುಂದುವರಿಯಲು ಬಿಡುವುದಿಲ್ಲ, ಫೆ.8ರಂದು ರಾಜ್ಯ ಬಜೆಟ್ ಮಂಡಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹಠ ತೊಟ್ಟಿರುವ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪನವರು ತಮ್ಮ ದಂಡಿನೊಂದಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾಗಿದ್ದಾರೆ. ಏಕೆಂದರೆ, ರಾಜೀನಾಮೆ ಪತ್ರಿ ಸ್ವೀಕರಿಸಲು ಸ್ಪೀಕರ್ ಕೆಜಿ ಬೋಪಯ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ರಾಜ್ಯಪಾಲರು ಶೆಟ್ಟರ್ ಸರಕಾರಕ್ಕೆ ಬಹುಮತ ಸಾಬೀತುಪಡಿಸಲು ಕೇಳುತ್ತಾರಾ? ಗೊತ್ತಿಲ್ಲ. ಆದರೆ, ಎಲ್ಲ ಪಕ್ಷಗಳು ಹೊಂದಿರುವ ಬಲಾಬಲಗಳತ್ತ ಒಂದು ನೋಟ ಹರಿಸಿಬಿಡೋಣ. ಸದನ ಸದಸ್ಯರ ಒಟ್ಟು ಸಂಖ್ಯೆ 224. ಇದರಲ್ಲಿ ಯಡಿಯೂರಪ್ಪ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟರು ರಾಜೀನಾಮೆ ನೀಡಿರುವುದರಿಂದ ಒಟ್ಟು ಸಂಖ್ಯೆ 222ಕ್ಕೆ ಇಳಿದಿದೆ.

ಪಕ್ಷಗಳ ಬಲಾಬಲ ಹೀಗಿದೆ

ಬಿಜೆಪಿ - 118 (ಸ್ಪೀಕರ್ + 1 ಪಕ್ಷೇತರ)
ಕಾಂಗ್ರೆಸ್ - 71
ಜೆಡಿಎಸ್ - 26
ಪಕ್ಷೇತರ + ಬಿಎಸ್ಆರ್ ಕಾಂಗ್ರೆಸ್ - 7
ಖಾಲಿ ಇರುವುದು - 2

ಈಗ ಕೆಜೆಪಿ ಬೆಂಬಲಿಸುತ್ತಿರುವ 13 ಶಾಸಕರು ನೀಡುತ್ತಿರುವ ರಾಜೀನಾಮೆ ಸ್ವೀಕೃತವಾದರೆ ಬಿಜೆಪಿಯ ಬಲ 105ಕ್ಕೆ ಕುಸಿಯುತ್ತದೆ ಮತ್ತು ಸದನದ ಒಟ್ಟು ಸದಸ್ಯರ ಸಂಖ್ಯೆ 209ಕ್ಕೆ ಇಳಿಯಲಿದೆ. ಒಂದು ವೇಳೆ ರಾಜ್ಯಪಾಲರು ಶೆಟ್ಟರ್ ಅವರಿಗೆ ಬಹುಮತ ಸಾಬೀತುಪಡಿಸಲು ಕೋರಿದರೆ ಸರಕಾರ ಉಳಿಸಿಕೊಳ್ಳಲು (104) ಇಷ್ಟು ಬಲ ಸಾಕು.

ಒಂದು ವೇಳೆ 13ಕ್ಕಿಂತ ಹೆಚ್ಚು ಶಾಸಕರು ಬಿಜೆಪಿಯನ್ನು ಬಿಟ್ಟರೆ ಬಿಜೆಪಿ ಸರಕಾರ ತೊಂದರೆಗೆ ಸಿಲುಕುವುದು ಖಚಿತ. ಇದೂ ಕೂಡ ಉಳಿದ ಪಕ್ಷಗಳು ಯಾವ ಪಕ್ಷದ ಪರ ಮತ ಹಾಕಲಿವೆ ಎಂಬುದರ ಮೇಲೆ ಅವಲಂಬಿತವಾಗುತ್ತದೆ. ಬಿಜೆಪಿ ಸರಕಾರವನ್ನು ಬೀಳಿಸುವ ಯಡಿಯೂರಪ್ಪ ಯತ್ನಕ್ಕೆ ಜೆಡಿಎಸ್ ಸಹಕಾರ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ನಡೆ ಇನ್ನೂ ನಿಗೂಢ. ಜೆಡಿಎಸ್ಸನ್ನು ನಂಬುವಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಖಂಡಿತ ಇಲ್ಲ.

ಫೆ.4ರಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಫೆ.8ಕ್ಕೆ ಶೆಟ್ಟರ್ ಅವರು ಬಜೆಟ್ ಮಂಡಿಸುವುದು ಶತಃಸಿದ್ಧ ಎಂದಿದ್ದಾರೆ. ಜಗದೀಶ್ ಶೆಟ್ಟರ್ ಸರಕಾರ ಬಹುಮತ ಕಳೆದುಕೊಂಡಿದೆ ಎಂಬುದು ರಾಜ್ಯಪಾಲರಿಗೆ ಮನವರಿಕೆಯಾದರೆ ಈ ಅಧಿವೇಶನದಲ್ಲಿ ಬಿಜೆಪಿ ಸರಕಾರಕ್ಕೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಕೋರಬಹುದು. ಈ ಸಂಖ್ಯಾಬಲ ಇಷ್ಟೇ ಇರುತ್ತದೆ ಎಂದು ಹೇಳಲಾಗುವುದಿಲ್ಲ.

ಸದ್ಯಕ್ಕೆ 13 ಶಾಸಕರು ರಾಜೀನಾಮೆ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇಂಥ ಸಮಯದಲ್ಲಿ ಸ್ಪೀಕರ್ ವಿದೇಶ ಪ್ರವಾಸಕ್ಕೆ ಮತ್ತು ಮುಖ್ಯಮಂತ್ರಿ ಉತ್ತರ ಕರ್ನಾಟಕ ಪ್ರವಾಸಕ್ಕೆ ತೆರಳಿದ್ದಾರೆ. ಅತ್ತಕಡೆ ಬಿಜೆಪಿ ಹೈಕಮಾಂಡ್ ತನಗೂ ಕರ್ನಾಟಕದ ಬಿಜೆಪಿ ವಿದ್ಯಮಾನಕ್ಕೂ ಸಂಬಂಧವಿಲ್ಲವೆಂಬಂತೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ಇತ್ತಕಡೆ ರಾಜಕೀಯ ಪಂಡಿತರು ಮತ್ತು ಕಾನೂನು ತಜ್ಞರು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

English summary
What will happen to Jagadish Shettar lead BJP govt if resignation of 13 MLAs, supporting KJP and Yeddyurappa, are accepted by speaker. Now, resigning MLAs have approached governor to take further action in absence of speaker, who is on foreign tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X