ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.26, 27 ಧಾರವಾಡದಲ್ಲಿ ಹಳೆ ವಿದ್ಯಾರ್ಥಿಗಳ ಮಿಲನ

By ಗುರು ಕುಲಕರ್ಣಿ, ಧಾರವಾಡ
|
Google Oneindia Kannada News

ನಮ್ಮ ಜನಪದ ಸಾಹಿತ್ಯದ ತುಂಬ ತವರಿನ ಕನವರಿಕೆಯೇ ಅರ್ಧದಷ್ಟಿದೆ. ಸುಲಭ ಸಂಪರ್ಕ ಸಾಧ್ಯವಿಲ್ಲದ ದಿನಗಳಲ್ಲಿ ಜನಪದದ ಹೆಣ್ಣು ತನ್ನ ನಿತ್ಯ ಕೆಲಸದಲ್ಲಿ ತನ್ನ ತವರ ನೆನಪನ್ನು ಹಾಡಾಗಿ ಹಾಡಿರುವುದು ಸ್ವಾಭಾವಿಕ. ಸಿನೆಮಾಗಳಲ್ಲಿ, ಟೀವಿ ಸೀರಿಯಲ್ಲುಗಳಲ್ಲಿ ಕೂಡ ತವರಿನ ಸೆಂಟಿಮೆಂಟು ಕರ್ಚೀಪಿನಲ್ಲಿ ಕಡಲುಕ್ಕಿಸುತ್ತದೆ.

ಆಧುನಿಕ ಕನ್ನಡ ಸಾಹಿತ್ಯದಲ್ಲೂ ತವರು ತನ್ನ ಸ್ಥಾನ ಗಳಿಸಿಕೊಂಡಿದೆ. ನರಸಿಂಹಸ್ವಾಮಿ ಪದ್ಯಗಳಲ್ಲಿ ನಾಯಕಿ ತನ್ನ 'ತವರೂರ ದಾರಿಯಲಿ ತೆಂಗುಗಳು ತಲೆದೂಗಿ ಬಾಳೆಗಳು ತೋಳ ಬೀಸುವುದನ್ನು' ನೋಡುತ್ತಾ ತವರಿಗೆ ಹೋದರೆ, ಅಲ್ಲಿ 'ತವರ ಸುಖ'ದಲ್ಲಿ ಜಗವನ್ನೇ ಮರೆಯಬಹುದಾದಂಥವಳು.

ಒಟ್ಟಿನಲ್ಲಿ "ಹೆಣ್ಣು ಮತ್ತು ತವರು" ಎಂಬ ವಿಷಯದ ಬಗ್ಗೆ ಒಂದು ಪಿಎಚ್.ಡಿನೇ ಮಾಡಬಹುದು, ಅಷ್ಟಿದೆ ಆ ವಿಷಯದ ಹರವು. "ಹೆಣ್ಣಿಗೆ ಯಾಕಷ್ಟು ತವರಿನ ಮೋಹ, ಯಾಕಷ್ಟು ಹಾತೊರೆಯುವಿಕೆ, ತವರಿಗೆ ಹೋಗುವಾಗ ಯಾಕಷ್ಟು ಸಂಭ್ರಮ? ಖೋಡಿ ಗಂಡು ಜೀವಕ್ಕೆ ಯಾಕೆ ಸುಖ, ಆ ಸಂಭ್ರಮ ಇಲ್ಲ?" ಎಂದು ಕೊಳ್ಳುತ್ತಿದ್ದೆ. ಆದರೆ ಈಗ ನನಗೂ ತವರ ಹಂಬಲದ ಒಂದು ಝಲಕು ಅನುಭೂತಿಗೆ ಬರುತ್ತಿದೆ.

ನಮ್ಮ ಶಾಲೆಯಾದ ಧಾರವಾಡದ ಜವಾಹರ ನವೋದಯ ವಿದ್ಯಾಲಯಕ್ಕೆ ಇಪ್ಪತ್ತೈದು ವರುಷವಾಗಿ, ಆ ಬೆಳ್ಳಿ ಸಂಭ್ರಮಕ್ಕೆ ಹಳೆಯ ವಿದ್ಯಾರ್ಥಿಗಳಾದ ನಾವೂ ಹೋಗುತ್ತಿದ್ದೇವೆ. ಜನವರಿ 26, 27ರಂದು ನಡೆಯುವ ಬೆಳ್ಳಿಹಬ್ಬಕ್ಕೆ ಹೋಗಲು ತಯರಿ ನಡೆಸಿರುವ ನನಗೆ, ಹೆಣ್ಣು ತವರಿಗೆ ಹೋಗುವಾಗಿನ ಸಂಭ್ರಮದ ಸ್ಯಾಂಪಲ್ ಅನುಭವ ಸಿಗುತ್ತಿದೆ.

Jawahar Navodaya Vidyalaya, Dharwad

ಎಲ್ಲರಿಗೂ ತಾವು ಕಲಿತ ಶಾಲೆ ತವರು ಮನೆಯಿದ್ದಂತೆಯೇ ಸರಿ. ಆದರೆ ಜವಾಹರ ನವೋದಯ ವಿದ್ಯಾಲಯ, ಅದರ ವಿದ್ಯಾರ್ಥಿಗಳಿಗೆ ತವರು ಮನೆಯಷ್ಟೇ ಅಲ್ಲ, ಅದಕ್ಕಿಂತ ಒಂದು ಗುಲಗಂಜಿ ತೂಕದಷ್ಟು ಜಾಸ್ತಿನೇ. ಎಲ್ಲಾ ಶಾಲೆಗಳು ಬರೀ ವಿದ್ಯೆ ಕಲಿಸಿದರೆ, ಕೇಂದ್ರ ಸರಕಾರದಿಂದ ಜಿಲ್ಲೆಗೊಂದರಂತೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಎಂದು ರೂಪಿತವಾದ ನವೋದಯ ಶಾಲೆಗಳು ವಿದ್ಯಾರ್ಥಿಗಳಿಗೆ ಉಚಿತ ವಸತಿ, ಆಹಾರ, ಸಮವಸ್ತ್ರ, ಪುಸ್ತಕ ಕೊಟ್ಟು ವಿದ್ಯಾದಾನ ಮಾಡುತ್ತಿವೆ. ಹೀಗಾಗಿ ಹಳೇ ನವೋದಯನ್ನರಿಗೆ ತಮ್ಮ ಶಾಲೆಯ ಋಣ ಒಂಚೂರು ಜಾಸ್ತಿನೇ.

1987ರಲ್ಲಿ ಶುರುವಾದ ಧಾರವಾಡದ ಕ್ಯಾರಕೊಪ್ಪ ರಸ್ತೆಯಲ್ಲಿರುವ ನವೋದಯ ಶಾಲೆ ಈ ವರುಷ ತನ್ನ ಬೆಳ್ಳಿಹಬ್ಬ ಆಚರಿಸುತ್ತಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಈಗ ವೈದ್ಯರು, ಪೊಲೀಸ್ ಅಧಿಕಾರಿಗಳು, ಶಿಕ್ಷಕರು, ಸೈನ್ಯಾಧಿಕಾರಿಗಳು, ಇಂಜಿನಿಯರ್ ಆಗಿರುವ ಸುಮಾರು ಹದಿನೈದು ನೂರು ಜನ, ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ ಮತ್ತೆ ಸೇರಲಿದ್ದಾರೆ. ಶಾಲೆಯ ಈಗಿನ ಶಿಕ್ಷಕ ವರ್ಗ, ವಿದ್ಯಾರ್ಥಿಗಣ, ಹಳೆಯ ವಿದ್ಯಾರ್ಥಿಗಳು ಸೇರಿ ಈ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಧಾರವಾಡದ ಸಂಸದರಾಗಿರುವ ಪ್ರಹ್ಲಾದ ಜೋಷಿಯವರು ಮತ್ತು ನವೋದಯ ವಿದ್ಯಾಲಯ ಸಮಿತಿಯ ವಿ.ವೆಂಕಟರೆಡ್ಡಿ ಅತಿಥಿಗಳಾಗಿ, ಧಾರವಾಡದ ಜಿಲ್ಲಾಧಿಕಾರಿಗಳಾದ ಸಮೀರ್ ಶುಕ್ಲಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿ ಸೇವೆ ಸಲ್ಲಿಸಿದ ಹಳೆಯ ಶಿಕ್ಷಕರನ್ನು ಸನ್ಮಾನಿಸುವುದು, ಬೆಳ್ಳಿಹಬ್ಬದ ಸ್ಮರಣಸಂಚಿಕೆ ಹೊರತರುವುದು ಇತ್ಯಾದಿ ರೂಢಿಗತ ಕಾರ್ಯಕ್ರಮಗಳ ಜೊತೆಯಲ್ಲಿ ಇನ್ನಿತರ ಹಲವು ಸಮಾಜೋಪಯೋಗಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ಶಾಲೆಯಲ್ಲಿ ಕಲಿತು ವೈದ್ಯರಾಗಿರುವವರು ಹತ್ತಿರದ ಕ್ಯಾರಕೊಪ್ಪದ ಹಳ್ಳಿಗರಿಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸುತ್ತಿದ್ದಾರೆ. ಶಾಲೆಯ ಆವರಣದಲ್ಲಿ ಈ ಬೆಳ್ಳಿಹಬ್ಬದ ನೆನಪಿಗೆ ಗಿಡಗಳನ್ನು ನೆಟ್ಟು ಒಂದು 'ಬೆಳ್ಳಿಬನ'ವನ್ನು ಮಾಡುವುದು, ಮುಂದಿನ ವಿದ್ಯಾರ್ಥಿಗಳ ಸಹಾಯಕ್ಕಾಗಿ ಕಾರ್ಯಕ್ರಮ ರೂಪಿಸುವುದು, ಶಾಲೆಯ ಗ್ರಂಥಾಲಯಕ್ಕೆ ಪ್ರತಿಯೊಬ್ಬ ಹಳೇ ವಿದ್ಯಾರ್ಥಿ ಒಂದೊಂದು ಪುಸ್ತಕ ದಾನ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ಸಾಮಾಜಿಕ ಕಾಳಜಿ ಇರುವ ನವೋದಯನ್ನರು ಹಾಕಿಕೊಂಡಿದ್ದಾರೆ.

ನಾನು ಈ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಹಳೆಯ ಗೆಳೆಯರನ್ನು ಭೇಟಿಯಾಗಿ, ಅವರು ನಡೆಸಿರುವ ಕಾರ್ಯಕ್ರಮದಲ್ಲಿ ನನ್ನ ಅಳಿಲು ಸೇವೆ ಸಲ್ಲಿಸಲು ಸಂಭ್ರಮದಿಂದ ಹೊರಟಿದ್ದೇನೆ. ನಮ್ಮ ಕಾರ್ಯಕ್ರಮ ಯಶಸ್ವಿಯಾಗಲು ನಿಮ್ಮದೊಂದು ಶುಭ ಹಾರೈಕೆ ಇರಲಿ.

English summary
Jawahar Navodaya Vidyalaya in Dharwad is celebrating silver jubilee on January 26-27, 2013. Alumni of old students, teachers have organized various activities to celebrate the memorable event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X