ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ವಿಧಿವಶ

By Mahesh
|
Google Oneindia Kannada News

Balagangadharanatha Maha Swamiji Demise
ಬೆಂಗಳೂರು, ಜ.13: ಆದಿಚುಂಚನಗಿರಿ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳು ಭಾನುವಾರ(ಜ.13) ಸಂಜೆ ಕೆಂಗೇರಿ ಸಮೀಪದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿಗಳು ವಿಧಿವಶರಾದ ದುಃಖತಪ್ತ ಸುದ್ದಿಯನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.

ಎದೆನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಗಳನ್ನು ಶನಿವಾರ (ಜ.12) ಚಿಕಿತ್ಸೆಗಾಗಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಭಾನುವಾರ ರಕ್ತದೊತ್ತಡ ಹೆಚ್ಚಾಗಿ ತೀವ್ರ ಅಸ್ವಸ್ಥರಾಗಿ ಸಂಜೆ 7 ಗಂಟೆ ವೇಳೆಗೆ ಮತ್ತೊಮ್ಮೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು ಎಂದು ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಡಾ. ವೆಂಕಟರಮಣ ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ಧಾರ್ಮಿಕ ಜಾಗೃತಿ ಮೂಡಿಸಿದ ಪೂಜ್ಯ ಸ್ವಾಮೀಜಿಗಳ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವುಂಟಾಗಿದೆ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಒದಗಿಸಲು ಸರ್ಕಾರವನ್ನು ಒತ್ತಾಯಿಸಿದ್ದರು. ನಮಗೆ ಮಾರ್ಗದರ್ಶಕರು ಇಲ್ಲದ್ದಂತಾಗಿದೆ. 5 ಕೋಟಿ ಸಸಿ ನೆಟ್ಟು ಹಸಿರು ಕ್ರಾಂತಿ ಹುಟ್ಟುಹಾಕಿದ್ದರು. ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದರು.

ಅಂತಿಮ ಸಂಸ್ಕಾರ ವಿಧಿ: ಶಿಕ್ಷಣ ಕ್ಷೇತ್ರಕ್ಕೆ ಶ್ರೀಗಳು ನೀಡಿದ ಕೊಡುಗೆ ಅಪಾರ. ತಮಿಳುನಾಡು, ಕಾಶಿಯಲ್ಲೂ ಮಠ ಇದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದರು. ಬೆಂಗಳೂರಿನ ವಿಜಯನಗರ ಮಠದಲ್ಲಿ ರಾತ್ರಿ 9.30 ರಿಂದ ಸೋಮವಾರ ಬೆಳಗ್ಗೆ 9 ಗಂಟೆ ತನಕ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ.

ಅಲ್ಲಿಂದ ಸಾರ್ವಜನಿಕ ಮೆರವಣಿಗೆ ಮೂಲಕ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ಸಂಜೆ 4 ಗಂಟೆಗೆ ನೆರವೇರಿಸಲಾಗುವುದು ಎಂದು ಗೃಹಸಚಿವ ಆರ್ ಅಶೋಕ್ ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ಸ್ವಾಮೀಜಿ ಅವರಿಗೆ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಕಿಡ್ನಿ, ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳಿತ್ತು. ಬೈಪಾಸ್ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಮೂರು ಬಾರಿ ಆಂಜಿಯೋಪಾಸ್ಟಿ ಸರ್ಜರಿ ಮಾಡಲಾಗಿತ್ತು.

ಗಂಗಾಧರಯ್ಯ ಎಂಬ ಮೂಲ ನಾಮ ಹೊಂದಿದ್ದ ಬಾಲಗಂಗಾಧರನಾಥ ಸ್ವಾಮೀಜಿಗಳು, ಚಿಕ್ಕಲಿಂಗೇಗೌಡ ಹಾಗೂ ಬೋರಮ್ಮ ಅವರ ಪುತ್ರರಾಗಿ 1945ರಲ್ಲಿ ಜನವರಿ 18 ರಂದು ಬಾನಂದೂರಿನಲ್ಲಿ ಜನಿಸಿದರು.

1968ರಲ್ಲಿ ಬೆಂಗಳೂರಿನ ಕೈಲಾಸ ಆಶ್ರಮದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. 1974ರ ಸೆ.24ರಂದು ಭೈರವ ಕ್ಷೇತ್ರ ಆದಿಚುಂಚನಗಿರಿಯ 71ನೇ ಪೀಠಾಧ್ಯಕ್ಷರಾದರು. ಆದಿಚುಂಚನಗಿರಿ ಟ್ರಸ್ಟ್ ಹೆಸರಿನಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಪರಿಸರ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ, ವೇದ್ಯಾಧ್ಯಯನ, ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿ ಚಟುವಟಿಕೆಯಲ್ಲಿ ಬಾಲಗಂಗಾಧರ ಸ್ವಾಮೀಜಿಗಳು ತೊಡಗಿದ್ದರು. ಭಾರತದ ಮೂರನೇ ಅತಿದೊಡ್ಡ ನಾಗರೀಕ ಗೌರವವಾದ ಪದ್ಮಭೂಷಣ ಪ್ರಶಸ್ತಿಗೆ ಶ್ರೀಗಳು 2010ರಲ್ಲಿ ಭಾಜನರಾಗಿದ್ದರು. ಅಪಾರ ಪ್ರಮಾಣದ ಭಕ್ತ ಸಮೂಹವನ್ನು ಶ್ರೀಗಳು ಅಗಲಿದ್ದಾರೆ.

English summary
His Holiness Jagadguru Sri Sri Sri Balagangadharanatha Maha Swamiji passed away today(Jan.13) at BGS hospital, Bangalore. The seer is the 71st Peethaadhipathi of the well known Sri Adichunchanagiri Maha Samsthana Mutt, Nelamangala Taluk, Mandya District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X