ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ವಿಶಿಷ್ಟ ಸುದ್ದಿಚಿತ್ರಗಳ ಫ್ರೂಟ್ ಸಲಾಡ್

By Prasad
|
Google Oneindia Kannada News

ದೇಶದ ತುಂಬ, ದೂರದರ್ಶನ, ನ್ಯೂಸ್ ಪೇಪರ್, ಇಂಟರ್ನೆಟ್ ತುಂಬೆಲ್ಲ ಬರೀ ಅತ್ಯಾಚಾರದ್ದೇ ಸುದ್ದಿ ಸದ್ದು. ದೆಹಲಿಯಲ್ಲಿ ಮತ್ತೆರಡು ಅತ್ಯಾಚಾರ, ಯಾದಗಿರಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಮುಂಬೈನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯಿಂದ ಆತ್ಮಹತ್ಯೆಗೆ ಯತ್ನ, ಕೇರಳದಲ್ಲಿ ಅಪ್ಪನಿಂದಲೇ ಮಗಳ ಅತ್ಯಾಚಾರ, ಆಂಧ್ರದಲ್ಲಿ ವಿದ್ಯಾರ್ಥಿನಿಯನ್ನು ದುರ್ಬಳಸಿಕೊಂಡ ಶಿಕ್ಷಕ...

ಒಂದೆ ಎರಡೆ? ಇಂತಹ ಸುದ್ದಿಗಳ ಜೊತೆ ಓವೈಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಶೋಭಾ ಕರಂದ್ಲಾಜೆಗೆ ಬಿಜೆಪಿ ಕೊಕ್ ನೀಡುತ್ತೆ, ನೀಡಲ್ಲ, ನೀಡುತ್ತೆ, ನೀಡಲ್ಲದಂತಹ ಸುದ್ದಿಗಳು ಸಣ್ಣಪುಟ್ಟ ಸುದ್ದಿಗಳನ್ನು ಮರೆಮಾಚಿಬಿಡುತ್ತವೆ. ಕೆಲಸ ಸುದ್ದಿಗಳು ಗಮನಕ್ಕೂ ಬರುವುದಿಲ್ಲ, ಓದುಗರ ಗಮನಕ್ಕೆ ತರದಿದ್ದರೆ ಅವು ಓದುಗರ ಅವಗಾಹನೆಗೂ ಬರುವುದಿಲ್ಲ.

ಮಾಧ್ಯಮಗಳಿಗೆ ಎಲ್ಲವೂ ಸುದ್ದಿಯೇ ಆದರೂ, ಓದುಗರ ಅಭಿರುಚಿಗೆ ತಕ್ಕಂತಹ ಸುದ್ದಿಗಳು ಸುದ್ದಿಯೇ ಆಗುವುದಿಲ್ಲ. ಉತ್ತರ ಭಾರತದಲ್ಲಿ ಕೊಲ್ಲುವಂತಹ ಚಳಿಗಾಳಿಯೆದ್ದಿದೆ, ಅಲಬಾದಿನಲ್ಲಿ ಲಕ್ಷಾಂತರ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಹೊರಟಿದ್ದಾರೆ, ಚಳಿಯೆದ್ದಿರುವ ಸಂದರ್ಭದಲ್ಲಿ ನಿತ್ಯ ದುಡಿಮೆಯಿಂದಲೇ ಬದುಕುವ ಬಡಬಗ್ಗರ ಹೊಟ್ಟೆಯಲ್ಲಿ ಜ್ವಾಲಾಮುಖಿ ಉಕ್ಕಿರುತ್ತದೆ, ಮತ್ತೊಂದೆಡೆ ತನ್ನ ಮಗ ಎಂದೋ ಮಾಡಿದ ತಪ್ಪಿಗಾಗಿ ಇಂದು (ಮೊಸಳೆ) ಕಣ್ಣೀರು ಸುರಿಸುತ್ತಲೇ ಇದ್ದಾರೆ.

ಅತ್ಯಾಚಾರ, ಆತ್ಮಹತ್ಯೆ, ಹೊಸಲು ರಾಜಕೀಯ, ಪ್ರಚೋದನಕಾರಿ ಭಾಷಣ, ಅಸಹ್ಯ ಹುಟ್ಟಿಸುತ್ತಿರುವ ಭಾರತೀಯ ಕ್ರಿಕೆಟ್ ಹೊರತಾಗಿಯೂ ಘಟಿಸುತ್ತಿರುವ ಸಾಮಾನ್ಯ, ವಿಶಿಷ್ಟ ಸಂಗತಿಗಳತ್ತ ಒಂದು ಕಣ್ಣು ಹಾಯಿಸೋಣ.

ಅಳಬೇಡ ಕಂದಾ ಚೆನ್ನಾಗಿ ನಿದ್ದೆ ಮಾಡು

ಅಳಬೇಡ ಕಂದಾ ಚೆನ್ನಾಗಿ ನಿದ್ದೆ ಮಾಡು

ದೆಹಲಿಯಲ್ಲಿ ತಾಪಮಾನ ಶೂನ್ಯಕ್ಕೆ ಹತ್ತಿರವಾಗಿದೆ. ಹಲ್ಲುಗಳು ಕಟಕಟ ಅನ್ನುತ್ತಿವೆ. ಸ್ವೆಟರ್, ಮಫ್ಲರ್, ಕೈಗವಸು, ಜರ್ಕಿನ್ ಮೈತುಂಬ ಹೊದ್ದರೂ ಬೆನ್ನಿನಾಳಕ್ಕೆ ಚಳಿ ಇಳಿದಿರುತ್ತದೆ. ಇಷ್ಟಕ್ಕೆಲ್ಲ ಹೆದರಿ ಮನೆಯಲ್ಲಿ ಕುಳಿತರೆ ಆಗತ್ತಾ? ಹೊಟ್ಟೆಹೊರೆಯಲು ದುಡಿಯಲೇಬೇಕು. ಇಲ್ಲಿ ದಿನಗೂಲಿ ಮಾಡುವ ಮಹಿಳೆಯೊಬ್ಬಳು ತಲೆಯ ಮೇಲೆ ತನ್ನ ಪುಟ್ಟ ಕಂದಮ್ಮನನ್ನು ಮಲಗಿಸಿಕೊಂಡು ದೆಹಲಿಯ ರಾಜಪಥ್‌ನಲ್ಲಿ ಸಾಗುತ್ತಿದ್ದಾಳೆ.

ಅಯ್ಯೋ ಎದ್ದೇ ಬಿಟ್ಯಾ, ವಸಿ ತಡಿ ಬರ್ತೀನಿ

ಅಯ್ಯೋ ಎದ್ದೇ ಬಿಟ್ಯಾ, ವಸಿ ತಡಿ ಬರ್ತೀನಿ

ಅದೇ ಮಹಿಳೆಯ ಪುಟಾಣಿ ಪಾಪುವಿಗೆ ಊಲನ್ ಟೋಪಿ ಹಾಕಿ, ಪುಟಾಣಿ ಕೈಗವಸು ತೊಡಿಸಿ, ಬೆಚ್ಚನೆಯ ಸ್ವೆಟರ್ ಹಾಕಿ, ಬುಟ್ಟಿಯಲ್ಲಿ ಮಲಗಿಸಿ ಮೇಲೊಂದು ಬ್ಲಾಂಕೆಟ್ ಹೊದಿಸಿ ಕೆಲಸದಲ್ಲಿ ತೊಡಗಿದ್ದಾಳೆ. ಹಾರೆ ನೆಲಕ್ಕೆ ಕುಕ್ಕಿ ಮಣ್ಣು ಹೊರತೆಗೆಯಬೇಕು ಅಷ್ಟರಲ್ಲಿ ಗಡದ್ ನಿದ್ದೆಗೆ ಜಾರಿದ್ದ ಪಾಪುವಿಗೆ ನಿದ್ದೆ ಹಾರಿಹೋಗಿದೆ. ತಡೀ ಪುಟ್ಟಾ ಇಷ್ಟು ಕೆಲಸ ಮುಗಿಸಿ ಎದೆಹಾಲು ಕುಡಿಸುತ್ತೀನಿ ಅಂತಿರುವಂತಿದೆ ಮಹಿಳೆಯ ಭಾವ.

ಈ ಚಿತ್ರ ನೋಡಿ ನಿಮಗೆ ಏನನ್ನಿಸತ್ತೆ?

ಈ ಚಿತ್ರ ನೋಡಿ ನಿಮಗೆ ಏನನ್ನಿಸತ್ತೆ?

ದೆಹಲಿಯಲ್ಲಿ ಬೀಸಿರುವ ಖತರನಾಕ್ ಚಳಿ ಮನುಷ್ಯರನ್ನು ಮಾತ್ರವಲ್ಲ ಸ್ವೆಟರು, ಮಫ್ಲರು, ಗ್ಲೌಸು, ಸಾಕ್ಸು ಯಾವುದೂ ಇಲ್ಲದ ಪ್ರಾಣಿಗಳು ಕೂಡ ತತ್ತರಿಸುವಂತೆ ಮಾಡಿದೆ. ಇಲ್ಲಿ ನೋಡಿ, ತಾಯಿ ಕೋತಿ ತನ್ನ ಮಗುವಿಗೆ ಚಳಿ ತಟ್ಟದಂತೆ ಅವಚಿ ಹಿಡಿದುಕೊಂಡಿದೆ, ಬಿಸಿಲು ಕಾಯಿಸುತ್ತಿದೆ.

ದುರ್ಗೆಯೋ, ಚಾಮುಂಡಿಯೋ, ಕಾಳಿಮಾತೆಯೋ

ದುರ್ಗೆಯೋ, ಚಾಮುಂಡಿಯೋ, ಕಾಳಿಮಾತೆಯೋ

ಜ.27ರಿಂದ ಅಲಹಾಬಾದಿನಲ್ಲಿ ಆರಂಭವಾಗುತ್ತಿರುವ ಮಹಾ ಕುಂಭ ಮೇಳ ಸದ್ಯಕ್ಕೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಲ್ಲಿ ನೆರೆದಿರುವ ಜನರನ್ನು ರಂಜಿಸಲು ಜನರು ನಾನಾ ಕಸರತ್ತು ಮಾಡುತ್ತಿರುತ್ತಾರೆ. ಇಲ್ಲೊಬ್ಬಳು ಕಪ್ಪು ಬಣ್ಣದಲ್ಲಿಯೇ ಮುಳುಗಿ ಎದ್ದು ಬಂದಂತಹ ಮಹಿಳೆ ಕಾಳಿ ವೇಷ ಧರಿಸಿ ಜನರನ್ನು ರಂಜಿಸುತ್ತಿದ್ದಾರೆ. ದಿನದ ಕೊನೆಯಲ್ಲಿ ಜೋಳಿಗೆ ಒಂದಿಷ್ಟು ದುಡ್ಡುನಿಂದ ತುಂಬಿದರೆ ಪ್ರಯತ್ನ ಸಾರ್ಥಕ.

ಕರ್ನಾಟಕದ ಮುಳ್ಳಯ್ಯನಗಿರಿಯಲ್ಲಿ ಕಾಳ್ಗಿಚ್ಚು

ಕರ್ನಾಟಕದ ಮುಳ್ಳಯ್ಯನಗಿರಿಯಲ್ಲಿ ಕಾಳ್ಗಿಚ್ಚು

ಕರ್ನಾಟಕದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟದಲ್ಲಿರುವ ಕಾಡಿಗೆ ಶನಿವಾರ ರಾತ್ರಿ ಬೆಂಕಿ ಬಿದ್ದಿದೆ. ಹೇಮಂತ ಋತುವಿನಲ್ಲಿ ಒಣಗಿದ ಮರಗಳು, ಉದುರಿದ ಎಲೆಗಳೆಲ್ಲ ಬೆಂಕಿ ಜ್ವಾಲೆ ಭಸ್ಮವಾಗಿವೆ.

ಒಂದು ಹೆಂಚಿನ ಮೇಲೆ ಅದೆಷ್ಟು ರೊಟ್ಟಿಗಳು?

ಒಂದು ಹೆಂಚಿನ ಮೇಲೆ ಅದೆಷ್ಟು ರೊಟ್ಟಿಗಳು?

ಕುಂಭ ಮೇಳಕ್ಕಾಗಿ ಆಗಮಿಸಿ ಕ್ಯಾಂಪ್ ಹಾಕಿರುವ ಜನರಿಗೆಲ್ಲ ಮಾರ್ನಿಂಗ್ ಶಿಫ್ಟಿನಲ್ಲಿ ಇರುವ ಈ ಮಹಿಳೆಯರು ದಿನವೂ ರೊಟ್ಟಿ ತಟ್ಟಿ ಹೊಟ್ಟೆ ತುಂಬಿಸುತ್ತಿದ್ದಾರೆ. ಒಂದು ದೊಡ್ಡ ಹೆಂಚಿನ ಮೇಲೆ ಹದಿನಾಲ್ಕರಿಂದ ಹದಿನೈದು ರೊಟ್ಟಿಗಳು ಬೇಯುತ್ತಿವೆ. ಒಂದೇ ಸಮಯದಲ್ಲಿ ಹದಿನೈದು ರೊಟ್ಟಿಗಳನ್ನು ಬೇಯಿಸುತ್ತಿದ್ದರೆ ಒಂದು ದಿನಕ್ಕೆ ಎಷ್ಟು ರೊಟ್ಟಿಗಳು ಬೆಂದಿರಬಹುದೆಂದು ಲೆಕ್ಕ ಹಾಕಿ.

ಚಳಿಚಳಿ ತಾಳೆನು ಈ ಚಳಿಯಾ ಆಹಾ

ಚಳಿಚಳಿ ತಾಳೆನು ಈ ಚಳಿಯಾ ಆಹಾ

ಇಲ್ಲಿ ಚಕ್ರವ್ಯೂಹ ಚಿತ್ರವೂ ಪ್ರಸಾರವಾಗುತ್ತಿಲ್ಲ, ಅಂಬರೀಷ್ ಮತ್ತು ಅಂಬಿಕಾ ಮಳೆಯಲ್ಲಿ ನೆನೆದು ಸಖತ್ ಡಾನ್ಸನ್ನೂ ಮಾಡುತ್ತಿಲ್ಲ. ಇದು ಮುಂಬೈನಲ್ಲಿ ಭಾನುವಾರ ನಸುಕಿನ ಜಾವ ಕಂಡುಬಂದ ದೃಶ್ಯ. ಮುಂಬೈನಲ್ಲಿಯೂ ಚಳಿ ವಕ್ಕರಿಸಿದೆ. ದಂಧೆಗಿಳಿಯುವ ಮುನ್ನ ಪಡ್ಡೆಗಳು ಕ್ಯಾಂಪ್ ಫೈರ್ ಹಾಕಿ ಬೆಚ್ಚಗೆ ಕೈಮೈ ಕಾಯಿಸಿಕೊಳ್ಳುತ್ತಿದ್ದಾರೆ.

ಹೈಟೆಕ್ ಜಮಾನಾದ ಹೈಟೆಕ್ ಮಕ್ಕಳು

ಹೈಟೆಕ್ ಜಮಾನಾದ ಹೈಟೆಕ್ ಮಕ್ಕಳು

ಕೇರಳ ಮಕ್ಕಳಿಗೆ ಅಕ್ಷರ ಬಿತ್ತುವಲ್ಲಿ ಯಾಕೆ ಮುಂದಿದೆಯೆಂದರೆ ಇದಕ್ಕೆ. ಪಾಠಿ ಪುಸ್ತಕ ಹಿಡಿದು ಶಾಲೆಗೆ ಹೋಗುವ ಹಂತದಲ್ಲಿ ಕೊಚ್ಚಿಯಲ್ಲಿನ ಶಾಲೆಯೊಂದರಲ್ಲಿ ಮಕ್ಕಳಿಗೆ ಟ್ಯಾಬ್ಲೆಟ್‌ಗಳನ್ನು ಹಂಚಲಾಗಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡ ಅವುಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಇಂತಹ ಚಾಳಿ ಕರ್ನಾಟಕ ಶಾಲೆಗಳಿಗೂ ಬರಲಿ.

'ದೇವರಿಗೆ' ನಮಸ್ಕರಿಸುತ್ತಿರುವ 'ಭಕ್ತ'

'ದೇವರಿಗೆ' ನಮಸ್ಕರಿಸುತ್ತಿರುವ 'ಭಕ್ತ'

ನಿವೃತ್ತಿಯ ಅಂಚಿನಲ್ಲಿದ್ದರೂ ಎಳ್ಳಷ್ಟೂ ಶ್ರದ್ಧೆ, ಹಸಿವನ್ನು ಕಳೆದುಕೊಳ್ಳದ ಕ್ರಿಕೆಟ್ 'ದೇವರು' ಸಚಿನ್ ತೆಂಡೂಲ್ಕರ್ ಅವರು ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ ಕೂಡಲೆ ಮೈದಾನಕ್ಕೆ ನುಗ್ಗಿದ 'ಭಕ್ತ'ನೊಬ್ಬ ಸಚಿನ್ ಕಾಲಿಗೆರಗಿ ನಮಸ್ಕರಿಸುತ್ತಿರುವುದು. ಅಂದ ಹಾಗೆ, ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಇದು ಸಚಿನ್ ಹೊಡೆದ 80ನೇ ಶತಕ. ಗಾವಸ್ಕರ್ ದಾಖಲೆ ಸರಿಗಟ್ಟಲು ಅವರಿಗೆ ಬೇಕಿರುವುದು ಇನ್ನೊಂದೇ ಒಂದು.

ಗೌಡರು ಕಣ್ಣೀರು ಹಾಕಿದ್ದು ಇದು ಎಷ್ಟನೇ ಬಾರಿ?

ಗೌಡರು ಕಣ್ಣೀರು ಹಾಕಿದ್ದು ಇದು ಎಷ್ಟನೇ ಬಾರಿ?

ಇದು ಅಂತಹ ವಿಶೇಷ ಸುದ್ದಿಯೇನೂ ಅಲ್ಲ. ಶನಿವಾರ ಬೆಂಗಳೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ತಮ್ಮ ಮಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 2007ರಲ್ಲಿ ವಾಮಮಾರ್ಗ ಹಿಡಿದು ಅಧಿಕಾರಕ್ಕೆ ಬಂದರೆಂದು ಮತ್ತೆ ಕಣ್ಣೀರು ಸುರಿಸಿದ್ದಾರೆ. ಅಂದ ಹಾಗೆ, ಗೌಡರು ಕಣ್ಣೀರು ಹಾಕಿದ್ದು ಇದು ಎಷ್ಟನೇ ಬಾರಿ?

English summary
You simply cannot and should not take away your eyes on these simple but appealing news. These news are newsworthy but neglected by main media for the sake of other 'important' stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X