ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಆರ್ ಮಾರುಕಟ್ಟೆಯ ಅವ್ಯವಸ್ಥೆಗೆ ಬಾಲಕ ಬಲಿ

By Prasad
|
Google Oneindia Kannada News

Boy dies after falling from 2nd floor in KR Market
ಬೆಂಗಳೂರು, ಜ. 9 : ಧೂಳು, ಕೊಳಕು, ಅವ್ಯವಸ್ಥೆ, ನಿರ್ಲಕ್ಷ್ಯ, ಅನಾರೋಗ್ಯದ ಬೀಡಾಗಿರುವ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಅವಘಡದಿಂದಾಗಿ, ಎರಡನೇ ಮಹಡಿಯಿಂದ ಬಿದ್ದು 6 ವರ್ಷದ ಮಗುವೊಂದು ದುರಂತ ಸಾವಿಗೆ ಈಡಾಗಿದೆ.

ಮಗುವನ್ನು 6 ವರ್ಷದ ಆದಿಲ್ ಎಂದು ಗುರುತಿಸಲಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರು ಶಬಾನಾ ಎಂಬಾಕೆಯ ಎರಡನೇ ಮಗ ಆದಿಲ್. ಹೂವಿನ ಮಾರುಕಟ್ಟೆಯ ಎರಡನೇ ಮಹಡಿಯಲ್ಲಿ ಆಟವಾಡುತ್ತಿದ್ದಾಗ, ತೂತಾಗಿದ್ದ ಕಬ್ಬಿಣದ ಮೆಷ್ ಮುಖಾಂತರ ಕಾಲುಜಾರಿ ಬಿದ್ದು ಮೃತನಾಗಿದ್ದಾನೆ.

ಎರಡನೇ ಮಹಡಿಯಲ್ಲಿ ಇದ್ದ ಅಗಲದ ಜಾಗವನ್ನು ಕಬ್ಬಿಣದ ಮೆಷ್‌ನಿಂದ ಮುಚ್ಚಲಾಗಿತ್ತಾದರೂ, ಕಸವನ್ನು ತಳ್ಳಲೆಂದು ಆ ಮೆಷ್ಷಿಗೇ ಕನ್ನ ಕೊರೆಯಲಾಗಿತ್ತು. ಆ ತೂತಿಗೆ ಗೋಣಿಚೀಲ ಕಟ್ಟಿತ್ತಾದರೂ ಅದು ಕೂಡ ಸಡಿಲವಾಗಿತ್ತು. ಈಗ ಆ ಕನ್ನವನ್ನು ಅವರು ಕೊರೆದಿದ್ದು, ಇವರು ಕೊರೆದಿದ್ದು ಎಂದು ವ್ಯಾಪಾರಿಗಳು ಬಿಬಿಎಂಪಿ ಮೇಲೆ, ಬಿಬಿಎಂಪಿ ಅಲ್ಲಿನ ವ್ಯಾಪಾರಿಗಳ ಮೇಲೆ ಕೊಚ್ಚೆ ಎರಚಾಟ ಪ್ರಾರಂಭಿಸಿದೆ.

ಈ ಘಟನೆ ನಡೆದಿದ್ದು ಬೆಳಿಗ್ಗೆ 8.30ಕ್ಕಾದರೂ ಅರಿವಿಗೆ ಬಂದಿದ್ದು 10.30ರ ಸುಮಾರಿಗೆ ಎಂಬುದು ಇನ್ನೊಂದು ದುರಂತ. ಆತ ಬಿದ್ದ ಸ್ಥಳದಲ್ಲಿ ಗೋಣಿಚೀಲಗಳು ಮತ್ತು ತರಕಾರಿ, ಹೂವಿನ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ದುರಂತ ಸಂಭವಿಸಿರುವುದು ತಡವಾಗಿ ತಿಳಿದುಬಂದಿದೆ. ಅಷ್ಟರಲ್ಲಿ ದುರಂತ ನಡೆದುಹೋಗಿತ್ತು.

ಕೆ.ಆರ್. ಮಾರುಕಟ್ಟೆ ಎಂಬುದು ಅನಾರೋಗ್ಯದ ಗೂಡಾಗಿದೆ, ಇಲ್ಲಿ ವ್ಯವಸ್ಥೆ ಎಂಬುದೇ ಇಲ್ಲ. ಇಲ್ಲಿ ವ್ಯಾಪಾರಿಗಳೆಲ್ಲ ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ಕೊಳ್ಳಲು ಬರುವ ಗ್ರಾಹಕರಿಗೆ ಕೂಡ ಸಾಕಷ್ಟು ಅನನುಕೂಲವಾಗಿದೆ. ಇದನ್ನು ಬಿಬಿಎಂಪಿ ಗಮನಕ್ಕೆ ಅನೇಕ ಬಾರಿ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಸ ತೆಗೆದುಕೊಂಡು ಹೋಗಲು ಕೂಡ ಬಿಬಿಎಂಪಿ ನಿಯಮಿತವಾಗಿ ಬರುವುದಿಲ್ಲ ಎಂದು ವ್ಯಾಪಾರಿಗಳು ದೂರುತ್ತಾರೆ.

ಪೊಲೀಸರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಆರಂಭಿಸಿದ್ದಾರೆ. ಮಗನನ್ನು ಕಳೆದುಕೊಂಡು ರೋದಿಸುತ್ತಿರುವ ಬಡ ವ್ಯಾಪಾರಿಗೆ ನ್ಯಾಯ ದೊರೆಯುವುದೆ?

English summary
6-year-old boy Aadil died after falling through mesh from 2nd floor of KR Market on 9th January, 2013. The boy was playing on the 2nd floor with his brother when tragic incident happened. Who is to be blamed for this tragedy? BBMP or traders?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X