ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಜ್ಜನ ಶೆಟ್ಟರಿಗೆ ಕ್ಯಾನ್ಸರ್, ಡಾ. ಪರಮೇಶಿಗೆ ಏನಾಗಿದೆ?

By Srinath
|
Google Oneindia Kannada News

ಬೆಂಗಳೂರು‌, ಜ.8: OMG! 'ಕಾಲ್ನಡಿಗೆಯಲ್ಲಿರುವ ಕೈನಾಯಕರಿಗೆ ಇದ್ದಕ್ಕಿದ್ದಂತೆ ಏನಾಗಿದೆ. ಅದರಲ್ಲೂ ಪಕ್ಷದ ಸಾರಥ್ಯ ಹೊತ್ತ ಡಾ ಪರಮೇಶ್ವರ್ ಗೆ ಏನಾಗಿದೆ? ನಾಡಿನ ದೊರೆಯ ಬಗ್ಗೆ ಪ್ರಮುಖ ಪ್ರತಿಪಕ್ಷದ ನಾಯಕನೊಬ್ಬ ಇಷ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡುವುದಾ? ಛೆ!

ಇಂದು ಬೆಳಗ್ಗೆ ಡಾ. ಪರಮೇಶಿ ಫುಲ್ ಲಹರಿಯಲ್ಲಿ ಡೊಳ್ಳು ಬಾರಿಸುತ್ತಾ ಕೊಪ್ಪಳದಲ್ಲಿ ಪಾದಯಾತ್ರೆ ನಡೆಸುತ್ತಿದ್ದ ದೃಶ್ಯಗಳು ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ನೋಡಿ ಸಂಪಾದಕರಾದ ಶಾಮ್, ಪರಮೇಶಿ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನಾಡಿದ್ದರು. 'ಹೈಕಮಾಂಡ್ ಪಕ್ಷದ ಸಾರಥ್ಯ ವಹಿಸಿಕೊಟ್ಟಿದ್ದೇ ಮನುಷ್ಯ ನಿಜಕ್ಕೂ ಖುಷಿಯಾಗಿದ್ದಾರೆ. ಭಿನ್ನಮತದಿಂದ ಬಳಲುತ್ತಿದ್ದ ಪರಮೇಶಿ, ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಖುಷಿಯಾಗಿದ್ದುದು ನೋಡಿರಲಿಲ್ಲ. ಅವರ ಬಗ್ಗೆ ನಾಲ್ಕು ಪ್ಯಾರಾ ಬರೆಯಬೇಕು' ಎಂದು ಫರ್ಮಾನು ಹೊರಡಿಸಿದ್ದರು.

if-cm-shettar-has-cancer-aids-what-abt-kpcc-parameshwar

ಅದನ್ನು ಪಾಲಿಸೋಣ ಅಂತ ಇನ್ನೇನು ಪರಮೇಶಿ ಬಗ್ಗೆ ಬರೆಯಬೇಕು. ಆದರೆ ಪಬ್ಲಿಕ್ ಟಿವಿ ಒಂದೇ ಸಮನೆ ಆರ್ಭಟಿಸತೊಡಗಿತು. ವೀರಾವೇಶದಿಂದ ಮಾತನಾಡುತ್ತಿದ್ದ ಪರಮೇಶಿ 'ಎದುರಿಗೇ ಜಗದೀಶ್ ಶೆಟ್ಟರ್ ಮರಣಶಯ್ಯೆಯಲ್ಲಿ ಮಲಗಿದ್ದಾರೆ' ಎಂಬಂತೆ ಪರಿಭಾವಿಸಿಕೊಂಡು 'ಶೆಟ್ಟರ್ ನಿಮಗೆ ಕ್ಯಾನ್ಸರ್ ಬಂದಿದೆ, ಏಡ್ಸ್ ಬಂದಿದೆ' ಎಂದೆಲ್ಲಾ ಪ್ರಲಾಪಿಸಿಬಿಟ್ಟರು ಪರಮೇಶ್ವರರು.

ನಿಜಕ್ಕೂ ತುಂಬಾನೇ ಬೇಸರವಾಯಿತು. ಬಿಜೆಪಿಯ ಮುಖ್ಯಮಂತ್ರಿಯನ್ನು ಹೀಗೆಲ್ಲಾ ಕಾಲೆಳೆಯುತ್ತಿದ್ದರಲ್ಲಾ ಅಂಥ ಅಲ್ಲ. ವಿಧಾನಸಭೆಗೆ ಇನ್ನೂ ಚುನಾವಣೆ ದಿನಾಂಕವೇ ಪ್ರಕಟವಾಗಿಲ್ಲ. ಆಗಲೇ ಈ ಘನಂಧಾರಿ ನಾಯಕರ ನಾಲಿಗೆ/ನಡಿಗೆಗಳು ಸಡಿಲವಾಗಿವೆಯಲ್ಲಾ ಎಂದು ಖೇದವಾಯಿತು. ಕರ್ನಾಟಕದ ಜನತೆ ಇನ್ನೂ ಏನೇನು ನೋಡಬೇಕೋ/ ಕೇಳಿಸಿಕೊಳ್ಳಬೇಕು ಎಂದು ಒಂದು ಕ್ಷಣ ದಿಗಿಲುಗೊಂಡಿದ್ದಂತೂ ಸುಳ್ಳಲ್ಲ.

'ಶೆಟ್ಟರ್ ಗೆ ಕ್ಯಾನ್ಸರ್ ಅಂತೆ! 'ಡಾಕ್ಟರ್' ಪರಮೇಶಿ ಹೇಳ್ತಿದ್ದಾರೆ' ಎಂಬುದನ್ನೂ ಮತ್ತೆ ಸಂಪಾದಕರ ಗಮನಕ್ಕೆ ತಂದಾಗ... 'ಇದಿನ್ನೂ ಆರಂಭವಷ್ಟೇ. ಮುಂದಿದೆ ಮಾರಿ ಹಬ್ಬ. ಕೇಳಬಾರದ್ದೆಲ್ಲಾ/ನೋಡಬಾರದ್ದೆಲ್ಲಾ ವಿಜೃಂಭಿಸಲಿದೆ. ಪರಮೇಶಿ ಒಳ್ಳೆಯವರೇ. ಆದರೆ ಹಾಳು ಚುನಾವಣೆಯೇ ಹಾಗೆ. ಹಾಗೆಲ್ಲಾ ಆಡಬಾರದಂತಹವರ ಬಾಯಲ್ಲೂ ಇಂಥಾ ಮಾತುಗಳನ್ನೆಲ್ಲಾ ಆಡಿಸಿಬಿಡುತ್ತದೆ' ಎಂದು ಶಾಮ್ ಸಂಪಾದಕೀಯ ಷರಾ ಬರೆದು ಎದ್ದುಹೋದರು.

ಆಗ ಅನ್ನಿಸಿದ್ದು... ಪರಮೇಶ್ವರ್ ಎದುರಿಗೆ ಸಿಕ್ಕಿದರೆ 'ಏನೂ ಅಂತ ಇಂಥಾ ಮಾತ್ನಾಡಿದಿರಿ ಪರಮೇಶ್ವರರೇ? ಕನಿಷ್ಠ ಸೌಜನ್ಯವೂ ಇಲ್ಲದೆ, ಶಿಷ್ಟಾಚಾರವನ್ನು ಮರೆತು, ಒಬ್ಬ ಮುಖ್ಯಮಂತ್ರಿ ಬಗ್ಗೆ ಹೀಗೆ ವ್ಯಕ್ತಿಗತ ನಿಂದನೆಯಲ್ಲಿ ತೊಡಗಲು ನಿಮಗೆ ಮನಸ್ಸಾದ್ರೂ ಹೇಗೆ ಬಂತು?' ಎಂದು ಕೇಳಬೇಕು ಎನಿಸಿತು. ಆದರೆ ಮಾನಗೆಟ್ಟ, ಲಜ್ಜೆಗೆಟ್ಟ ರಾಜಕಾರಣಿಗಳು ಇಂತಹ ಸಂವೇದಗಳಿಗೆ ಎಲ್ಲಿ ಸ್ಪಂದಿಸುತ್ತಾರೆ ಎಂದು ಸ್ವಗತದಲ್ಲಿ ಹೇಳಿಕೊಳ್ಳುತ್ತಾ...

ಈ ಜಗದೀಶ್ ಶೆಟ್ಟರ್ ತಮ್ಮ ಜೀವನದುದ್ದಕ್ಕೂ ಗಳಿಸಿ/ಉಳಿಸಿಕೊಂಡು ಬಂದಿದ್ದ ''ಸಜ್ಜನ'' ಖ್ಯಾತಿಯನ್ನು ತಮ್ಮ ವಿವೇಕವಿಲ್ಲದ/ಅರ್ಥಹೀನ ಮಾತುಗಳ ಮೂಲಕ ಪರಮೇಶ್ವರ್ ಕ್ಷಣಾರ್ಧದಲ್ಲಿ ಮಣ್ಣುಪಾಲು ಮಾಡಿಬಿಟ್ಟರಾ? ಎಂದು ಬೇಸರ ಮೂಡಿತು.

ಪರಮೇಶಿ ಇದೇ ಮಾತುಗಳನ್ನು ಶೆಟ್ಟರ್ ಅವರ ಪಕ್ಷದ ಬಗ್ಗೆ ಮಾತನಾಡಿದ್ದರೆ ಇಲ್ಲಿ ಯಾರದೂ ತಕರಾರು ಇರುತ್ತಿರಲಿಲ್ಲ. ಆದರೆ ವೈಯಕ್ತಿವಾಗಿ ಈ ರೀತಿ ಕೀಳುಮಟ್ಟಕ್ಕಿಳಿದು ಮಾತನಾಡಿದ್ದು ಖಂಡಿತಾ ಅವರಿಗೂ, ಅವರ ಕೈ ಪಕ್ಷಕ್ಕೂ ಶೋಭೆ ತರುವಂತಹುದಲ್ಲ.

ಅಥವಾ ಪರಮೇಶಿ ಏನಾದರೂ ಪೊರಪಾಟು ಬಿದ್ದರಾ? ಮೊನ್ನೆಯಷ್ಟೇ ಹೈಕಮಾಂಡ್ ತಮಗೆ ಸಾರಥ್ಯ ವಹಿಸಿದ್ದರಿಂದ ಇನ್ನೇನು ತಾನು ಮುಖ್ಯಮಂತ್ರಿ ಆಗೇಬಿಟ್ಟೆ ಅಂದುಕೊಂಡ್ಬಿಟ್ರಾ? ಸ್ವಾಮಿ ಅದು ಕಾಂಗ್ರೆಸ್ ಹೈಕಮಾಂಡು, ಪರಮೇಶ್ವರರೇ. ನಾಳೆ ಚುನಾವಣೆಯಲ್ಲಿ ಅಕಸ್ಮಾತ್ ನಿಮ್ಮ ಪಕ್ಷವೇನಾದರೂ ಗೆದ್ದು ಬಂದರೆ ನಿಮ್ಮನ್ನೇ ಯಾಮಾರಿಸಿಬಿಡುತ್ತದೆ, ಹುಷಾರು!

ಮೊನ್ನೆ ಇದ್ದಕ್ಕಿದ್ದಂತೆ ನಿದ್ದೆಯಿಂದೆದ್ದು ಪಾದಯಾತ್ರೆ ಕೈಗೊಂಡಾಗ ಇದೇ ಬಿಜೆಪಿ ಮಂದಿ ಕಾಂಗ್ರೆಸ್ಸಿಗೆ ಏನೋ ಖಾಯಿಲೆ ಬಂದಿರಬೇಕು ಅದಕ್ಕೇ walking ಮಾಡ್ತಿರಬಹುದು ಎಂದಿದ್ದರು. ಆದರೆ ತೀರಾ ಇಷ್ಟೊಂದು ಕೆಳಮಟ್ಟಕ್ಕಿಳಿದು/ವೈಯಕ್ತಿಕ ಟೀಕೆಗೆ ಇಳಿದಿರಲಿಲ್ಲ.

ಇನ್ನು ಚುನಾವಣೆವರೆಗೂ KPCCಗೆ ನಿಮ್ಮದೇ ಸಾರಥ್ಯವಿರಬಹುದು. ಆದರೆ ಹಿಂದಿನ KPCC ಅಧ್ಯಕ್ಷರುಗಳ ಹೇಗಿದ್ದರು ಎಂಬುದನ್ನು ತಿಳಿಯಲು ನೀವು ಸಾಗುತ್ತಿರುವ ಪಾದಯಾತ್ರೆಯಲ್ಲಿಯೇ ಒಮ್ಮೆ ನಿಂತು, ಹಿಂದಿರುಗಿ ನೋಡಿ. ಅವರೆಲ್ಲ ಪಕ್ಷದ ''ಘನ'' ಅಧ್ಯಕ್ಷರುಗಳಾಗಿಯೇ ಅಧಿಕಾರ ಪೂರೈಸಿದವರು (except ಒಬ್ಬ ಪೂಜಾರಿ) ಎಂಬುದನ್ನು ನಿಮ್ಮ ಪಕ್ಷದ ಕಾರ್ಯಕರ್ತರೇ ನಿಮಗೆ ಮನವರಿಕೆ ಮಾಡಿಕೊಡುತ್ತಾರೆ.

ಈಗಲೂ ಕಾಲ ಮಿಂಚಿಲ್ಲ. ಇದೇ ಮೊದಲು ಇದೇ ಕೊನೆ ಎಂಬಂತೆ ವಾಸ್ತವದ ನೆಲೆಗಟ್ಟಿನಲ್ಲಿ, ಮಾನವಂತರಾಗಿ ಮಾತನಾಡುವಂತವರಾಗಿ ಡಾ. ಪರಮೇಶ್ವರ್ ಜಿ. ಇನ್ನಾದರೂ ನಿಮ್ಮ ಪಾದಯಾತ್ರೆ ಸರಿ ಮಾರ್ಗದಲ್ಲಿ ನಡೆಯಲಿ ...

English summary
Karnataka Assembly Elections - KPCC President G Parameshwar who is on Padayatra (in Koppal) has said Jagadish Shettar is having AIDS, Cancer. But now the public started asking what about Parameshwar, Does he has any ailments?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X